ಕಾರಜೋಳ ಹೇಳಿಕೆ ಶುದ್ಧ ಸುಳ್ಳು: ನಮ್ಮ ಅವಧಿಯಲ್ಲೇ ಕೇಂದ್ರಕ್ಕೆ ಡಿಪಿಆರ್‌ ಸಲ್ಲಿಕೆ: ಸಿದ್ದು, ಡಿಕೆಶಿ

By Kannadaprabha News  |  First Published Jan 7, 2022, 5:35 AM IST

ನಮ್ಮ ಅವಧಿಯಲ್ಲೇ ತಾಂತ್ರಿಕ ವರದಿ, ಡಿಪಿಆರ್‌ ಸಿದ್ಧಪಡಿಸಿ ಕೇಂದ್ರ ಜಲ ಆಯೋಗಕ್ಕೆ 9 ಸಾವಿರ ಕೋಟಿ ರು. ವೆಚ್ಚದ ಡಿಪಿಆರ್‌ ವರದಿಯನ್ನೂ ಸಲ್ಲಿಸಿದ್ದೇವೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ  ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌  ಜಂಟಿ ಸುದ್ದಿಗೋಷ್ಠಿ ನಡೆಸುವ ಮೂಲಕ ತಿರುಗೇಟು ನೀಡಿದ್ದಾರೆ


ಬೆಂಗಳೂರು (ಜ. 7): ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಮೇಕೆದಾಟು ಯೋಜನೆ (Mekedatu) ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿರುವ ಸಚಿವ ಗೋವಿಂದ ಕಾರಜೋಳ (Govid Karjol) ಹೇಳಿಕೆ ಶುದ್ಧ ಸುಳ್ಳು. ನಮ್ಮ ಅವಧಿಯಲ್ಲೇ ತಾಂತ್ರಿಕ ವರದಿ, ಡಿಪಿಆರ್‌ ಸಿದ್ಧಪಡಿಸಿ ಕೇಂದ್ರ ಜಲ ಆಯೋಗಕ್ಕೆ 9 ಸಾವಿರ ಕೋಟಿ ರು. ವೆಚ್ಚದ ಡಿಪಿಆರ್‌ ವರದಿಯನ್ನೂ ಸಲ್ಲಿಸಿದ್ದೇವೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಜಂಟಿ ಸುದ್ದಿಗೋಷ್ಠಿ ನಡೆಸುವ ಮೂಲಕ ತಿರುಗೇಟು ನೀಡಿದ್ದಾರೆ.

ನಮ್ಮ ಅವಧಿಯಲ್ಲೇ ಕಳುಹಿಸಿರುವ ಡಿಪಿಆರ್‌ (DPR) ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದರೆ ಸಾಕು. ಈ ಕುರಿತು ರಾಜ್ಯ ಸರ್ಕಾರ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗುವುದಾದರೆ ನರೇಂದ್ರ ಮೋದಿ ಎದುರು ಯೋಜನೆಗೆ ಅನುಮತಿ ನೀಡುವಂತೆ ಒತ್ತಾಯಿಸಲು ನಾವು ಸಿದ್ಧರಿದ್ದೇವೆ. ಮುಖ್ಯಮಂತ್ರಿಗಳು ರಾಜ್ಯಕ್ಕಾಗಿ ಈ ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು.

Tap to resize

Latest Videos

undefined

ಇದನ್ನೂ ಓದಿ: Karnataka Politics: ಸಚಿವ ಕಾರಜೋಳ ‘ಬಾಂಬ್‌’: ಕಾಂಗ್ರೆಸ್‌ ವಿರುದ್ಧ ಶೀಘ್ರ ಸ್ಪೋಟಕ ಸುದ್ದಿ..!

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, 2013ರಿಂದ 2019ರ ಜನವರಿವರೆಗೆ ಕಾಂಗ್ರೆಸ್‌ ಸರ್ಕಾರ ಮೇಕೆದಾಟು ಯೋಜನೆ ಕುರಿತು ಏನೆಲ್ಲಾ ಕ್ರಮ ಕೈಗೊಂಡಿದೆ ಎಂದು ದಾಖಲೆ ಸಲ್ಲಿಸುತ್ತೇವೆ. 2019ರಲ್ಲೇ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್‌ ಅವರು 9 ಸಾವಿರ ಕೋಟಿ ರು. ವೆಚ್ಚದ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌) ಕೇಂದ್ರಕ್ಕೆ ಸಲ್ಲಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಇರುವ ಡಬಲ್‌ ಎಂಜಿನ್‌ ಸರ್ಕಾರ ಯೋಜನೆಗೆ ಅನುಮೋದನೆ ಏಕೆ ಕೊಡಿಸಿಲ್ಲ ಎಂದು ಪ್ರಶ್ನಿಸಿದರು.

2015ರ ಏ.4 ರಂದು  ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ!

