
ಹುಬ್ಬಳ್ಳಿ (ಜೂ.11): ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಗೋಹತ್ಯೆ ಕಾಯ್ದೆಗೆ ತಿದ್ದುಪಡಿ ತರುವ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗೋ ಹತ್ಯೆ ಕಾಯ್ದೆ ತಿದ್ದುಪಡಿ ಕುರಿತು ಎಲ್ಲಡೆ ಸುದ್ದಿ ಹಬ್ಬಿಸಲಾಗುತ್ತಿದೆ. ಇದರ ಚರ್ಚೆ ಅನವಶ್ಯಕ. ಸರ್ಕಾರದ ಮಟ್ಟದಲ್ಲಿ ಇಂಥ ಯಾವುದೇ ಪ್ರಸ್ತಾವನೆ ಇಲ್ಲ. ಇದನ್ನು ಜಾರಿಗೊಳಿಸುವುದಾಗಲಿ, ತಿದ್ದುಪಡಿ ಮಾಡುವುದರಿಂದ ಯಾವುದೇ ಮಹತ್ವ ಇಲ್ಲ. ಈ ಕುರಿತು ಮಾತನಾಡುವುದು ಅಪ್ರಸ್ತುತ ಎಂದರು.
ಸಿದ್ಧಾರೂಢರ ಮಠಕ್ಕೆ ಭೇಟಿ: ಸಚಿವರಾದ ಬಳಿಕ ಪ್ರಥಮ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ್ದ ಕಾನೂನು ಹಾಗೂ ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹುಬ್ಬಳ್ಳಿಯಲ್ಲಿ ಟೆಂಪಲ್ ರನ್ ಮಾಡಿದರು. ಜತೆಗೆ ಕೆಲ ಹಿರಿಯರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು. ಸಂಜೆ ಇಲ್ಲಿನ ಶ್ರೀ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಉಭಯ ಶ್ರೀಗಳ ದರ್ಶನ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಸಚಿವರನ್ನು ಟ್ರಸ್ಟ್ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.
ನಮಗೇ ನೀರಿಲ್ಲ, ತಮಿಳ್ನಾಡಿಗೆ ಹೇಗೆ ಕೊಡುವುದು: ಸಿಎಂ ಸಿದ್ದರಾಮಯ್ಯ
ಈ ಸಂದರ್ಭದಲ್ಲಿ ಚೇರ್‌ಮನ್ ಬಸವರಾಜ ಸಿ. ಕಲ್ಯಾಣಶೆಟ್ಟರ, ವೈಸ್- ಚೇರ್‌ಮನ್ ಉದಯಕುಮಾರ ಡಿ. ನಾಯಕ, ಧರ್ಮದರ್ಶಿ ಕೆ.ಎಲ್. ಪಾಟೀಲ, ಶಾಮಾನಂದ ಪೂಜೇರಿ, ಚನ್ನವೀರ ಮುಂಗುರವಾಡಿ, ವಿ.ವಿ. ಕಾಮರೆಡ್ಡಿ, ಬಾಳು ಮಗಜಿಕೊಂಡಿ, ಶ್ರೀಮಠದ ವ್ಯವಸ್ಥಾಪಕ ಈರಣ್ಣ ತುಪ್ಪದ ಸೇರಿದಂತೆ ಹಲವರಿದ್ದರು. ಬಳಿಕ ಪತೇಶಾವಲಿ ದರ್ಗಾಕ್ಕೆ ಭೇಟಿ ನೀಡಿದ್ದರು. ತದನಂತರ ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಅವರ ಮನೆಗೆ ಭೇಟಿ ನೀಡಿ ಕೆಲಕಾಲ ಸಮಾಲೋಚನೆ ನಡೆಸಿದರು. ಅಲ್ಲಿಂದ ನೇತ್ರ ತಜ್ಞ ಡಾ. ಎಂ.ಎಂ. ಜೋಶಿ ಅವರ ಮನೆಗೆ ತೆರಳಿ ಅಲ್ಲೂ ಕೆಲಕಾಲ ಸಮಾಲೋಚನೆ ನಡೆಸಿದರು. ಈ ವೇಳೆ ಸಚಿವರೊಂದಿಗೆ ಪಕ್ಷದ ಜಿಲ್ಲಾಧ್ಯಕ್ಷರಾದ ಅನೀಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ, ಮುಖಂಡರಾದ ಎಫ್.ಎಚ್. ಜಕ್ಕಪ್ಪನವರ, ಮಹೇಂದ್ರ ಸಿಂಘಿ, ಸದಾನಂದ ಡಂಗನವರ ಸೇರಿದಂತೆ ಹಲವರಿದ್ದರು.
