
ಬೆಂಗಳೂರು(ಜು.04): ದೇಶದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಅಪಾಯದ ಸ್ಥಿತಿಯಲ್ಲಿದೆ. ಇವೆರಡೂ ಉಳಿಯಬೇಕಾದರೆ ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಯಶವಂತ ಸಿನ್ಹಾ ಅವರಿಗೆ ಮತ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್ ಶಾಸಕರು, ಸಂಸದರು ಹಾಗೂ ರಾಜ್ಯಸಭೆ ಸದಸ್ಯರಿಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಸ್ಪಷ್ಟಸೂಚನೆ ನೀಡಲಾಯಿತು.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಖುದ್ದು ರಾಷ್ಟ್ರಪತಿ ಅಭ್ಯರ್ಥಿ ಯಶವಂತ ಸಿನ್ಹಾ ಅವರು ಭಾಗವಹಿಸಿ ತಮಗೆ ಮತ ನೀಡುವಂತೆ ಕೋರಿದರು.
ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ರೈತ, ಒಟ್ಟು 56 ಅಭ್ಯರ್ಥಿಗಳ ಸ್ಪರ್ಧೆ!
ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ರಾಮನಾಥ್ ಕೋವಿಂದ್ ಅವರ ಅವಧಿ ಮುಗಿಯಲಿದ್ದು ಜು.18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಡೆಸುತ್ತಿರುವ ಸಂವಿಧಾನ ವಿರೋಧಿ ಆಡಳಿತದ ವಿರುದ್ಧ ಸಿಡಿದೆದ್ದಿರುವ ಪ್ರತಿಪಕ್ಷಗಳು ತಮ್ಮ ಒಮ್ಮತ ಅಭ್ಯರ್ಥಿಯನ್ನಾಗಿ ಯಶವಂತ್ ಸಿನ್ಹಾ ಅವರನ್ನು ಆಯ್ಕೆ ಮಾಡಿವೆ. ರಾಷ್ಟ್ರಪತಿ ಹುದ್ದೆ ದೇಶದ ದೊಡ್ಡ ಸ್ಥಾನವಾಗಿದ್ದು, ಸದ್ಯದ ಪರಿಸ್ಥಿತಿಯಿಂದ ದೇಶವನ್ನು ಕಾಪಾಡಲು ಅವರನ್ನು ರಾಷ್ಟ್ರಪತಿ ಮಾಡಬೇಕು ಎಂದು ಕರೆ ನೀಡಿದರು.
ಯಶವಂತ ಸಿನ್ಹಾ ರಾಷ್ಟ್ರಪತಿ ಆಗುವುದು ತುಂಬಾ ಅಗತ್ಯ ಇದೆ. ಅವರು ಈ ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂಬ ವಿಶ್ವಾಸ ನಮಗೆ ಇದೆ ಎಂದು ಹೇಳಿದರು. ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಹೈದರಾಬಾದ್‌ನಿಂದ ಬೆಂಗಳೂರಿಗೆ ಆಗಮಿಸಿದ ಯಶವಂತ ಸಿನ್ಹಾ ಅವರು ಭಾನುವಾರ ಬೆಳಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿ ಮತ ಯಾಚಿಸಿದರು. ಬಳಿಕ ಸಂಜೆ ದೆಹಲಿಗೆ ಪ್ರಯಾಣ ಬೆಳೆಸಿದರು.
ಸಭೆಯಲ್ಲಿ ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ ಸೇರಿದಂತೆ ಹಲವರು ಹಾಜರಿದ್ದರು.
ರಾಷ್ಟ್ರಪತಿ ಚುನಾವಣೆಗೆ ವಿಪಕ್ಷ ಅಭ್ಯರ್ಥಿ ಯಶವಂತ್ ಸಿನ್ಹ ನಾಮಪತ್ರ, ಟಿಆರ್‌ಎಸ್ ಬೆಂಬಲ!
ಆತ್ಮಸಾಕ್ಷಿ ಮತಗಳು ಬರಲಿವೆ: ಡಿಕೆಶಿ ವಿಶ್ವಾಸ
ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಪಕ್ಷದ ಶಾಸಕರು, ಸಂಸದರು, ರಾಜ್ಯಸಭೆ ಸದಸ್ಯರು ಹಾಗೂ ಕಾಂಗ್ರೆಸ್ ಅನ್ನು ಬೆಂಬಲಿಸಿರುವ ಪಕ್ಷೇತರ ಶಾಸಕರು ಮತ ನೀಡಲಿದ್ದಾರೆ. ಇದರ ಜತೆಗೆ ಬೇರೆ ಪಕ್ಷಗಳಲ್ಲಿನ ಸದಸ್ಯರೂ ಸಹ ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಯಶವಂತ ಸಿನ್ಹಾ ಅವರಿಗೆ ಆತ್ಮಸಾಕ್ಷಿ ಮತ ಹಾಕಲಿದ್ದಾರೆ. ಈ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಸಿಎಲ್‌ಪಿ ಸಭೆಗೆ ಹಿರಿಯರ ಗೈರು
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜೈರಾಮ್ ರಮೇಶ್, ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್, ಲಕ್ಷ್ಮೀ ಹೆಬ್ಬಾಳ್ಕರ್, ರೂಪಾ ಶಶಿಧರ್ ಸೇರಿ ಹಲವರು ಗೈರು ಹಾಜರಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.