ನಗರಸಭೆ ವ್ಯಾಪ್ತಿಯಲ್ಲಿ ಎಲ್ಲ ಕಾಮಗಾರಿಗಳನ್ನೂ ಆದ್ಯತಾವಾರು ಪಕ್ಷಭೇದವಿಲ್ಲದೆ ನಿರ್ವಹಿಸುವುದು ಅಧಿಕಾರಿಗಳ ಪ್ರಥಮ ಆದ್ಯತೆಯಾಗಬೇಕು ಎಂದು ಶಾಸಕ ಧೀರಜ್ ಮುನಿರಾಜ್ ಹೇಳಿದರು.
ದೊಡ್ಡಬಳ್ಳಾಪುರ (ಮೇ.31): ನಗರಸಭೆ ವ್ಯಾಪ್ತಿಯಲ್ಲಿ ಎಲ್ಲ ಕಾಮಗಾರಿಗಳನ್ನೂ ಆದ್ಯತಾವಾರು ಪಕ್ಷಭೇದವಿಲ್ಲದೆ ನಿರ್ವಹಿಸುವುದು ಅಧಿಕಾರಿಗಳ ಪ್ರಥಮ ಆದ್ಯತೆಯಾಗಬೇಕು ಎಂದು ಶಾಸಕ ಧೀರಜ್ ಮುನಿರಾಜ್ ಹೇಳಿದರು. ಇಲ್ಲಿನ ನಗರಸಭೆ ಸಭಾಂಗಣದಲ್ಲಿ ನಡೆದ ಮುಂಗಾರು ಮಳೆ ಮುನ್ನೆಚ್ಚರಿಕೆ ಕುರಿತು ಸಭೆಯಲ್ಲಿ ಮಾತನಾಡಿದ ಅವರು, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶೇ.40ರಷ್ಟುಜನಸಂಖ್ಯೆ ನಗರ ಭಾಗದಲ್ಲಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಜನಸಾಂದ್ರತೆ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಸಮಸ್ಯೆಗಳ ಆದ್ಯತೆ ಮೇರೆಗೆ ಕೆಲಸಗಳನ್ನು ಮಾಡುವಂತೆ ಸೂಚನೆ ನೀಡಿದ ಅವರು, ಹೆಚ್ಚು ಅನನುಕೂಲ ಇರುವ ಪ್ರದೇಶಗಳಿಗೆ ಮೊದಲ ಆದ್ಯತೆ ನೀಡಿ ಕಾಮಗಾರಿಗಳ ಆರಂಭಿಸಬೇಕು. ಮುಂದಿನ ಸಭೆಗಳಲ್ಲಿ ಸಮಸ್ಯೆಗಳಿಗೆ ಸಂಬಂಧಿಸಿದ ಎಲ್ಲಾ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿರುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದರು.
ಮುಂಗಾರು ಮಳೆ ಮುನ್ನೆಚ್ಚರಿಕೆಗೆ ಒತ್ತು: ಕಳೆದ ನವೆಂಬರ್ ತಿಂಗಳಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನ ಹಲವೆಡೆ ಭಾರಿ ಅವಾಂತರ ಸೃಷ್ಟಿಯಾಗಿದ್ದು, ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿತ್ತು. ಈ ಬಾರಿ ಮುಂಗಾರು ಮಳೆಗೂ ಮುನ್ನವೇ ಎಚ್ಚೆತ್ತುಕೊಂಡು ಯಾವುದೇ ಅವಘಡಗಳು ಸಂಭವಿಸದಂತೆ ಮುಂಜಾಗೃತ ಕ್ರಮವನ್ನು ಕೈಗೊಳ್ಳುವುದು ಅನಿವಾರ್ಯ. ನಗರದಲ್ಲಿರುವ ರಾಜಕಾಲುವೆಗಳ ಒತ್ತುವರಿ ತೆರವು, ರಾಜಕಾಲುವೆಗಳಲ್ಲಿ ಬೆಳೆದಿರುವ ಗಿಡಗಳ ತೆರವು ಸೇರಿದಂತೆ ವಿದ್ಯುತ್ ಅವಘಡಗಳು ಸಂಭವಿಸಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಮಳೆಯಿಂದ ಆಗಬಹುದಾದ ತೊಂದರೆಗಳನ್ನು ಸಮರ್ಥವಾಗಿ ಎದುರಿಸಬೇಕಾದರೆ ಅಧಿಕಾರಿಗಳು, ನಗರಸಭೆ ಅಧ್ಯಕ್ಷರು ಮತ್ತು ಚುನಾಯಿತ ಪ್ರತಿನಿಧಿಗಳು ತಾಲೂಕು ಆಡಳಿತದೊಂದಿಗೆ ಪೂರಕ ಸಂವಹನ ಹೊಂದಿರುವುದು ಅಗತ್ಯ ಎಂದು ಹೇಳಿದರು.
