ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ತಿಳಿಸಿರುವಂತೆ ಕರ್ನಾಟಕದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಲು 18 ದೊಡ್ಡ ಕಂಪನಿಗಳು ತಮ್ಮ ಉದ್ದೇಶ ಪತ್ರವನ್ನು ನೀಡಿವೆ.
ಬೆಂಗಳೂರು: ಕರ್ನಾಟಕದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಲು 18 ದೊಡ್ಡ ಕಂಪನಿಗಳು ತಮ್ಮ ಉದ್ದೇಶ ಪತ್ರವನ್ನು(LOI) ನೀಡಿವೆ ಎಂದು ಕೆಡಿಇಎಂ (Karnataka Digital Economy Mission) ಶುಕ್ರವಾರ ತಿಳಿಸಿದೆ. ಈ ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವ ಮೂಲಕ ಇಎಸ್‌ಡಿಎಂ (Electronics System Design & Manufacturing -ESDM) ಪರಿಸರ ವ್ಯವಸ್ಥೆಯನ್ನು ನಿರ್ಮಿಸಲಿವೆ ಮತ್ತು ರಾಜ್ಯದಲ್ಲಿ ಸ್ಥಳೀಯ ಪ್ರತಿಭೆಗಳಿಗೆ 15,000ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ನೀಡಲಿವೆ ಎಂದು ಕೆಡಿಇಎಂ ಹೇಳಿದೆ.
ದೇಶದಲ್ಲಿ ಸೆಮಿಕಂಡಕ್ಟರ್ ಚಿಪ್‌ಗಳ ತಯಾರಿಕೆಯನ್ನು ಉತ್ತೇಜಿಸಲು ಸರ್ಕಾರ ತನ್ನ ಸೆಮಿಕಂಡಕ್ಟರ್ ನೀತಿಯನ್ನು ಘೋಷಿಸಿದ ಸಮಯದಲ್ಲೇ ಈ ಪ್ರಕಟಣೆ ಬಂದಿದೆ. LOI ಪಟ್ಟಿಯು ಪ್ರೊಕ್ಸೆಲೆರಾ, ವುರ್ತ್ ಎಲೆಕ್ಟ್ರಾನಿಕ್ ಇಂಡಿಯಾ, ವರ್ಚುಲೈವ್ ಟೆಕ್ನಾಲಜೀಸ್ ಮತ್ತು ರ್ಯಾಪ್ಚರ್ ಇನ್ನೋವೇಶನ್ ಲ್ಯಾಬ್ಸ್ ಸೇರಿದಂತೆ ಹಲವು ಕಂಪನಿಗಳನ್ನು ಒಳಗೊಂಡಿದೆ.
ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ ವಿ ರಮಣ ರೆಡ್ಡಿ ಅವರು ಕೆಡಿಇಎಂ ಅನ್ನು ಶ್ಲಾಘಿಸಿದರು.
ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ: ಪ್ರವೇಶ ಪತ್ರ ಲಭ್ಯ, ವಸ್ತ್ರಸಂಹಿತೆ ಕಡ್ಡಾಯ
"ಕಳೆದ ಕೆಲವು ವರ್ಷಗಳಲ್ಲಿ, ಉನ್ನತ ತಂತ್ರಜ್ಞಾನ ಉತ್ಪನ್ನಗಳ ಬೇಡಿಕೆಯು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಇಎಸ್‌ಡಿಎಂ ವಲಯವನ್ನು ಬಲಪಡಿಸುವ ಅಗತ್ಯವನ್ನು ಉತ್ತೇಜಿಸುತ್ತದೆ. ಕರ್ನಾಟಕ ಯಾವಾಗಲೂ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ದೇಶದ ಡಿಜಿಟಲ್ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡುತ್ತಿದೆ ಎಂದು ಅವರು ಹೇಳಿದರು.
