
ನವದೆಹಲಿ (ಏ.8): ಸಾಂಪ್ರದಾಯಿಕ ಶಿಕ್ಷಣ ಅಥವಾ ಪದವಿಗಿಂತ ಕೌಶಲ ಮತ್ತು ವೈಯಕ್ತಿಕ ಬ್ರ್ಯಾಂಡಿಂಗ್ ಎಷ್ಟು ಮುಖ್ಯ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಗೌರಿ ಎಂ ಎಂಬ 19 ವರ್ಷದ ಯುವತಿ, ಪದವಿ ಇಲ್ಲದಿದ್ದರೂ ವಿಶ್ವದ ಪ್ರಮುಖ ಕಾರು ತಯಾರಿಕಾ ಸಂಸ್ಥೆಯಾದ BMW ನಲ್ಲಿ ಪೂರ್ಣಾವಧಿಯ 'ಪರ್ಸನಲ್ ಮಾರ್ಕೆಟಿಂಗ್' ಜಾಬ್ ಗಿಟ್ಟಿಸಿಕೊಂಡಿದ್ದಾಳೆ. ಈ ಕುರಿತಾದ ಲಿಂಕ್ಡ್‌ಇನ್ (LinkedIn) ಪೋಸ್ಟ್ ಈಗ ವೈರಲ್ ಆಗಿದ್ದು, ಕೌಶಲ vs ಶಿಕ್ಷಣದ ನಡುವಿನ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
ಸಾಮಾನ್ಯವಾಗಿ ಬಿಎಂಡಬ್ಲ್ಯೂ ಅಂತಹ ಕಂಪನಿಗಳಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಪಡೆಯಲು ಕನಿಷ್ಠ 5 ವರ್ಷಗಳ ಅನುಭವದ ಅಗತ್ಯವಿರುತ್ತದೆ. ಆದರೆ, ಗೌರಿ ಎಂ ತನ್ನ ಬಲವಾದ ಡಿಜಿಟಲ್ ರೆಕಗ್ನಿಶನ್ ಮತ್ತು ಸೋಷಿಯಲ್ ಮೀಡಿಯಾ ಪ್ರಭಾವದ ಮೂಲಕ ಈ ಅವಕಾಶವನ್ನು ಪಡೆದುಕೊಂಡಿದ್ದಾಳೆ. ಲಿಂಕ್ಡ್‌ಇನ್‌ನಲ್ಲಿ 65,000 ಕ್ಕೂ ಹೆಚ್ಚು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 35,000 ಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಗೌರಿ, ತನ್ನದೇ ಆದ ಪ್ರೇಕ್ಷಕ ಬಳಗವನ್ನು ಕಟ್ಟಿಕೊಂಡಿರುವುದು ಈಕೆಯ ಆಯ್ಕೆಗೆ ಪ್ರಮುಖ ಕಾರಣವಾಗಿದೆ.
"ಆಕೆಯ ಬಳಿ ಯಾವುದೇ ಪದವಿ ಅಥವಾ ದೀರ್ಘಕಾಲದ ಅನುಭವಕ್ಕಿಂತ ಹೆಚ್ಚಿನ ಪರ್ಸನಲ್ ಬ್ರ್ಯಾಂಡ್ ಇತ್ತು. ನಿಮ್ಮ ಕನಸಿನ ಕೆಲಸವನ್ನು ಪಡೆಯಲು ನಿಮ್ಮ ಲಿಂಕ್ಡ್‌ಇನ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳನ್ನು ಒಂದು ಮಿನಿ ಪ್ರಾಜೆಕ್ಟ್‌ನಂತೆ ಬಳಸಿಕೊಳ್ಳುವ ಸಮಯ ಬಂದಿದೆ," ಎಂದು ಅರುಷಿ ಎಂಬುವವರು ಬರೆದಿದ್ದಾರೆ.
