ಪಾಲಿಕೆಗೆ ಚುನಾವಣೆ ನಡೆದು ಬರೋಬ್ಬರಿ 16 ತಿಂಗಳ ಬಳಿಕ ಬೆಳಗಾವಿ ಮೇಯರ್, ಉಪಮೇಯರ್ ಸ್ಥಾನಕ್ಕೆ ಫೆ.6ರಂದು ಚುನಾವಣೆ ದಿನಾಂಕ ಘೋಷಣೆಯಾಗಿದೆ.
ಶ್ರೀಶೈಲ ಮಠದ
ಬೆಳಗಾವಿ(ಫೆ.05): ಬೆಳಗಾವಿ ಮಹಾನಗರ ಪಾಲಿಕೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸ್ಪಷ್ಟ ಬಹುಮತಗಳೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿರುವ ಭಾರತೀಯ ಜನತಾ ಪಾರ್ಟಿಯ ಮೊಟ್ಟಮೊದಲ ಮೇಯರ್ ಯಾರು ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಪಾಲಿಕೆಗೆ ಚುನಾವಣೆ ನಡೆದು ಬರೋಬ್ಬರಿ 16 ತಿಂಗಳ ಬಳಿಕ ಬೆಳಗಾವಿ ಮೇಯರ್, ಉಪಮೇಯರ್ ಸ್ಥಾನಕ್ಕೆ ಫೆ.6ರಂದು ಚುನಾವಣೆ ದಿನಾಂಕ ಘೋಷಣೆಯಾಗಿದೆ. ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಮೇಯರ್ ಸ್ಥಾನ ಹಿಂದುಳಿದ ವರ್ಗ ಬ ಮಹಿಳೆಗೆ ಮೀಸಲಾಗಿದೆ. ಮೇಯರ್ ಸ್ಥಾನ ಬೆಳಗಾವಿ ದಕ್ಷಿಣ ಕ್ಷೇತ್ರದ ಪಾಲಾಗಲಿದ್ದರೆ, ಉಪಮೇಯರ್ ಸ್ಥಾನ ಬೆಳಗಾವಿ ಉತ್ತರದ ಪಾಲಾಗಲಿದೆ. ಆದರೆ, ಬಿಜೆಪಿ ಮೊದಲ ಮೇಯರ್ ಯಾರಾಗುತ್ತಾರೆ? ಯಾವ ಸಮುದಾಯಕ್ಕೆ ಮೇಯರ್ ಪಟ್ಟ ಒಲಿಯುತ್ತದೆ? ಬ್ರಾಹ್ಮಣ ಸಮಾಜಕ್ಕೋ? ಮರಾಠ ಸಮುದಾಯಕ್ಕೋ? ಎನ್ನುವುದು ತೀವ್ರ ಚರ್ಚೆಗೆ ಎಡೆಮಾಡಿದೆ.
ವರ್ಷವಾದರೂ ಸಿಗದ ಅಧಿಕಾರ ಭಾಗ್ಯ, Belagavi ಪಾಲಿಕೆ ಸದಸ್ಯರಿಂದ ಕೇಕ್ ಕತ್ತರಿಸಿ ವ್ಯಂಗ್ಯ
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಪಾಲಿಕೆ ಚುನಾವಣೆಯನ್ನು ಪಕ್ಷದ ಚಿಹ್ನೆ ಮೇಲೆ ಎದುರಿಸಿ, ಅದರಲ್ಲಿ ಯಶಸ್ಸನ್ನು ಕಂಡುಕೊಳ್ಳುವ ಮೂಲಕ ಪಾಲಿಕೆಯಲ್ಲಿ ಕಿಂಗ್‌ಮೇಕರ್ ಆಗಿ ಹೊರಹೊಮ್ಮಿದ್ದಾರೆ. ಮೇಯರ್, ಉಪಮೇಯರ್ ಆಯ್ಕೆ ವಿಚಾರದಲ್ಲಿಯೂ ಅಭಯ ಪಾಟೀಲ ತೀರ್ಮಾನ ಪ್ರಮುಖ ಪಾತ್ರ ವಹಿಸಲಿದೆ. ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇಯರ್ ಅಭ್ಯರ್ಥಿಯನ್ನು ಅಳೆದುತೂಗಿ ಆಯ್ಕೆ ಮಾಡಬೇಕಾಗುತ್ತದೆ.
