
ಬೆಂಗಳೂರು : ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯಮದಿಂದ ಬೆಂಗಳೂರಿನ ಮೇಲೆ ಹೆಚ್ಚುತ್ತಿರುವ ಒತ್ತಡವನ್ನು ಸಮತೋಲನಗೊಳಿಸಲು ಮತ್ತು ರಾಜ್ಯದ 2ನೇ ಹಂತದ ನಗರಗಳನ್ನು ಅಭಿವೃದ್ಧಿ ಕೇಂದ್ರಗಳಾಗಿ ರೂಪಿಸಲು ಕರ್ನಾಟಕ ಸರ್ಕಾರ ಐಟಿ ನೀತಿ 2025–30 ರಡಿ ಹಲವು ಮಹತ್ವದ ಸವಲತ್ತುಗಳನ್ನು ಘೋಷಿಸಿದೆ. ಆಸ್ತಿ ತೆರಿಗೆ ಸಡಿಲಿಕೆ, ಉದ್ಯೋಗಿಗಳ ಭವಿಷ್ಯ ನಿಧಿ ಮರುಪಾವತಿ, ವಿದ್ಯುತ್ ಸುಂಕ ವಿನಾಯಿತಿ ಉದ್ಯೋಗಿಗಳ ಸ್ಥಳಾಂತರಕ್ಕೆ ₹50,000 ವರೆಗೆ ಪ್ರೋತ್ಸಾಹ ಧನ ಸೇರಿದಂತೆ ಅನೇಕ ಅನುಕೂಲಗಳನ್ನು ಈ ನೀತಿಯಲ್ಲಿವೆ.
ರಾಜ್ಯ ಸರ್ಕಾರವು ಮಂಗಳವಾರ ಬಿಡುಗಡೆ ಮಾಡಿದ ಹೊಸ ನೀತಿಯಲ್ಲಿ, ಬೆಂಗಳೂರಿನಿಂದ ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಕಲಬುರಗಿ ಹಾಗೂ ಶಿವಮೊಗ್ಗಕ್ಕೆ ಉದ್ಯೋಗಿಗಳನ್ನು ಸ್ಥಳಾಂತರಿಸುವ ಐಟಿ ಕಂಪನಿಗಳಿಗೆ, ನೇಮಕಗೊಂಡ ಪ್ರತಿಯೊಬ್ಬ ಉದ್ಯೋಗಿಗೆ ಒಮ್ಮೆ ಮಾತ್ರ ₹50,000 ವರೆಗೆ ಸ್ಥಳಾಂತರ ಭತ್ಯೆ ನೀಡಲಾಗುವುದು. ಈ ಪ್ರೋತ್ಸಾಹ ಧನವು ರಾಜ್ಯದ ಹೊರಗಿನಿಂದ ಪ್ರತಿಭಾವಂತರನ್ನು ಕರೆತರುವ ಕಂಪನಿಗಳಿಗೂ ಅನ್ವಯಿಸುತ್ತದೆ.
ಈ ನೀತಿಯ ಉದ್ದೇಶವನ್ನು ವಿವರಿಸಿದ ಐಟಿ ಸಚಿವ ಪ್ರಿಯಾಂಕ್ ಖರ್ಗೆ, ಪ್ರತಿಭೆ ಹೂಡಿಕೆಯನ್ನು ಹುಡುಕಬಾರದು; ಬದಲಾಗಿ, ಹೂಡಿಕೆ ಪ್ರತಿಭೆ ಇರುವ ಕಡೆಗೆ ಬರಬೇಕು ಎಂದು ಹೇಳಿದರು. ನೀತಿ ಅವಧಿಯಲ್ಲಿ ಮಧ್ಯಸ್ಥಿಕೆ ಹಾಗೂ ಹಣಕಾಸಿನ ಪ್ರೋತ್ಸಾಹಕ್ಕಾಗಿ ₹445 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.
ಬೆಂಗಳೂರು ಟೆಕ್ ಶೃಂಗಸಭೆ (BTS 2025) ನಲ್ಲಿ ಬಿಡುಗಡೆಗೊಂಡ ಐಟಿ ನೀತಿ 2025–30, ಕರ್ನಾಟಕವನ್ನು ಡೀಪ್‌ಟೆಕ್, R&D ಮತ್ತು ಉತ್ಪನ್ನ ಆವಿಷ್ಕಾರದ ಜಾಗತಿಕ ಕೇಂದ್ರವಾಗಿ ಪರಿಗಣಿಸಿದೆ.
ನೂತನ ಸ್ಪೇಸ್‌ಟೆಕ್ ನೀತಿ 2025–30 ಮೂಲಕ, ಕರ್ನಾಟಕವನ್ನು ಭಾರತದ ಪ್ರಮುಖ ಬಾಹ್ಯಾಕಾಶ ತಂತ್ರಜ್ಞಾನ ಕೇಂದ್ರವನ್ನಾಗಿ ರೂಪಿಸುವ ಗುರಿಯಿದೆ. 2034 ರೊಳಗೆ ರಾಷ್ಟ್ರೀಯ ಮಾರುಕಟ್ಟೆಯ 50% ಮತ್ತು ಜಾಗತಿಕ ಮಾರುಕಟ್ಟೆಯ 5% ವಶಪಡಿಸಿಕೊಳ್ಳುವುದು ಗುರಿ.
ಗುರುವಾರ ಬಿಡುಗಡೆಗೊಂಡ ಸ್ಟಾರ್ಟ್ಅಪ್ ನೀತಿ 2025, ಮುಂದಿನ 5 ವರ್ಷಗಳಲ್ಲಿ, ಈ ಕೆಳಗಿನ ಎಲ್ಲಾ ಅಂಶಗಳ ಮೂಲಕ ಮೂಲಕ 25,000 ಹೊಸ ಸ್ಟಾರ್ಟ್ಅಪ್‌ಗಳನ್ನು ರಚಿಸುವ ಗುರಿ ಹೊಂದಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕರ್ನಾಟಕ ಐಟಿ ಶಕ್ತಿ ಕೇಂದ್ರವಾಗಿ ಏರಿದೆ ಎನ್ನುವುದು ಕಾಕತಾಳೀಯವಲ್ಲ.1997 ರಲ್ಲೇ ಐಟಿ ನೀತಿಯನ್ನು ತಂದ ಮೊದಲ ರಾಜ್ಯ ಕರ್ನಾಟಕ ಎಂದರು. ಮೂಲಸೌಕರ್ಯ ಸುಧಾರಣೆಗೆ ಬೆಂಗಳೂರು ನಗರಕ್ಕೇ ₹1 ಲಕ್ಷ ಕೋಟಿ ರೂ.ಕ್ಕೂ ಹೆಚ್ಚು ಹೂಡಿಕೆ ಮಾಡಲಾಗುತ್ತಿದೆ ಎಂದು ವಿವರಿಸಿದರು.