ಹಾನಗಲ್‌ ಉಪಚುನಾವಣೆ : ಕಾಂಗ್ರೆಸ್‌ ಟಿಕೆಟ್‌ ಯಾರಿಗೆ?

By Kannadaprabha News  |  First Published Oct 1, 2021, 7:50 AM IST
  • ಹಾನಗಲ್‌ ವಿಧಾನಸಭಾ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಕಗ್ಗಂಟು ಬಿಡಿಸಲು ಕಾಂಗ್ರೆಸ್‌   ಸಭೆ 
  • ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ನೇತೃತ್ವದಲ್ಲಿ ಕ್ಷೇತ್ರದ ನಾಯಕರ ಸಭೆ 

ಬೆಂಗಳೂರು (ಅ.01):  ಹಾನಗಲ್‌ ವಿಧಾನಸಭಾ ಉಪ ಚುನಾವಣೆ (Hanagal Constituency By Election) ಅಭ್ಯರ್ಥಿ ಆಯ್ಕೆ ಕಗ್ಗಂಟು ಬಿಡಿಸಲು ಕಾಂಗ್ರೆಸ್‌ (Congress) ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಅವರ ನೇತೃತ್ವದಲ್ಲಿ ಕ್ಷೇತ್ರದ ನಾಯಕರ ಸಭೆ ನಡೆದಿದ್ದು, ಬಹುತೇಕ ಶ್ರೀನಿವಾಸ ಮಾನೆ ಅವರ ಪರ ಒಲವು ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಕ್ಷೇತ್ರಕ್ಕೆ ಮನೋಹರ ತಹಶೀಲ್ದಾರ್‌ ಹಾಗೂ ಶ್ರೀನಿವಾಸ ಮಾನೆ (Shrinivas Mane) ನಡುವೆ ತೀವ್ರ ಪೈಪೋಟಿ ಉಂಟಾಗಿತ್ತು. ಮಾನೆ ಬೆನ್ನಿಗೆ ಸಿದ್ದರಾಮಯ್ಯ ಹಾಗೂ ತಹಶೀಲ್ದಾರ್‌ ಪರ ಶಿವಕುಮಾರ್‌ ಅವರು ನಿಂತಿದ್ದರಿಂದ ಬಣ ರಾಜಕಾರಣ ಸಹ ಶುರುವಾಗಿದೆ ಎನ್ನಲಾಗಿತ್ತು. ಇದರಿಂದ ಗೊಂದಲ ನಿರ್ಮಾಣವಾಗಿತ್ತು. ಈ ಸಮಸ್ಯೆ ನಿವಾರಿಸಲು ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಅಭ್ಯರ್ಥಿ ಆಯ್ಕೆ ಕುರಿತು ದೀರ್ಘ ಸಮಾಲೋಚನೆ ನಡೆಸಿದರು.

Latest Videos

undefined

ಟಿಕೆಟ್‌ ವಿಚಾರಕ್ಕೆ ಗುಡುಗಿದ ಕೈ ಮುಖಂಡ : ನಮ್ಮ ಕ್ಷೇತ್ರದಲ್ಲಿ ಗಂಡಸರಿಲ್ಲವೇ?