ಆಪರೇಷನ್ ಕಮಲ:
ಬೆಳಗಾವಿ ಪಾಲಿಕೆ ಉಪಮೇಯರ್ ಸ್ಥಾನ ಹಿಂದುಳಿದ ವರ್ಗ ಬ ಮಹಿಳೆಗೆ ಮೀಸಲಾಗಿರುವುದರಿಂದ ಸ್ಪಷ್ಟಬಹುಮತ ಹೊಂದಿದ್ದರೂ ಬಿಜೆಪಿಯಲ್ಲಿ ಆ ಸಮುದಾಯದ ಅಭ್ಯರ್ಥಿಯೇ ಇಲ್ಲ. ಹಾಗಾಗಿ, ಬಿಜೆಪಿ ಇದೀಗ ಬೆಳಗಾವಿ ಪಾಲಿಕೆಯಲ್ಲಿಯೂ ಆಪರೇಷನ್ ಕಮಲದ ಮೊರೆ ಹೋಗಿದೆ. ಪಕ್ಷೇತರ ಅಭ್ಯರ್ಥಿ ಮನವೊಲಿಸಿ ಉಪಮೇಯರ್ ಹುದ್ದೆ ನೀಡಲು ಮುಂದಾಗಿದೆ. ತನ್ನಲ್ಲಿ ಅಭ್ಯರ್ಥಿ ಲಭ್ಯ ಇರುವುದರಿಂದ ಕಾಂಗ್ರೆಸ್ ಉಪಮೇಯರ್ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಮೇಯರ್, ಉಪಮೇಯರ್ ಸ್ಥಾನಕ್ಕೆ ಅಂತಿಮ ಅಭ್ಯರ್ಥಿ ಆಯ್ಕೆ ಮಾಡುವುದು, ಎರಡೂ ಸ್ಥಾನಗಳಿಗೆ ಅವಿರೋಧ ಆಯ್ಕೆ ಮಾಡಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಬಿಜೆಪಿ ಜಿಲ್ಲಾ ಉಸ್ತುವಾರಿ ನಿರ್ಮಲಕುಮಾರ ಸುರಾನಾ, ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ನೇತೃತ್ವದಲ್ಲಿ ಬಿಜೆಪಿ ನಗರ ಸೇವಕರ ಮಹತ್ವದ ಸಭೆ ಭಾನುವಾರ ರಾತ್ರಿ ನಡೆಯಲಿದೆ. ಸೋಮವಾರ ಬೆಳಗ್ಗೆ ಮತ್ತೊಮ್ಮೆ ಸಭೆ ನಡೆಸಿ, ಮೇಯರ್, ಉಪಮೇಯರ್ ಅಭ್ಯರ್ಥಿ ಆಯ್ಕೆ ಕುರಿತು ಅಂತಿಮ ತೀರ್ಮಾನ ಹೊರಬೀಳಲಿದೆ.
ಆಕಾಂಕ್ಷಿಗಳಾರು?:
ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಪ್ರಮುಖವಾಗಿ ಮರಾಠ ಸಮುದಾಯದ ಶೋಭಾ ಸೋಮನಾಚೆ, ಸಾರಿಕಾ ಪಾಟೀಲ, ಬ್ರಾಹ್ಮಣ ಸಮುದಾಯದ ವಾಣಿ ಜೋಶಿ, ದೇವಾಂಗ ಸಮುದಾಯದ ದೀಪಾಲಿ ಟೋಪಗಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿವೆ. ಉಪಮೇಯರ್ ಸ್ಥಾನ ಹಿಂದುಳಿದ ವರ್ಗ ಬ ಮಹಿಳೆಗೆ ಮೀಸಲಾಗಿದ್ದು, ಪಕ್ಷೇತರ ಸದಸ್ಯರಾದ ವೈಶಾಲಿ ಭಾತಖಾಂಡೆ, ರೇಶ್ಮಾ ಪಾಟೀಲ ಅವರ ಹೆಸರು ಚಾಲ್ತಿಯಲ್ಲಿವೆ.
ಮೇಯರ್, ಉಪಮೇಯರ್ ಆಯ್ಕೆ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಉಸ್ತುವಾರಿ ನಿರ್ಮಲಕುಮಾರ ಸುರಾನಾ ನೇತೃತ್ವದಲ್ಲಿ ಮಹತ್ವದ ಸಭೆ ಭಾನುವಾರ ರಾತ್ರಿ ನಡೆಯಲಿದೆ. ಮೇಯರ್, ಉಪಮೇಯರ್ ಎರಡೂ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಲಾಗುವುದು. ಸೋಮವಾರವೇ ಅಂತಿಮವಾಗಿ ಮೇಯರ್, ಉಪಮೇಯರ್ ಅಭ್ಯರ್ಥಿ ಆಯ್ಕೆ ಘೋಷಣೆ ಮಾಡಲಾಗುವುದು. ಪಾಲಿಕೆಯಲ್ಲಿ ಬಿಜೆಪಿ ಆಡಳಿತ ನಡೆಯಲಿದೆ ಅಂತ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.
