
ಹಾಸನ (ಮಾ.14): ರಾಜ್ಯದಲ್ಲಿ ಮೈತ್ರಿಕೂಟದಡಿ ಬಿಜೆಪಿ 3 ಕ್ಷೇತ್ರಗಳನ್ನು ನೀಡಿದೆ. ನಾವು ಕೇಳಿದರೆ ಇನ್ನೂ ಎರಡು ಕ್ಷೇತ್ರ ಕೊಡುತ್ತಿದ್ದರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ನಡೆಯುವ ರೀತಿ ನೋಡಿದರೆ ನಮ್ಮಿಂದ ಸೇವೆ ಪಡೆದವರು ಈಗ ಕೈ ಕೊಟ್ಟಿದ್ದಾರೆ ಎನ್ನುವ ಮೂಲಕ ಸಂಪನ್ಮೂಲದ ಕೊರತೆಯ ಸುಳಿವು ನೀಡಿದರು. ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ಕೂಡ ಶಕ್ತಿ ಜಾಸ್ತಿಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ೨ ಲಕ್ಷ ಜೆಡಿಎಸ್ ಮತಗಳಿವೆ. ಅದೇ ರೀತಿ ಶಿವಮೊಗ್ಗದಲ್ಲಿ ಪಕ್ಷದ ಶಕ್ತಿ ಇದೆ.
ಅದನ್ನು ಹಾಸನ ಜಿಲ್ಲೆಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡೂ ಪಕ್ಷದವರು ಜೆಡಿಎಸ್ ಸೋಲಿಸಲು ಮುಂದಾಗಿದ್ದರಿಂದ ಪಕ್ಷ ಕಡಿಮೆ ಮತ ಪಡೆದಿದೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಅಲ್ಲ, ಕುಮಾರಸ್ವಾಮಿಯೇ ಈ ಕ್ಷೇತ್ರದ ಅಭ್ಯರ್ಥಿ ಎಂದುಕೊಂಡು ಗೆಲ್ಲಿಸಿ ಎಂದು ಗದ್ಗದಿತರಾಗಿ ಕುಮಾರಸ್ವಾಮಿ ಮನವಿ ಮಾಡಿದರು.
ಕೋಲಾರ ಜೆಡಿಎಸ್ ನಾಯಕರ ಜತೆ ಮಾತುಕತೆ: ಲೋಕಸಭಾ ಚುನಾವಣೆಗೆ ಸಿದ್ಧತೆ ಕೈಗೊಂಡಿರುವ ಜೆಡಿಎಸ್ ಕ್ಷೇತ್ರವಾರು ಸರಣಿ ಸಭೆಗಳನ್ನು ನಡೆಸುವ ಕಾರ್ಯ ಮುಂದುವರಿಸಿದ್ದು, ಕೋಲಾರ ಜಿಲ್ಲೆಯ ಮುಖಂಡರ ಜತೆ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಭೆ ನಡೆಸಿದರು. ಜೆ.ಪಿ.ನಗರದಲ್ಲಿನ ತಮ್ಮ ನಿವಾಸದಲ್ಲಿ ಕೋಲಾರ ಜಿಲ್ಲೆಯ ಮುಖಂಡರ ಜತೆ ಸಮಾಲೋಚನೆ ನಡೆಸಿ, ಲೋಕಸಭೆ ಚುನಾವಣೆಯಲ್ಲಿ ಕಾರ್ಯತಂತ್ರ ರೂಪಿಸುವ ಕುರಿತು ಸಮಾಲೋಚನೆ ನಡೆಸಿದರು. ಜಿಲ್ಲೆಯ ರಾಜಕೀಯ ಪರಿಸ್ಥಿತಿ ಅವಲೋಕನ ಮಾಡಿದರು.
ಸಿಎಂ ಹುದ್ದೆಯಿಂದ ಸಿದ್ದರಾಮಯ್ಯ ಬದಲಾವಣೆ ಪ್ರಶ್ನೆಯೇ ಇಲ್ಲ: ದಿನೇಶ್ ಗುಂಡೂರಾವ್ ಸಂದರ್ಶನ!
ಈ ವೇಳೆ ಹಲವು ಮಾಹಿತಿಗಳನ್ನು ಸಂಗ್ರಹಿಸಿ, ನಾಯಕರಿಗೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು. ಜಿಲ್ಲೆಯ ಬಿಜೆಪಿ ಮುಖಂಡರು, ರಾಜ್ಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿ ಆಯ್ಕೆ ಮತ್ತು ಘೋಷಣೆ ಮಾಡಲಾಗುತ್ತದೆ. ಅಭ್ಯರ್ಥಿ ಯಾರೇ ಆದರೂ ಅವರು ಮೈತ್ರಿಕೂಟದ ಅಭ್ಯರ್ಥಿಯಾಗಲಿದ್ದಾರೆ. ಅವರ ಗೆಲುವಿಗೆ ಎಲ್ಲರೂ ಶ್ರಮಿಸಬೇಕು. ಘೋಷಣೆಯಾಗುವ ಅಭ್ಯರ್ಥಿ ಪರವಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಯಾವುದೇ ಗೊಂದಲಕ್ಕೆ ಅವಕಾಶ ಕೊಡಬಾರದು ಎಂದು ಹೇಳಿದರು. ಸಭೆಯಲ್ಲಿ ಶಾಸಕರಾದ ಜಿ.ಕೆ.ವೆಂಕಟ ಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್, ಮೇಲೂರು ರವಿ, ಜೆಡಿಎಸ್ ಯುವಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕ ಕೆ.ಎಂ.ಕೃಷ್ಣಾರೆಡ್ಡಿ ಇತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.