ಬೆಂಗ್ಳೂರು ಐಟಿ ಕಂಪನಿಗಳ ಗುಳೆ ಎಚ್ಚರಿಕೆ! ಕಂಪನಿಗಳ ಜತೆ ಸಚಿವ ಅಶ್ವತ್ಥನಾರಾಯಣ ಸಭೆ

By Gowthami KFirst Published Sep 7, 2022, 9:03 PM IST
Highlights

ಬೆಂಗಳೂರಿನಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಐಟಿ ಕಂಪೆನಿಗಳು ಬೇಡಿಕೆ ಇಟ್ಟಿದ್ದು, ಇದನ್ನು ಶೀಘ್ರವೇ ಬಗೆಹರಿಸಲಾಗುವುದು ಎಂದು ಸಚಿವ ಅಶ್ವತ್ಥನಾರಾಯಣ ಭರವಸೆ ನೀಡಿದ್ದಾರೆ.  ಮಳೆಯಿಂದಾಗಿ ಹೊರ ವರ್ತುಲ ರಸ್ತೆಯಲ್ಲಿರುವ ಕಂಪನಿಗಳಿಗೆ 225 ಕೋಟಿ ರು. ನಷ್ಟವಾಗಿತ್ತು.

ಬೆಂಗಳೂರು (ಸೆ.7): ಕಂಡುಕೇಳರಿಯದ ಮಳೆಯಿಂದ ಸೃಷ್ಟಿಯಾಗಿರುವ ಪ್ರವಾಹಕ್ಕೆ ಸಿಲುಕಿ ನಲುಗಿರುವ ಮಹದೇವಪುರ ವಲಯದ ಸಮಸ್ಯೆಗೆ ಮುಂದಿನ ಮಳೆಗಾಲದ ವೇಳೆಗೆ ಶಾಶ್ವತ ಪರಿಹಾರ ರೂಪಿಸಲಾಗುವುದು ಎಂದು ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಭರವಸೆ ಕೊಟ್ಟಿದ್ದಾರೆ. ಸತತ ಮಳೆಯಿಂದ ಕಂಗೆಟ್ಟಿರುವ ಮಹದೇವಪುರ ಭಾಗದ ಹಲವು ಐಟಿ ಕಂಪನಿಗಳ ಪ್ರಮುಖರ ಜತೆ ಬುಧವಾರ ವಿಧಾನಸೌಧದಲ್ಲಿ ಅವರು ಮಹತ್ವದ ಸಭೆ ನಡೆಸಿದರು. ಇನ್ಫೋಸಿಸ್, ನ್ಯಾಸ್ ಕಾಮ್, ಇಂಟೆಲ್, ವೆಲ್ಸ್ ಫಾರ್ಗೊ, ವಿಪ್ರೊ, VGIT, Mphasis, Ravanan, Goldman Sachs, ಸೇರಿ ಹಲವು ಐಟಿ-ಬಿಟಿ ಕಂಪನಿಗಳ ಪ್ರತಿನಿಧಿಗಳು  ಇದ್ದರು. ಈ ಸಂದರ್ಭದಲ್ಲಿ, ಉದ್ಯಮಿಗಳ ಅಹವಾಲುಗಳನ್ನು ಆಲಿಸಿದ ಅವರು, 'ಬೆಂಗಳೂರು ಬ್ರಾಂಡ್ ಅನ್ನು ಎಲ್ಲರೂ ಸೇರಿ ಉಳಿಸೋಣ. ಇದಕ್ಕೆ ಅಪಕೀರ್ತಿ ತರುವುದು ಬೇಡ. ಉದ್ಯಮಿಗಳ ಸಮಸ್ಯೆಗಳನ್ನು ಆಲಿಸಲು ಇನ್ನುಮುಂದೆ ಪ್ರತೀ ತಿಂಗಳೂ ವರ್ಚುಯಲ್ ಸಭೆ ನಡೆಸಲಾಗುವುದು' ಎಂದರು. ಇದಕ್ಕೆ ಸ್ಪಂದಿಸಿದ ಐಟಿ ಕಂಪನಿಗಳ ಪ್ರಮುಖರು ಕೂಡ, "ನಮಗ್ಯಾರಿಗೂ ಬೆಂಗಳೂರನ್ನು ಬಿಟ್ಟು ಹೋಗುವ ಮನಸ್ಸಿಲ್ಲ. ಮಳೆಯಿಂದ ಉಂಟಾಗಿರುವ ಸಮಸ್ಯೆ ಮತ್ತು ನಷ್ಟವನ್ನು ಸರಕಾರದ ಗಮನಕ್ಕೆ ತರುವುದಷ್ಟೇ ನಮ್ಮ ಬಯಕೆಯಾಗಿದೆ. ಸರಕಾರದ ಸ್ಪಂದನದಿಂದ ನಮಗೂ ಸಮಾಧಾನವಾಗಿದೆ" ಎಂದರು.

