ಬ್ರಾಹ್ಮಣ ಸಿಎಂ ಅಭ್ಯರ್ಥಿ ಪ್ರಹ್ಲಾದ್‌ ಜೋಶಿ ಪರ ಬ್ಯಾಟಿಂಗ್‌: ಕುಮಾರಸ್ವಾಮಿಗೆ ಸಿ.ಟಿ.ರವಿ ಟಾಂಗ್

By Sathish Kumar KHFirst Published Feb 5, 2023, 6:57 PM IST
Highlights

ಯೋಗ್ಯತೆ ಇರುವ ಕಾರಣಕ್ಕೆ ಸಿಎಂ ಆಕಾಂಕ್ಷಿಗಳ ಪಟ್ಟಿಯಲ್ಲಿ ಪ್ರಹ್ಲಾದ್‌ ಜೋಶಿ ಹೆಸರಿದೆ
ಜೆಡಿಎಸ್‌ನ ಮುಸ್ಲಿಂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿ
ದೇವೇಗೌಡರ ಮಗನಾಗಿ ಸರಿಯಾಗಿ ಮಾತನಾಡುವುದನ್ನು ಕಲಿತುಕೊಳ್ಳಬೇಕು

ಬೆಂಗಳೂರು (ಫೆ.05): ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ ಅವರ ಜಾತಿಯ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿಗೆ ಮಾಹಿತಿ ಕೊರತೆ ಇದೆ. ಜೋಶಿಯವರ ನಾಲ್ಕೈದು ತಲೆಮಾರು ಕರ್ನಾಟಕದಲ್ಲಿದೆ. ಯೋಗ್ಯತೆ ಇರುವ ಕಾರಣಕ್ಕೆ ಪ್ರಹ್ಲಾದ್‌ ಜೋಶಿ ಹೆಸರು ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿಯಲ್ಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೆಚ್.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಹತಾಶೆಯಿಂದ ಬ್ರಾಹ್ಮಣ ಮತ್ತು ಜೋಶಿ ಹೆಸರು ಪ್ರಸ್ತಾಪ ಮಾಡುತ್ತಿದ್ದಾರೆ. ಹಿಂದೂಗಳನ್ನು ಒಡೆದಾಳುವ ಕುಟಿಲ ನೀತಿಗಾಗಿ, ತಾವು ಮಿತಿ ಮೀರಿಸುವ ಹೇಳಿಕೆ ನೀಡುತ್ತಿದ್ದಾರೆ. ಬೇರೆ ಪಕ್ಷದ ಗೊಡವೆಗಳು ಅವರಿಗ್ಯಾಕೆ ಬೇಕು. ಅವರು ಅಧಿಕಾರಕ್ಕೆ ಬಂದರೆ ಮುಸ್ಲಿಂಮರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದಕ್ಕಾಗಿ ಮೈಸೂರು ಭಾಗದಲ್ಲಿ ಒಕ್ಕಲಿಗರು ಕುಮಾರಸ್ವಾಮಿ ಸಿಎಂ ಆಗಲ್ಲವೆಂದು ನಿರ್ಧಾರ ಮಾಡಿದ್ದಾರೆ. ಹಾಗಾಗಿ ಜೆಡಿಎಸ್‌ ಬಿಟ್ಟು ಬೇರೆ ಹಿಂದೂ ಅಭ್ಯರ್ಥಿಗಳಿಗೆ ಮತ ಹಾಕುತ್ತಾರೆ ಎಂದು ಹೇಳಿದರು.

ಬ್ರಾಹ್ಮಣ ಪ್ರಹ್ಲಾದ್‌ ಜೋಶಿ ಸಿಎಂ- 8 ಮಂದಿ ಡೆಪ್ಯೂಟಿ ಸಿಎಂ: ಬಿಜೆಪಿಯಲ್ಲಿ ಪ್ರಳಯ ಸೃಷ್ಟಿಸಿದ ಕುಮಾರಸ್ವಾಮಿ

