ದೇಶದಲ್ಲಿ ಹೊಸ ವರ್ಕ್ ಕಲ್ಚರ್ ಅಗತ್ಯವಿದೆ. ಯುವ ಐಟಿ ಉದ್ಯೋಗಿಗಳು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡುವ ಅಗತ್ಯವಿದೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಹೇಳಿರುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನವದೆಹಲಿ (ಅ.26): ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ರಾಷ್ಟ್ರವ್ಯಾಪಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ದೇಶದ ವರ್ಕ್ ಕಲ್ಚರ್ ಬಗ್ಗೆ ಅವರು ಮಾಡಿರುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗಿವೆ. ಜಾಗತಿಕ ಮಟ್ಟದಲ್ಲಿ ವಿವಿಧ ಪ್ರಬಲ ಆರ್ಥಿಕ ಶಕ್ತಿಗಳ ಎದುರು ಭಾರತ ಪರಿಣಾಮಕಾರಿಯಾಗಿ ಸ್ಪರ್ಧೆ ಮಾಡಬೇಕಿದ್ದಲ್ಲಿ ಯುವ ಐಟಿ ಉದ್ಯೋಗಿಗಳು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ. 3one4 ಕ್ಯಾಪಿಟಲ್‌ನ ಪಾಡ್‌ಕಾಸ್ಟ್ 'ದಿ ರೆಕಾರ್ಡ್' ನ ಉದ್ಘಾಟನಾ ಸಂಚಿಕೆಯಲ್ಲಿ ಮಾತನಾಡಿದ ನಾರಾಯಣ ಮೂರ್ತಿ, ಭಾರತದ ಕೆಲಸದ ಉತ್ಪಾದಕತೆಯನ್ನು ಬದಲಾಯಿಸುವ ತುರ್ತು ಅಗತ್ಯವನ್ನು ಒತ್ತಿ ಹೇಳಿದರು. ಭಾರತದ ಯುವಕರು ಗಣನೀಯವಾಗಿ ಹೆಚ್ಚಿನ ಕೆಲಸದ ಸಮಯಕ್ಕೆ ಬದ್ಧರಾಗದ ಹೊರತು, ಕಳೆದ ಕೆಲವು ದಶಕಗಳಲ್ಲಿ ಗಮನಾರ್ಹ ಪ್ರಗತಿಯನ್ನು ಕಂಡಿರುವ ಆರ್ಥಿಕತೆಯೊಂದಿಗೆ ನಾವು ಸ್ಪರ್ಧೆ ಮಾಡಲು ಹೆಣಗಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಮಾಜಿ ಇನ್ಫೋಸಿಸ್ ಸಿಎಫ್‌ಒ ಮೋಹನ್‌ದಾಸ್ ಪೈ ಅವರೊಂದಿಗಿನ ಮಾತುಕತೆಯಲ್ಲಿ ಭಾರತದಲ್ಲಿ ಕೆಲಸದ ಉತ್ಪಾದಕತೆ ವಿಶ್ವದಲ್ಲಿಯೇ ಅತ್ಯಂತ ಕೆಳಮಟ್ಟದಲ್ಲಿದೆ. ಚೀನಾದಂತಹ ದೇಶಗಳೊಂದಿಗಿನ ಅಂತರವನ್ನು ಕಡಿಮೆ ಮಾಡಲು, ಅವರು ಜಪಾನ್ ಮತ್ತು ಜರ್ಮನಿಗೆ ಸಮಾನಾಂತರವಾಗಿ ಹೋರಾಟ ಮಾಡಲು ಹೆಚ್ಚಿನ ಅವಧಿಯ ಕೆಲಸದ ಸಮಯ ಮತ್ತು ಸಮರ್ಪಣೆಯ ಸಂಸ್ಕೃತಿಯನ್ನು ರೂಪಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಸರ್ಕಾರದ ಭ್ರಷ್ಟಾಚಾರ ಮತ್ತು ಅಧಿಕಾರಶಾಹಿ ಅಸಮರ್ಥತೆಗಳು ಸೇರಿದಂತೆ ಭಾರತದ ಪ್ರಗತಿಗೆ ಇತರ ಅಡೆತಡೆಗಳ ಬಗ್ಗೆಯೂ ಇದರಲ್ಲಿ ಚರ್ಚೆ ಮಾಡಲಾಗಿದೆ. ಭಾರತವು ಜಾಗತಿಕ ಮುಂಚೂಣಿಯಲ್ಲಿ ಹೊರಹೊಮ್ಮಲು ಈ ಅಡೆತಡೆಗಳನ್ನು ಕಡಿಮೆ ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ದೇಶದ ಯುವಕರು ರಾಷ್ಟ್ರ ನಿರ್ಮಾಣದ ಬದ್ಧತೆಯನ್ನು ಹೊಂದಿರಬೇಕು ಎಂದು ಮನವಿ ಮಾಡಿದ ಅವರು, 'ಇಂದಿನ ಯುವ ಉದ್ಯೋಗಿಗಳಿಗೆ ನಾನು ಮಾಡುವ ಮನವಿ ಏನೆಂದರೆ, ಇದು ನಮ್ಮ ದೇಶ. ನಾನು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡುತ್ತೇನೆ' ಎನ್ನುವ ಕಂಕಣ ತೊಡಬೇಕು ಎಂದರು. ಇದೇ ವೇಳೆ ಇತಿಹಾಸದ ಉದಾಹರಣೆಯನ್ನೂ ಅವರು ನೀಡಿದರು. 2ನೇ ಮಹಾಯುದ್ಧದ ಬಳಿಕ ಜರ್ಮನಿ ಮತ್ತು ಜಪಾನ್ ದೇಶದ ನಾಗರೀಕರು ಇದನ್ನೇ ಮಾಡಿದರು. ಕೆಲವು ನಿರ್ದಿಷ್ಟ ಸಂಖ್ಯೆಯ ವರ್ಷಗಳವರೆಗೆ ಹೆಚ್ಚಿನ ಅವಧಿಗಳ ಕಾಲ ಅವರು ಕೆಲಸ ಮಾಡಿದ್ದರು ಎಂದು ತಿಳಿಸಿದರು.