ಕನ್ನಡದ ಅನ್ನ ಉಂಡು ಕೊನೆಗೆ ಜೈ ಮಹಾರಾಷ್ಟ್ರ ಎಂದ ಪಾಲಿಕೆ ನಿವೃತ್ತ ನೌಕರ
ನಾಳೆ ಮೇಯರ್, ಉಪಮೇಯರ್ ಚುನಾವಣೆ
ಮಹಾನಗರ ಪಾಲಿಕೆಯ 21ನೇ ಅವಧಿಗೆ ಮೇಯರ್, ಉಪಮೇಯರ್ ಚುನಾವಣೆಯನ್ನು ಫೆ.6ರಂದು ಬೆಳಗಾವಿ ಮಹಾನಗರ ಪಾಲಿಕೆಯ ಸಭಾಗೃಹದಲ್ಲಿ ನಡೆಸಲಾಗುವದು. ಅಂದು ಮಹಾನಗರ ಪಾಲಿಕೆಯ ಕಾರ್ಯಾಲಯದಲ್ಲಿ ಚುನಾವಣೆ ಪ್ರಕ್ರಿಯೆ ಮುಂಜಾನೆ 10 ಗಂಟೆಗೆ ಪ್ರಾರಂಭವಾಗುವುದು. ಬೆಳಗ್ಗೆ 10 ಗಂಟೆಯಿಂದ 1 ಗಂಟೆವರೆಗೆ ನಾಮಪತ್ರಗಳನ್ನು ಸ್ವೀಕರಿಸುವುದು. ಮಧ್ಯಾಹ್ನ 3 ಗಂಟೆಗೆ ಸಭೆ ಸೇರುವುದು. ಮಧ್ಯಾಹ್ನ 3ರ ನಂತರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಕ್ರಮಬದ್ಧ ನಾಮನಿರ್ದೇಶನ, ಘೋಷಣೆ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವುದು, ಉಮೇದುವಾರರ ಪಟ್ಟಿಘೋಷಣೆ, ಅವಿರೋಧ ಆಯ್ಕೆಯಾದಲ್ಲಿ ಫಲಿತಾಂಶ ಘೋಷಣೆ. ಚುನಾವಣೆ ಅಗತ್ಯವಿದ್ದಲ್ಲಿ ಕೈಎತ್ತುವ ಮೂಲಕ ಮತದಾನ ನಡವಳಿಕೆ ಪುಸ್ತಕದಲ್ಲಿ ಸದಸ್ಯರ ಸಹಿ ದಾಖಲಿಸುವುದು ಮತಗಳ ಎಣಿಕೆ ಹಾಗೂ ಫಲಿತಾಂಶ ಘೋಷಣೆ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ತಿಳಿಸಿದ್ದಾರೆ.
ಮೇಯರ್, ಉಪಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಮಹಾನಗರ ಪಾಲಿಕೆ ಕಾರ್ಯಾಲಯದ ಮುಖ್ಯ ಪ್ರವೇಶ ದ್ವಾರದಲ್ಲಿ ಚುನಾಯಿತ ಸದಸ್ಯರನ್ನು ಗುರುತಿಸಲು ಪಾಲಿಕೆಯ ಸಿಬ್ಬಂದಿಯವರನ್ನು ನಿಯೋಜಿಸಲಾಗಿದ್ದು, ಇದಕ್ಕಾಗಿ ಚುನಾಯಿತ ಸದಸ್ಯರು ಕಡ್ಡಾಯವಾಗಿ ಗುರುತಿನ ಚೀಟಿ ತರಲು ಕೋರಿದೆ. ಪಾಲಿಕೆಯ ಸದಸ್ಯರು ತಮ್ಮನ್ನು ಗುರುತಿಸಲು ಇರುವ ಅಧಿಕಾರಿ, ಸಿಬ್ಬಂದಿಗೆ ಸಹಕರಿಸಬೇಕು. ಚುನಾವಣೆ ಹಿನ್ನೆಲೆಯಲ್ಲಿ ಆ ದಿನದಂದು ಸಾರ್ವಜನಿಕರು ಕೂಡ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.