ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲ ಘೋಷಿಸಿದ್ದರಿಂದ ಮಂಡ್ಯದಲ್ಲಿ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ/ಕೊಟ್ಟೂರು (ಮಾ.11): ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲ ಘೋಷಿಸಿದ್ದರಿಂದ ಮಂಡ್ಯದಲ್ಲಿ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹಾವೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೊದಲಿನಿಂದಲೂ ಸುಮಲತಾ ಅವರು ಪ್ರಧಾನಿ ಮೋದಿಯವರ ಕಾರ್ಯಕ್ರಮ ಬೆಂಬಲಿಸುತ್ತಾ ಬಂದಿದ್ದರು. ಹೀಗಾಗಿ ಅವರ ಕ್ಷೇತ್ರ ಹಾಗೂ ರಾಜ್ಯಕ್ಕೆ ಕೇಂದ್ರ ಸರ್ಕಾರದ ರೈಲ್ವೆ, ಹೆದ್ದಾರಿಗಳು, ರಸ್ತೆಗಳು ಹಾಗೂ ಮಹಿಳೆಯರಿಗೆ, ರೈತರಿಗೆ, ಜನಸಾಮಾನ್ಯರಿಗೆ ನೀಡಿದ ಕಾರ್ಯಕ್ರಮಗಳಿಗೆ ಲೋಕಸಭೆಯಲ್ಲಿ ಅವರು ಬೆಂಬಲ ನೀಡುತ್ತಿದ್ದರು.
ಈಗ ಅವರು ಬಹಿರಂಗವಾಗಿ ಬಿಜೆಪಿಗೆ ಸಂಪೂರ್ಣ ಬೆಂಬಲ ಕೊಡುತ್ತಿದ್ದಾರೆ. ಸುಮಲತಾ ಅವರ ನಡೆಯನ್ನು ನಾನು ಸ್ವಾಗತಿಸುತ್ತೇನೆ ಎಂದರು. ಇದೇ ವೇಳೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಕೂಡ ಸುಮಲತಾ ನಡೆಯನ್ನು ಸ್ವಾಗತಿಸಿದ್ದಾರೆ. ಸುಮಲತಾ ಅವರ ಬಿಜೆಪಿ ಸೇರ್ಪಡೆಗೆ ಕಾನೂನು ತೊಡಕುಗಳಿವೆ. ಅವರು ಪಕ್ಷಕ್ಕೆ ಬೆಂಬಲ ಘೋಷಿಸಿದ್ದನ್ನು ಸ್ವಾಗತಿಸುತ್ತೇನೆ. ಅವರ ಬೆಂಬಲದಿಂದ ಪಕ್ಷಕ್ಕೆ ಮಂಡ್ಯದಲ್ಲಿ ದೊಡ್ಡ ಶಕ್ತಿ ಬಂದಂತಾಗಲಿದೆ. ಅನೇಕ ದಿನಗಳಿಂದ ನಾವು ಈ ಬೆಳವಣಿಗೆ ಎದುರು ನೋಡುತ್ತಿದ್ದೆವು ಎಂದು ತಿಳಿಸಿದರು.
ರಾಹುಲ್ ಗಾಂಧಿ ಬಗ್ಗೆ ಟೀಕೆ: ನಳಿನ್ ಕಟೀಲ್‌ಗೆ ಕಾಂಗ್ರೆಸ್ ನೋಟಿಸ್
ಇಂದು ಬಸವ ಉತ್ಸವ ಉದ್ಘಾಟಿಸಲಿರುವ ಸಿಎಂ: ಜಿಲ್ಲಾಡಳಿತದಿಂದ ಮಾರ್ಚ್ 11 ಮತ್ತು 12 ರಂದು ಸಾಯಂಕಾಲ 7.30 ಗಂಟೆಗೆ ಬಸವಕಲ್ಯಾಣ ಥೇರ್ ಮೈದಾನದಲ್ಲಿ ಬಸವ ಉತ್ಸವದ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭ ನಡೆಯಲಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಸವ ಉತ್ಸವದ ಉದ್ಘಾಟನೆ ಮಾಡಲಿದ್ದಾರೆ. ಎಲ್ಲ ಪೂಜ್ಯರು ಸಾನಿಧ್ಯ ವಹಿಸಲಿದ್ದಾರೆ. ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಬಿ.ಪಾಟೀಲ ಮುನೇನಕೊಪ್ಪ, ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ ಕುಮಾರ ಇರಲಿದ್ದು, ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸುವರು.
ಜಿಲ್ಲೆಯ ಶಾಸಕರು, ಎಂಎಲ್‌ಸಿಗಳು, ನಿಗಮ ಮಂಡಳಿ ಅಧ್ಯಕ್ಷರು, ಬುಡಾ ಅಧ್ಯಕ್ಷರು, ನಗರ ಸಭೆ ಅಧ್ಯಕ್ಷೆ ಶಹನಾಜ ತನ್ವೀರ್ ಭಾಗವಹಿಸುವರು. ಮಾರ್ಚ್ 10ರಂದು ಬೆಳಿಗ್ಗೆ 9 ಗಂಟೆಗೆ ಬಸವಕಲ್ಯಾಣ ಕೋಟೆಯಿಂದ ಹರಳಯ್ಯ ವೃತ್ತದಲ್ಲಿ ಬಸವ ನಡಿಗೆಯಲ್ಲಿ ಎಲ್ಲ ಪೂಜ್ಯರು (770 ಅಮರಗಣಂಗಳ ವೇಷಧಾರಿಗಳಿಂದ) ಉಪಸ್ಥಿತಿ. ಮಾರ್ಚ್ 11ರಂದು ಮಧ್ಯಾಹ್ನ 3 ಗಂಟೆಗೆ ಬಸವೇಶ್ವರ ದೇವಸ್ಥಾನದಿಂದ ಥೇರ ಮೈದಾನದವರೆಗೆ ಮೆರವಣಿಗೆ ಉತ್ಸವ ನಡೆಯಲಿದೆ.
ರಾಜ್ಯಕ್ಕೆ ಬರುವ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ 7 ಪ್ರಶ್ನೆ
ಮಾ. 11 ಮತ್ತು 12 ರಂದು ಸ್ಥಳೀಯ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾಯಕ್ರಮಗಳು, ಗೋಷ್ಠಿಗಳು ನಡೆಯಲಿವೆ. ಮಾ. 12 ರಂದು ರಾತ್ರಿ 7.30 ಗಂಟೆಗೆ ಥೇರ್‌ದಲ್ಲಿ ಸಮಾರೋಪ ಸಮಾರಂಭ ಜರುಗಲಿದೆ. ಈ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವು ಎಲ್ಲ ಪೂಜ್ಯರು ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ ಬಿ.ಪಾಟೀಲ ಮುನೇನಕೊಪ್ಪ ಸೇರಿದಂತೆ ಜಿಲ್ಲೆಯ ಸಂಸದರು, ಎಲ್ಲ ಶಾಸಕರು ಭಾಗವಹಿಸಲಿದ್ದಾರೆ.