Amazon Layoffs: ಯಾರನ್ನೂ ತೆಗೆದಿಲ್ಲ, ಅವರೇ ರಾಜೀನಾಮೆ ಕೊಟ್ಟಿದ್ದಾರೆ: ಕಾರ್ಮಿಕ ಇಲಾಖೆಗೆ ಅಮೆಜಾನ್‌ ಸ್ಪಷ್ಟನೆ

By Kannadaprabha News  |  First Published Nov 26, 2022, 12:13 PM IST

Amazon Denies Layoffs: ಭಾರತ ಸೇರಿ ಜಗತ್ತಿನಾದ್ಯಂತ ಉದ್ಯೋ​ಗಿ​ಗಳ ವಜಾ ಆರೋಪಕ್ಕೆ ಅಮೆಜಾನ್‌ ಸ್ಪಷ್ಟನೆ ನೀಡಿದ್ದು, ಯಾರನ್ನೂ ತೆಗೆದಿಲ್ಲ, ಅವರೇ ರಾಜೀನಾಮೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. 


ನವದೆಹಲಿ: ಭಾರತ (India) ಸೇರಿದಂತೆ ವಿಶ್ವದಾದ್ಯಂತ 10,000ಕ್ಕೂ ಹೆಚ್ಚು ಉದ್ಯೋಗಿಗಳನ್ನು (Employees) ಹುದ್ದೆಯಿಂದ ತೆಗೆದು ಹಾಕುವ (Lay off) ಪ್ರಕ್ರಿಯೆ ಆರಂಭಿಸಿರುವ ಅಮೆಜಾನ್‌ ಕಂಪನಿ (Amazon Company), ಭಾರತದಲ್ಲಿ ಯಾವುದೇ ಉದ್ಯೋಗಿಗಳನ್ನೂ ಕೆಲಸದಿಂದ ತೆಗೆದು ಹಾಕಿಲ್ಲ. ಯಾರು ವಿಎಸ್‌ಪಿ (ವಾಲಂಟರಿ ಸೆಪರೇಷನ್‌ ಪ್ರೋಗ್ರಾಮ್‌) (Voluntary Separation Programme) ಯೋಜನೆ ಒಪ್ಪಿಕೊಂಡು ರಾಜೀನಾಮೆ ನೀಡಿದ್ದಾರೋ ಅವರನ್ನು ಮಾತ್ರ ಕೈಬಿಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಅಮೆಜಾನ್‌ ಕಂಪನಿ ಭಾರತದಲ್ಲಿ ಸಾವಿರಾರು ಉದ್ಯೋಗಿಗಳನ್ನು ನಿಯಮಬಾಹಿರವಾಗಿ ಕೆಲಸದಿಂದ ತೆಗೆದು ಹಾಕುತ್ತಿದೆ ಎಂದು ಐಟಿ ಉದ್ಯೋಗಿಗಳ ಪರವಾಗಿ ಹೋರಾಡುವ ಪುಣೆ ಮೂಲದ ಸಂಸ್ಥೆಯೊಂದು ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ನವೆಂಬರ್ 23ರಂದು ಬೆಂಗಳೂರಿನಲ್ಲಿರುವ ಕಾರ್ಮಿಕ ಇಲಾಖೆ ಆಯುಕ್ತರ ಕಚೇರಿಗೆ ಹಾಜರಾಗಿ ಸ್ಪಷ್ಟನೆ ನೀಡುವಂತೆ ಅಮೆಜಾನ್‌ ಸಂಸ್ಥೆಗೆ ಕೇಂದ್ರ ಕಾರ್ಮಿಕ ಸಚಿವಾಲಯ (Union Labour Ministry) ನೋಟಿಸ್‌ (Notice) ಜಾರಿ ಮಾಡಿತ್ತು. ಅದರನ್ವಯ ಬುಧವಾರ ಹಾಜರಾಗಿದ್ದ ಅಮೆಜಾನ್‌ ಅಧಿಕಾರಿಗಳು ಮೇಲ್ಕಂಡ ರೀತಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.

Tap to resize

Latest Videos

ಇದನ್ನು ಓದಿ: ಉದ್ಯೋಗ ಕಡಿತ: ಅಮೆಜಾನ್‌ಗೆ ಕಾರ್ಮಿಕ ಇಲಾಖೆಯಿಂದ ನೋಟಿಸ್

ವಿಎಸ್‌ಪಿ ಯೋಜನೆ ಆಯ್ಕೆ ಮಾಡಿಕೊಂಡ ಸಿಬ್ಬಂದಿಗೆ, 22 ವಾರಗಳ ಮೂಲ ವೇತನದಷ್ಟು ಹಣ, ಸಿಬ್ಬಂದಿ ಕಂಪನಿಯಲ್ಲಿ ಕೆಲಸ ಮಾಡಿರುವ ಒಟ್ಟು ಅವಧಿ ಪರಿಗಣಿಸಿ ಪ್ರತಿ 6 ತಿಂಗಳಿಗೆ ಒಂದು ವಾರದಂತೆ 1 ವಾರದ ಮೂಲ ವೇತನ, 20 ವಾರಗಳ ಬೇರ್ಪಡುವಿಕೆ ಭತ್ಯೆ, ಕೆಲಸ ಬಿಟ್ಟ ನಂತರದ 6 ತಿಂಗಳ ಅವಧಿಗೆ ಆರೋಗ್ಯ ವಿಮೆ ಸೌಲಭ್ಯವು ಉದ್ಯೋಗಿಗೆ ಸಿಗುತ್ತದೆ.

