
ಬೆಂಗಳೂರು: ಅಹಿಂದ ನಾಯಕರು ಮತ್ತೆ ಒಗ್ಗೂಡುವುದು ಅಲ್ಲ, ಅಹಿಂದ ವಿಚಾರ ಬಂದಾಗ ನಾವು ಒಗ್ಗಟ್ಟಾಗಿಯೇ ಇದ್ದೇವೆ. ಎಸ್‌ಐಆರ್ ಹೋರಾಟ ಮುಗಿಯುವವರೆಗೆ ಸದ್ಯಕ್ಕೆ ಯಾವುದೇ ಸಭೆ ನಡೆಸುವುದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಅಹಿಂದ ವಿಚಾರ ಬಂದಾಗ ನಾವು ಒಗ್ಗಟ್ಟಾಗಿಯೇ ಇರುತ್ತೇವೆ. ಬೇರೆ ವಿಚಾರ ಬಂದಾಗ ಖಂಡಿತ ಸಮಸ್ಯೆ ಇದ್ದೇ ಇರುತ್ತದೆ. ಆದರೆ ಅಹಿಂದ ವಿಚಾರದಲ್ಲಿ ನಮ್ಮಲ್ಲಿ ಒಗ್ಗಟ್ಟು ಇದೆ ಎಂದರು.
ಅಹಿಂದ ನಾಯಕರ ಡಿನ್ನರ್ ಸಭೆ ನಡೆಸುವ ಬಗ್ಗೆ ಪ್ರತಿಕ್ರಿಯಿಸಿ, ‘ಸದ್ಯಕ್ಕೆ ಇಲ್ಲ, ಎಸ್‌ಐಆರ್ ಮುಗಿಯುವವರೆಗೂ ಯಾವುದೂ ಇಲ್ಲ. ದೆಹಲಿಯಲ್ಲಿ ಎಸ್‌ಐಆರ್ ವಿರುದ್ಧ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ನಾನೂ ದೆಹಲಿಗೆ ಹೋಗುತ್ತೇನೆ. ಬೇರೆ ಬೇರೆ ದಿನಗಳಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ’ ಎಂದಷ್ಟೇ ಹೇಳಿದರು.
ಸ್ಟಿಂಗ್ ಪರಿಣಿತರನ್ನು ಮುಖ್ಯಮಂತ್ರಿ ಭೇಟಿ ಮಾಡಿದ್ದರು ಎಂಬ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ‘ನಮಗೆ ಗೊತ್ತಿಲ್ಲ, ನಾವು ಗೊತ್ತಿರುವಷ್ಟು ಹೇಳಿದ್ದೇವೆ. ಮುಂದುವರಿದ ಭಾಗ ನಮ್ಮ ಹತ್ತಿರ ಇಲ್ಲ. ಪಾರ್ಟ್-1 ಹೇಳಿದ್ದೇವೆ, ಆದರೆ ಪಾರ್ಟ್-2 ಏನಿದೆ ಎಂಬುದು ಗೊತ್ತಿಲ್ಲ. ಗೊತ್ತಾದ ಮೇಲೆ ಅದನ್ನೂ ಹೇಳುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಎಷ್ಟು ಪಾರ್ಟ್ ಇದೆ ಎಂಬ ಪ್ರಶ್ನೆಗೆ, ‘ಇದೆ ಅಂತ ಅವರು (ಸಿಎಂ)ಹೇಳಿಲ್ಲ. ಯಾರದು ಇದೆ ಅಂಥ ಅಲ್ಲ, ಈ ರೀತಿ ಆಗಬಹುದು, ಮಾಡಬಹುದು. ಟ್ರ್ಯಾಪ್ ಮಾಡಬಹುದು ಎಂದು ಎಚ್ಚರಿಸಿದ್ದರು. ಯಾರೇ ಬಂದರೂ ಹುಷಾರಾಗಿರಿ ಎಂದಿದ್ದರು. ಸ್ಟಿಂಗ್ ಮಾಡಿದ್ದಾರೆ ಎಂದು ಎಲ್ಲೂ ಹೇಳಿಲ್ಲ ಎಂದು ಹೇಳಿದರು.
ಬಹಿರಂಗ ಯಾರು ಪಡಿಸಬೇಕು?
ಯಾರ ಮೇಲೆ ಸ್ಟಿಂಗ್ ಆಗಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂಬ ಪ್ರತಿಪಕ್ಷದ ಒತ್ತಾಯಕ್ಕೆ, ‘ಬಹಿರಂಗ ಯಾರು ಪಡಿಸಬೇಕು? ಯಾವ ಸಚಿವರ ಹೆಸರನ್ನೂ ಹೇಳಿಲ್ಲ. ಈ ರೀತಿ ಆಗಬಹುದು ಎಂದಷ್ಟೇ ಹೇಳಿದ್ದಾರೆ. ಹೀಗಿರುವಾಗ ಯಾರ ಹೆಸರು ಬಹಿರಂಗಪಡಿಸಬೇಕು?’ ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.