ಯತೀಂದ್ರ ಹೇಳಿಕೆಯಿಂದ ರಾಜ್ಯದಲ್ಲಿ ಮತ್ತೆ ಸಿಎಂ ಕುರ್ಚಿ ಕಿಚ್ಚು

Kannadaprabha News   | Kannada Prabha
Published : Dec 12, 2025, 05:28 AM IST
Yathindra Siddaramaiah

ಸಾರಾಂಶ

‘ರಾಜ್ಯದಲ್ಲಿ ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್‌ ಸ್ಪಷ್ಟವಾಗಿ ಹೇಳಿದೆ’ ಎಂದು ಯತೀಂದ್ರ ಸಿದ್ದರಾಮಯ್ಯ ಮತ್ತೊಮ್ಮೆ ಹೇಳಿದ್ದಾರೆ. ಇದು ತಣ್ಣಗಾಗಿದ್ದ ಆಂತರಿಕ ಕಿಚ್ಚು ಮತ್ತೆ ಹೊತ್ತಿಕೊಳ್ಳಲು ನಾಂದಿ ಹಾಡಿದೆ.

ಬೆಂಗಳೂರು : ‘ರಾಜ್ಯದಲ್ಲಿ ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್‌ ಸ್ಪಷ್ಟವಾಗಿ ಹೇಳಿದೆ’ ಎಂದು ವಿಧಾನಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಮತ್ತೊಮ್ಮೆ ಹೇಳಿದ್ದಾರೆ. ಇದು ತಣ್ಣಗಾಗಿದ್ದ ಆಂತರಿಕ ಕಿಚ್ಚು ಮತ್ತೆ ಹೊತ್ತಿಕೊಳ್ಳಲು ನಾಂದು ಹಾಡಿದೆ. ‘ಯತೀಂದ್ರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪ್ರತಿಕ್ರಿಯೆ ಕೊಡುತ್ತಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ಅಲ್ಲದೆ, ಡಿ.ಕೆ.ಶಿವಕುಮಾರ್ ಆಪ್ತ ಶಾಸಕರಾದ ಇಕ್ಬಾಲ್‌ ಹುಸೇನ್‌, ‘ನಾವು ಮಾತನಾಡಿದರೆ ನೋಟಿಸ್‌ ನೀಡುತ್ತಾರೆ. ಅವರು ಮಾತನಾಡಿದರೆ ಏನೂ ಮಾಡುವುದಿಲ್ಲ. ಅವರು ಮಾತನಾಡಿದರೆ ಚಮತ್ಕಾರ, ನಾವು ಮಾತನಾಡಿದರೆ ಬಲಾತ್ಕಾರ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ಮೂಲಕ ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಕಿತ್ತಾಟ ಮತ್ತೆ ಜೋರು ಪಡೆದಂತಾಗಿದೆ.

ವಿಧಾನಸಭೆ ಅಧಿವೇಶನದ ಮೊದಲ ದಿನವಾದ ಸೋಮವಾರ ಯತೀಂದ್ರ ಸಿದ್ದರಾಮಯ್ಯ, ‘ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿ.ಕೆ.ಶಿವಕುಮಾರ್‌ ಅವರು ಹೈಕಮಾಂಡ್‌ಗೆ ಕೇಳಿದ್ದು ಸತ್ಯ. ಆದರೆ ಸದ್ಯ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ’ ಎಂದಿದ್ದರು. ಈ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿತ್ತು.

ಅಲ್ಲದೆ, ‘ಈ ಹೇಳಿಕೆ ಬಗ್ಗೆ ಮಂಗಳವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆಯಾಗಿಲಿದೆ ಹಾಗೂ ಯಾರೂ ಈ ಬಗ್ಗೆ ಹೇಳಿಕೆ ನೀಡದಂತೆ ತಾಕೀತು ಮಾಡಲಿದ್ದಾರೆ’ ಎಂದು ನಿರೀಕ್ಷಿಸಿತ್ತಾದರೂ ಮುಖ್ಯಮಂತ್ರಿ ಸ್ಥಾನದ ಹೇಳಿಕೆಗಳ ಬಗ್ಗೆ ಯಾವುದೇ ಪ್ರಸ್ತಾಪವಾಗಿರಲಿಲ್ಲ.

