ದೆಹಲಿ ಮೂಲದ ಯುವತಿ ಪ್ರಿಯಾಂಶಿ ಭಟ್ ತನ್ನ ತಂದೆಗೆ ಕೆಲಸ ಕೊಡಿ ಎಂದು ಲಿಂಕ್ಡಿನ್‌ನಲ್ಲಿ ಮಾಡಿದ ಮನವಿ ವೈರಲ್ ಆಗಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ 30-40 ವರ್ಷಗಳ ಅನುಭವ ಇರುವ ತಂದೆಗೆ ಆರ್ಥಿಕ ಸ್ಥಿರತೆಗಾಗಿ ಹೊಸ ಅವಕಾಶ ಹುಡುಕುತ್ತಿದ್ದಾರೆ.
ತನ್ನ ತಂದೆಗೊಂದು ಕೆಲಸ ಕೊಡಿ ಎಂದು ದೆಹಲಿ ಮೂಲದ ಯುವತಿಯೊಬ್ಬಳು ಲಿಂಕ್ಡಿನ್‌ನಲ್ಲಿ ಮಾಡಿದ ಭಾವುಕವಾದ ಮನವಿಯೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಟೋಮೊಬೈಲ್ ಇಂಡಸ್ಟ್ರಿಯ ಅನುಭವಿಯಾಗಿರುವ ತನ್ನ ತಂದೆಗೆ ಕೆಲಸ ನೀಡುವಂತೆ ಪ್ರಿಯಾಂಶಿ ಭಟ್ ಎಂಬ ಯುವತಿ ಮನವಿ ಮಾಡಿದ್ದಾರೆ. ನನ್ನ ತಂದೆಯನ್ನು ನೇಮಿಸಿಕೊಳ್ಳಿ ಎಂದು ಪ್ರಿಯಾಂಶಿ ಭಟ್ ಪೋಸ್ಟ್‌ನಲ್ಲಿ ಹೇಳಿದ್ದು, ಅದು ಅವರ ತಂದೆಯ ಅಪ್ರತಿಮ ಪರಿಣತಿ ಮತ್ತು ಕೆಲಸದ ನೀತಿಯ ಬಗ್ಗೆ ಅವರ ಮೆಚ್ಚುಗೆಯನ್ನು ತೋರಿಸುತ್ತಿದೆ.
ನನ್ನ ತಂದೆ ಲಿಂಕ್ಡ್‌ಇನ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳ ಸಕ್ರಿಯ ಬಳಕೆದಾರರಲ್ಲದ ಕಾರಣ, ಅವರ ಹೆಮ್ಮೆಯ ಮಗಳಾಗಿ, ಅವರ ಪರವಾಗಿ ನಾನು ಅವರ ರೆಸ್ಯೂಮ್ ಮತ್ತು ಅನುಭವದ ಬಗ್ಗೆ ನಿಮಗೆ ತಿಳಿಸಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ. ಈಗ ವೈರಲ್ ಆಗಿರುವ ಪೋಸ್ಟ್‌ನಲ್ಲಿ, ಪ್ರಿಯಾಂಶಿ ತನ್ನ ತಂದೆಯನ್ನು ಆಟೋಮೊಬೈಲ್ ಉದ್ಯಮದಲ್ಲಿ, ವಿಶೇಷವಾಗಿ ಪೇಂಟ್ ಶಾಪ್ ವಿಭಾಗದಲ್ಲಿ 30ರಿಂದ 40 ವರ್ಷಗಳ ಅನುಭವ ಹೊಂದಿರುವ ಕಠಿಣ ಪರಿಶ್ರಮ ಆತ್ಮಸಾಕ್ಷಿ, ಮತ್ತು ಸಹಾನುಭೂತಿಯುಳ್ಳ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ದಶಕಗಳಲ್ಲಿ, ಅವರು ಸ್ವರಾಜ್ ಮಜ್ದಾ, ಮಾರುತಿ ಜಾಯಿಂಟ್ ವೆಂಚರ್, ಆಲ್ಫಾ ಕೋಟೆಕ್ ಇಂಡಸ್ಟ್ರಿ ಮತ್ತು ಕೆಡಿ ಇಂಡಸ್ಟ್ರೀಸ್‌ನಂತಹ ಪ್ರಸಿದ್ಧ ಕಂಪನಿಗಳೊಂದಿಗೆ ವ್ಯವಸ್ಥಾಪಕ, ಸ್ಥಾವರ ಮುಖ್ಯಸ್ಥ, ನಿರ್ದೇಶಕ ಮತ್ತು ಸಿಇಒ ಆಗಿ ಮಹತ್ವದ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ತನ್ನ ತಂದೆಯ ನಾಯಕತ್ವದ ಗುಣಗಳ ಬಗ್ಗೆ ಮಾತನಾಡಿದ ಪ್ರಿಯಾಂಶಿ, ಅವರ ಹಿಂದಿನ ಅನೇಕ ತರಬೇತಿದಾರರು ಮತ್ತು ಸಹೋದ್ಯೋಗಿಗಳು ಇನ್ನೂ ಅವರ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. 20-30 ವರ್ಷಗಳ ಹಿಂದೆ ಅವರ ಅಡಿಯಲ್ಲಿ ತರಬೇತಿ ಪಡೆದ ಜನರು ಇನ್ನೂ ಅವರೊಂದಿಗೆ ಇದ್ದಾರೆ ಮತ್ತು ಅವರ ಮಾರ್ಗದರ್ಶನದಲ್ಲಿರಲು ಅವರೊಂದಿಗೆ ಕಂಪನಿಗಳನ್ನು ಬದಲಾಯಿಸಿದ್ದಾರೆ ಎಂದು ಪ್ರಿಯಾಂಶಿ ಅವರು ಹೇಳಿದರು.
ಹಾಗಿದ್ದರೂ ಪ್ರಿಯಾಂಶಿ ತಂದೆ ಪ್ರಸ್ತುತ ಇರುವ ಕೆಲಸದಲ್ಲಿ ಆರ್ಥಿಕ ಅಸ್ಥಿರತೆಯನ್ನು ಎದುರಿಸುತ್ತಿದ್ದಾರೆ, ಅಲ್ಲಿ ಅವರಿಗೆ ಕಳೆದ ಒಂದು ವರ್ಷದಿಂದ ನಿಗದಿತ ಸಂಬಳ ಸಿಕ್ಕಿಲ್ಲ. ಆದರೂ, ಅವರ ಬದ್ಧತೆ ಅಚಲವಾಗಿದೆ, ಏಕೆಂದರೆ ಅವರು ವಾರಾಂತ್ಯಗಳನ್ನು ತ್ಯಾಗ ಮಾಡುತ್ತಾರೆ ಮತ್ತು ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಹೀಗೆ ಕಂಪನಿಗೆ ತಮ್ಮ ಅತ್ಯುತ್ತಮವಾದದ್ದನ್ನು ನೀಡುತ್ತಲೇ ಇದ್ದಾರೆ.
ಆರ್ಥಿಕ ಸ್ಥಿರತೆಯ ಅಗತ್ಯವನ್ನು ಹೇಳಿದ ಪ್ರಿಯಾಂಶಿ, ತನ್ನ ತಂದೆ, ಅವರ ಕುಟುಂಬದ ಪ್ರೋತ್ಸಾಹದಿಂದಾಗಿ, ಅಂತಿಮವಾಗಿ ಆಟೋಮೊಬೈಲ್ ವಲಯದಲ್ಲಿ ಹೊಸ ಅವಕಾಶವನ್ನು ಹುಡುಕಲು ನಿರ್ಧರಿಸಿದ್ದಾರೆ ಎಂದು ಹೇಳಿದರು. ಇದಲ್ಲದೆ, ಅವರ ತಂದೆ ಅಸಾಧಾರಣ ಸಂವಹನ ಕೌಶಲ್ಯ, ಆಳವಾದ ಉದ್ಯಮ ಜ್ಞಾನ ಮತ್ತು ತಂಡಗಳನ್ನು ಪ್ರೇರೇಪಿಸುವ ಮತ್ತು ಪರಿಣಾಮಕಾರಿಯಾಗಿ ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿರುವ ಪರಿಹಾರ ಆಧಾರಿತ ವೃತ್ತಿಪರರು ಎಂದು ಅವರು ತಮ್ಮ ತಂದೆ ಪರ ಬ್ಯಾಟಿಂಗ್ ಮಾಡಿದ್ದಾರೆ.