undefined
ಯಾವುದೇ ಅನುಮಾನ ಬೇಡ, ಗ್ಯಾರಂಟಿ ಅನುಷ್ಠಾನ ಖಚಿತ: ಡಾ.ಜಿ.ಪರಮೇಶ್ವರ್
ಕಳೆದ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಸುರಿದ ಧಾರಾಕಾರ ಮಳೆಗೆ ತಾಲೂಕಿನ 50ಕ್ಕೂ ಹೆಚ್ಚು ಮನೆ ಬಿದ್ದು ಹೋಗಿದ್ದವು. ಕಳೆದ ಬಾರಿ ಖಾಸ್‌ಬಾಗ್ ರಂಗಪ್ಪ ಸರ್ಕಲ್‌ಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ಈ ಬಾರಿ ಅಂತಹ ಅವಘಡ ಸಂಭವಿಸದಂತೆ ಕ್ರಮಕೈಗೊಳ್ಳಬೇಕು. ಹಲವು ಚರಂಡಿ ಕಾಮಗಾರಿ ಇನ್ನೂ ನಡೆಯುತ್ತಿರುವುದರಿಂದ ಆದಷ್ಟುಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಿ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ. ನಗರಸಭೆ ಮತ್ತು ಬೆಸ್ಕಾಂ ಅಧಿಕಾರಿಗಳ ಜೊತೆಗೆ ಸಭೆ ನಡೆಸಬೇಕಿದೆ. ಕಳೆದ ವರ್ಷ ಎಲ್ಲೆಲ್ಲಿ ಸಮಸ್ಯೆಯಾಗಿದೆ ಅಲ್ಲಿ ಹೆಚ್ಚು ಒತ್ತುಕೊಟ್ಟು ಸರ್ವೆ ಮಾಡಬೇಕು. ತಗ್ಗು ಪ್ರದೇಶಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು ಎಂದರು. ಪೌರಾಯುಕ್ತ ಕೆ.ಜಿ.ಶಿವಶಂಕರ್ ಮಾತನಾಡಿ, ಮಳೆ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕೆಲಸ ಮಾಡುತ್ತಿದ್ದೇವೆ. ಆಡಳಿತ ಮತ್ತು ತಾಂತ್ರಿಕ ಶಾಖೆಯ ಸಹಯೋಗದಿಂದ ಉತ್ತಮವಾಗಿ ಕಾರ್ಯ ಮಾಡುತ್ತಿದ್ದೇವೆ ಎಂದು ಹೇಳಿದರು.
ಪ್ರಾಕೃತಿಕ ವಿಕೋಪ ಎದುರಿಸಲು ಸಜ್ಜು: ತಹಶೀಲ್ದಾರ್ ಮೋಹನಕುಮಾರಿ ಮಾತನಾಡಿ, ಪ್ರಕೃತಿ ವಿಕೋಪ ಎದುರಿಸಲು ತಾಲೂಕಿನ ಎಲ್ಲಾ ಇಲಾಖೆಯ ಸಭೆ ನಡೆಸಿದ್ದೇವೆ. ಕಳೆದ ವರ್ಷ ತುಂಬಾ ಸಮಸ್ಯೆ ಎದುರಿಸಿದ್ದೆವು. ಈ ವರ್ಷ ಮರುಕಳಿಸಬಾರದು. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿದ್ದೇವೆ. ಚರಂಡಿಗಳ ಡ್ರೈನೇಜ್ ವ್ಯವಸ್ಥೆ ಸರಿಯಿಲ್ಲದ ಕಡೆ ಸಮಸ್ಯೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಬಾರಿಯೂ ಕೆರೆ ಕೋಡಿ ಹೋಗಬಹುದು ಆದ್ದರಿಂದ ಈ ವಾರದಿಂದಲೇ ಎಲ್ಲದಕ್ಕೂ ಸನ್ನದ್ದವಾಗಿರಬೇಕು. ಎಲ್ಲಾ ಸದಸ್ಯರು ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಸಹಕರಿಸಬೇಕು ಎಂದರು.
ಎಂಟಿಬಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವೆ: ಶಾಸಕ ಶರತ್ ಬಚ್ಚೇಗೌಡ
ಬೆಸ್ಕಾಂ ಅಧಿಕಾರಿಗಳ ವಿರುದ್ಧ ಗರಂ: ಮಳೆ ಅನಾಹುತಗಳ ಸಂದರ್ಭದಲ್ಲಿ ಕರೆ ಮಾಡಿದರೆ ಬೆಸ್ಕಾಂ ಸಿಬ್ಬಂದಿ ಸರಿಯಾಗಿ ಸ್ಪಂದಿಸುವುದಿಲ್ಲ ಅನಾಹುತಗಳು ನಡೆದ ಎಷ್ಟೋ ಸಮಯಕ್ಕೆ ಆಗಮಿಸುತ್ತಾರೆ. ವಾರ್ಡ್ ಗಳಿಗೆ ಸಂಬಂಧಿಸಿ ವಿದ್ಯುತ್ ಕಾಮಗಾರಿಗಳ ಕುರಿತು ಆಯಾ ನಗರಸಭಾ ಸದಸ್ಯರ ಗಮನಕ್ಕೆ ತರದೇ ಏಕಾಏಕಿ ಕಾಮಗಾರಿ ಆರಂಭಿಸುತ್ತಾರೆ. ಇದರಿಂದ ವಾರ್ಡ್ ನಲ್ಲಿ ಯಾವ ಕಾಮಗಾರಿ ನಡೆಯುತ್ತಿದೆ ಎನ್ನುವ ಕನಿಷ್ಟಮಾಹಿತಿಯೂ ಸದಸ್ಯರಿಗೆ ನೀಡುತ್ತಿಲ್ಲ ಎಂದು ರಾಜೀವ್ ಗಾಂಧಿ ಬಡಾವಣೆಯ ನಗರಸಭಾ ಸದಸ್ಯೆ ಹಂಸಪ್ರಿಯ ಆರೋಪ ಮಾಡಿದರು. ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ, ನಗರಸಭೆ ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.