Engineer ಆಗೋ ಕನಸು ಕಾಣ್ತಿರೋರಿಗೆ ಭಾರಿ ಶಾಕ್​: ಶೇ. 83ರಷ್ಟು ಮಂದಿಗೆ ಉದ್ಯೋಗವೇ ಸಿಗ್ತಿಲ್ಲ!

Published : Jul 20, 2025, 12:26 PM IST
Engineering Graduates

ಸಾರಾಂಶ

ಎಂಜಿನಿಯರ್​ ಆಗುವ ಕನಸು ಹೊತ್ತು ಪದವಿ ಸೇರುತ್ತಿರುವ ಶೇಕಡಾ 83ರಷ್ಟು ಪದವೀಧರರಿಗೆ ಉದ್ಯೋಗವೇ ಸಿಕ್ಕಿಲ್ಲ ಎನ್ನುವ ಶಾಕಿಂಗ್​ ವರದಿ ಬಿಡುಗಡೆಯಾಗಿದೆ.ಏನಿದು ವಿಷಯ? 

ಮೆಡಿಕಲ್​ ಮಾಡಲು ಮಾರ್ಕ್ಸ್​ ಇಲ್ಲ, ಅಷ್ಟು ದುಡ್ಡು ಕಟ್ಟಲು ಆಗಲ್ಲ ಎನ್ನುವ ಕಾರಣಕ್ಕೆ ಕೆಲವು ದಶಕಗಳಿಂದ ಎಂಜಿನಿಯರಿಂಗ್​ ಕೋರ್ಸ್​ ಮಾಡುವವರ ಸಂಖ್ಯೆ ಮಿತಿಮೀರಿ ಬಿಟ್ಟಿದೆ. ಮಕ್ಕಳಿಗೆ ಅದನ್ನು ಮಾಡಲು ಇಷ್ಟ ಇರುತ್ತೋ ಇಲ್ಲವೋ ಗೊತ್ತಿಲ್ಲ. ತಮ್ಮ ಮಗ/ಮಗಳು ಎಂಜಿನಿಯರಿಂಗ್​ ಮಾಡ್ತಿದ್ದಾನೆ/ಳೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದಕ್ಕಾದರೂ ಅಪ್ಪ-ಅಮ್ಮಂದಿರು ಮಕ್ಕಳನ್ನು ಅದಕ್ಕೇ ಸೇರಿಸುತ್ತಿದ್ದಾರೆ. ಹಿಂದೊಮ್ಮೆ ಇದಕ್ಕೆ ಭಾರಿ ಬೇಡಿಕೆ ಇದದ್ದೂ ಸುಳ್ಳಲ್ಲ. ಜೊತೆಗೆ ಅಂಕಗಳು ಚೆನ್ನಾಗಿದ್ದರೆ, ಸಂದರ್ಶನ ಚೆನ್ನಾಗಿಮಾಡಿದ್ದರೆ ಉದ್ಯೋಗವೂ ಸುಲಭದಲ್ಲಿ ಸಿಗುತ್ತಿತ್ತು, ಭಾರಿ ಮೊತ್ತದ ಸಂಬಳವೂ ಸಿಗುತ್ತಿತ್ತು.

ಆದರೆ, ಪರಿಸ್ಥಿತಿ ಹದಗೆಟ್ಟು ದಶಕಗಳೇ ಕಳೆದುಹೋಗಿದೆ. ಅದೆಷ್ಟೋ ಟೆಕ್ಕಿಗಳನ್ನು ದೊಡ್ಡ ದೊಡ್ಡ ಕಂಪೆನಿಗಳು ಮನೆಗೆ ಕಳಿಸುತ್ತಿವೆ. ಅತಿ ಹೆಚ್ಚು ಸಂಬಳ ಪಡೆಯುವವರೇ ಅವರ ಟಾರ್ಗೆಟ್​. ಒಂದೇ ಸಲಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಎಂಜಿನಿಯರ್​ಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಕೃತಕ ಬುದ್ಧಿಮತ್ತೆ (AI) ಬಂದ ಮೇಲಂತೂ ಮತ್ತಷ್ಟು ಸ್ಥಿತಿ ಹದಗೆಟ್ಟಿದೆ. ಇದೇ ಕಾರಣಕ್ಕೆ ಪ್ರತಿಷ್ಠೆಗಾಗಿ ಎಂಜಿನಿಯರಿಂಗ್​ಗೆ ಮಕ್ಕಳನ್ನು ದೂಡಿದವರು ಇದೀಗ ಅವರಿಗೆ ಉದ್ಯೋಗ ಸಿಗದ ಕಾರಣ, ತಾವೇ ದುಡ್ಡನ್ನು ನೀಡುವ ಸ್ಥಿತಿಯನ್ನು ತಂದುಕೊಂಡಿದ್ದಾರೆ ಅದೆಷ್ಟೋ ಅಪ್ಪ-ಅಮ್ಮ. ಮತ್ತೆ ಕೆಲವರಿಗೆ ಉದ್ಯೋಗ ಸಿಕ್ಕರೂ ಅತ್ಯಂತ ಕಡಿಮೆ ಸಂಬಳದಲ್ಲಿ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿಯೂ ಬೆಂಗಳೂರಿನಂಥ ಮಹಾನಗರಗಳಲ್ಲಿ ಉದ್ಯೋಗ ಸಿಕ್ಕಿದ್ದು ಮಾತ್ರ ಖುಷಿ ಬಿಟ್ಟರೆ, ಬರುವ ಸಂಬಳ ಬಾಡಿಗೆ ಕಟ್ಟಲೂ ಸಾಕಾಗಲ್ಲ ಎನ್ನುವ ಸ್ಥಿತಿಯಲ್ಲಿ ಹಲವರು ಇದ್ದರೂ, ಅದನ್ನು ಹೇಳಿಕೊಳ್ಳಲಾಗದೇ ಸಂಕಟ ಪಡುವವರೂ ಇದ್ದಾರೆ.