ಇದೀಗ ಗುರುವಾರ ಮತ್ತೆ ಯತೀಂದ್ರ ಸಿದ್ದರಾಮಯ್ಯ ಅವರು, ‘ರಾಜ್ಯದಲ್ಲಿ ನಾಯಕತ್ವ ವಿಚಾರದಲ್ಲಿ ಯಾವುದೇ ಜಗಳ ಇಲ್ಲ. ನಿಮಗೆ ಮೊದಲೇ ಹೇಳಿದ್ದೇನೆ. ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್‌ ಬಹಳ ಸ್ಪಷ್ಟವಾಗಿ ಹೇಳಿದೆ’ ಎಂದಿದ್ದಾರೆ. 

ವರಿಷ್ಠರ ಕೆಲಸ ಅನ್ಯರು ಮಾಡೋದು ಬೇಡ-ಹುಸೇನ್‌:

ಶಾಸಕ ಇಕ್ಬಾಲ್‌ ಹುಸೇನ್‌ ಪ್ರತಿಕ್ರಿಯೆ ನೀಡಿ, ‘ಯತೀಂದ್ರ ಹೇಳಿಕೆ ಬಗ್ಗೆ ಗೊತ್ತಿಲ್ಲ, ನೋಡುತ್ತೇನೆ. ನಾವು ಮಾತನಾಡಿದರೆ ನೋಟಿಸ್‌ ನೀಡುತ್ತಾರೆ. ನಾವು ಮಾತನಾಡಿದರೆ ಬಲಾತ್ಕಾರ, ಅವರು ಮಾತನಾಡಿದರೆ ಚಮತ್ಕಾರ. ನಮ್ಮ ವರಿಷ್ಠರು ವೀಕ್‌ ಅಲ್ಲ, ಬಲಿಷ್ಠರಾಗಿದ್ದಾರೆ. ಹೈಕಮಾಂಡ್‌ನವರು ಎಲ್ಲದರ ಬಗ್ಗೆ ತೀರ್ಮಾನ ಮಾಡುತ್ತಾರೆ. ಅವರ ಕೆಲಸ ಬೇರೆಯವರು ಮಾಡುತ್ತಿರುವುದು ಬೇಡ. ಅವರ ಹೇಳಿಕೆ ಹಿಂದೆ ಯಾರಿದ್ದಾರೆ ಎಂಬುದೆಲ್ಲ ಗೊತ್ತಿಲ್ಲ, ಪದೇ ಪದೆ ಹೇಳಿಕೆ ನೀಡುತ್ತಿರುವ ಬಗ್ಗೆ ಅವರನ್ನೇ ಕೇಳಬೇಕು’ ಎಂದರು.

ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ - ಬೈರತಿ:

ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಬೈರತಿ ಸುರೇಶ್, ನಾಯಕತ್ವ ಬದಲಾವಣೆಯ ಯಾವ ಚರ್ಚೆಯೂ ಇಲ್ಲ, ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದನ್ನು ಅನುಸರಿಸುತ್ತೇವೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ. ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಅವರೂ ಅದನ್ನೇ ಹೇಳಿದ್ದಾರೆ ಎಂದು ಹೇಳಿದರು.

ಸಚಿವ ಆರ್‌.ಬಿ.ತಿಮ್ಮಾಪುರ ಮಾತನಾಡಿ, ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ತೀರ್ಮಾನ ಮಾಡಲು ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ರಾಜ್ಯದ ಸ್ಥಿತಿ ಏನೆಂಬುದನ್ನು ಬಲ್ಲವರು ಹಾಗೂ ಹೈಕಮಾಂಡ್‌ ಇದೆ. ಹೀಗಾಗಿ ಅವರು ತೀರ್ಮಾನ ಮಾಡುತ್ತಾರೆ ಎಂದರು.

