ನಾನು ವೈಯಕ್ತಿಕ ಕೆಲಸಗಳಿಗಾಗಿ ದೆಹಲಿಗೆ ಹೋಗಿದ್ದೆ. ಹೈಕಮಾಂಡ್‌ನ ಯಾವ ನಾಯಕರನ್ನು ಭೇಟಿ ಮಾಡಿಲ್ಲ. ಲೋಕಸಭೆ ಚುನಾವಣೆಯ ಚರ್ಚೆಗಾಗಿ ಹೋಗಿಲ್ಲ. ಇದೆಲ್ಲ ಸುಳ್ಳು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿ (ಡಿ.24): ನಾನು ವೈಯಕ್ತಿಕ ಕೆಲಸಗಳಿಗಾಗಿ ದೆಹಲಿಗೆ ಹೋಗಿದ್ದೆ. ಹೈಕಮಾಂಡ್‌ನ ಯಾವ ನಾಯಕರನ್ನು ಭೇಟಿ ಮಾಡಿಲ್ಲ. ಲೋಕಸಭೆ ಚುನಾವಣೆಯ ಚರ್ಚೆಗಾಗಿ ಹೋಗಿಲ್ಲ. ಇದೆಲ್ಲ ಸುಳ್ಳು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನನಗಿಂತ ಮುಂಚಿತವಾಗಿ ದೆಹಲಿಗೆ ಹೋಗಿದ್ದರು.
ಅವರು ಪ್ರಧಾನಿಗಳನ್ನು ಭೇಟಿಯಾಗಲು ಹೋಗಿದ್ದರು. ನಾನು ವೈಯಕ್ತಿಕ ಕೆಲಸಕ್ಕಾಗಿ ಹೋಗಿದ್ದೆ. ಯಾವ ನಾಯಕರನ್ನೂ ಭೇಟಿ ಮಾಡಿಲ್ಲ ಎಂದರು. ಮೊನ್ನೆಯಷ್ಟೇ ವೀಕ್ಷಕರ ಸಭೆಯಾಗಿದೆ. ಟಿಕೆಟ್ ಆಕಾಂಕ್ಷಿಗಳ ಶಾರ್ಟ್ ಲಿಸ್ಟ್ ಮಾಡಿದ್ದಾರೋ ಇಲ್ಲವೋ ಎಂಬುದು ಗೊತ್ತಿಲ್ಲ ಎಂದ ಅವರು, ಕಾಂಗ್ರೆಸ್‌ನಿಂದ ಯಾರನ್ನೇ ನಿಲ್ಲಿಸಿದರೂ ಅವರನ್ನು ಗೆಲ್ಲಿಸಲು ಶ್ರಮಿಸುವೆ. ಲೋಕಸಭಾ ಚುನಾವಣೆಗೂ ನನ್ನ ದೆಹಲಿ ಭೇಟಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ವೀರಶೈವರ ಒಡೆಯಲು ಯಾವತ್ತೂ ಬಿಡೋದಿಲ್ಲ: ಶಾಸಕ ಶಾಮನೂರು ಶಿವಶಂಕರಪ್ಪ
ಖರ್ಗೆ ಒಳ್ಳೆಯ ಆಡಳಿತಗಾರರು: ಐಎನ್‌ಡಿಐಎ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರಿಗೆ ಅಪಸ್ವರ ಕೇಳಿಬಂದಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಮೋದಿ ಒಂದು ಕಡೆ, ಉಳಿದ ಎಲ್ಲ ವಿರೋಧ ಪಕ್ಷಗಳು ಮತ್ತೊಂದು ಕಡೆ. ಖರ್ಗೆ ಒಳ್ಳೆಯ ಅನುಭವ ಇರುವ, ಮುತ್ಸದ್ದಿ ರಾಜಕಾರಣಿ. ಒಳ್ಳೆಯ ಆಡಳಿತಗಾರರು. ಹೀಗಾಗಿ ಕೆಲವರು ಅವರ ಹೆಸರು ಪ್ರಸ್ತಾಪಿಸಿದ್ದಾರೆ. ಈ ವಿಚಾರದಲ್ಲಿ ಒಕ್ಕೂಟದ ಎಲ್ಲ ಸದಸ್ಯರು ಒಟ್ಟಾಗಿ ನಿರ್ಣಯ ತೆಗೆದುಕೊಳ್ಳಬೇಕು. ಚುನಾವಣೆ ನಂತರ ಪ್ರಧಾನಿ ಅಭ್ಯರ್ಥಿ ಯಾರೆಂಬುದು ತೀರ್ಮಾನ ಆಗಬಹುದು ಎಂದು ತಿಳಿಸಿದರು.