ಮೇಕೆದಾಟು ಯೋಜನೆ ಕುರಿತು ತಮ್ಮ ಸರ್ಕಾರ ಕೈಗೊಂಡ ಕ್ರಮಗಳ ವಿವರ ನೀಡಿದ ಸಿದ್ದರಾಮಯ್ಯ ಅವರು, 2013ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ನಮ್ಮ ಸರ್ಕಾರದ ಜಲಸಂಪನ್ಮೂಲ ಇಲಾಖೆ ಸೆಪ್ಟೆಂಬರ್‌ನಲ್ಲಿ ಕನ್ಸಲ್ಟನ್ಸಿ ನೇಮಕಕ್ಕೆ 4ಜಿ ವಿನಾಯಿತಿ ಕೇಳಿತ್ತು. ಸರ್ಕಾರ ಟೆಂಡರ್‌ ಕರೆಯಲು ಸೂಚಿಸಿತ್ತು. ಬಳಿಕ ಟೆಂಡರ್‌ ಕರೆದಾಗ  ಟೆಂಡರ್‌ನಲ್ಲಿ ಭಾಗವಹಿಸಿದ್ದ ಕಂಪನಿ ದರ ಕಡಿಮೆ ಮಾಡಲು ನಿರಾಕರಿಸಿತ್ತು. ಹೀಗಾಗಿ ಮತ್ತೆ ಕೆಟಿಟಿಪಿ ಕಾಯ್ದೆಯಡಿ 4ಜಿ ವಿನಾಯಿತಿ ಪಡೆದು ಡಿಪಿಆರ್‌ ಸಿದ್ಧಪಡಿಸಿದ್ದೆವು. 2015ರ ಏ.4 ರಂದು ಖುದ್ದು ನಾನೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಯೋಜನೆಗೆ ಮನವಿ ಸಲ್ಲಿಸಿದ್ದೆ. ಹೀಗೆ ಎಲ್ಲಾ ಹಂತದಲ್ಲೂ ಪ್ರಯತ್ನ ಮಾಡಿ 2019ರಲ್ಲಿ 9 ಸಾವಿರ ಕೋಟಿ ರು. ಮೊತ್ತದ ಡಿಪಿಆರ್‌ನ್ನೂ ಕೇಂದ್ರಕ್ಕೆ ಸಲ್ಲಿಸಿದ್ದೇವೆ. ಹೀಗಿದ್ದರೂ ಬಿಜೆಪಿಯವರು ಏಕೆ ಅನುಮತಿ ಪಡೆಯಲು ಆಗಿಲ್ಲ ಎಂದು ಕಿಡಿಕಾರಿದರು.

ಅನೇಕ ಬಾರಿ ಮನವಿ ಮಾಡಿದ್ದೇನೆ- ಡಿಕೇಶಿ

ಡಿ.ಕೆ. ಶಿವಕುಮಾರ್‌ ಮಾತನಾಡಿ, 2019ರ ಜನವರಿ ತಿಂಗಳಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಲ ಸಂಪನ್ಮೂಲ ಸಚಿವನಾಗಿದ್ದ ನಾನೇ ಪರಿಷ್ಕೃತ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಕೇಂದ್ರದ ಜಲ ಆಯೋಗದ ಅನುಮತಿಗೆ ಕಳುಹಿಸಿಕೊಟ್ಟಿದ್ದೆ. ಆ ನಂತರ ಅನೇಕ ಬಾರಿ ಕೇಂದ್ರದ ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆ. ಇಷ್ಟೆಲ್ಲಾ ಮಾಡಿದ್ದರೂ ಕಾಂಗ್ರೆಸ್‌ ಪಕ್ಷ ಯೋಜನೆ ಬಗ್ಗೆ ಗಮನ ನೀಡಿಲ್ಲ ಎಂದರೆ ಏನು ಹೇಳಬೇಕು? ಎಂದು ಪ್ರಶ್ನಿಸಿದರು.

ಯೋಜನೆಗೆ ಯಾವುದೇ ಅಡ್ಡಿ ಇಲ್ಲ:

ನಮ್ಮ ಅವಧಿಯಲ್ಲಿ ಕಾವೇರಿ ನೀರು ಹಂಚಿಕೆ ವಿವಾದ ನ್ಯಾಯಾಲಯದಲ್ಲಿತ್ತು. ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ವಿವಾದವೂ ಬಗೆಹರಿದು 177.25 ಟಿಎಂಸಿ ನೀರು ತಮಿಳುನಾಡಿಗೆ ಹರಿಸಿದರೆ ಸಾಕು ಎಂದು ಸ್ಪಷ್ಟಪಡಿಸಿದೆ. ಹಸಿರು ನ್ಯಾಯಾಧಿಕರಣ ಕೂಡ ಯಾವುದೇ ವಿರೋಧ ಮಾಡಿಲ್ಲ. ಅರಣ್ಯದಲ್ಲಿ ಕಾಮಗಾರಿ ನಡೆಸಬೇಕಿರುವುದರಿಂದ ಪರಿಸರ ಇಲಾಖೆ ಅನುಮತಿ ಪಡೆದರೂ ಯೋಜನೆ ಮಾಡಬಹುದು. ಹೀಗಿದ್ದರೂ ಕೇಂದ್ರ ಸರ್ಕಾರ ಏಕೆ ಅನುಮತಿ ಕೊಡುತ್ತಿಲ್ಲ ಎಂದರು.

