ಮೋದಿ ಸಂಪುಟದಲ್ಲಿ ರಾಜ್ಯದ ಯಾರಿಗೆ ಚಾನ್ಸ್‌?

By Kannadaprabha NewsFirst Published Jul 7, 2021, 8:31 AM IST
Highlights
  • ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ಕರ್ನಾಟಕದಿಂದ ಯಾರಿಗೆ ಅವಕಾಶ 
  • ಈ ಬಾರಿಯ ವಿಸ್ತರಣೆಯಲ್ಲಿ ಎರಡು ಸಚಿವ ಸ್ಥಾನ ಕರ್ನಾಟಕಕ್ಕೆ ಸಿಗಬಹುದು ಎಂಬ ನಿರೀಕ್ಷೆ
  • ಡಿ.ವಿ.ಸದಾನಂದಗೌಡರನ್ನು ಸಂಪುಟದಿಂದ ಕೈಬಿಟ್ಟಲ್ಲಿ ಒಟ್ಟು ಮೂರು ಸ್ಥಾನ

ಬೆಂಗಳೂರು (ಜು.07):  ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ಕರ್ನಾಟಕದಿಂದ ಯಾರಿಗೆ ಅವಕಾಶ ಸಿಗಲಿದೆ ಎಂಬ ಕುತೂಹಲ ತೀವ್ರಗೊಂಡಿದೆ.

ಈ ಬಾರಿಯ ವಿಸ್ತರಣೆಯಲ್ಲಿ ಎರಡು ಸಚಿವ ಸ್ಥಾನ ಕರ್ನಾಟಕಕ್ಕೆ ಸಿಗಬಹುದು ಎಂಬ ನಿರೀಕ್ಷೆಯಿದ್ದು, ಒಂದು ವೇಳೆ ಹಾಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡರನ್ನು ಸಂಪುಟದಿಂದ ಕೈಬಿಟ್ಟಲ್ಲಿ ಒಟ್ಟು ಮೂರು ಸ್ಥಾನ ಲಭಿಸಬಹುದು ಎಂಬ ಮಾತು ಬಿಜೆಪಿ ಪಾಳೆಯದಿಂದ ಕೇಳಿಬಂದಿದೆ.

ಮೋದಿ ಸಂಪುಟಕ್ಕೆ ಕರ್ನಾಟಕದ ಸಂಸದರು?: ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ! ..

ದಲಿತರಿಗೆ ಒಂದು ಸಚಿವ ಸ್ಥಾನ ಬಹುತೇಕ ನಿಶ್ಚಿತ ಎನ್ನಲಾಗುತ್ತಿದ್ದು, ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಅಬ್ಬಯ್ಯ ನಾರಾಯಣಸ್ವಾಮಿ ಅವರ ಹೆಸರು ಮುಂಚೂಣಿಯಲ್ಲಿದೆ. ಜತೆಗೆ ಕಾಂಗ್ರೆಸ್‌ನಿಂದ ವಲಸೆ ಬಂದು ಆ ಪಕ್ಷದ ದೈತ್ಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಣಿಸಿದ ಕಲಬುರ್ಗಿ ಸಂಸದ ಡಾ.ಉಮೇಶ್‌ ಜಾಧವ್‌ ಅವರ ಹೆಸರೂ ಪರಿಶೀಲನೆಯಲ್ಲಿದೆ. ಇನ್ನು ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಸಚಿವರಾಗಿದ್ದ ರಮೇಶ್‌ ಜಿಗಜಿಣಗಿ ಅವರ ಹೆಸರು ಕೇಳಿಬರುತ್ತಿದ್ದರೂ ಅನುಮಾನವಿದೆ.

ಈ ಮೂವರ ಪೈಕಿ ನಾರಾಯಣಸ್ವಾಮಿ ಮತ್ತು ಜಿಗಜಿಣಗಿ ಅವರಿಗೆ ಪಕ್ಷದ ಹೈಕಮಾಂಡ್‌ನಿಂದ ಬುಲಾವ್‌ ಬಂದಿದ್ದು, ಉಭಯ ಸಂಸದರು ಮಂಗಳವಾರವೇ ದೆಹಲಿಗೆ ತಲುಪಿದ್ದಾರೆ. ಕುಟುಂಬ ಸಮೇತ ದೆಹಲಿಗೆ ತಲುಪಿದ ಬೆನ್ನಲ್ಲೇ ನಾರಾಯಣಸ್ವಾಮಿ ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಪರಿಶಿಷ್ಟಜಾತಿ ಎಡಗೈ ಸಮುದಾಯಕ್ಕೆ ಈ ಬಾರಿ ರಾಜ್ಯದಿಂದ ಸಚಿವ ಸ್ಥಾನ ನೀಡುವ ಬಗ್ಗೆ ಒಲವು ವ್ಯಕ್ತವಾಗಿದ್ದು, ಬಿ.ಎಲ್‌.ಸಂತೋಷ್‌ ಅವರೇ ನಾರಾಯಣಸ್ವಾಮಿ ಅವರಿಗೆ ಖುದ್ದು ಕರೆ ಮಾಡಿ ದೆಹಲಿಗೆ ಬರುವಂತೆ ಆಹ್ವಾನ ನೀಡಿದರು ಎನ್ನಲಾಗಿದೆ.