ಸಭೆಯಲ್ಲಿ ಐಟಿ ಕಂಪನಿಗಳ ವಲಯದಿಂದ ಗೋಲ್ಡ್‌ಮ್ಯಾನ್‌ ಸ್ಯಾಕ್ಸ್‌ನ ರವಿಕೃಷ್ಣನ್, ಇನ್ಫೋಸಿಸ್‌ನ ಸುನೀಲ್‌ಕುಮಾರ್‍ ಮತ್ತು ಬಿ.ಸಿ.ಶೇಷಾದ್ರಿ‌, ವೆಲ್ಸ್‌ಫಾರ್ಗೋ ಕಂಪನಿಯ ಅರಿಂದಮ್‌ ಬ್ಯಾನರ್ಜಿ, ವಿಪ್ರೋದ ಪರಮಿಂದರ್ ಕಾಕ್ರಿಯಾ, ಎಂಫಸಿಸ್‌ನ ದೀಪಾ ನಾಗರಾಜ್‌, ಇಂಟೆಲ್‌ನ ಮಾನಸ್‌ ದಾಸ್‌, ವಿಎಂ ವೇರ್‍‌ನ ರಾಮಕುಮಾರ್ ನಾರಾಯಣನ್ ಮತ್ತು ಜಯನ್‌ ದೇಸಾಯಿ, ಟಿಸಿಎಸ್‌ನ ಬೆಂಗಳೂರು ಮುಖ್ಯಸ್ಥ ಸುನೀಲ್ ದೇಶಪಾಂಡೆ, ಆಕ್ಸೆಂಚರ್‍‌ನ ಅಜಯ್ ವಿಜ್‌, ಸೊನಾಟಾ ಸಾಫ್ಟ್‌ವೇರ್‍‌ನ ಬಾಲಾಜಿ ಕುಮಾರ್, ಫಿಲಿಪ್ಸ್‌ನ ಅರವಿಂದ್ ವೈಷ್ಣವ್, ಸೊಲೇಸ್‌ನ ಮಹಾದೇವನ್, ನಾಸ್ಕಾಂನ ಕೆ.ಎಸ್. ವಿಶ್ವನಾಥನ್ ಮತ್ತು ಭಾಸ್ಕರ್ ವರ್ಮಾ ಪಾಲ್ಗೊಂಡಿದ್ದರು.