10,000 ಸಿಬ್ಬಂದಿಯನ್ನು ಉದ್ಯೋಗದಿಂದ ತೆಗೆದುಹಾಕಲು ಮುಂದಾಗಿರುವ ಅಮೆರಿಕ ಮೂಲದ ಅಮೆಜಾನ್‌ ಕಂಪನಿ, ಈ ಸಂಬಂಧ ಬುಧವಾರ ಬೆಂಗಳೂರಿನಲ್ಲಿರುವ ಕಾರ್ಮಿಕ ಇಲಾಖೆ ಆಯುಕ್ತರನ್ನು ಭೇಟಿ ಮಾಡಿ ಸ್ಪಷ್ಟನೆ ನೀಡುವ ಯತ್ನ ಮಾಡಿದೆ. ಆದರೆ ಅಮೆಜಾನ್‌ ಪ್ರತಿನಿಧಿಗಳ ಭೇಟಿಗೆ ನಿರಾಕರಿಸಿರುವ ಕಾರ್ಮಿಕ ಇಲಾಖೆ, ಉದ್ಯೋಗಿಗಳನ್ನು ತೆಗೆದುಹಾಕುವ ಸಂಬಂಧ ಈಗಾಗಲೇ ರವಾನಿಸಲಾಗಿರುವ ನೋಟಿಸ್‌ಗೆ ಮೊದಲು ಉತ್ತರ ನೀಡಿ. ಬಳಿಕ ಖುದ್ದು ಭೇಟಿ ಎಂದು ಸೂಚಿಸಿ ವಾಪಸ್‌ ಕಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಶೀಘ್ರದಲ್ಲೇ 10,000 ಅಮೆಜಾನ್‌ ಸಿಬ್ಬಂದಿ ವಜಾ..! ಮೆಟಾ, ಟ್ವಿಟ್ಟರ್‌ ಬಳಿಕ ಮತ್ತೊಂದು ದೊಡ್ಡ ಶಾಕ್‌

ಜಾಗತಿಕ ಆರ್ಥಿಕ ಪರಿಸ್ಥಿತಿ ಮಂದಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ, ಕಂಪನಿಯ ನಷ್ಟ ಕಡಿಮೆ ಮಾಡಲು ಅಮೆಜಾನ್‌ ಸಂಸ್ಥೆ 10 ಸಾವಿರ ಉದ್ಯೋಗಿಗಳನ್ನು ತೆಗೆದುಹಾಕುವ ನಿರ್ಧಾರವನ್ನು ಇತ್ತೀಚೆಗೆ ಪ್ರಕಟಿಸಿತ್ತು. ಆದರೆ ಇದು ಏಕಪಕ್ಷೀಯ ಕ್ರಮ. ಇಂಥ ಕ್ರಮಕ್ಕೂ ಮೊದಲು ಉದ್ಯೋಗಿಗಳಿಗೆ 3 ತಿಂಗಳ ನೋಟಿಸ್‌ ನೀಡಬೇಕು ಮತ್ತು ಸೂಕ್ತ ಸರ್ಕಾರದ ಅನುಮತಿ ಪಡೆಯಬೇಕು. ಇದ್ಯಾವುದನ್ನೂ ಮಾಡದೇ ಉದ್ಯೋಗಿಗಳನ್ನು ತೆಗೆದು ಹಾಕಲಾಗಿದೆ ಎಂದು ಐಟಿ ಉದ್ಯೋಗಿಗಳ ಹಕ್ಕುಗಳ ಪರವಾಗಿ ಹೋರಾಡುತ್ತಿರುವ ಪುಣೆ ಮೂಲದ ‘ನ್ಯಾಸಂಟ್‌ ಇನ್ಫಾರ್ಮೇಷನ್‌ ಟೆಕ್ನಾಲಜಿ ಎಂಪ್ಲಾಯೀಸ್‌ ಸೆನೆಟ್‌’ ಕೇಂದ್ರಕ್ಕೆ ದೂರು ಸಲ್ಲಿಸಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದ್ದ ಕೇಂದ್ರ ಕಾರ್ಮಿಕ ಸಚಿವಾಲಯವು ಬುಧವಾರ ಬೆಂಗಳೂರಿನಲ್ಲಿ ಕಾರ್ಮಿಕ ಇಲಾಖೆ ಆಯುಕ್ತರನ್ನು ಭೇಟಿ ಮಾಡಿ ಮಾಹಿತಿ ನೀಡುವಂತೆ ನೋಟಿಸ್‌ ಜಾರಿ ಮಾಡಿತ್ತು ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಟ್ವಿಟರ್‌, ಮೆಟಾ ಆಯ್ತು.. ಈಗ ಅಮೆಜಾನ್‌ನಿಂದ 3766 ಉದ್ಯೋಗಿಗಳ ವಜಾ!

click me!