ಮುಖ್ಯಮಂತ್ರಿಗಳೇ ಪ್ರತಿಕ್ರಿಯೆ ಕೊಡುತ್ತಾರೆ: ಡಿ.ಕೆ.ಶಿವಕುಮಾರ್‌

ರಾಜ್ಯದಲ್ಲಿ ಅಧಿಕಾರ ಬದಲಾವಣೆಯಿಲ್ಲ ಎಂದು ಹೈಕಮಾಂಡ್ ಹೇಳಿದೆ ಎಂಬ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅವರಿಗೆ ಉತ್ತರ ನೀಡುತ್ತಾರೆ ಎಂದುಕೊಂಡಿದ್ದೇನೆ’ ಎಂದಷ್ಟೇ ಹೇಳಿದರು.

ವರಿಷ್ಠರ ತೀರ್ಮಾನ ಅಂತಿಮ

ಹೈಕಮಾಂಡ್‌ ಏನು ತೀರ್ಮಾನ ಮಾಡುತ್ತೋ ಅದೇ ಅಂತಿಮ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಪದೇ ಪದೆ ಯಾಕೆ ಕೇಳುತ್ತೀರಿ?

- ಸಿದ್ದರಾಮಯ್ಯ, ಮುಖ್ಯಮಂತ್ರಿ

ಸಿಎಂ ಅವರೇ ಉತ್ತರ ನೀಡ್ತಾರೆ

ಯತೀಂದ್ರ ಹೇಳಿಕೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪ್ರತಿಕ್ರಿಯೆ ಕೊಡುತ್ತಾರೆ ಎಂದುಕೊಂಡಿದ್ದೇನೆ.

- ಡಿ.ಕೆ. ಶಿವಕುಮಾರ್‌, ಡಿಸಿಎಂ

ನಮ್ಮ ಮಾತು ಬಲಾತ್ಕಾರ, ಅವರ ಮಾತು ಚಮತ್ಕಾರ

ನಾವು ಮಾತನಾಡಿದರೆ ನೋಟಿಸ್‌ ನೀಡುತ್ತಾರೆ. ನಾವು ಮಾತನಾಡಿದರೆ ಬಲಾತ್ಕಾರ, ಅವರು ಮಾತನಾಡಿದರೆ ಚಮತ್ಕಾರ. ನಮ್ಮ ವರಿಷ್ಠರು ಬಲಿಷ್ಠರಾಗಿದ್ದಾರೆ. ವರಿಷ್ಠರು ಎಲ್ಲ ಬಗ್ಗೆ ತೀರ್ಮಾನ ಮಾಡ್ತಾರೆ. ಬೇರೆಯವರು ಅವರ ಕೆಲಸ ಮಾಡೋದು ಬೇಡ. ಅವರ ಹೇಳಿಕೆ ಹಿಂದೆ ಯಾರಿದ್ದಾರೆಂದು ಗೊತ್ತಿಲ್ಲ, ಪದೇ ಪದೇ ಹೇಳಿಕೆ ನೀಡುತ್ತಿರುವ ಬಗ್ಗೆ ಅವರನ್ನೇ ಕೇಳಬೇಕು.

- ಇಕ್ಬಾಲ್‌ ಹುಸೇನ್‌, ಡಿಕೆಶಿ ಆಪ್ತ ಕಾಂಗ್ರೆಸ್‌ ಶಾಸಕ

ಸಿದ್ದು ಬದಲಿಸೋ ‘ಗಟ್ಸ್‌’ ಹೈಕಮಾಂಡ್‌ಗಷ್ಟೆ: ಜಮೀರ್‌

ಬೆಂಗಳೂರು : ‘ರಾಜ್ಯದಲ್ಲಿ 2028ರವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂಬುದು ನನ್ನ ಅಭಿಪ್ರಾಯ. ಇಷ್ಟಕ್ಕೂ ಸಿದ್ದರಾಮಯ್ಯ ಅವರನ್ನು ಬದಲಿಸಲು ಯಾರಿಗಾದರೂ ಗಟ್ಸ್‌(ಧೈರ್ಯ) ಇದೆಯಾ? ನೀವೇ ಹೇಳಿ ಎಂದು ಪ್ರಶ್ನಿಸಿದ ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌, ಆ ಗಟ್ಸ್‌ ಏನಾದರೂ ಇದ್ದರೆ ಅದು ಹೈಕಮಾಂಡ್‌ಗೆ ಮಾತ್ರ ಎಂದೂ ಹೇಳಿದ್ದಾರೆ.

