
ಬೆಂಗಳೂರು(ಮೇ.21): ನೂತನ ಸಚಿವ ಸಂಪುಟಕ್ಕೆ ಯಾರಾರಯರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಲು ಶನಿವಾರ ಬೆಳಗಿನ ಜಾವದವರೆಗೂ ತೀವ್ರ ಚರ್ಚೆ ನಡೆಸಿದರೂ ಜಾತಿ ಹಾಗೂ ಪ್ರಾದೇಶಿಕ ಸಮೀಕರಣ ರೂಪಿಸುವ ಪ್ರಕ್ರಿಯೆ ಅಪೂರ್ಣಗೊಂಡ ಹಿನ್ನೆಲೆಯಲ್ಲಿ 28 ಮಂದಿಯ ಬದಲಾಗಿ ಕೇವಲ 8 ಮಂದಿ ಹಿರಿಯರು ಮಾತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಸೇರಿದರು.
ದೆಹಲಿಯಲ್ಲಿ ಶುಕ್ರವಾರ ದಿನವಿಡೀ ಹಾಗೂ ಶನಿವಾರ ಬೆಳಗಿನ ಜಾವ ಮೂರರವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಸರಣಿ ಸಭೆ ನಡೆಸಿದರೂ ಜಾತಿ ಸಮೀಕರಣ ಹಾಗೂ ಪ್ರಾದೇಶಿಕ ಲೆಕ್ಕಾಚಾರವನ್ನು ಸಮರ್ಪಕವಾಗಿ ಮಾಡಲು ಸಾಧ್ಯವಾಗಲಿಲ್ಲ.
ಸಿದ್ದು ಪ್ರಮಾಣ ವಚನ: ಬಿಜೆಪಿ ವಿರೋಧಿ ಪಕ್ಷಗಳ ಒಗ್ಗಟ್ಟು ಪ್ರದರ್ಶನ
ಮೂಲಗಳ ಪ್ರಕಾರ, ಪ್ರಥಮ ಹಂತದಲ್ಲಿ ತಲಾ ಆರು ಮಂದಿ ಒಕ್ಕಲಿಗರು, ಲಿಂಗಾಯತರು, ಮೂವರು ಮುಸ್ಲಿಮರು, ತಲಾ ಎರಡು ಎಸ್‌ಟಿ ಹಾಗೂ ಎಸ್‌ಸಿ ಸಮುದಾಯದವರು ಮತ್ತು ಒಬ್ಬ ಕುರುಬ ಸಮುದಾಯದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಲೆಕ್ಕಾಚಾರದ ಸೂತ್ರ ಅಂತಿಮಗೊಳಿಸಲಾಗಿತ್ತು. ಅದರಂತೆ ಈ ಸಮುದಾಯದ ಶಾಸಕರ ಹೆಸರು ಚರ್ಚೆಗೆ ಬಂದ ವೇಳೆ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ನಡುವೆ ತೀವ್ರ ಚರ್ಚೆ ನಡೆದಿದೆ.
ಮೂಲಗಳ ಪ್ರಕಾರ, ಮುಸ್ಲಿಂ ಸಮುದಾಯದಿಂದ ಮೂವರ ಸೇರ್ಪಡೆ ವಿಚಾರ ಉಭಯ ನಾಯಕರ ನಡುವೆ ತೀವ್ರ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಬೆಂಗಳೂರು ನಗರದಿಂದ ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬುದು ಸುದೀರ್ಘ ಚರ್ಚೆಯ ನಂತರವೇ ಇತ್ಯರ್ಥವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಖಾನ್ ಪರ ವಾದ ಮಂಡಿಸಿದರೆ, ಡಿ.ಕೆ.ಶಿವಕುಮಾರ್ ಅವರು ಎನ್.ಎ.ಹ್ಯಾರೀಸ್ ಪರ ನಿಂತರು ಎನ್ನಲಾಗಿದೆ. ಜಮೀರ್ ಅಹ್ಮದ್‌ಗೆ ಹೋಲಿಸಿದರೆ ಹ್ಯಾರೀಸ್ ಅವರು ಪಕ್ಷದಲ್ಲಿ ಹಿರಿಯರು, ಅವರ ಪುತ್ರ ಸಹ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಪಕ್ಷದ ಸಂಘಟನೆಗೆ ಶ್ರಮಿಸುತ್ತಿದ್ದಾರೆ. ಹೀಗಾಗಿ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಬೇಕು ಎಂದು ವಾದಿಸಿದರು ಎನ್ನಲಾಗಿದೆ.
ಆದರೆ, ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಖಾನ್ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಪರವಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಗೆಲುವಿಗೆ ಪ್ರಧಾನ ಪಾತ್ರ ವಹಿಸಿದ್ದಾರೆ ಎಂದು ಪಟ್ಟು ಹಿಡಿದು ಮೊದಲ ಹಂತದಲ್ಲೇ ಜಮೀರ್ ಸಂಪುಟ ಸೇರ್ಪಡೆಯಾಗುವಂತೆ ಮಾಡಿದರು ಎನ್ನಲಾಗಿದೆ.
