ಜು.15ರಂದು ಸ್ಕಿಲ್‌ ಕನೆಕ್ಟ್ ಪೋರ್ಟಲ್‌ ಲೋಕಾರ್ಪಣೆ: ಸಚಿವ ಅಶ್ವತ್ಥ್‌ ನಾರಾಯಣ್‌

By Kannadaprabha News  |  First Published Jun 30, 2022, 2:30 AM IST

*  ಉದ್ಯೋಗಾಕಾಂಕ್ಷಿಗಳು, ಉದ್ಯೋಗದಾತರು, ಕೌಶಲ್ಯಾಭಿವೃದ್ಧಿ ಮಾಹಿತಿಗಳು ಒಂದೇ ಸೂರಿನಡಿ ಲಭ್ಯ
*  ರಾಜ್ಯದಲ್ಲಿ ಉದ್ಯೋಗಕ್ಕೆ ಯಾವುದೇ ಕೊರತೆ ಇಲ್ಲ
*  ದೇಶದ ವಿವಿಧ ಕಡೆಗಳಿಂದ ರಾಜ್ಯಕ್ಕೆ ಉದ್ಯೋಗಾಂಕ್ಷಿಗಳು ವಲಸೆ ಬರುತ್ತಿದ್ದಾರೆ 


ಕುಂದಾಪುರ(ಜೂ.30): ಇಡೀ ದೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಪ್ರತಿಭಾವಂತ ಯುವ ಜನತೆ ಕರ್ನಾಟಕದಲ್ಲಿದ್ದಾರೆ. ಆದರೆ ಅವರ ಕನಸಿನ ಉದ್ಯೋಗ ಪಡೆಯಲು ಬೇಕಾದ ಅಗತ್ಯ ಮಾಹಿತಿಯ ಕೊರತೆಯಿದೆ. ಆದ್ದರಿಂದ ಉದ್ಯೋಗಾಕಾಂಕ್ಷಿಗಳು, ಉದ್ಯೋಗದಾತರು, ಕೌಶಲ್ಯಾಭಿವೃದ್ಧಿ ಮಾಹಿತಿಗಳು ಒಂದೇ ಸೂರಿನಡಿ ದೊರೆಯುವಂತಹ ಸ್ಕಿಲ್‌ ಕನೆಕ್ಟ್ ಪೋರ್ಟಲ್‌ ಅನ್ನು ಜುಲೈ 15 ರಂದು ಲೋಕಾರ್ಪಣೆ ಮಾಡಲಿದ್ದು, ಈ ಪೋರ್ಟಲ್‌ನಿಂದ ವರ್ಚುವಲ್‌ ಮೂಲಕ ಯುವಜನತೆಯು ತಮಗೆ ಇಷ್ಟವಾದ ಉದ್ಯೋಗ ಪಡೆಯಲು ಬೇಕಿರುವ ಅರ್ಹತೆ, ಕೌಶಲ್ಯ, ಲಭ್ಯವಿರುವ ಉದ್ಯೋಗಗಳು ಮತ್ತು ಅಂತಹ ಉದ್ಯೋಗ ನೀಡುವ ಸಂಸ್ಥೆಗಳ ಸಂಪೂರ್ಣ ವಿವರಗಳನ್ನು ಅತ್ಯಂತ ಸರಳ ರೀತಿಯಲ್ಲಿ ಪಡೆಯಬಹುದಾಗಿದೆ ಎಂದು ಉನ್ನತ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್‌. ಅಶ್ವತ್ಥ್‌ ನಾರಾಯಣ್‌ ಹೇಳಿದರು.

ನಗರದ ಭಂಡಾರ್ಕಾರ್ಸ್‌ ಕಾಲೇಜಿನಲ್ಲಿ ಬುಧವಾರ ಕರ್ನಾಟಕ ಕೌಶಲಾಭಿವೃದ್ಧಿ ನಿಗಮ, ಕೌಶಾಲಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಉದ್ಯೋಗ ವಿನಿಮಯ ಕಚೇರಿ ಹಾಗೂ ಭಂಡಾರ್ಕಾರ್ಸ್‌ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ಬೃಹತ್‌ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Latest Videos

undefined

2023ರಿಂದ ಕರ್ನಾಟಕದಲ್ಲಿ ಒಂದೇ ಸಿಇಟಿ: ಅಶ್ವತ್ಥನಾರಾಯಣ

ರಾಜ್ಯದಲ್ಲಿ ಉದ್ಯೋಗಕ್ಕೆ ಯಾವುದೇ ಕೊರತೆ ಇಲ್ಲ. ಉದ್ಯೋಗಾವಕಾಶಗಳು ಹೆಚ್ಚಾಗಿದ್ದು, ಆಕಾಂಕ್ಷಿಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ದೇಶದ ವಿವಿಧ ಕಡೆಗಳಿಂದ ರಾಜ್ಯಕ್ಕೆ ಉದ್ಯೋಗಾಂಕ್ಷಿಗಳು ವಲಸೆ ಬರುತ್ತಿದ್ದಾರೆ. ಯುವ ಸಮುದಾಯಕ್ಕೆ ಅವರ ಕನಸಿನ ಉದ್ಯೋಗಕ್ಕೆ ಅವಕಾಶ ನೀಡಬೇಕು ಎನ್ನುವ ಉದ್ದೇಶದಿಂದ ಉದ್ಯೋಗ ಮೇಳದಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಲಾಗುತ್ತಿದೆ ಎಂದರು.