ನಾಯಕತ್ವ ಬದಲಾವಣೆ ಸದ್ಯಕ್ಕಿಲ್ಲ ಎಂದು ಹೈಕಮಾಂಡ್‌ ಸ್ಪಷ್ಟಪಡಿಸಿದೆ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಈಗ ಖುರ್ಚಿ ಖಾಲಿ ಇಲ್ಲ. ಖುರ್ಚಿ ಖಾಲಿ ಇದ್ದಾಗ ನಾಯಕತ್ವ ಬದಲಾವಣೆ ಚರ್ಚೆಯಾಗಬೇಕು?. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ಹೈಕಮಾಂಡ್ ಹೇಳಿದಂತೆ ಕೇಳುವುದಾಗಿ ಹೇಳಿದ್ದಾರೆ. ಹೈಕಮಾಂಡ್‌ ಗೀಚಿದ ಗೆರೆ ಯಾರೂ ದಾಟಲ್ಲ ಎಂದು ಹೇಳಿದರು.ನಿಮ್ಮ ಪ್ರಕಾರ ಸಿಎಂ ಬದಲಾಗುತ್ತಾರೆಯೇ ಎಂಬ ಪ್ರಶ್ನೆಗೆ, ‘ನನ್ನ ಪ್ರಕಾರ 2028ರವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ. ಇದನ್ನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಅವರನ್ನು ಬದಲಿಸಲು ಯಾರಿಗಾದರೂ ಗಟ್ಸ್‌ ಇದೆಯಾ? ನೀವೇ ಹೇಳಿ. ಆ ಗಟ್ಸ್‌ ಇದ್ದರೆ ಹೈಕಮಾಂಡ್‌ಗೆ ಮಾತ್ರ.’ ಎಂದರು.

ಯತೀಂದ್ರ ಪದೇ ಪದೆ ಹೇಳಿಕೆ ನೀಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ‘ಯತೀಂದ್ರ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅದರಲ್ಲಿ ತಪ್ಪೇನಿಲ್ಲ’ ಎಂದರು.

ಸಿದ್ದು ಜಾಗಕ್ಕೆ ಬೇರೆಯವರು ಬರಲು ಅವಕಾಶವಿಲ್ಲ: ಸತೀಶ್

ಸುವರ್ಣ ವಿಧಾನಸೌಧ : ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಾಗಕ್ಕೆ ಬೇರೆಯವರು ಬರಲು ಅವಕಾಶವಿಲ್ಲ. ಅಂಥ ಸಂದರ್ಭ, ಸನ್ನಿವೇಶ ಇಲ್ಲ. ಅರ್ಧ ಅವಧಿ ಮಾತ್ರ ಮುಖ್ಯಮಂತ್ರಿ ಎಂದು ನಮಗೆ ಯಾರೂ ಹೇಳಿಲ್ಲ. ಹೀಗಾಗಿ ಪೂರ್ಣಾವಧಿ (ಪೂರಾ) ಅವರೇ ಮುಖ್ಯಮಂತ್ರಿ ಎಂಬುದು ನಮ್ಮ ಭಾವನೆ. ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದು’ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಸುವರ್ಣ ವಿಧಾನಸೌಧ ಹಾಗೂ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಬದಲಾವಣೆ ಇಲ್ಲ ಎಂಬ ಯತೀಂದ್ರ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.ಮುಖ್ಯಮಂತ್ರಿ ಬದಲಾವಣೆ ಚರ್ಚೆಗಳು ಸ್ವಾಭಾವಿಕ. ದೆಹಲಿಯಲ್ಲೂ ಕಳೆದ ಒಂದು ವರ್ಷದಿಂದ ಕುರ್ಚಿ ಬದಲಿಸಲು ಪ್ರಯತ್ನಗಳು, ಸಭೆಗಳು ನಡೆಯುತ್ತಿವೆ. ಮಹಾರಾಷ್ಟ್ರದಲ್ಲೂ ನಡೆಯುತ್ತಿದೆ. ಎಲ್ಲಾ ಕಡೆ ಇಂಥ ವಾತಾವರಣ ಇರುತ್ತದೆ. ಆದರೆ ಸದ್ಯಕ್ಕೆ ಸಿದ್ದರಾಮಯ್ಯ ಅವರ ಜಾಗಕ್ಕೆ ಬೇರೆಯವರು ಬರಲು ಅವಕಾಶವಿಲ್ಲ. ಅಂತಿಮ ನಿರ್ಧಾರ ಹೈಕಮಾಂಡ್‌ ಮಾಡುತ್ತದೆ ಎಂದು ಹೇಳಿದರು.