ಕಾಂಗ್ರೆಸ್‌ನ ಕ್ರಮಗಳ ಪಟ್ಟಿ

ಇದೇ ವೇಳೆ ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್‌ ಮಾಡಿದ ಕೆಲಸಗಳ ಪಟ್ಟಿಯನ್ನು ಸಿದ್ದರಾಮಯ್ಯ ಅವರು ವೇಳಾಪಟ್ಟಿಯೊಂದಿಗೆ ಬಿಡುಗಡೆ ಮಾಡಿದ್ದು, 2013ರ ಸೆ.10 ರಂದು ಮೇಕೆದಾಟು ಹಾಗೂ ಶಿವನಸಮುದ್ರ ಯೋಜನೆಗಳಿಗೆ ಕೆಟಿಟಿಪಿ ಅಡಿ ವಿನಾಯಿತಿ ಪಡೆಯಲು ಸಚಿವರ ಸಭೆ ನಡೆಸಲಾಗಿತ್ತು. 2013ರ ನ.5 ರಂದು ಕೆಟಿಟಿಪಿ ಅಡಿ ವಿನಾಯಿತಿ ಪಡೆಯಲು ಕನ್ಸಲ್ಟೆನ್ಸಿ ನೇಮಕಕ್ಕೆ ಸರ್ಕಾರದ ಅನುಮತಿ ಪಡೆಯಲಾಯಿತು, ಆದರೆ ಸರ್ಕಾರ ಟೆಂಡರ್‌ ನಡೆಸುವಂತೆ ಸೂಚಿಸಿತ್ತು. 2014ರಲ್ಲಿ ಗ್ಲೋಬಲ್‌ ಟೆಂಡರ್‌ ಕರೆಯಲಾಗಿತ್ತು. 2015ರ ಏ.4 ರಂದು ಮೇಕೆದಾಟು ಯೋಜನೆ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆ.

ಇದನ್ನೂ ಓದಿ: DK Shivakumar ವಿಶೇಷ ಸಂದರ್ಶನ: ದಿಲ್ಲಿ ರೈತ ಹೋರಾಟ ರೀತಿ ಮೇಕೆದಾಟು ಪಾದಯಾತ್ರೆ!

2016ರ ಫೆ.4 ರಂದು 5,912 ಕೋಟಿ ರು. ಮೊತ್ತದ ಯೋಜನೆಗೆ ಡಿಪಿಆರ್‌ ಮಾಡಲಾಗಿತ್ತು. 2017ರಲ್ಲಿ ಡಿಪಿಆರ್‌ಗೆ ರಾಜ್ಯ ಸರ್ಕಾರದ ಪ್ರಾಥಮಿಕ ಒಪ್ಪಿಗೆ ದೊರೆತಿತ್ತು. ಬಳಿಕ 2017ರಲ್ಲೇ ಕೇಂದ್ರ ಜಲ ಆಯೋಗಕ್ಕೆ ಡಿಪಿಆರ್‌ ಸಲ್ಲಿಸಲಾಗಿತ್ತು. ಕೇಂದ್ರ ಜಲ ಆಯೋಗವು ಕೆಲವು ಸ್ಪಷ್ಟನೆ ಕೇಳಿದ್ದರಿಂದ 2018ರ ಜ.18 ರಂದು ನಾವೇ ಪರಿಷ್ಕೃತ ಡಿಪಿಆರ್‌ ಸಲ್ಲಿಕೆ ಮಾಡಿದ್ದೆವು.

2018ರ ಫೆ.16ರಂದು ಸುಪ್ರೀಂಕೋರ್ಟ್‌ ಅಂತಿಮ ತೀರ್ಪು ನೀಡಿ ಕಾವೇರಿ ವಿವಾದ ಬಗೆಹರಿಸಿತ್ತು. 2019ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್‌ ಅವರು 9 ಸಾವಿರ ಕೋಟಿ ರು. ಮೊತ್ತದ ಡಿಪಿಆರ್‌ನ್ನು ಕೇಂದ್ರಕ್ಕೆ ಸಲ್ಲಿಸಿದ್ದರು. ಅಲ್ಲಿಂದ ಈವರೆಗೆ ಯಾವುದೇ ಪ್ರಗತಿಯಾಗಿಲ್ಲ ಎಂದು ಹೇಳಿದ್ದಾರೆ.

click me!