ಡಿ.ಕೆ.ಶಿವಕುಮಾರ್ 30 ದಿನಗಳ ಮೌನ ತಪ್ಪಿಸ್ಸಿಗೆ ಒಲಿಯುತ್ತಾ ಪಟ್ಟಾಭಿಷೇಕ; ಜನವರಿ 9ಕ್ಕೆ ಮುಹೂರ್ತ!

Published : Dec 11, 2025, 01:12 PM IST
Siddaramaiah DK Shivakumar

ಸಾರಾಂಶ

ಮುಖ್ಯಮಂತ್ರಿ ಸ್ಥಾನದ ಆಂತರಿಕ ಸಂಘರ್ಷದ ನಡುವೆ, ಡಿಸಿಎಂ ಡಿ.ಕೆ. ಶಿವಕುಮಾರ್ 30 ದಿನಗಳ 'ಮೌನ ತಪಸ್ಸು' ಆರಂಭಿಸಿದ್ದಾರೆ. ಇದು ಹೈಕಮಾಂಡ್‌ಗೆ ತಮ್ಮ ನಿಷ್ಠೆ ಪ್ರದರ್ಶಿಸುವ ರಾಜಕೀಯ ತಂತ್ರವಾಗಿದ್ದು, ಜನವರಿ 9 ರಂದು ನಾಯಕತ್ವ ಬದಲಾವಣೆಯ ನಿರ್ಧಾರ ಹೊರಬೀಳಬಹುದೆಂಬ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಬೆಳಗಾವಿ/ಬೆಂಗಳೂರು (ಡಿ.11): ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಸ್ಥಾನದ ಕುರಿತಾದ ಆಂತರಿಕ ಸಂಘರ್ಷ ಮತ್ತೆ ಮುನ್ನಲೆಗೆ ಬಂದಿರುವ ಈ ಸಂದರ್ಭದಲ್ಲಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (ಡಿ.ಕೆ.ಶಿ) ಮುಂದಿನ 30 ದಿನಗಳ ಕಾಲ ಅನುಸರಿಸಲು ಹೊರಟಿರುವ 'ಮಹಾ ಮೌನ ತಪಸ್ಸು' ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಮೌನದ ಹಿಂದೆ ದೊಡ್ಡ ರಾಜಕೀಯ ಲೆಕ್ಕಾಚಾರ ಅಡಗಿದ್ದು, ಜನವರಿ 9ರಂದು ಕನಕಾಧಿಪತಿಯ ಮಹದಾಸೆ ಈಡೇರುತ್ತಾ ಎಂಬ ಚರ್ಚೆ ಶುರುವಾಗಿದೆ.

ಬೆಳಗಾವಿಯ ಚಳಿಗಾಲದ ಅಧಿವೇಶನ ನಡೆಯುತ್ತಿರುವಾಗಲೇ, ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಪುನರಾವರ್ತಿತ 'ನಾಯಕತ್ವ ಬದಲಾವಣೆ ಇಲ್ಲ' ಎಂಬ ಹೇಳಿಕೆಗಳು ಕಾಂಗ್ರೆಸ್‌ನೊಳಗೆ ಮತ್ತೆ ಕಿಡಿ ಹೊತ್ತಿಸಿವೆ. ಈ ಕಿಡಿಯನ್ನು ವಿರೋಧ ಪಕ್ಷವಾದ ಕಮಲ ಪಡೆ ವಿಧಾನಸಭೆಯಲ್ಲಿ ಅಸ್ತ್ರವಾಗಿ ಬಳಸಿ, ಸರ್ಕಾರದೊಳಗಿನ 'ಕುರ್ಚಿ ಕಹಳೆ'ಯನ್ನು ಮೊಳಗಿಸಿದೆ. ಸದನದೊಳಗೆ ಈ ಸಂಘರ್ಷ ವಿಪಕ್ಷಗಳಿಗೆ ಆಹಾರವಾಗಬಾರದು ಎಂದು ಹೈಕಮಾಂಡ್ ಬಯಸಿದ್ದರೂ, ಒಳಗಿನ ಮಾತಿನ ಮಲ್ಲಯುದ್ಧ ಮಾತ್ರ ನಿಂತಿಲ್ಲ.

ಡಿಕೆ ಮೌನದ ಹಿಂದಿನ ಲೆಕ್ಕಾಚಾರ: ಹೈಕಮಾಂಡ್‌ಗೆ ಸಂದೇಶವೇನು?

ಹೊರಗೆ ವೈಲೆಂಟ್ ಆಗಿ ಪ್ರತಿಪಕ್ಷಗಳನ್ನು ಎದುರಿಸುವ ಕನಕಪುರ ಬಂಡೆ, ಒಳಗೆ ಮಾತ್ರ ಸೈಲೆಂಟ್ ಮೌನ ತಂತ್ರ ಅನುಸರಿಸುತ್ತಿದ್ದಾರೆ. ಯತೀಂದ್ರ ಅವರ ಹೇಳಿಕೆಗೆ ಡಿ.ಕೆ.ಎಸ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಬಳಿಕ, ಅವರು ಮುಂದಿನ 30 ದಿನಗಳ ಕಾಲ ಬಹಿರಂಗ ಹೇಳಿಕೆಗಳಿಂದ ದೂರ ಉಳಿಯುವ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಈ ಮೌನವು ಆಕಸ್ಮಿಕವಲ್ಲ. ಇದರ ಹಿಂದೆ 'ಸೋತು ಗೆಲ್ಲುವ' ದೊಡ್ಡ ರಾಜಕೀಯ ತಂತ್ರವಿದೆ.