ಶಿಸ್ತು ಮತ್ತು ಉತ್ಪಾದಕತೆಯ ನಿರ್ಣಾಯಕ ಪಾತ್ರವನ್ನು ಒತ್ತಿಹೇಳುತ್ತಾ, "ಆ ರೂಪಾಂತರವು ಯುವಕರಲ್ಲಿ ಬರಬೇಕಾಗಿದೆ ಏಕೆಂದರೆ ಈ ಸಮಯದಲ್ಲಿ ನಮ್ಮ ಜನಸಂಖ್ಯೆಯ ಗಮನಾರ್ಹ ಬಹುಪಾಲು ಯುವಕರು ಇದ್ದಾರೆ ಮತ್ತು ಅವರು ನಮ್ಮ ದೇಶವನ್ನು ಖಂಡಿತವಾಗಿ ಕಟ್ಟಲಿದ್ದಾರೆ' ಎಂದು ಹೇಳಿದರು.
ಇನ್ನು ನಾರಾಯಣಮೂರ್ತಿ ಅವರ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಹೆಚ್ಚಿನವರು ಹಾಗೇನಾದರೂ ವಾರದ ಕೆಲಸ ಮಾಡುವ ಗಂಟೆಯನ್ನು 70 ಗಂಟೆಗೆ ಏರಿಸಿದರೆ, ಇದು ಕೆಲಸ ಹಾಗೂ ಜೀವನದ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಆದರೆ, ಇನ್ನೂ ಕೆಲವರು ಭಾರತವನ್ನು ಅಭಿವೃದ್ಧಿಯ ಮುಂದಿನ ಹಂತಕ್ಕೆ ಕೊಂಡೊಯ್ಯುವ ಸಲುವಾಗಿ ಹೆಚ್ಚು ಭದ್ರತೆ ಹಾಗೂ ಶಿಸ್ತಿನ ವಿಧಾನವು ಅವಶ್ಯಕವಾಗಿದೆ ಎನ್ನುವುದು ಅವರ ಮಾತಿನ ಅರ್ಥ ಎಂದು ಹೇಳಿದ್ದಾರೆ. ಇನ್ನು ನಾರಾಯಣ ಮೂರ್ತಿ ಅವರ ಮಾತಿಗೆ ಒಲಾ ಎಲೆಕ್ಟ್ರಿಕ್‌ನ ಸಿಇಒ ಹಾಗೂ ಸಂಸ್ಥಾಪಕ ಭವೀಶ್ ಅಗರ್ವಾಲ್ ಬೆಂಬಲ ಸೂಚಿಸಿದ್ದಾರೆ. ಇದು ಕೆಲಸ ಕಡಿಮೆ ಮಾಡಿ ಮನರಂಜನೆಗೆ ಇಳಿಯುವ ಯುಗವಲ್ಲ. ಮುಂದಿನ ಹಲವು ಯುಗಗಳಿಗೆ ದೇಶವನ್ನು ಕಟ್ಟುವಂಥ ದಶಕವಾಗಿದೆ ಎಂದು ಹೇಳಿದ್ದಾರೆ.
ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಇನ್ಫಿ ನಾರಾಯಣಮೂರ್ತಿಯವರನ್ನು ಹಿಂದಿಕ್ಕಿದ ಕನ್ನಡದ ಸಹೋದರರು!
ಪ್ರಸ್ತುತ ಭಾರತದಲ್ಲಿ ಹೆಚ್ಚಿನ ಕಂಪನಿಗಳು ದಿನದಲ್ಲಿ 8 ಗಂಟೆಯ ವರ್ಕ್ ಕಲ್ಚರ್ ಹೊಂದಿದೆ. ಅಂದರೆ, ವಾರದ ಕೆಲಸದ 6 ದಿನಗಳಿಂದ 48 ಗಂಟೆಗಳ ಕೆಲಸವಾಗಿತ್ತದೆ. ಇನ್ನೂ ಕೆಲವರು ಕಂಪನಿಗಳು ವಾರದಲ್ಲಿ 50 ರಿಂದ 60 ಗಂಟೆಗಳ ಕೆಲಸವನ್ನೂ ನಿಗದಿ ಮಾಡುತ್ತದೆ. ನಾರಾಯಣ ಮೂರ್ತಿ ಅವರು ಹೇಳುವ ಪ್ರಕಾರ ವಾರದ 6 ದಿನಗಳಲ್ಲಿ ಪ್ರತಿ ದಿನ 12 ಗಂಟೆ ಕೆಲಸ ಮಾಡಬೇಕಾಗುತ್ತದೆ.
ಇನ್ಫೋಸಿಸ್ ಮೌಲ್ಯಮಾಪನ ಪ್ರಕ್ರಿಯೆ ಪ್ರಾರಂಭ: ಟೆಕ್ಕಿಗಳಿಗೆ ಈ ಬಾರಿಯಾದ್ರೂ ಸಿಗುತ್ತಾ ವೇತನ ಹೆಚ್ಚಳ?