ಮಹಾ ಅಧಿವೇಶಕ್ಕೆ ಯಡಿಯೂರಪ್ಪ, ಶೆಟ್ಟರ್, ಬೊಮ್ಮಾಯಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾಧಿವೇಶನದ ಎರಡನೇ ದಿನವಾದ ಡಿ.24ರಂದು ಧಾರ್ಮಿಕ ಅಧಿವೇಶನ, ಮಹಿಳಾ ಮತ್ತು ಯುವ ಅಧಿವೇಶನ, ನೌಕರರ ಅಧಿವೇಶನ, ಸಾಹಿತಿಗಳ ಅಧಿವೇಶನ ಹಾಗೂ ಮಧ್ಯಾಹ್ನ 3ಕ್ಕೆ ಎಸ್.ನಿಜಲಿಂಗಪ್ಪ ವೇದಿಕೆಯಲ್ಲಿ ಬಹಿರಂಗ ಅಧಿವೇಶನ ಹಾಗೂ ನಿರ್ಣಯಗಳ ಮಂಡನೆಯಾಗಲಿದೆ.
ಭಾನುವಾರ ಬೆಳಿಗ್ಗೆ 9.30ರಿಂದ 12ರವರೆಗೆ ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹೊಸಪೇಟೆಯ ಶ್ರೀ ಕೊಟ್ಟೂರು ಬಸವಲಿಂಗ ಸ್ವಾಮೀಜಿ, ಮುಂಡರಗಿಯ ಡಾ.ಅನ್ನದಾನೀಶ್ವರ ಮಹಾ ಶಿವಯೋಗಿಗಳು, ನಂದಿಗುಡಿ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿಗಳ ಸಾನಿಧ್ಯದಲ್ಲಿ ಶಿವಮೊಗ್ಗದ ಆನಂದಪುರಂನ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಧಾರ್ಮಿಕ ಅಧಿವೇಶನ ಉದ್ಘಾಟಿಸುವರು. ಬಾಳೆಹೊಸೂರು ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ದಿಕ್ಸೂಚಿ ನುಡಿಗಳನ್ನಾಡುವರು. ಶ್ರೀ ಸದಾಶಿವ ಸ್ವಾಮೀಜಿ, ಡಾ.ಮಹಾಂತ ಲಿಂಗ ಶಿವಾಚಾರ್ಯ ಸ್ವಾಮೀಜಿ, ಡಾ.ಮಲಯ ಶಾಂತಮುನಿ ಸ್ವಾಮೀಜಿ, ಡಾ.ಬಸವ ಮರುಳಸಿದ್ದಸ್ವಾಮೀಜಿ ಉಪನ್ಯಾಸ ನೀಡುವರು, ಸಮಾಜದ ಹಾಲಿ-ಮಾಜಿ ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸುವರು.
ಕಾಂಗ್ರೆಸ್ ಮುಸ್ಲಿಂ ಪಾರ್ಟಿಯಾಗಿ ನಿರ್ಮಾಣಗೊಂಡಿದೆ : ಚಕ್ರವರ್ತಿ ಸೂಲಿಬೆಲೆ
ಬೆಳಿಗ್ಗೆ 9.30ರಿಂದ 12ರವರೆಗೆ ಜೆ.ಎಚ್.ಪಟೇಲ್ ವೇದಿಕೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಮಹಿಳಾ ಮತ್ತು ಮಕ್ಕಳ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಹಿಳಾ ಮತ್ತು ಯುವ ಸಬಲೀಕರಣ ಅಧಿವೇಶನ ಉದ್ಘಾಟಿಸುವರು. ಬೆಳಗಾವಿ ಸಂಸದೆ ಮಂಗಳಾ ಸುರೇಶ ಅಂಗಡಿ ದಿಕ್ಸೂಚಿ ಭಾಷಣ ಮಾಡುವರು. ಲೀಲಾದೇವಿ ಆರ್.ಪ್ರಸಾದ್, ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ, ಡಾ.ಎಂ.ಎಸ್.ಆಶಾದೇವಿ, ಪ್ರೊ. ಮೀನಾಕ್ಷಿ ಕಂಡಿಮಠ, ಡಾ.ಅನುರಾಧ ಬಕ್ಕಪ್ಪ, ಯತೀಶ್ಚಂದ್ರ, ಸುರೇಶ ಇಟ್ನಾಳ, ಉಮಾ ಪ್ರಶಾಂತ, ಸಿ.ಬಿ.ವೇದಮೂರ್ತಿ, ಎಂ.ಶಿಲ್ಪ ಉಪನ್ಯಾಸ ನೀಡುವರು. ಸಮಾಜದ ಮುಖಂಡರು, ಹಾಲಿ-ಮಾಜಿ ಜನ ಪ್ರತಿನಿಧಿಗಳು ಭಾಗವಹಿಸುವರು.