ಔತಣ ಕೂಟಕ್ಕೆ ಆತ್ಮೀಯರನ್ನು ಕರೆದರೆ ತಪ್ಪೇನಿದೆ?: ಡಿಸಿಎಂ ಶಿವಕುಮಾರ್

By Kannadaprabha News  |  First Published Dec 16, 2023, 5:42 PM IST

ಮದುವೆ, ಶುಭ ಸಮಾರಂಭ, ಭೋಜನ ಕೂಟದಲ್ಲಿ ನಾಯಕರು ಪಕ್ಷಾತೀತ, ಜಾತ್ಯತೀತವಾಗಿ ಸೇರುತ್ತಾರೆ. ಅದರಲ್ಲಿ ತಪ್ಪೇನಿದೆ? ಬಿಜೆಪಿಯವರು ನನ್ನ ಜೊತೆ ಮಾತನಾಡುವುದು, ನಮ್ಮ ಪಕ್ಷದ ನಾಯಕರು ಅವರ ಜೊತೆ ಮಾತನಾಡುವುದು ಸಹಜ. 


ಸುವರ್ಣಸೌಧ (ಡಿ.16): ಮದುವೆ, ಶುಭ ಸಮಾರಂಭ, ಭೋಜನ ಕೂಟದಲ್ಲಿ ನಾಯಕರು ಪಕ್ಷಾತೀತ, ಜಾತ್ಯತೀತವಾಗಿ ಸೇರುತ್ತಾರೆ. ಅದರಲ್ಲಿ ತಪ್ಪೇನಿದೆ? ಬಿಜೆಪಿಯವರು ನನ್ನ ಜೊತೆ ಮಾತನಾಡುವುದು, ನಮ್ಮ ಪಕ್ಷದ ನಾಯಕರು ಅವರ ಜೊತೆ ಮಾತನಾಡುವುದು ಸಹಜ. ರಾಜಕೀಯವಾಗಿ ಏನೇ ಭಿನ್ನಾಭಿಪ್ರಾಯವಿದ್ದರೂ ಮನುಷ್ಯರ ಮಧ್ಯೆಬಾಂಧವ್ಯ ಮುಖ್ಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಸದನದ ಕಲಾಪ ಸಮಯದಲ್ಲೂ ಕೆಲ ವಿಚಾರಗಳ ಚರ್ಚೆಗೆ ಸಭೆ ಕರೆದಾಗ ಪ್ರತಿಪಕ್ಷಗಳ ನಾಯಕರನ್ನೂ ಆಹ್ವಾನಿಸುತ್ತೇವೆ. ರಾಜಕೀಯ ಮಾಡ ಬಯಸುವವರು ಸಭೆಗೆ ಬರುವುದಿಲ್ಲ. ಸಹಜವಾಗಿ ಭೋಜನಕೂಟಕ್ಕೆ ಎಲ್ಲಾ ಶಾಸಕರನ್ನು ಆಹ್ವಾನಿಸುತ್ತೇವೆ. ಕೆಲವರು ಬರುತ್ತಾರೆ, ಕೆಲವರು ನಿರಾಕರಿಸುತ್ತಾರೆ. ಆತ್ಮೀಯರನ್ನು ನಾವು ಕರೆಯುತ್ತೇವೆ. ತಪ್ಪೇನಿದೆ ಎಂದರು.

ಡಿನ್ನರ್‌ಗೆ 10 ವಿಪಕ್ಷ ಶಾಸಕರು ಬಂದಿದ್ರು: ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಬಳಿಕ ಆಯೋಜಿಸಿದ್ದ ಔತಣಕೂಟದಲ್ಲಿ ಬಿಜೆಪಿ ಸೇರಿದಂತೆ ಅನ್ಯಪಕ್ಷಗಳಿಂದ ಬರೋಬ್ಬರಿ 10 ಮಂದಿ ಶಾಸಕರು ಪಾಲ್ಗೊಂಡಿದ್ದರು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಾಂಬ್ ಸಿಡಿಸಿದ್ದಾರೆ. ಬಿಜೆಪಿಯ ಎಸ್‌.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್‌ ಹಾಗೂ ಎಚ್‌.ವಿಶ್ವನಾಥ್‌ ಅವರು ಮಾತ್ರ ಔತಣಕೂಟಕ್ಕೆ ಹಾಜರಾಗಿದ್ದು ಬಹಿರಂಗಗೊಂಡಿತ್ತು. ಆದರೆ, ಈ ಮೂವರಷ್ಟೇ ಅಲ್ಲ, ಒಟ್ಟು ಹತ್ತು ಮಂದಿ ಶಾಸಕರು ಭಾಗವಹಿಸಿದ್ದರು ಎಂದು ಶಿವಕುಮಾರ್ ಹೇಳಿದ್ದು ಕುತೂಹಲ ಮೂಡಿಸಿದೆ.

Latest Videos

undefined

ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್‌, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಬಿಜೆಪಿಯ ಯಾವ ಶಾಸಕರೂ ಬಂದಿರಲಿಲ್ಲ. ಪ್ರತಿಪಕ್ಷದ ಕೆಲ ಶಾಸಕರನ್ನು ಔತಣಕೂಟಕ್ಕೆ ಆಹ್ವಾನಿಸಿದ್ದೆವು. ಸೋಮಶೇಖರ್, ಶಿವರಾಂ ಹೆಬ್ಬಾರ್‌ ಹಾಗೂ ವಿಶ್ವನಾಥ್‌ ಸೇರಿದಂತೆ ಅನ್ಯ ಪಕ್ಷಗಳ 10 ಮಂದಿ ಶಾಸಕರು ಔತಣಕೂಟಕ್ಕಷ್ಟೇ ಹಾಜರಾಗಿದ್ದರು. ಶಾಸಕಾಂಗ ಪಕ್ಷದ ಸಭೆಗೆ ಬಂದಿಲ್ಲ. ಅವರು ನಮ್ಮ ಪಕ್ಷದ ಶಾಸಕರೂ ಅಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಧಾನಿ ಮೋದಿ ಭೇಟಿಗೆ ಸಮಯ ಕೊಡಿಸಿ: ಸಿಎಂ ಸಿದ್ದರಾಮಯ್ಯ

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಇತರ ಪಕ್ಷಗಳ ಬಹುತೇಕರಿಗೆ ಕಾಂಗ್ರೆಸ್ ಭವಿಷ್ಯ ಗೊತ್ತಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಏನು ಆಗುತ್ತದೆ ಎಂದು ಕಾದು ನೋಡಿ. ಚುನಾವಣೆಗೂ ಮುನ್ನವೇ ಅಲ್ಲಿನ ಕೆಲವರು ಪಕ್ಷ ಬಿಟ್ಟು ಬರಲಿದ್ದು, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಖಾಲಿಯಾಗಲಿವೆ. ವಿರೋಧ ಪಕ್ಷಗಳ ಹಲವು ಸದಸ್ಯರು ಕಾಂಗ್ರೆಸ್‌ನತ್ತ ಮುಖ ಮಾಡಲಿದ್ದಾರೆ. ಆದರೆ, ಯಾರ್ಯಾರು ಕಾಂಗ್ರೆಸ್‌ ಸೇರಲಿದ್ದಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದು ತಿಳಿಸಿದರು.

click me!