ಇದೇ ವೇಳೆ ದೆಹಲಿಯ ಒಬ್ಬ ಹಿರಿಯ ಸಚಿವರ ಕಚೇರಿಯಿಂದ ತಮಗೆ ಸೂಚನೆ ಬಂದಿದೆ ಎಂದು ಸ್ವತಃ ಜಿಗಜಿಣಗಿ ಮಾಹಿತಿ ನೀಡಿದ್ದಾರೆ. ನನ್ನ ಹಾಗೇ ಇನ್ನೂ ಹಲವರಿಗೆ ಬುಲಾವ್‌ ಬಂದಿದೆ. ಹಾಗಾಗಿ ನನಗೆ ಸಚಿವ ಸ್ಥಾನದ ಬಗ್ಗೆ ಇನ್ನೂ ಸ್ಪಷ್ಟವಾಗಿ ಏನೂ ಗೊತ್ತಿಲ್ಲ. ಇದು ನನಗೂ ಖಚಿತವಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಲಿಂಗಾಯತರ ಪೈಕಿ ಯಾರಿಗೆ?:

ಸುರೇಶ್‌ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಲಿಂಗಾಯತ ಸಮುದಾಯಕ್ಕೆ ಸೇರಿದ ಯಾವ ಸಂಸದರಿಗೆ ಈ ವಿಸ್ತರಣೆಯಲ್ಲಿ ಅವಕಾಶ ಸಿಗಲಿದೆ ಎಂಬುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಮೋದಿ ಸಂಪುಟ ಸರ್ಜರಿ; ಯಾರೆಲ್ಲಾ ಮಂತ್ರಿಯಾಗಲಿದ್ದಾರೆ? ಇಲ್ಲಿದೆ ಸಂಭಾವ್ಯ ಪಟ್ಟಿ! ..

ಬಾಗಲಕೋಟೆಯ ಪಿ.ಸಿ.ಗದ್ದಿಗೌಡರ್‌, ಹಾವೇರಿಯ ಶಿವಕುಮಾರ್‌ ಉದಾಸಿ ಹಾಗೂ ಬೀದರ್‌ನ ಭಗವಂತ ಖೂಬಾ ಅವರ ಹೆಸರು ಗಂಭೀರವಾಗಿ ಕೇಳಿಬರುತ್ತಿವೆ. ಹಿರಿತನವನ್ನೇ ಪರಿಗಣಿಸಿದರೆ ಗದ್ದಿಗೌಡರ್‌ ಅವರಿಗೆ ಸಿಗಬಹುದು. ಸಂಸದರಾಗಿ ಮಾಡಿದ ಕಾರ್ಯ ವೈಖರಿ ಗಮನಿಸಿದರೆ ಉದಾಸಿ ಅವರಿಗೆ ಅವಕಾಶವಿದೆ. ಇನ್ನು ಮೊದಲ ಬಾರಿಗೆ ಸಂಸದರಾಗಿರುವ ಖೂಬಾ ಅವರಿಗೆ ಸಿಕ್ಕರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

ಡಿವಿಎಸ್‌ ಕೈಬಿಟ್ಟರೆ ಶೋಭಾ ಅಥವಾ ಪ್ರತಾಪ್‌?:

ಈಗ ನಡೆದಿರುವ ಚರ್ಚೆಯಂತೆ ಹಾಲಿ ಸಚಿವರಾಗಿರುವ ಸದಾನಂದಗೌಡ ಅವರನ್ನು ಸಂಪುಟದಿಂದ ಕೈಬಿಟ್ಟಲ್ಲಿ ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆ ಅಥವಾ ಪ್ರತಾಪ್‌ ಸಿಂಹ ಅವರಿಗೆ ಅವಕಾಶ ಸಿಗಬಹುದು ಎನ್ನಲಾಗುತ್ತಿದೆ.

ರಾಘವೇಂದ್ರ ಹೆಸರೂ ಚಾಲ್ತಿಯಲ್ಲಿ

ಶಿವಮೊಗ್ಗದ ಸಂಸದ ಬಿ.ವೈ.ರಾಘವೇಂದ್ರ ಅವರ ಹೆಸರೂ ಪಕ್ಷದ ಒಂದು ಪಾಳೆಯದಿಂದ ಕೇಳಿಬರುತ್ತಿದೆ. ರಾಘವೇಂದ್ರ ಅವರಿಗೆ ಸಚಿವ ಸ್ಥಾನ ನೀಡಿದಲ್ಲಿ ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ನಾಯಕತ್ವ ಬದಲಾವಣೆಯ ಪರ ವಿರೋಧದ ಚರ್ಚೆಗೆ ಮಹತ್ತರ ತಿರುವು ಸಿಕ್ಕಂತಾಗುತ್ತದೆ. ಹೀಗಾಗಿ, ರಾಘವೇಂದ್ರ ಅವರಿಗೆ ಸಚಿವ ಸ್ಥಾನ ಸಿಗುತ್ತದೆಯೇ ಅಥವಾ ಇಲ್ಲವೇ ಎಂಬ ಚರ್ಚೆ ಬಿಜೆಪಿ ಪಾಳೆಯದ ಆಂತರ್ಯದಲ್ಲಿ ಕುತೂಹಲ ಹುಟ್ಟು ಹಾಕಿದೆ.

click me!