ಆದರೂ ಎಂಜಿನಿಯರಿಂಗ್​ ಮಾಡುವವರ ಸಂಖ್ಯೆಯೇನೂ ಕಮ್ಮಿಯಾಗಿಲ್ಲ. ಇದರ ನಡುವೆಯೇ ಶಾಕಿಂಗ್​ ವರದಿಯೊಂದು ಬಂದಿದೆ. ಕಳೆದ ವರ್ಷ ಅರ್ಥಾತ್​ 2024ರಲ್ಲಿ ಎಂಜಿನಿಯರಿಂಗ್​ ಪದವಿ ಪಡೆದ ಶೇಕಡಾ 83 ರಷ್ಟು ಮಂದಿಗೆ ಉದ್ಯೋಗವೇ ಸಿಕ್ಕಿಲ್ಲ. ಕೊನೆಯ ಪಕ್ಷ ಇಂಟರ್ನ್‌ಶಿಪ್ ಕೂಡ ಸಿಕ್ಕಿಲ್ಲ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ. ಕೌಶಲ್ಯಪೂರ್ಣ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆಯಿದ್ದರೂ, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಗಮನಾರ್ಹ ಉದ್ಯೋಗಾವಕಾಶದ ಅಂತರವನ್ನು ಇದು ಎತ್ತಿ ತೋರಿಸುತ್ತಿದೆ. ತಮಗೆ ಕೌಶಲ ಇರುವ ವಿದ್ಯಾರ್ಥಿಗಳು ಬೇಕು, ಅಂಥವರು ಸಿಗುತ್ತಲೇ ಇಲ್ಲ ಎಂದು ಬಹುತೇಕ ಕಂಪೆನಿಗಳು ಹೇಳಿಕೊಂಡಿವೆ. ನಮಗೆ ಬಾಯಿಪಾಠ ಮಾಡಿ ಬಹಳ ಅಂಕ ಗಳಿಸಿದ ವಿದ್ಯಾರ್ಥಿಗಳಿಗಿಂತಲೂ ಕೌಶಲ ಇರುವವರು ಬೇಕು ಎನ್ನುವುದು ಅವರ ಮಾತು.

ಇನ್ನು ಬೆಂಗಳೂರಿನ ವಿಷಯದ ಬಗ್ಗೆ ಹೇಳುವುದಾದರೆ, ಅನ್‌ಸ್ಟಾಪ್ ಟ್ಯಾಲೆಂಟ್ ರಿಪೋರ್ಟ್‌ 2025 ಸಮೀಕ್ಷೆಯು ನೀಡಿರುವ ವರದಿಯ ಪ್ರಕಾರ, ನೇಮಕಾತಿ ವಿಧಾನದಲ್ಲಿನ ಹಲವು ಬದಲಾವಣೆಗಳ ಕಾರಣಕ್ಕೆ ಯುವ ಇಂಜಿನಿಯರಿಂಗ್ ಪದವೀಧರರಿಗೆ ಕೆಲಸ ಸಿಗುತ್ತಿಲ್ಲ ಎನ್ನುವುದು. ಶೇಕಡಾ 51ರಷ್ಟು 'ಝೆನ್-ಜಿ'ಗಳು ಸರಿಯಾದ ಅವಕಾಶಗಳು ಸಿಗದೆ ಹೊರಗುತ್ತಿಗೆ ಮತ್ತು ಇತರ ಉದ್ಯೋಗಗಳತ್ತ ವಾಲುತ್ತಿದ್ದಾರೆ. ಬಿ-ಸ್ಕೂಲ್‌ನ ಶೇ 59ರಷ್ಟು ಪದವೀಧರರಿಗೆ ಸರಿಯಾದ ಉದ್ಯೋಗ ಸಿಗುತ್ತಿಲ್ಲ. ಇದು ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಶ್ನೆಯನ್ನು ಹುಟ್ಟುಹಾಕಿದೆ.

PREV
Read more Articles on
click me!

Recommended Stories

ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!
ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?