ಕಂಪನಿಗಳ ಸಹಭಾಗಿತ್ವದಲ್ಲಿ ಯೋಜನೆಗಳ ಅನುಷ್ಠಾನ
ಮಹದೇವಪುರದಲ್ಲಿರುವ ಬಿಬಿಎಂಪಿ ವಲಯ ಆಯುಕ್ತರಿಗೆ ಸಂಪೂರ್ಣ ಅಧಿಕಾರವಿದೆ. ಇಲ್ಲಿನ ಅಭಿವೃದ್ಧಿ ಯೋಜನೆಗಳಲ್ಲಿ ಐಟಿ ಕಂಪನಿಗಳ ಸಹಭಾಗಿತ್ವ ಪಡೆಯಲಾಗುವುದು. ಇದರೊಂದಿಗೆ ಎಲ್ಲಾ ಯೋಜನೆಗಳನ್ನೂ ಕಾಲಮಿತಿಯಲ್ಲಿ ಮುಗಿಸಲಾಗುವುದು. ಇವುಗಳ ಅನುಷ್ಠಾನದಲ್ಲಿ ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲಾಗುವುದು. ಇದರ ಜತೆಗೆ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ 'ಎಲ್ಸಿಟಾ' ಮಾದರಿಯ ವ್ಯವಸ್ಥೆಯನ್ನು ಇಲ್ಲೂ ಆರಂಭಿಸುವುದನ್ನು ಗಂಭೀರವಾಗಿ ಪರಿಶೀಲಿಸಲಾಗುವುದು ಎಂದು ಸಚಿವರು ವಿವರಿಸಿದರು.

ಅಲ್ಲದೆ, ಮಳೆ ನೀರು ಸರಾಗವಾಗಿ ಹರಿದು ಹೋಗಲು ಇರುವ ಕೆ-100 ವ್ಯವಸ್ಥೆಯನ್ನು ಮಹದೇವಪುರದಲ್ಲೂ ಅಳವಡಿಸಿಕೊಳ್ಳಲಾಗುವುದು. ಜತೆಗೆ ಈ ಭಾಗಕ್ಕೆ ಕಾವೇರಿ ಕುಡಿಯುವ ನೀರು ಪೂರೈಕೆಯ 5ನೇ ಹಂತದ ಮೂಲಕ ನೀರು ಸರಬರಾಜು ಮಾಡಲಾಗುವುದು. ಇನ್ನೊಂದೆಡೆಯಲ್ಲಿ, ರಾಜ್ಯದ 2ನೇ ಸ್ತರದ ನಗರಗಳತ್ತಲೂ ಗಮನ ಹರಿಸಲಾಗುವುದು. ಆದ್ದರಿಂದ ಯಾವ ಉದ್ಯಮಿಗಳೂ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಅವರು ಮನದಟ್ಟು ಮಾಡಿಕೊಟ್ಟರು. 

ಸರಕಾರವು ಐಟಿ-ಬಿಟಿ ಕಂಪನಿಗಳ ಅಹವಾಲುಗಳನ್ನು ಕೇಳಿ, ಅವುಗಳನ್ನು ಪರಿಹರಿಸಲೆಂದೇ ವಿಷನ್ ಗ್ರೂಪ್‌ಗಳನ್ನು ರಚಿಸಿದೆ. ಇದಕ್ಕೆ ಐಟಿ ಕಂಪನಿಗಳನ್ನು ನಡೆಸಿರುವವರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಸರಕಾರದ ಸ್ಪಂದನಶೀಲತೆಗೆ ಇದಕ್ಕಿಂತ ನಿದರ್ಶನ ಬೇಕಾಗಿಲ್ಲ ಎಂದು ಅಶ್ವತ್ಥನಾರಾಯಣ ವಿವರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಐಟಿ ವಿಷನ್ ಗ್ರೂಪ್ ಮುಖ್ಯಸ್ಥ ಕ್ರಿಸ್‌ ಗೋಪಾಲಕೃಷ್ಣನ್, "ಬೆಂಗಳೂರು ಬ್ರಾಂಡ್ ಎಲ್ಲಿಗೂ ಹೋಗುವುದಿಲ್ಲ. ಇಂತಹ ಮಹಾಮಳೆ ಬಂದರೆ ಎಂತಹ ನಗರವಾದರೂ ಸ್ತಬ್ಧವಾಗುತ್ತದೆ. ಶೇ.80ಕ್ಕಿಂತ ಹೆಚ್ಚಿನ ಭಾಗಕ್ಕೆ ಇಲ್ಲಿ ಏನೂ ಆಗಿಲ್ಲ. ಮಹದೇವಪುರದ ಭಾಗದಲ್ಲಿ ಆಗಿರುವ ಹಾನಿ ಅನಿರೀಕ್ಷಿತ. ಇದರಿಂದ ಐಟಿ ಕಂಪನಿಗಳು ಧೃತಿಗೆಡಬಾರದು. ಸರಕಾರ ಸದಾ ನಿಮ್ಮೊಂದಿಗಿರುತ್ತದೆ" ಎಂದರು.
 
