ಸಿಎಎ ವಿರೋಧಿಸುವ ಕಾಂಗ್ರೆಸ್‌ಗೆ ರಾಷ್ಟ್ರೀಯತೆಯ ಅರಿವಿಲ್ಲ: ಈಶ್ವರಪ್ಪ

By Kannadaprabha NewsFirst Published Mar 14, 2024, 8:45 AM IST
Highlights

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಅತ್ಯಂತ ಸ್ವಾಗತಾರ್ಹವಾಗಿದ್ದು, ಇದನ್ನು ಟೀಕಿಸುವ ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯನವರಿಗೆ ರಾಷ್ಟ್ರೀಯತೆಯ ಅರ್ಥವೇ ಗೊತ್ತಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಟೀಕಿಸಿದರು. 

ಶಿವಮೊಗ್ಗ (ಮಾ.14): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಅತ್ಯಂತ ಸ್ವಾಗತಾರ್ಹವಾಗಿದ್ದು, ಇದನ್ನು ಟೀಕಿಸುವ ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯನವರಿಗೆ ರಾಷ್ಟ್ರೀಯತೆಯ ಅರ್ಥವೇ ಗೊತ್ತಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಟೀಕಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾಯ್ದೆಯಿಂದ ಸಂಕಷ್ಟ ಎದುರಿಸುತ್ತಿರುವ ಹಿಂದೂ, ಪಾರ್ಸಿ, ಬೌದ್ಧ, ಸಿಖ್, ಜೈನ ಸಮುದಾಯಕ್ಕೆ ನೆಮ್ಮದಿ ಸಿಕ್ಕಿದೆ. ಅತಂತ್ರ ಸ್ಥಿತಿಯಲ್ಲಿ ಇದ್ದ ಅವರಿಗೆ ನೆಮ್ಮದಿ ದೊರೆತಿದ್ದು, ಅವರು ಸಂಭ್ರಮಾಚರಣೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಸ್ವಾತಂತ್ರ ಬಂದ ವೇಳೆಯಲ್ಲಿ ಪಾಕಿಸ್ತಾನದಲ್ಲಿ ಇದ್ದ ಶೇ.20.5 ರಷ್ಟು ಹಿಂದೂಗಳ ಸಂಖ್ಯೆ ಈಗ ಶೇ.1.9ಕ್ಕೆ ಇಳಿದಿದೆ. ಬಾಂಗ್ಲಾದಲ್ಲಿ ಶೇ.25ರಷ್ಟು ಇದ್ದ ಹಿಂದೂಗಳ ಸಂಖ್ಯೆ ಈಗ ಶೇ.7.5 ಕ್ಕೆ ಇಳಿದಿದೆ. ಇದಕ್ಕೆ ಬಲವಂತದ ಮತಾಂತರ ಅಥವಾ ಕಗ್ಗೊಲೆ ಕಾರಣವಾಗಿದೆ. ಆದರೆ ಈ ಪರಿಸ್ಥಿತಿ ಕಾಂಗ್ರೆಸ್‌ಗೆ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ ಇಂದು ಕೇವಲ ಮತ ಗಳಿಕೆಗಾಗಿ ಈ ಮಟ್ಟದ ಮುಸ್ಲಿಂ ತುಷ್ಟೀಕರಣಕ್ಕೆ ಇಳಿದಿರುವುದು ದುರಂತದ ಸಂಗತಿ ಎಂದು ಹೇಳಿದರು.

ಜೊತೆಗೆ ಈ ಕಾಯ್ದೆಯಿಂದ ಅಕ್ರಮ ನುಸುಳುಕೋರರನ್ನು ಕೂಡ ತಡೆಯಬಹುದು. ಆದರೆ ಇದಾವುದನ್ನೂ ಅರ್ಥ ಮಾಡಿಕೊಳ್ಳದೆ ಕೇವಲ ಮತ ಗಳಿಕೆಗಾಗಿ ದೇಶ ವಿರೋಧಿಗಳನ್ನು ಬೆಂಬಲಿಸುವ ಮನಃಸ್ಥಿತಿಗೆ ಬಂದಿರುವ ಕಾಂಗ್ರೆಸ್ ಇದನ್ನು ವಿರೋಧಿಸುತ್ತಿದೆ. ಹಲವಾರು ದೇಶ ಭಕ್ತ ಮುಸ್ಲಿಂರು, ಮುಸ್ಲಿಂ ಜಮಾತೆ ಅಧ್ಯಕ್ಷರು ಕೂಡ ಈ ಕಾಯ್ದೆಯನ್ನು ಸ್ವಾಗತಿಸಿದ್ದಾರೆ. ಕಾಂಗ್ರೆಸ್ ಆಟವನ್ನು ಜನ ಗಮನಿಸುತ್ತಿದ್ದಾರೆ. ಚುನಾವಣೆಯಲ್ಲಿ ಉತ್ತರ ನೀಡುತ್ತಾರೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಡಾ.ಮಂಜುನಾಥ್ ಹರಕೆಯ ಕುರಿಯಾಗುತ್ತಿದ್ದಾರೆ: ಬಾಲಕೃಷ್ಣ

ಚುನಾವಣೆ ಹೊತ್ತಿನಲ್ಲಿ ಈ ಕಾಯ್ದೆ ಜಾರಿ ತರಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇದು ಈಗ ಅನುಮೋದನೆ ಸಿಕ್ಕಿರುವ ಕಾಯ್ದೆಯಲ್ಲ. ದೇಶದ ಉಳಿವಿಗೆ ಅನಿವಾರ್ಯವಾದ ಕಾಯ್ದೆ. ಆದರೆ ರಾಜ್ಯ ಸರ್ಕಾರ ಕೇವಲ ಚುನಾವಣೆಗಾಗಿ ಜನಗಣತಿಯನ್ನು ಈ ಹೊತ್ತಿನಲ್ಲಿ ಸ್ವೀಕರಿಸಿದೆ ಎಂದು ತಿರುಗೇಟು ನೀಡಿದ ಅವರು, ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವೆ ಎಂದು ಹೇಳಿದ್ದ ಮಾಜಿ ಪ್ರಧಾನಿ ದೇವೇಗೌಡರು ಈಗ ಬಿಜೆಪಿ ಸಹವಾಸ ಮಾಡುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಟೀಕೆಗೆ ಈಶ್ವರಪ್ಪ ಉತ್ತರಿಸಿದರು. ಗೋಷ್ಠಿಯಲ್ಲಿ ಮಾಧ್ಯಮ ಪ್ರಮುಖ್ ಕೆ.ವಿ.ಅಣ್ಣಪ್ಪ, ಶಾಸಕ ಚನ್ನಬಸಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ. ಡಿ. ಮೇಘರಾಜ್ ಮತ್ತಿತರರು ಇದ್ದರು.

click me!