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದ ಜನಸಂಖ್ಯೆ ಶೇ. 1 ರಷ್ಟುಜನರಿಗೆ ಮಾತ್ರ ಸರ್ಕಾರಿ ಉದ್ಯೋಗ ಪಡೆಯಲು ಆರ್ಥಿಕ ಇಲಾಖೆ ಅವಕಾಶ ಮಾಡಿಕೊಡುತ್ತದೆ. ಅದರಲ್ಲಿಯೂ ಖಾಲಿ ಹುದ್ದೆಯ ಕಾರಣದಿಂದಾಗಿ ಅಂದಾಜು 3.5 ಲಕ್ಷ ಮಂದಿ ಸರ್ಕಾರಿ ನೌಕರರು ಸೇವೆಯಲ್ಲಿ ಇದ್ದಾರೆ. ಉಳಿದ ಶೇ.99 ರಷ್ಟುಮಂದಿ ಖಾಸಗಿ ಹಾಗೂ ಇತರ ಉದ್ಯೋಗಗಳನ್ನು ಆಶ್ರಯಿಸಬೇಕಾದ ಅನೀವಾರ್ಯತೆ ಇದೆ. ಉದ್ಯೋಗ ಮೇಳಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೂಡಲೇ ಉದ್ಯೋಗಕ್ಕಾಗಿ ನೇಮಕಾತಿ ಪತ್ರವನ್ನು ನೀಡಲು ಕ್ರಮ ಕೈಗೊಳ್ಳಬೇಕು. ಕುಂದಾಪುರದ ಉದ್ಯೋಗ ಮೇಳ ಮಾದರಿ ಮೇಳವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಉದ್ಯೋಗದಾತರು ಕ್ರಮ ವಹಿಸಬೇಕು ಎಂದರು.

ಆನ್ ಲೈನ್ ಮೂಲಕವೇ ಪದವಿ ಪ್ರವೇಶ ಪ್ರಕ್ರಿಯೆ, ಸಚಿವ ಡಾ‌. ಅಶ್ವಥ್ ನಾರಾಯಣ

ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್‌ ಮೆಂಡನ್‌ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಎ. ಕಿರಣ ಕುಮಾರ ಕೊಡ್ಗಿ, ಭಂಡಾರ್ಕಾರ್ಸ್‌ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಕೆ. ಶಾಂತಾರಾಮ ಪ್ರಭು, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಎಂ. ಗೊಂಡ, ಪುರಸಭೆಯ ಉಪಾಧ್ಯಕ್ಷ ಕೆ. ಸಂದೀಪ್‌ ಖಾರ್ವಿ ಇದ್ದರು. ಜಿಲ್ಲಾ ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲತೆ ಇಲಾಖೆಯ ಅಧಿಕಾರಿ ಜಗದೀಶ್‌ ಸ್ವಾಗತಿಸಿದರು. ಭಂಡಾರ್ಕಾರ್ಸ್‌ ಪದವಿ ಕಾಲೇಜಿನ ಪ್ರಾಂಶುಪಾಲ ಎನ್‌.ಪಿ. ನಾರಾಯಣ ಶೆಟ್ಟಿವಂದಿಸಿದರು. ಅಕ್ಷಯ್‌ ಶೆಟ್ಟಿಮೊಳಹಳ್ಳಿ ನಿರೂಪಿಸಿದರು.

ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಕೊಡ್ಗಿ ಕುಟುಂಬಿಕರು ಇದ್ದ ಅದೃಷ್ಟದ ಮನೆಯಲ್ಲಿ ನಾನು ವಾಸ್ತವ್ಯಕ್ಕೆ ಬಂದ ಬಳಿಕ ನನ್ನ ಅದೃಷ್ಟವು ಖುಲಾಯಿಸಿದೆ. ಶಾಸಕನಾಗಿ, ಸಚಿವನಾಗುವ ಅವಕಾಶ ದೊರಕಿದೆ. ಮಂಗಳೂರಿನ ಕೆಎಂಸಿ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿರುವ ನನಗೆ ಇಲ್ಲಿನ ಜನರ ಪ್ರೀತಿ ಸಿಕ್ಕಿದೆ ಎಂದು ಡಾ.ಸಿ.ಎನ್‌. ಅಶ್ವತ್ಥ್‌ ನಾರಾಯಣ್‌ ಅವರು ಕರಾವಳಿಯ ನಂಟನ್ನು ಸ್ಮರಿಸಿಕೊಂಡರು.
 

click me!