ಇನ್ನು ಪರಿಶಿಷ್ಟ ಸಮುದಾಯದವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ವಿಚಾರ ಚರ್ಚೆಗೆ ಬಂದಾಗ ಸಿದ್ದರಾಮಯ್ಯ ಅವರು ಮಹದೇವಪ್ಪ ಅವರ ಹೆಸರು ಸೂಚಿಸಿದ್ದಾರೆ. ಆದರೆ, ಈ ಬಗ್ಗೆ ಸಭೆಯಲ್ಲಿ ಒಮ್ಮತ ಮೂಡಿಲ್ಲ. ಕಳೆದ ಚುನಾವಣೆಯಲ್ಲಿ ಐದು ಜಿಲ್ಲೆಗಳ ಹೊಣೆಯನ್ನು ಹೊತ್ತುಕೊಂಡಿದ್ದ ಮಹದೇವಪ್ಪ ಅವರು ಸಮರ್ಪಕವಾಗಿ ಈ ಹೊಣೆ ನಿಭಾಯಿಸಲಿಲ್ಲ. ಅಲ್ಲದೆ, ಕೆಲವು ಬಾರಿ ಪಕ್ಷಕ್ಕೆ ಮುಜುಗರವಾಗುವಂತಹ ಹೇಳಿಕೆಗಳನ್ನು ನೀಡಿದ್ದಾರೆ. ಇನ್ನು ಮಹದೇವಪ್ಪ ಅವರದ್ದು ಇದು ಕಡೆಯ ಚುನಾವಣೆ. ಹೀಗಾಗಿ ಯುವಕರಿಗೆ ಅವಕಾಶ ನೀಡಬೇಕು. ಮಳವಳ್ಳಿಯ ನರೇಂದ್ರ ಸ್ವಾಮಿ ಅವರನ್ನು ಸಚಿವ ಸಂಪುಟ ಸ್ಥಾನಕ್ಕೆ ಪರಿಗಣಿಸಬೇಕು ಎಂಬ ಚರ್ಚೆಯಾಯಿತು ಎನ್ನಲಾಗಿದೆ.
ಅದೇ ರೀತಿ ಸಿದ್ದರಾಮಯ್ಯ ಅವರು ಹಿರಿಯ ನಾಯಕ ದೇಶಪಾಂಡೆ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ವಾದಿಸಿದರೆ, ಇತರ ನಾಯಕರು ದೇಶಪಾಂಡೆ ಅವರು ಎಲ್ಲ ಸರ್ಕಾರಗಳಲ್ಲಿ ಸಚಿವರಾಗಿದ್ದರೂ ಪಕ್ಷಕ್ಕೆ ಅವರಿಂದ ದೊಡ್ಡ ಕೊಡುಗೆಯಿಲ್ಲ. ಹೀಗಾಗಿ ಸಚಿವ ಸ್ಥಾನಕ್ಕಿಂತ ಸ್ಪೀಕರ್ ಹುದ್ದೆಗೆ ಅವರನ್ನು ಪರಿಗಣಿಸಬಹುದು. ಅಲ್ಲದೆ, ಇದು ಕೂಡ ಅವರ ಕೊನೆ ಚುನಾವಣೆಯಾಗುವ ಸಾಧ್ಯತೆಯಿದೆ. ಹೀಗಾಗಿ ಯುವಕರಿಗೆ ಅವಕಾಶ ನೀಡುವುದು ಉತ್ತಮ ಎಂದು ವಾದಿಸಿದರು ಎನ್ನಲಾಗಿದೆ. ಆದರೆ, ಸಿದ್ದರಾಮಯ್ಯ ಅವರು ದೇಶಪಾಂಡೆ ಹಿರಿಯರು. ಸ್ಪೀಕರ್ ಹುದ್ದೆ ಬಗ್ಗೆ ಅವರೊಂದಿಗೆ ಚರ್ಚಿಸಿದ್ದು, ಇದಕ್ಕೆ ಅವರ ಸಹಮತವಿಲ್ಲ. ಹಿರಿತನ ಪರಿಗಣಿಸಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದರು ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಇತ್ಯರ್ಥಕ್ಕೆ ಬರಲಾಗಲಿಲ್ಲ.
ಸಿದ್ದು ನೂತನ ಸಂಪುಟದಲ್ಲಿ ದಲಿತರಿಗೆ 4 ಸ್ಥಾನ..!
ಇನ್ನು ಜಯಚಂದ್ರ, ಕೆ.ಎನ್.ರಾಜಣ್ಣ ಅವರ ಹೆಸರು ಚರ್ಚೆಗೆ ಬಂದಾಗಲೂ ಉಭಯ ನಾಯಕರು ತಮ್ಮದೇ ಆದ ವಾದಗಳನ್ನು ಮಂಡಿಸಿದ್ದಾರೆ. ಜಯಚಂದ್ರ ಅವರ ಹೆಸರನ್ನು ಸ್ಪೀಕರ್ ಹುದ್ದೆಗೆ ಸಿದ್ದರಾಮಯ್ಯ ಅವರು ಸೂಚಿಸಿದರೆ, ಕುಂಚಿಟಿಗ ಒಕ್ಕಲಿಗ ಸಮುದಾಯದಿಂದ ಅವರೊಬ್ಬರೇ ಈ ಬಾರಿ ಗೆದ್ದಿರುವುದು. ಹೀಗಾಗಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕಾಗುತ್ತದೆ ಎಂದು ಶಿವಕುಮಾರ್ ವಾದ ಮಂಡಿಸಿದರು ಎನ್ನಲಾಗಿದೆ.
ಹೀಗೆ ಸಮರ್ಪಕವಾಗಿ ಜಾತಿ ಹಾಗೂ ಪ್ರಾದೇಶಿಕ ಸಮೀಕರಣ ಮಾಡಲು ಸಾಧ್ಯವಾಗದ ಕಾರಣ ಎಂಟು ಮಂದಿ ಹಿರಿಯರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ಮುಂದಿನ ಹಂತದಲ್ಲಿ ಉಳಿದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳೋಣ ಎಂದು ನಾಯಕರು ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.