ತನ್ನ ಸಾಧನೆಯ ಬಗ್ಗೆ ಖುಷಿ ಹಂಚಿಕೊಂಡಿರುವ ಗೌರಿ, ಬಿಎಂಡಬ್ಲ್ಯೂನೊಂದಿಗೆ ನಡೆದ ಇಮೇಲ್ ಸಂಭಾಷಣೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾಳೆ. "ವಿಶ್ವದ ಅತಿದೊಡ್ಡ ಕಾರು ಸಮೂಹವೊಂದರಿಂದ ನನಗೆ ಉದ್ಯೋಗದ ಆಫರ್ ಬಂದಿದೆ. ಇದು ಕೇವಲ ಸಹಯೋಗಕ್ಕಾಗಿ (Collaboration) ಅಲ್ಲ, ಬದಲಿಗೆ ಗಂಭೀರವಾದ ಮಾರ್ಕೆಟಿಂಗ್ ಜಾಬ್‌ಗಾಗಿ ಬಂದಿರುವ ಆಫರ್. ನಾನು ಕೇವಲ 19 ವರ್ಷದ ಹುಡುಗಿ, ನನ್ನಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಏನಾದರೂ ಸಾಧಿಸಲು ಪ್ರಯತ್ನಿಸುತ್ತಿದ್ದೆ. ಹೇಗೋ ಅವರು ನನ್ನನ್ನು ಹುಡುಕಿಕೊಂಡು ಬಂದರು. ಆ ನಂತರ ಸ್ಪೋರ್ಟ್ಸ್ ಬ್ರ್ಯಾಂಡ್ ಸಂಸ್ಥಾಪಕರೊಬ್ಬರು ಸಂಪರ್ಕಿಸಿದರು. ಅಚ್ಚರಿಯೆಂದರೆ ನಾನು ಅರ್ಜಿ ಸಲ್ಲಿಸದಿದ್ದರೂ ಒಂದೇ ವಾರದಲ್ಲಿ ಮೂರು ಉದ್ಯೋಗದ ಆಫರ್‌ಗಳು ಬಂದವು. ನಾನು ಯಾರಿಗೂ ಇಮೇಲ್ ಮಾಡಿರಲಿಲ್ಲ ಅಥವಾ ಅವಕಾಶಕ್ಕಾಗಿ ಕೇಳಿರಲಿಲ್ಲ," ಎಂದು ಗೌರಿ ಬರೆದುಕೊಂಡಿದ್ದಾಳೆ.
ಗೌರಿಯ ಈ ಪೋಸ್ಟ್ ಯುವ ವೃತ್ತಿಪರರು ಮತ್ತು ವಿದ್ಯಾರ್ಥಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. "ಇದು ಅದೃಷ್ಟವಲ್ಲ, ಪರ್ಸನಲ್ ಬ್ರ್ಯಾಂಡಿಂಗ್‌ನ ಶಕ್ತಿ. ಕಳೆದ ವರ್ಷವಷ್ಟೇ ಗೌರಿ ಟಾಟಾ ಮೋಟಾರ್ಸ್ ಜೊತೆ ಕೆಲಸ ಮಾಡುತ್ತಿದ್ದಾಗ ನಾನು ಅವಳ ಕಂಟೆಂಟ್ ನೋಡಿದ್ದೆ. ಪದವಿ ಇಲ್ಲದಿದ್ದರೂ ಅವಳು ತನ್ನ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ರೀತಿಗೆ ಇಂದು ಬೆಲೆ ಸಿಕ್ಕಿದೆ," ಎಂದು ಬಳಕೆದಾರರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆದರೆ, ಈ ಬಗ್ಗೆ ಕೆಲವರು ಸಂಶಯವನ್ನೂ ವ್ಯಕ್ತಪಡಿಸಿದ್ದಾರೆ. ಇಂತಹ ಪ್ರಕರಣಗಳು ಎಲ್ಲ ಉದ್ಯಮಗಳಿಗೂ ಅನ್ವಯಿಸುವುದಿಲ್ಲ ಮತ್ತು ಪದವಿ ಶಿಕ್ಷಣದ ಪ್ರಾಮುಖ್ಯತೆಯನ್ನು ಕಡೆಗಣಿಸಬಾರದು ಎಂದು ಕೆಲವರು ಎಚ್ಚರಿಸಿದ್ದಾರೆ. ಈ ಕುರಿತು ಅಧಿಕೃತ ಪ್ರತಿಕ್ರಿಯೆಗಾಗಿ ಎನ್‌ಡಿಟಿವಿ (NDTV) ಸಂಸ್ಥೆಯು ಬಿಎಂಡಬ್ಲ್ಯೂ ಕಂಪನಿಯನ್ನು ಸಂಪರ್ಕಿಸಿದ್ದು, ಅವರಿಂದ ಉತ್ತರ ಬಂದ ನಂತರ ವರದಿಯನ್ನು ಅಪ್‌ಡೇಟ್ ಮಾಡಲಾಗುವುದು ಎಂದು ತಿಳಿಸಿದೆ.