ಮೂಲಗಳ ಪ್ರಕಾರ, ತಹಶೀಲ್ದಾರ್‌ ಹಾಗೂ ಮಾನೆ ಮಧ್ಯೆ ಸಂಧಾನ ನಡೆಸಿ ಇಬ್ಬರ ನಡುವೆ ಒಗ್ಗಟ್ಟು ಮೂಡಿಸುವುದು. ಯಾರಿಗೇ ಟಿಕೆಟ್‌ ನೀಡಿದರೂ ಒಗ್ಗೂಡಿ ಚುನಾವಣೆ ಎದುರಿಸುವಂತೆ ತಾಕೀತು ಮಾಡಲು ತೀರ್ಮಾನಿಸಲಾಯಿತು. ಅಲ್ಲದೆ, ಬಹುತೇಕ ಶ್ರೀನಿವಾಸ ಮಾನೆ ಅವರಿಗೆ ಟಿಕೆಟ್‌ ನೀಡುವ ಬಗ್ಗೆಯೂ ಸಭೆಯಲ್ಲಿ ಒಲವು ವ್ಯಕ್ತವಾಯಿತು ಎನ್ನಲಾಗಿದೆ. ಈ ಬಗ್ಗೆ ಹೈಕಮಾಂಡ್‌ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಪೈಪೋಟಿ ತೀವ್ರ:  ವಾಸ್ತವವಾಗಿ ವಿಧಾನಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಅವರಿಗೆ ಈ ಬಾರಿ ಟಿಕೆಟ್‌ ನೀಡಬಾರದು. ಹೊರಗಿನವರಾದ ಶ್ರೀನಿವಾಸ ಮಾನೆ 2018ರ ವಿಧಾನಸಭೆ ಚುನಾವಣೆಯಲ್ಲಿ (Assembly Election) ಪರಾಭವಗೊಂಡಿದ್ದಾರೆ. ಹೊರಗಿನವರಿಗೆ ಟಿಕೆಟ್‌ ನೀಡಲು ನಮ್ಮ ಕ್ಷೇತ್ರದಲ್ಲಿ ಗಂಡಸರಿಲ್ಲವೇ ಎಂದು ಮನೋಹರ್‌ ತಹಶೀಲ್ದಾರ್‌ ಬುಧವಾರ ಕಿಡಿಕಾರಿದ್ದರು. ಅಲ್ಲದೆ, ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ ನೇತೃತ್ವದಲ್ಲಿ ಡಿ.ಕೆ. ಶಿವಕುಮಾರ್‌ ಬಳಿ ಹೋಗಿ ತಮಗೆ ಟಿಕೆಟ್‌ ಕೊಡಿಸುವಂತೆ ಪಟ್ಟು ಹಿಡಿದಿದ್ದರು. ಇನ್ನು ಕಳೆದ ಬಾರಿ ಕೇವಲ 5500 ಮತಗಳಿಂದ ಪರಾಭವಗೊಂಡಿದ್ದ ಶ್ರೀನಿವಾಸ ಮಾನೆ ಅವರು ತಮಗೆ ಈ ಬಾರಿ ಅವಕಾಶ ಉತ್ತಮವಾಗಿರುವುದರಿಂದ ತಮಗೆ ಟಿಕೆಟ್‌ ನೀಡಬೇಕು ಎಂಬ ಆಗ್ರಹ ಮಂಡಿಸಿದ್ದರು.

ಬೈಎಲೆಕ್ಷನ್ ಅಖಾಡ: ಹಾನಗಲ್‌ನಲ್ಲಿ ಬಿಜೆಪಿ ಟಿಕೆಟ್‌ ಯಾರಿಗೆ?

ಇದರಿಂದಾಗಿ ತೀವ್ರ ಗೊಂದಲ ಉಂಟಾಗಿತ್ತು. ಇದನ್ನು ಬಗೆಹರಿಸಲು ಗುರುವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಅವರು ಆಕಾಂಕ್ಷಿಗಳೊಂದಿಗೆ ಪ್ರಾಥಮಿಕ ಸಭೆ ನಡೆಸಿದರು. ಅನಂತರ ಗುರುವಾರ ಸಂಜೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ, ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಶಿವಣ್ಣ ಮೊದಲಾದವರು ಸಭೆ ನಡೆಸಿದರು. ಈ ವೇಳೆ ಶ್ರೀನಿವಾಸ ಮಾನೆ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಬಹುತೇಕ ನಾಯಕರಿಂದ ಒಲವು ವ್ಯಕ್ತವಾಗಿದೆ ಎನ್ನಲಾಗಿದೆ. ಆದಾಗ್ಯೂ ಹೈಕಮಾಂಡ್‌ಗೆ ಪಟ್ಟಿಕಳುಹಿಸಿ ಅನಂತರ ಅಂತಿಮ ಹೆಸರು ಪ್ರಕಟವಾಗುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಅಸಮಾಧಾನ ಶಮನ- ಮಾನೆ: ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಶ್ರೀನಿವಾಸ್‌ ಮಾನೆ ಮಾತನಾಡಿ, ಮನೋಹರ ತಹಶೀಲ್ದಾರ್‌ ಅವರಿಗೆ ಗುರುವಾರ ಬೆಳಗ್ಗೆವರೆಗೂ ಅಸಮಾಧಾನ ಇದ್ದದ್ದು ಸತ್ಯ. ಸಂಜೆ ಕೆಪಿಸಿಸಿ ಅಧ್ಯಕ್ಷರ ಜತೆ ಸಭೆ ನಡೆಸಿದ ಬಳಿಕ ಎಲ್ಲವೂ ಸರಿ ಹೋಗಿದೆ. ತಹಶೀಲ್ದಾರ್‌ ಅವರ ಅಸಮಾಧಾನ ಶಮನ ಆಗಿದೆ. ಈಗ ಜಿಲ್ಲಾ ಮುಖಂಡರೊಂದಿಗೂ ಚರ್ಚೆ ನಡೆಸಲಾಗಿದೆ. ಪಕ್ಷವೇ ಅಭ್ಯರ್ಥಿಯನ್ನು ಅಂತಿಮ ಮಾಡಲಿದ್ದು, ಪಕ್ಷ ಯಾರನ್ನೇ ಅಭ್ಯರ್ಥಿ ಮಾಡಿದರೂ ನಾವು ಕೆಲಸ ಮಾಡಲು ಬದ್ಧವಾಗಿದ್ದೇವೆ ಎಂದು ಹೇಳಿದರು.

click me!