
ಸುವರ್ಣ ವಿಧಾನಸಭೆ (ಡಿ.12): ರಾಜ್ಯದಲ್ಲಿ ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶವನ್ನು ಗುರುತಿಸುವಾಗ ಕೆಲ ಲೋಪಗಳಾಗಿವೆ ಎಂಬ ದೂರು, ಆರೋಪಗಳ ಹಿನ್ನೆಲೆಯಲ್ಲಿ ಅದರ ಪುನರ್‌ಪರಿಶೀಲನೆಗೆ ನಿರ್ಧರಿಸಿ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಜಂಟಿ ಸಮಿತಿ ರಚಿಸಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು. ಸದನದಲ್ಲಿ ಮಾತನಾಡಿದ ಸಚಿವರು, ‘ರಾಜ್ಯಾದ್ಯಂತ 3.30 ಲಕ್ಷ ಹೆಕ್ಟೇರ್ ಪ್ರದೇಶವನ್ನು ಪಾರಿಭಾವಿತ ಅರಣ್ಯ ಎಂದು ಗುರುತಿಸಿ 2022ರಲ್ಲಿ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದ್ದಾರೆ.
ಅದೇ ಮಾಹಿತಿಯನ್ನು ಹಿಂದಿನ ಸರ್ಕಾರ ಸುಪ್ರೀಂ ಕೋರ್ಟಿಗೂ ಸಲ್ಲಿಸಿದೆ. ಆದರೆ, ಇದರಲ್ಲಿ ಲೋಪಗಳಾಗಿವೆ ಎಂಬ ದೂರುಗಳಿವೆ. ಹಾಗಾಗಿ ನ್ಯಾಯಾಲಯದ ಸೂಚನೆಯಂತೆ ಪುನರ್ ಪರಿಶೀಲಿಸಲು ನಿರ್ಧರಿಸಲಾಗಿದೆ. ನೈಜವಾಗಿ ಯಾವ್ಯಾವ ಪ್ರದೇಶ ಪರಿಭಾವಿತ ಅರಣ್ಯ ವ್ಯಾಪ್ತಿಗೆ ಬರುತ್ತದೆ ಅದನ್ನು ಗುರುತಿಸಿ ಸುಪ್ರಿಂ ಕೋರ್ಟ್ ಮುಂದೆ ಸಲ್ಲಿಸಲಾಗುವುದು. ಪರಿಶೀಲನಾ ಕಾರ್ಯಕ್ಕೆ ಜಂಟಿ ಸಮಿತಿ ರಚಿಸಲಾಗಿದೆ. ಪರಿಭಾವಿತ ಅರಣ್ಯವಲ್ಲದ ಹೆಚ್ಚುವರಿ ಜಾಗವನ್ನು ಗುರುತಿಸಿ ಸಂಬಂಧಿಸಿದ ರೈತರು, ಜನಸಾಮಾನ್ಯರಿಗೆ ಬಿಟ್ಟು ಕೊಡಲಾಗುವುದು ಎಂದು ಭರವಸೆ ನೀಡಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಸರ್ಕಾರವೇ ಮಂಜೂರು ಮಾಡಿ ರೈತರ ಹೆಸರಿನಲ್ಲಿ ಖಾತೆ, ಪಹಣಿ ದಾಖಲೆಗಳೂ ಇರುವ ಆಸ್ತಿಗಳನ್ನೂ ತಮ್ಮ ಕ್ಷೇತ್ರದಲ್ಲಿ ಗ್ರಾಮ ಅರಣ್ಯ, ಪರಿಭಾವಿತ ಅರಣ್ಯ ಎಂದು ಗುರುತಿಸಿ ಅರಣ್ಯ ಸಿಬ್ಬಂದಿ ರೈತರನ್ನು ಒಕ್ಕಲೆಬ್ಬಿಸುತ್ತಿರುವುದನ್ನು ಪ್ರಶ್ನಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯರಾದ ಸಿ.ಸಿ.ಪಾಟೀಲ, ಸುನಿಲ್ ಕುಮಾರ್ ಮತ್ತಿರರ ಸದಸ್ಯರು ಪರಿಭಾವಿತ ಅರಣ್ಯ ಪ್ರದೇಶವನ್ನು ಹಿಂದೆ ಬೇಕಾಬಿಟ್ಟಿಯಾಗಿ ಗುರುತಿಸಲಾಗಿದೆ.
ಇದರಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ. ಪುನರ್ ಪರಿಶೀಲಿಸಿ ನೈಜ ಅರಣ್ಯವನ್ನು ಮಾತ್ರ ಗುರುತಿಸಿ ಉಳಿದ ಪ್ರದೇಶವನ್ನು ರೈತರು, ಜನ ಸಾಮಾನ್ಯರಿಗೆ ವಾಪಸ್ ನೀಡಲು ಕ್ರಮ ವಹಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಸಚಿವರು ಪ್ರತಿಕ್ರಿಯಿಸಿ, ಗ್ರಾಮ ಅರಣ್ಯ ಪ್ರದೇಶಕ್ಕೆ ಒಳಪಡದಿದ್ದರೂ ಭೂ ದಾಖಲೆಗಳನ್ನು ಹೊಂದಿರುವ ತಮ್ಮ ಕ್ಷೇತ್ರದಲ್ಲಿ 29 ರೈತರನ್ನು ಒಕ್ಕಲೆಬ್ಬಿಸಲಾಗಿದೆ ಎಂದು ಆರೋಪಿಸಿರುವ ಸದಸ್ಯ ನಾರಾಯಣಸ್ವಾಮಿ ಅವರು ಈ ಸಂಬಂಧ ಪಟ್ಟಿ, ದಾಖಲೆಗಳನ್ನು ಒದಗಿಸಿದರೆ ಪರಿಶೀಲಿಸಿ ಕ್ರಮ ವಹಿಸುವ ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.