ಹೈಕಮಾಂಡ್‌ ದುರ್ಬಲ ಅಲ್ಲ: 

ಯತೀಂದ್ರ ಪದೇ ಪದೆ ಹೇಳಿಕೆ ನೀಡುತ್ತಿರುವುದರಿಂದ ಹೈಕಮಾಂಡ್‌ ದುರ್ಬಲ ಎನಿಸಲ್ಲವೇ? ಎಂಬ ಪ್ರಶ್ನೆಗೆ, ‘ದುರ್ಬಲ ಎಂದು ಎನಿಸಲ್ಲ. ಬದಲಿಗೆ ಶಾಸಕರು ಸ್ವತಂತ್ರರು ಎಂದಾಗುತ್ತದೆ. ಹೀಗಾಗಿ ಹೇಳುತ್ತಿದ್ದಾರೆ’ ಎಂದರು.

ಯತೀಂದ್ರ ಮಾತನಾಡಿದರೆ ಮಾತ್ರ ನೋಟಿಸ್‌ ನೀಡಲ್ಲ ಎಂಬ ಆರೋಪಕ್ಕೆ, ‘ಎಲ್ಲರಿಗೂ ನೋಟಿಸ್ ಕೊಡಲಾಗುವುದಿಲ್ಲ. ಸಮಾಧಾನ ಮಾಡಬಹುದು ಎಂದಾದರೆ ಕೊಡುತ್ತಾರೆ. ಬೇಕಾದರೆ ಅವರಿಗೂ ಒಂದು ಕೊಡಿಸೋಣ ಬಿಡಿ. ಆದರೆ ಈಗ ನೋಟಿಸ್‌ ತೆಗೆದುಕೊಂಡವರಿಗೆ ಏನಾಗಿದೆ ಎಂದು ಪ್ರಶ್ನಿಸಿದ ಅವರು, ನಂತರ ‘ಏನೂ ಆಗಲ್ಲ’ ಎಂದರು.ನೀವೇ ಮುಖ್ಯಮಂತ್ರಿ ಆಗಬೇಕು ಎಂಬ ಕೂಗು ಎದ್ದಿದೆಯಲ್ಲಾ?, ‘ಅವರು ಅಭಿಮಾನಕ್ಕೆ ಹೇಳಿರಬಹುದು. ಸದ್ಯಕ್ಕೆ ಆ ಸ್ಥಿತಿ ಇಲ್ಲ’ ಎಂದಷ್ಟೇ ಹೇಳಿದರು.

ಯತೀಂದ್ರ ಬದಲು ಬೇರೆಯವರು ಮಾತನಾಡಬೇಕು:

ಜಾರಕಿಹೊಳಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಯತೀಂದ್ರ ಅವರು ಮಾತನಾಡಿದರೆ ಅದು ಮುಜುಗರ. ಅದರ ಬದಲು ಬೇರೆಯವರು ಮಾತನಾಡಬೇಕು. ಈ ಬಗ್ಗೆ ಯತೀಂದ್ರ ಜತೆ ಮಾತನಾಡುತ್ತೇನೆ. ಲಾಭ-ನಷ್ಟದ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡೀಮ್ಡ್‌ ಅರಣ್ಯ ಪ್ರದೇಶದ ಪುನರ್‌ ಪರಿಶೀಲನೆಗಾಗಿ ಸಮಿತಿ: ಸಚಿವ ಈಶ್ವರ್‌ ಖಂಡ್ರೆ
ಹೆಣ್ಣು ಮಕ್ಕಳಿಗೆ ತವರು ಸುರಕ್ಷಿತ ಮಾಡಿ : ನಿತೀಶ್‌ಗೆ ಲಾಲು ಪುತ್ರಿ!