ದೇವೇಗೌಡರ ಮಗನಾಗಿ ಸರಿಯಾಗಿ ಮಾತನಾಡಿ:  ಇನ್ನು ಎಚ್.ಡಿ. ಕುಮಾರಸ್ವಾಮಿ ನಮ್ಮ ಸಂಸದೀಯ ಮಂಡಳಿ ಅಲ್ಲ. ಸಿಎಂ ಯಾರು ಆಗಬೇಕು ಎನ್ನುವುದು ನಮ್ಮ ಸಂಸದೀಯ ಮಂಡಳಿ ನಿರ್ಧಾರ ಮಾಡುತ್ತದೆ. ಪ್ರಹ್ಲಾದ ಜೋಶಿ ಜಾತಿ ಹೇಳಿ ಮತ ಕೇಳುವಂತಹ ಅಗತ್ಯತೆ ನಮಗೆ ಇಲ್ಲ. ಯಾರು ಯಾರ್ಯಾರ ಕಾಲಿಗೆ ಬಿದ್ದಿದ್ದಾರೆ ಗೊತ್ತಿದೆ. ಅವರ ಹೇಳಿಕೆ ದೇವೆಗೌಡರ ಭಾವನೆಗೂ ದಕ್ಕೆ ತರುವಂತಹದ್ದಾಗಿದೆ. ದೇವೇಗೌಡರ ಮಗನಾಗಿ ಸರಿಯಾಗಿ ಮಾತನಾಡಬೇಕು. ಪ್ರಹ್ಲಾದ ಜೋಶಿ, ಕುಮಾರಸ್ವಾಮಿ ತರಹ ಲಕ್ಕಿ ಮ್ಯಾನ್ ಅಲ್ಲ. ಜೋಶಿ ಹಂತ ಹಂತವಾಗಿ ಬೆಳೆದು ಬಂದಿದ್ದಾರೆ ಎಂದು ತಿರುಗೇಟು ನೀಡಿದರು.

ಜೆಡಿಎಸ್‌ನ ಮುಸ್ಲಿಂ ಸಿಎಂ ಅಭ್ಯರ್ಥಿ ಘೋಷಣೆ ಮಾಡಿ: ಪ್ರಹ್ಲಾದ್‌ ಜೋಶಿ ಎಲ್ಲ ಬೆಂಬಲ ಪಡೆದು ನಾಯಕರಾಗಿದ್ದವರು. ಹಂತ ಹಂತವಾಗಿ ಬೆಳೆದು ಬಂದ ನಾಯಕರನ್ನು ಟೀಕೆ ಮಾಡುವುದು ಸೂಕ್ತವಲ್ಲ. ಇದು ಹತಾಶೆ ಅಲ್ಲದೇ ಇನ್ನೇನು ಅಲ್ಲ. ಆರ್‌ಎಸ್‌ಎಸ್‌ ಏನು ಎಂದು ಅವರಿಗೆ ಅರ್ಥ ಆಗಲು ಸಾಧ್ಯವಿಲ್ಲ. ಸ್ವಯಂ ಸೇವಕರು ಆದವರಿಗೆ ಮಾತ್ರ ಆರ್‌ಎಸ್‌ಎಸ್ ಅರ್ಥ ಆಗುತ್ತದೆ. ಕುಮಾರಸ್ವಾಮಿ ಮುಸಲ್ಮಾನರನ್ನು ಸಿಎಂ ಮಾಡ್ತಿನಿ ಎಂದಿದ್ದಾರೆ. ಯಾರನ್ನು ಮಾಡ್ತಾರೆ ಎಂಬುದನ್ನು ಈಗಲೇ ಘೋಷಣೆ ಮಾಡಬೇಕು. ನಾಳೆ ನಟೋರಿಯಸ್ ಇರೊರನ್ನು ತಂದು ಮುಖ್ಯಮಂತ್ರಿ ಮಾಡಿದರೆ ಜನರಿಗೆ ಮೋಸ ಆಗುತ್ತದೆ ಎಂದು ಹೇಳಿದರು.

ಬ್ರಾಹ್ಮಣ ದ್ವೇಷದ ಜೆಡಿಎಸ್‌ ಜಾತ್ಯಾತೀತ ಪಕ್ಷನಾ.?: ಜೋಶಿ ಅವರಿಗೆ ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆ ಇದೆ. ಬಸವರಾಜ ಬೊಮ್ಮಾಯಿ ಅವರನ್ನು ಸಂಸದೀಯ ಮಂಡಳಿ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಅವರ ನೇತೃತ್ವದಲ್ಲಿ ಚುನಾವಣೆ ಮಾಡುತ್ತೇವೆ. ಹಾಗೇಯೇ ಕುಮಾರಸ್ವಾಮಿ ಮುಸ್ಲಿಂ ಸಿಎಂ ಅಭ್ಯರ್ಥಿ ಯಾರೆಂದು ಹೇಳಬೇಕು. ಈ ಮಾತಿನ ಮೂಲಕ ಬ್ರಾಹ್ಮಣ ದ್ವೇಷ ತೋರಿಸುತ್ತಿದ್ದಾರೆ. ಅವರದು ಜಾತ್ಯತೀತ ಪಕ್ಷನಾ? ಹಾಗಿದ್ದರೆ ಜಾತಿಯ ಮೇಲಿನ ದ್ವೇಷ ಏನು? ಅವರ ದ್ವೇಷ ಜಾತ್ಯಾತೀತ ನಿಲುವುಗಳಿಗೆ ವಿರುದ್ದವಾಗಿವೆ ಎಂದು ಕಿಡಿಕಾರಿದರು.