ಇದೇ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಗರವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಸಾದರಪಡಿಸಿ, ಇವಗಳನ್ನು ಬಗೆಹರಿಸಲು ಸರ್ಕಾರವು ಕೈಗೊಂಡಿರುವ ಉಪಕ್ರಮಗಳನ್ನು ಗಮನಕ್ಕೆ ತಂದರು.

ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ, ಮೆಟ್ರೋ ಎಂಡಿ ಅಂಜುಂ ಪರ್ವೇಜ್‌, ನಗರ ಪೊಲೀಸ್ ಆಯುಕ್ತ ಪ್ರತಾಪ್‌ ರೆಡ್ಡಿ, ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಐಟಿ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್ ಉಪಸ್ಥಿತರಿದ್ದರು.

Bengaluru Rains: ಮಳೆಯಿಂದಾಗಿ ಭಾರೀ ನಷ್ಟ: ಬೆಂಗ್ಳೂರಿಂದ ಐಟಿ ಕಂಪನಿಗಳ ಗುಳೆ ಎಚ್ಚರಿಕೆ..!

ಮೋಹನ್‌ದಾಸ್‌ ಪೈ ಅವರ ಒಳ್ಳೆ ಟ್ವೀಟ್ ಬಗ್ಗೆಯೂ‌ ಮಾತನಾಡಿ ಉದ್ಯಮಿ ಮೋಹನ್‌ದಾಸ್‌ ಪೈ ಅವರು ನಗರದ ಸಮಸ್ಯೆಗಳ ಬಗ್ಗೆ ಖಾರವಾದ ಟ್ವೀಟ್‌ಗಳನ್ನು ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಅಶ್ವತ್ಥನಾರಾಯಣ, "ಬೆಂಗಳೂರನ್ನು ಈ ಮಟ್ಟಕ್ಕೆ ಬೆಳೆಸುವಲ್ಲಿ ಅವರ ಕೊಡುಗೆಯೂ ಇದೆ. ಇದೇ ನಗರದ ಬಗ್ಗೆ ಅವರು ಹಲವು ಒಳ್ಳೆಯ ಟ್ವೀಟ್‌ಗಳನ್ನು ಮಾಡಿದ್ದಾರೆ. ಅದನ್ನು ಮರೆತು, ಈಗಿನ ಟ್ವೀಟ್‌ಗಳ ಬಗ್ಗೆಯೇ ಚರ್ಚಿಸುವುದು ಸರಿಯಲ್ಲ. ಅವರು ನಗರದ ಬಗ್ಗೆ ಕಳಕಳಿ ಇಟ್ಟುಕೊಂಡೇ ಇವುಗಳನ್ನು ಮಾಡಿದ್ದಾರೆ. ಅವರ ಕಳವಳವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಷ್ಟೆ" ಎಂದರು.

Bengaluru Rain: ಮುಳುಗಿದ ಐಟಿ ಸಿಟಿ; ಹೋಟೆಲ್‌ ರೂಮಿಗೆ 40 ಸಾವಿರ ಬಾಡಿಗೆ..!

ಮಳೆಯಿಂದ ನಲುಗಿರುವ ಮಹದೇವಪುರ ವಲಯದ ಐಟಿ ಕಂಪನಿಗಳ ಪ್ರಮುಖರೊಂದಿಗೆ ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಬುಧವಾರ ವಿಧಾನಸೌಧದಲ್ಲಿ ಸಭೆ ನಡೆಸಿದರು. ಜತೆಯಲ್ಲಿ ಐಟಿ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಐಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಮುಂತಾದವರಿದ್ದರು.

click me!