Mekedatu Politics: ಸಿದ್ದು ಸರ್ಕಾರ ಮೇಕೆದಾಟು ಮರೆತಿತ್ತು: ಕಾರಜೋಳ

By Kannadaprabha News  |  First Published Jan 7, 2022, 5:05 AM IST

*2013-18ರ ಅವಧಿಯಲ್ಲಿ ಯೋಜನೆ ಜಾರಿಗೆ ಏನನ್ನೂ ಮಾಡಿರಲಿಲ್ಲ
*ಯೋಜನಾ ವರದಿಯನ್ನು ಕೇಂದ್ರಕ್ಕೆ ಕಳಿಸಿದ್ದು ಕುಮಾರಸ್ವಾಮಿ ಸರ್ಕಾರ
*ಸ್ಫೋಟಕ ಮಾಹಿತಿ ನೀಡುವೆ ಎಂದು ವಿಳಂಬ ನೀತಿ ಪ್ರಕಟಿಸಿದ ಸಚಿವ


ಬೆಂಗಳೂರು (ಜ. 7): ಮೇಕೆದಾಟು ಯೋಜನೆ (Mekedatu Poject) ಅನುಷ್ಠಾನಗೊಳಿಸುವಲ್ಲಿ ಕಾಂಗ್ರೆಸ್‌ (Congress) ಸರ್ಕಾರ ವಿಳಂಬ ಧೋರಣೆ ಅನುಸರಿಸಿದ್ದು, 2013-18ರ ಅವಧಿಯಲ್ಲಿ ಏನನ್ನೂ ಮಾಡಲಿಲ್ಲ. ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್‌) ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರ ಬರಬೇಕಾಯಿತಾ ಎಂದು ಕಾಂಗ್ರೆಸ್‌ ವಿರುದ್ಧ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ (Govind Karjol) ಟೀಕಾ ಪ್ರಹಾರ ನಡೆಸಿದ್ದಾರೆ.

ಕಾಂಗ್ರೆಸ್‌ ಹೊಣೆಗೇಡಿತನ ಕುರಿತು ಸ್ಫೋಟಕ ಮಾಹಿತಿ ಬಹಿರಂಗಪಡಿಸುವುದಾಗಿ ಹೇಳಿಕೆ ನೀಡಿದ್ದ ಸಚಿವರು ಗುರುವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮೇಕೆದಾಟು ಯೋಜನೆ ಅನುಷ್ಠಾನದಲ್ಲಿ ಕಾಂಗ್ರೆಸ್‌ನ ವಿಳಂಬ ನೀತಿಯ ಕೆಲ ದಾಖಲೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

Tap to resize

Latest Videos

undefined

2013ರ ನ.5ರಂದು ಸರ್ಕಾರಕ್ಕೆ ಪತ್ರ

4ಜಿ ವಿನಾಯಿತಿ ನೀಡಬೇಕು ಎಂದು ಕಾವೇರಿ ನೀರಾವರಿ ನಿಗಮದಿಂದ 2013ರ ನ.5ರಂದು ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. 2014ರ ಏ.7ರಂದು ಸರ್ಕಾರ ಆ ಪ್ರಸ್ತಾವನೆಯನ್ನು ತಿರಸ್ಕರಿಸಿ ಟೆಂಡರ್‌ ಕರೆಯಬೇಕು ಎಂದು ತಿಳಿಸಿತ್ತು. 2018ರ ಡಿಸೆಂಬರ್‌ನಲ್ಲಿ 4ಜಿ ವಿನಾಯಿತಿ ನೀಡುವಂತೆ ಮತ್ತೊಮ್ಮೆ ಕೇಳಲಾಗುತ್ತದೆ. 2019ರ ಜನವರಿಯಲ್ಲಿ 4ಜಿ ವಿನಾಯಿತಿಗೆ ಅನುಮತಿ ನೀಡಲಾಗುತ್ತದೆ. ಇದು ಸಮ್ಮಿಶ್ರ ಸರ್ಕಾರದಲ್ಲಿ ಆಗಿದ್ದು. ಆಗ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಜಲಸಂಪನ್ಮೂಲ ಸಚಿವರಾಗಿದ್ದರು ಎಂದು ವಿವರಿಸಿದರು.

ಇದನ್ನೂ ಓದಿ: Karnataka Politics: ಸಚಿವ ಕಾರಜೋಳ ‘ಬಾಂಬ್‌’: ಕಾಂಗ್ರೆಸ್‌ ವಿರುದ್ಧ ಶೀಘ್ರ ಸ್ಪೋಟಕ ಸುದ್ದಿ..!

2013-18ರ ಅವಧಿಯವರೆಗೆ ಕಾಂಗ್ರೆಸ್‌ ಸರ್ಕಾರ ಇದ್ದು, ಆಗ ಯಾವುದೇ ಕೆಲಸ ಮಾಡಲಿಲ್ಲ. ಅವರೇ ವಿಳಂಬದ ಹೊಣೆಯನ್ನು ಹೊರಬೇಕು. 4ಜಿ ವಿನಾಯಿತಿ ನೀಡಲು ಐದು ವರ್ಷ ಸಮಯಾವಕಾಶದ ಅಗತ್ಯವಿದೆಯೇ? ದಾಖಲೆಗಳು ಇಲ್ಲಿಯೇ ಇದ್ದು, ಟೆಂಡರ್‌ ಕರೆಯಲು ಐದು ವರ್ಷ ಬೇಕಾ ಎಂದು ತರಾಟೆಗೆ ತೆಗೆದುಕೊಂಡರು.