ಗಾಂಧಿಯನ್ನು ಕೊಂದ ಬ್ರಾಹ್ಮಣರು, ಆರ್‌ಎಸ್‌ಎಸ್‌ನವರು ದೇಶವನ್ನು ಹಾಳು ಮಾಡ್ತಾರೆ: ಕುಮಾರಸ್ವಾಮಿ

ವೈಯಕ್ತಿಕ ದಾಳಿ ಮುನ್ನೆಲೆಗೆ ಬಂದಿವೆ:  ರಮೇಶ್ ಜಾರಕಿಹೋಳಿ ಸಿಡಿ ವಿಚಾರದ ಬಗ್ಗೆ ಮಾತನಾಡಲ್ಲ. ವೈಯಕ್ತಿಕ ದಾಳಿ ಮಾಡುವ ಬೆಳವಣಿಗೆ ಹೆಚ್ಚಿದೆ. ಅದು ಕರ್ನಾಟಕ ರಾಜಕಾರಣಕ್ಕೆ ಗೌರವ ತರುವುದಲ್ಲ. ಇನ್ನು ಸಂಸದ ಡಿ.ಕೆ ಸುರೇಶ್ ಹೇಳಿಕೆಗೆ ತಿರುಗೇಟು ನೀಡಿದ ಅವರು ಕನಕಪುರದಲ್ಲಿ ಆ ಥರದ ಸಂಗತಿಗಳು ನಡೆಯುತ್ತಿರಬಹುದು. ಬೆಂಗಳೂರಿನಲ್ಲಿ ಡಿ.ಜೆ.ಹಳ್ಳಿ ಮತ್ತು ಕೆ.ಜೆ. ಹಳ್ಳಿಯಲ್ಲಿ ಬೆಂಕಿ ಹಾಕಿದರನ್ನು ಡಿಕೆ ಬ್ರದರ್ಸ್‌ ಎಂದಿದ್ದರು. ಎಸ್‌ಡಿಎಫ್ ಮೇಲಿನ ಕೇಸುಗಳನ್ನು ರದ್ದು ಮಾಡಿದವರು. ಯಾರು ಕೊಲೆಯನ್ನು ಪ್ರಚೋದಿಸುತ್ತಿದ್ದಾರೆ ಎನ್ನುವುದು ಡಿ.ಕೆ ಸುರೇಶ್ ಹೇಳಬೇಕು ಎಂದು ಹೇಳಿದರು.

ಕುಮಾರಸ್ವಾಮಿ ಅವರ ಪಕ್ಷ ಸರಿ ಮಾಡಿಕೊಳ್ಳಲಿ
ಕುಮಾರಸ್ವಾಮಿ ನಮ್ಮ ಪಕ್ಷದ ಬಗ್ಗೆ ಚಿಂತನೆ ಮಾಡುವ ಅಗತ್ಯ ಇಲ್ಲ. ಅವರ ಪಕ್ಷವನ್ನು ಅವರು ಸರಿ ಮಾಡಿಕೊಳ್ಳಲಿ. ಕಷ್ಟ ಪಟ್ಟು ಓಡಾಡಿತ್ತಿದ್ದಾರೆ ಪಕ್ಷ ಸರಿ ಮಾಡಿಕೊಳ್ಳಲಿ. ಅವರು ಪ್ರಸ್ತುತ ಹಾಗೂ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮಾತನಾಡಬೇಕು. ಆದರೆ, ವೈಯಕ್ತಿಕವಾಗಿ ಆರೋಪ ಮಾಡಿದರೆ ಜನರು ತಲೆ‌ಕೆಸಿಕೊಳ್ಳಲ್ಲ. ಕುಮಾರಣ್ಣ ಮಾಹಿತಿ ಎಲ್ಲಿಂದ ಬರುತ್ತೆ ಗೊತ್ತಿಲ್ಲ. ಇನ್ನು ಸಿಡಿ ದೂರಿನ ಬಗ್ಗೆ ಮಾಹಿತಿ ಇಲ್ಲ. ಎಲ್ಲ ವಿವರಗಳು ಇದ್ದರೆ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಆಗೆ ಆಗುತ್ತದೆ.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

click me!