ಕಣ್ಣೀರು ಹಾಕಿದ ಮಹಿಳೆಯರು: 2022ರಲ್ಲಿ ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಬಂಧಿತರಾಗಿರುವವರನ್ನು ಬಿಡುಗಡೆಗೊಳಿಸಲು ಒತ್ತಾಯಿಸಿ ಶನಿವಾರ ಫತೇಶಾವಲಿ ದರ್ಗಾಕ್ಕೆ ಭೇಟಿ ನೀಡಿದ್ದ ಸಚಿವ ಎಚ್.ಕೆ. ಪಾಟೀಲ ಅವರ ಬಳಿ ನೂರಾರು ಮಹಿಳೆಯರು ಕಣ್ಣೀರು ಹಾಕಿದರು. ಈ ಪ್ರಕರಣದಲ್ಲಿ 150ಕ್ಕೂ ಅಧಿಕ ಜನರು ಇಂದಿಗೂ ಜೈಲಿನಲ್ಲಿಯೇ ಇದ್ದಾರೆ. ಇವರೆಲ್ಲರೂ ಪ್ಲಂಬರ್, ಗೌಂಡಿ, ಸೆಂಟ್ರಿಂಗ್‌ನಂತಹ ಸಣ್ಣಪುಟ್ಟಕೆಲಸ ಮಾಡಿ ಜೀವನ ಸಾಗಿಸುತ್ತಿದ್ದವರು. ಇವರ ಮೇಲೆ ಯುಎಪಿಎ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಬಂಧಿತರು ಹೆಚ್ಚಾಗಿ 22, 23, 24, 25 ವರ್ಷ ವಯೋಮಾನದ ಯುವಕರೇ ಇದ್ದಾರೆ. ಇವರನ್ನೇ ನಂಬಿಕೊಂಡು ಕುಟುಂಬವಿದ್ದು, ಇವರ ಬಂಧನದಿಂದಾಗಿ ಹಲವು ಕುಟುಂಬಗಳು ಇಂದು ಬೀದಿಗೆ ಬರುವ ಸ್ಥಿತಿಯಲ್ಲಿವೆ ಎಂದು ಅಳಲು ತೋಡಿಕೊಂಡರು.
ವಿದ್ಯುತ್ ಬಿಲ್ ಕಟ್ಟಬೇಡಿ, ಸಂಪರ್ಕ ಕಡಿತಗೊಳಿಸಿದ್ರೆ ನಾವಿದ್ದೇವೆ: ನಳಿನ್ ಕುಮಾರ್ ಕಟೀಲ್
ಇವರಲ್ಲಿ ಹಲವು ಜನರ ತಂದೆ-ತಾಯಿ ಮೃತರಾಗಿದ್ದಾರೆ. ಇನ್ನು ಕೆಲವು ಸಹೋದರ, ಸಹೋದರಿಯರು ಮಾನಸಿಕ ಖಿನ್ನತೆಗೊಳಗಾಗಿದ್ದಾರೆ. ಸುಮಾರು 14 ತಿಂಗಳಿಂದ ಜೈಲಿನಲ್ಲಿ ಬಂಧನವಾಗಿರುವ ಅಮಾಯಕರನ್ನು, ಮುಖ್ಯಮಂತ್ರಿಗಳು ಮಾನವೀಯತೆಯ ಆಧಾರದ ಮೇಲೆ ಅವರ ಮೇಲೆ ದಾಖಲಿಸಲಾಗಿರುವ ಪ್ರಕರಣಗಳನ್ನು ಹಿಂಪಡೆದು ಜೈಲಿನಿಂದ ಬಿಡುಗಡೆಗೊಳಿಸಬೇಕು ಎಂದು ಮಹಿಳೆಯರು ಕಣ್ಣೀರು ಹಾಕಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಮ್ತಾಜ್, ಮಹಬೂಬ್ಬಿ, ಅಂಜುಮ್, ರೋಷನ್, ಖತೀಜಾ, ರಜಿಯಾ, ಫರೀದಬೇಗಂ, ಮಾಲನ್, ಸಲ್ಮಾ, ಸಾಹಿರಾ, ಆಸ್ಮಾ, ರಜಿಯಾ ಸೇರಿದಂತೆ ನೂರಾರು ಮಹಿಳೆಯರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.