ಹೈಕಮಾಂಡ್‌ಗೆ ಸಂದೇಶ: ನಾಯಕತ್ವ ವಿವಾದದ ಕಿಡಿಯನ್ನು ಪದೇ ಪದೇ ಹೊತ್ತಿಸುತ್ತಿರುವ ಸಿಎಂ ಬಣಕ್ಕೆ ಪ್ರತ್ಯುತ್ತರ ನೀಡುವ ಬದಲು, ಮೌನಕ್ಕೆ ಜಾರುವ ಮೂಲಕ ಡಿಕೆಎಸ್ ಅವರು ತಮ್ಮ ಸಂಯಮ ಮತ್ತು ಹೈಕಮಾಂಡ್‌ಗೆ ಇರುವ ನಿಷ್ಠೆಯನ್ನು ಪ್ರದರ್ಶಿಸಲು ಮುಂದಾಗಿದ್ದಾರೆ. ಇದು, ಹೈಕಮಾಂಡ್‌ಗೆ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಒಂದು ಸ್ಪಷ್ಟ ಸಂದೇಶವನ್ನು ರವಾನಿಸಲಿದೆ.

ಶಾಸಕಾಂಗ ಸಭೆಗೆ ಸಿದ್ಧತೆ: ಶೀಘ್ರದಲ್ಲೇ ನಡೆಯಬಹುದಾದ ಕಾಂಗ್ರೆಸ್ ಶಾಸಕಾಂಗ ಸಭೆ (CLP)ಗೂ ಮುನ್ನ ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿ ವಿಷಯವನ್ನು ಇನ್ನಷ್ಟು ಗೊಂದಲಗೊಳಿಸದಿರುವ ನಿರ್ಧಾರ ಇದು. ತಮ್ಮ ಕಟ್ಟಾಳುಗಳಿಗೆ ಕೂಡ 'ಕೈ' ಕಮಾಂಡ್ ಕಟ್ಟುನಿಟ್ಟಿನ ಮೌನ ಕಟ್ಟಪ್ಪಣೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

'ಜನವರಿ 9ರ ರಹಸ್ಯ': ಆ ದಿನವೇ ಪಟ್ಟ ಬದಲಾಗುತ್ತಾ?

ಬಂಡೆಯ ಈ 30 ದಿನಗಳ ಮೌನದ ತಪಸ್ಸಿಗೆ ಪ್ರಮುಖ ಕಾರಣ ಜನವರಿ 9 ಎಂದು ಹೇಳಲಾಗುತ್ತಿದೆ. ರಾಜಕೀಯ ವಲಯದಲ್ಲಿ ಬಲವಾಗಿ ಹರಿದಾಡುತ್ತಿರುವ ಗುಸುಗುಸು ಪ್ರಕಾರ, ಕಾಂಗ್ರೆಸ್ ಹೈಕಮಾಂಡ್ ನಾಯಕತ್ವ ಬದಲಾವಣೆ ಅಥವಾ ಅಧಿಕಾರ ಹಂಚಿಕೆಯ ಸೂತ್ರದ ಕುರಿತು ಜನವರಿ ಎರಡನೇ ವಾರದಲ್ಲಿ ನಿರ್ಣಾಯಕ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಪಕ್ಷದ ಅತ್ಯಾಪ್ತರ ಮುಂದೆ ತಮ್ಮ ಮೌನ ರಹಸ್ಯ ಬಿಚ್ಚಿಟ್ಟಿರುವ ಡಿಕೆಎಸ್, ಜನವರಿ 9 ರಂದು ತಮ್ಮ ಆರು ತಿಂಗಳ ಆಟದ ಅವಧಿ ಮುಗಿಯುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಈ ದಿನದಂದು ಪಕ್ಷದ ವರಿಷ್ಠರು 'ಕನಕಾಧಿಪತಿ'ಯ ಮಹದಾಸೆಯನ್ನು ಈಡೇರಿಸುವ ನಿರ್ಧಾರ ಪ್ರಕಟಿಸುತ್ತಾರೆ ಎಂಬ ಬಲವಾದ ನಂಬಿಕೆ ಮತ್ತು ಆಶಯ ಡಿಕೆಶಿ ಬಣದಲ್ಲಿದೆ. ಹೀಗಾಗಿ, ಈ ನಿರ್ಣಾಯಕ ತೀರ್ಮಾನಕ್ಕೂ ಮುನ್ನ, ಯಾವುದೇ ಕಾರಣಕ್ಕೂ ವಿವಾದ ಸೃಷ್ಟಿಸದೆ ಮೌನ ತಪಸ್ಸು ಅನುಸರಿಸಲು ಡಿಕೆಎಸ್ ತೀರ್ಮಾನಿಸಿದ್ದಾರೆ. 'ಆ' ದಿನಕ್ಕಾಗಿ ಕನಕಪುರ ಬಂಡೆ ಕಾಯುತ್ತಿದ್ದಾರಾ? ಎಂಬ ಪ್ರಶ್ನೆ ರಾಜ್ಯ ರಾಜಕಾರಣದಲ್ಲಿ ಇದೀಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜ್ಯದಲ್ಲಿ 'ನಾಯಕತ್ವ ಬದಲಾವಣೆ ಇಲ್ಲ'- ಯತೀಂದ್ರ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಅಸಮಾಧಾನ!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