ಡಿಪಿಆರ್‌ ಸಿದ್ಧಪಡಿಸಲು ಐದು ವರ್ಷ ತೆಗೆದುಕೊಳ್ಳಲಾಗಿದೆ. ಇದನ್ನು ರೆಡಿ ಮಾಡಲು ಐದು ವರ್ಷ ಸಮಯ ತೆಗೆದುಕೊಂಡಿದ್ದು ಯಾಕೆ? ಕೊನೆಗೂ ಡಿಪಿಆರ್‌ ಸಿದ್ಧಪಡಿಸಲು ಕುಮಾರಸ್ವಾಮಿ ಬರಬೇಕಾಯಿತಲ್ಲ. ಅವರು ಅದನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಕೆ ಮಾಡುತ್ತಾರೆ. ಈಗ ವಿವಿಧ ಹಂತದಲ್ಲಿ ಪರಿಶೀಲನೆಯಾಗುತ್ತಿದೆ. ಕಾಂಗ್ರೆಸ್‌ನವರು ಈಗ ರಾಜಕೀಯ ಗಿಮಿಕ್‌ ಮಾಡುವುದು ಬಿಟ್ಟು ವಿಳಂಬ ಮಾಡಲು ಕಾರಣವೇನು ಎಂಬುದಕ್ಕೆ ಉತ್ತರ ನೀಡಲಿ. ಯಾವುದೇ ಕ್ರಮ ಕೈಗೊಳ್ಳದೆ ಈಗ ಕಾವೇರಿಗಾಗಿ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಮೈಯಲ್ಲಿ ದೆವ್ವ ಬಂದಂತೆ ಕಾಂಗ್ರೆಸ್ಸಿಗರ ವರ್ತನೆ

ನ್ನ ಬುಟ್ಟಿಯೊಳಗೆ ಹಾವು ಇದೆ ಎಂದಷ್ಟೇ ಹೇಳಿದ್ದೇನೆ. ಯಾವ ಹಾವಿದೆ ಎನ್ನುವುದನ್ನು ನಾನು ತೋರಿಸಿಲ್ಲ. ತೋರಿಸುವುದಕ್ಕಿಂತ ಮೊದಲೇ ಕಾಂಗ್ರೆಸ್ಸಿಗರು ಅಂಜಿ ಓಡಾಡುತ್ತಿದ್ದಾರೆ. ಮೈಯಲ್ಲಿ ದೆವ್ವ ಬಂದಂತೆ ಕುಣಿಯುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.   ಮೇಕೆದಾಟು (Mekedatu)  ಯೋಜನೆ ವಿಳಂಬಕ್ಕೆ ಹೊಣೆಗಾರರು ಯಾರು ಎಂಬ ಬಗ್ಗೆ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದಕ್ಕೆ, ಕಾವೇರಿಯಿಂದ ಭೀಮಾ ನದಿವರೆಗೂ ಕಾಂಗ್ರೆಸ್‌ನವರು ಮೈಮೇಲೆ ದೆವ್ವ ಬಂದಂಗೆ ಕುಣಿ ದಾಡುತ್ತಿದ್ದಾರೆ ಎಂದರು. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈಗೆ ಬುದ್ದಿ ಹೇಳಬೇಕು ಎಂಬ ಸಿದ್ದರಾಮಯ್ಯ (Siddaramaiah)  ಹೇಳಿಕೆ ಸರಿಯಲ್ಲ. ಅಣ್ಣಾಮಲೈ ಅಧಿಕಾರದಿಂದ ಹೊರಗಿದ್ದಾರೆ. 

ಇದನ್ನೂ ಓದಿ: Belagavi Assembly Session: ‘ಕೃಷ್ಣಾ ಮೇಲ್ಡಂಡೆ ರಾಷ್ಟ್ರೀಯ ಯೋಜನೆ’ಗೆ ವ್ಯಾಜ್ಯ ತೊಡಕು: ಕಾರಜೋಳ

ಡಿಎಂಕೆ (DMK)  ನೆರಳಲ್ಲಿ ನೀವು ಆಡಳಿತ ಮಾಡುತ್ತಿದ್ದೀರಿ. ಯೋಜನೆ ಕುರಿತು ಮೊದಲು ಅವರಿಗೆ ತಿಳಿ ಹೇಳುವ ಕೆಲಸ ಮಾಡಿ ಎಂದು ತಿರುಗೇಟು ನೀಡಿದರು. ಕಾಂಗ್ರೆಸ್‌ ಪಾದಯಾತ್ರೆ ಕೇವಲ ರಾಜಕೀಯ ಗಿಮಿಕ್‌. ಜನರಿಗೆ ಮೋಸ ಮಾಡುವ ತಂತ್ರ ಎಂದರು. ಮೇಕೆದಾಟು (Mekedatu )  ಯೋಜನೆ ಕುರಿತು ಜ.3ರಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದ್ದು, ನೀರಾವರಿ ಯೋಜನೆಯಲ್ಲಿ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್‌ನವರ(Congress) ಹೊಣೆಗೇಡಿತನದ ಬಗ್ಗೆ ಜ.9ಕ್ಕೆ ಮುನ್ನ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind Karjol) ಹೇಳಿದ್ದಾರೆ.

click me!