ಹೀಗಾಗಿ ನನ್ನ ತಂದೆ ಯಾವುದೇ ಸಂಸ್ಥೆ ನೇಮಿಸಿಕೊಳ್ಳಬಹುದಾದ ಅತ್ಯುತ್ತಮ ಅಭ್ಯರ್ಥಿ, ಆದ್ದರಿಂದ ದಯವಿಟ್ಟು ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಯಾರಾದರೂ ನನ್ನ ತಂದೆಯನ್ನು ನೇಮಿಸಿಕೊಳ್ಳಲು ಆಸಕ್ತಿ ಹೊಂದಿದ್ದರೆ, ದಯವಿಟ್ಟು ನನ್ನನ್ನು ಸಂಪರ್ಕಿಸಿ, ನಾನು ನಿಮ್ಮನ್ನು ಅವರೊಂದಿಗೆ ಮತ್ತಷ್ಟು ಸಂಪರ್ಕಿಸುತ್ತೇನೆ. ತಾಳ್ಮೆಯಿಂದ ಓದಿದ್ದಕ್ಕಾಗಿ ಧನ್ಯವಾದಗಳು ಎಂದು ಪ್ರಿಯಾಂಶಿ ಭಟ್ ತಮ್ಮ ಪೋಸ್ಟನ್ನು ಮುಕ್ತಾಯಗೊಳಿಸಿದ್ದಾರೆ.
ಈ ಪೋಸ್ಟ್ ನೋಡಿದ ಅನೇಕ ಲಿಂಕ್ಡಿನ್ ಬಳಕೆದಾರರು ಆಕೆಯನ್ನು ಶ್ಲಾಘಿಸಿದ್ದಾರೆ. ಈ ರೀತಿಯ ಪೋಸ್ಟ್ ಅನ್ನು ನಾನು ಮೊದಲ ಬಾರಿಗೆ ಕಂಡುಕೊಂಡೆ. ನಿಮ್ಮಂತಹ ಮಗಳನ್ನು ಪಡೆಯುವುದು ತಂದೆಗೆ ಒಂದು ಸೌಭಾಗ್ಯ. ದೇವರು ನಿಮ್ಮಿಬ್ಬರಿಗೂ ಶುಭ ಹಾರೈಸಲಿ. ನಿಮ್ಮ ತಂದೆಗೆ ಶೀಘ್ರದಲ್ಲೇ ಉತ್ತಮ ಅವಕಾಶ ಸಿಗುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ಇದು ಇಲ್ಲಿಯವರೆಗೆ ಲಿಂಕ್ಡ್‌ಇನ್ ಅನ್ನು ಬಳಸಿಕೊಂಡ ಅತ್ಯುತ್ತಮ ರೀತಿಯಾಗಿದೆ. ನಿಮಗೆ ಎಲ್ಲಾ ಶಕ್ತಿ ಮತ್ತು ನಿಮ್ಮ ತಂದೆಗೆ ಶುಭ ಹಾರೈಸುತ್ತೇನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಎಂತಹ ಸ್ಪೂರ್ತಿದಾಯಕ ಪೋಸ್ಟ್! ನಿಮ್ಮ ತಂದೆಯವರ ಅದ್ಭುತ ಅನುಭವ ಮತ್ತು ಸಮರ್ಪಣೆಗೆ ಬೆಲೆ ನೀಡುವ ಪಾತ್ರವನ್ನು ಕಂಡುಕೊಳ್ಳುವಲ್ಲಿ ಅವರಿಗೆ ಶುಭ ಹಾರೈಸುತ್ತೇನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.