ಕಾಂಗ್ರೆಸ್ ಪಕ್ಷವು ಸಚಿವ ಆರ್.ಅಶೋಕ್ ಸ್ಪರ್ಧಿಸಿರುವ ಪದ್ಮನಾಭನಗರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ವಿಚಾರವಾಗಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.
ಬೆಂಗಳೂರು (ಏ.19): ಕಾಂಗ್ರೆಸ್ ಪಕ್ಷವು ಸಚಿವ ಆರ್.ಅಶೋಕ್ ಸ್ಪರ್ಧಿಸಿರುವ ಪದ್ಮನಾಭನಗರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ವಿಚಾರವಾಗಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಬಿ-ಫಾರಂ ಪಡೆದಿರುವ ರಘುನಾಥ್ ನಾಯ್ಡು ನಾಮಪತ್ರ ಸಲ್ಲಿಕೆ ಮಾಡದೆ ಸಂಸದ ಡಿ.ಕೆ. ಸುರೇಶ್ ಅವರಿಗೆ ಸ್ಪರ್ಧೆಗೆ ಆಹ್ವಾನ ನೀಡುತ್ತಿರುವುದು ಕುತೂಹಲ ಮೂಡಿಸಿದೆ. ಕಂದಾಯ ಸಚಿವ ಆರ್. ಅಶೋಕ್ ಅವರು ಪದ್ಮನಾಭ ನಗರ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಕನಕಪುರ ಕ್ಷೇತ್ರ ಎರಡೂ ಕಡೆ ಸ್ಪರ್ಧಿಸುತ್ತಿದ್ದಾರೆ. ಪ್ರಬಲ ನಾಯಕರು ಆಕಾಂಕ್ಷಿಗಳಾಗಿದ್ದರೂ ಕಾಂಗ್ರೆಸ್ ಪಕ್ಷ ಪದ್ಮನಾಭ ನಗರದಿಂದ ರಘುನಾಥ್ ನಾಯ್ಡು ಅವರಿಗೆ ಟಿಕೆಟ್ ಘೋಷಿಸಿತ್ತು.
ಬಳಿಕ ಅಶೋಕ್ ವಿರುದ್ಧ ಪ್ರಬಲ ಸ್ಪರ್ಧಿಯನ್ನು ಕಣಕ್ಕಿಳಿಸಬೇಕೆಂಬ ಚರ್ಚೆ ಪಕ್ಷದ ಆಂತರಿಕ ವಲಯದಲ್ಲಿ ನಡೆದಿದ್ದು, ಪರಿಣಾಮ ಶಿವಕುಮಾರ್ ಅವರು ಬಿ-ಫಾರಂ ನೀಡುವಾಗಲೂ ಸತಾಯಿಸಿ ನೀಡಿದ್ದರು. ಇನ್ನು ಬಿ-ಫಾರಂ ಸ್ವೀಕರಿಸಿ ಮಾತನಾಡಿದ್ದ ರಘುನಾಥ ನಾಯ್ಡು, ‘ನನಗೆ ಬಿ-ಫಾರಂ ಲಭ್ಯವಾಗಿದ್ದರೂ ನಾನು ಡಿ.ಕೆ. ಸುರೇಶ್ ಅವರನ್ನು ಸ್ಪರ್ಧಿಸುವಂತೆ ಮನವಿ ಮಾಡುತ್ತೇನೆ. ಅವರು ಸ್ಪರ್ಧಿಸಿದರೆ ಕನಿಷ್ಠ 50-60 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ. ಆರ್. ಅಶೋಕ್ ಎರಡೂ ಕಡೆ ಸೋಲುತ್ತಾರೆ.
ಶೆಟ್ಟರ್ ಸೇರಿ ಏಳು ಮಂದಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ: 3 ಹೊಸಬರಿಗೆ ಮಣೆ
ಹೀಗಾಗಿ ಸುರೇಶ್ ಅವರು ಸ್ಪರ್ಧಿಸಬೇಕು. ಅವರು ಸ್ಪರ್ಧಿಸದಿದ್ದರೆ ಮಾತ್ರ ನಾನು ಸ್ಪರ್ಧಿಸುತ್ತೇನೆ’ ಎಂದು ಹೇಳಿದ್ದರು. ಇದೀಗ ನಾಮಪತ್ರ ಸಲ್ಲಿಕೆಗೆ ಅಂತಿಮ ಗಡುವು ಹತ್ತಿರವಾಗುತ್ತಿದ್ದರೂ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಿಲ್ಲ. ಬುಧವಾರ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಅವರು ಕ್ಷೇತ್ರಕ್ಕೆ ಬರಲಿದ್ದಾರೆ. ಈ ವೇಳೆ ಮತ್ತೊಮ್ಮೆ ಸುರೇಶ್ ಅವರೇ ಸ್ಪರ್ಧಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದು ರಘುನಾಥ್ ನಾಯ್ಡು ಮಂಗಳವಾರವೂ ತಮ್ಮ ಮಾತನ್ನು ಪುನರುಚ್ಚರಿಸಿದ್ದಾರೆ.
ಹೀಗಾಗಿ ಪದ್ಮನಾಭನಗರದಿಂದ ಯಾರು ಕೈ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕನಕಪುರ ಕ್ಷೇತ್ರದವರ ಬದಲಾವಣೆ ಆಸೆ ನನಸಾಗಲಿದೆ: ಸಚಿವ ಆರ್.ಅಶೋಕ್
87.35 ಕೋಟಿ ಆಸ್ತಿಗೆ ಅಶೋಕ್ ಸಾಮ್ರಾಟ: ಸಚಿವ ಆರ್.ಅಶೋಕ್ 87.35 ಕೋಟಿಗಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. 2.18 ಕೋಟಿ ಮೌಲ್ಯದ ಚರಾಸ್ತಿ, 3.10 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಪ್ರಮೀಳಾ ರಾಣಿ ಹೆಸರಲ್ಲಿ 1.16 ಕೋಟಿ ಮೌಲ್ಯದ ಚರಾಸ್ತಿ ಮತ್ತು 10.44 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಅಶೋಕ್ ಅವರ ಅವಿಭಕ್ತ ಕುಟುಂಬ ಹೆಸರಲ್ಲಿ 8.96 ಕೋಟಿ ಚರಾಸ್ತಿ ಇದ್ದರೆ, 61.49 ಸ್ಥಿರಾಸ್ತಿ ಇದೆ. ಅಶೋಕ್ ಅವರು 97.78 ಲಕ್ಷ ಸಾಲ ಮತ್ತು ಪತ್ನಿ ಹೆಸರಲ್ಲಿ 64.04 ಲಕ್ಷ ಸಾಲ ಇದೆ. ಪತ್ನಿ ಬಳಿ ಎರಡು ಡೈಮೆಂಡ್ ನೆಕ್ಲೇಸ್ ಇದೆ.