ಮಲ್ಲೇಶ್ವರಂನಲ್ಲಿ ಉದ್ಯೋಗ ಮೇಳ: ನಗರದ ಮಲ್ಲೇಶ್ವರಂನಲ್ಲಿ ನಡೆದ ಉದ್ಯೋಗ ಮೇಳದಲ್ಲಿ(job Fair) 115 ಮಂದಿಗೆ ಉದ್ಯೋಗ ಸಿಕ್ಕಿದ್ದು, 535 ಮಂದಿ ಎರಡನೇ ಹಂತಕ್ಕೆ ಆಯ್ಕೆಯಾಗಿದ್ದಾರೆ.
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಹಾಕವಿ ಕುವೆಂಪು ರಸ್ತೆಯಲ್ಲಿರುವ ಮರಿಯಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಶನಿವಾರ ಉದ್ಯೋಗ ಮೇಳ ನಡೆಯಿತು. ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರೂ ಆಗಿರುವ ಕ್ಷೇತ್ರದ ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಏರ್ಪಡಿಸಿದ್ದರು.
ಈ ಮೇಳದಲ್ಲಿ 44 ಕಂಪನಿಗಳು ಭಾಗವಹಿಸಿದ್ದು, ಒಟ್ಟು 1,085 ಉದ್ಯೋಗಾಕಾಂಕ್ಷಿಗಳು ತಮ್ಮ ಹೆಸರು ನೋಂದಾಯಿಸಿಕೊಂಡು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಇವರ ಪೈಕಿ 115 ಮಂದಿಗೆ ಸಂಜೆಯ ಹೊತ್ತಿಗೆ ನೇಮಕಾತಿ ಆದೇಶ ಪತ್ರಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದರ ಜತೆಗೆ, 535 ಅಭ್ಯರ್ಥಿಗಳು ಎರಡನೇ ಸುತ್ತಿನ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಅಗತ್ಯವಿರುವ ಕೌಶಲ್ಯಗಳನ್ನು ಇಲಾಖೆಯ ವತಿಯಿಂದ ಉಚಿತವಾಗಿ ನೀಡಲಾಗುವುದು. ಇದರಲ್ಲಿ ಕಾರ್ಪೊರೇಟ್ ಜಗತ್ತಿನಲ್ಲಿ ಅಗತ್ಯವಿರುವ ಇಂಗ್ಲಿಷ್ ಭಾಷಾ ಸಂವಹನವನ್ನೂ ಕಲಿಸಲಾಗುವುದು. ಅಲ್ಲದೆ, ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಕಾಲೇಜುಗಳಲ್ಲಿ ಹಂತಹಂತವಾಗಿ ಮತ್ತು ವ್ಯವಸ್ಥಿತವಾಗಿ ಉದ್ಯೋಗ ಮೇಳಗಳನ್ನು ಏರ್ಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಮೇಳದಲ್ಲಿ ಬೆಂಗಳೂರು ನಗರ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಿ.ಎಲ್.ಕೃಷ್ಣಮೂರ್ತಿ, ಮರಿಯಪ್ಪ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಕೆ.ಬಿ.ಲೋಕೇಶ್ ಮತ್ತು ಸಂಸ್ಥೆಯ ಪ್ರಾಚಾರ್ಯರು, ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು.
SAI Recruitment 2022: ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಉದ್ಯೋಗವಕಾಶ
ಮಂಗಳೂರಿನಲ್ಲೂ ಉದ್ಯೋಗ ಮೇಳ
ನಮ್ಮ ಕುಡ್ಲದ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಮಾರ್ಚ್ 3 ರಂದು 'ಬೃಹತ್ ಉದ್ಯೋಗ ಮೇಳ' ಹಮ್ಮಿಕೊಳ್ಳಲಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು https://skillconnect.kaushalkar.com/app/student-jobfair ಲಿಂಕ್ ಬಳಸಿ ನೋಂದಾಯಿಸಿಕೊಳ್ಳಬಹುದು.
ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಬೃಹತ್ ಉದ್ಯೋಗ ಮೇಳ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.