*700 ಮಂದಿ ಪ್ರಾಣ ಬಿಟ್ಟರೂ ರೈತರು ಗುರಿ ಮುಟ್ಟಲಿಲ್ಲವೇ?
*ಅದೇ ರೀತಿ ಕಾಂಗ್ರೆಸ್ ಹೋರಾಟವೂ ನಿಲ್ಲದು: ಡಿಕೆಶಿ ಶಪಥ
*ಡಿಕೆಶಿ ವಿಶೇಷ ಸಂದರ್ಶನ By ಎಸ್.ಗಿರೀಶ್ ಬಾಬು
ಡಿಕೆಶಿ ವಿಶೇಷ ಸಂದರ್ಶನ, ಎಸ್.ಗಿರೀಶ್ ಬಾಬು
ಬೆಂಗಳೂರು: ಸಂಘರ್ಷ ರಾಜಕಾರಣ ಹಾಗೂ ಡಿ.ಕೆ.ಶಿವಕುಮಾರ್ (DK Shivakumar) ಸಮಾನಾರ್ಥಕ ಪದಗಳಂತೆ ಕರ್ನಾಟಕದ ರಾಜಕಾರಣದ ಪರಿಭಾಷೆಯಲ್ಲಿ ಬಳಕೆಯಾಗುತ್ತಿವೆ. ತಮ್ಮ ರಾಜಕೀಯ ಜೀವನದ ಆರಂಭದ ಕಾಲದಿಂದ ಹಿಡಿದು ತೀರಾ ಇತ್ತೀಚಿನ ರಾಮನಗರದಲ್ಲಿ ಸಚಿವ ಡಾ ಸಿ.ಎನ್.ಅಶ್ವತ್ಥನಾರಾಯಣ ಅವರೊಂದಿಗಿನ ಚಕಮಕಿವರೆಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಜೀವನದ ಪ್ರತಿ ಹಂತ ಸಂಘರ್ಷದಿಂದ ಕೂಡಿದೆ. ಯುವ ಸಚಿವರಾಗಿ ಎಸ್.ಬಂಗಾರಪ್ಪ ಸಂಪುಟ ಸೇರಿಕೊಂಡಾಗಿನಿಂದ ಹಿಡಿದು ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸಚಿವರಾಗುವ ಹಂತದವರೆಗೂ ಪ್ರತಿ ಹೆಜ್ಜೆಯಲ್ಲೂ ಸಂಘರ್ಷ ಹಾಸುಹೊಕ್ಕಾಗಿತ್ತು.
undefined
ಈ ಸಂಘರ್ಷ ರಾಜಕಾರಣದ ಮತ್ತೊಂದು ಘಟ್ಟವೇ ಮೇಕೆದಾಟು ಪಾದಯಾತ್ರೆ. ಕಾವೇರಿ ಜಲಾನಯನ ಪ್ರದೇಶದ ಸುಮಾರು 60ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹಾದು ಹೋಗುವ ಈ ನಡಿಗೆಯನ್ನು ತಡೆಯಲು ಸರ್ಕಾರ ಒಮಿಕ್ರೋನ್ ಅಸ್ತ್ರವನ್ನು ಪ್ರಬಲವಾಗಿ ಬಳಸುತ್ತಿದೆ. ಕರ್ಫ್ಯೂ ಜಾರಿಗೊಳಿಸಿ, ಯಾತ್ರೆ ನಡೆಸಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಆದರೆ, ಸರ್ಕಾರ ಬಂಧಿಸಿ ಜೈಲಿಗೆ ಹಾಕಿದರೂ ಹೋರಾಟ ನಿಲ್ಲಲ್ಲ ಎನ್ನುತ್ತಿದ್ದಾರೆ ಶಿವಕುಮಾರ್. ದೆಹಲಿ ರೈತ ಹೋರಾಟದ ಪ್ರೇರಣೆ ಪಡೆದವರಂತೆ ಮಾತನಾಡುವ ಶಿವಕುಮಾರ್, 700 ಮಂದಿ ಪ್ರಾಣ ಬಿಟ್ಟರೂ ಗುರಿ ಸಾಧಿಸುವವವರೆಗೂ ರೈತರು ಪ್ರತಿಭಟನೆ ಬಿಡಲಿಲ್ಲ. ಸರ್ಕಾರದ ಬೆದರಿಕೆಗಳಿಗೆ ಹೆದರಲಿಲ್ಲ. ನಾವೂ ಅಷ್ಟೇ ಎನ್ನುತ್ತಾರೆ.
ಇಷ್ಟಕ್ಕೂ ಮೇಕೆದಾಟು ಯೋಜನೆಗಾಗಿ ಈ ಹೋರಾಟ ಏಕೆ? ಪಾದಯಾತ್ರೆ ತಡೆಯುವ ಸರ್ಕಾರದ ತಂತ್ರಗಳಿಗೆ ತಮ್ಮ ಪ್ರತಿತಂತ್ರವೇನು? ಯಾತ್ರೆ ಯಶಸ್ಸಿಗೆ ಮಾಡಿಕೊಂಡಿರುವ ಸಿದ್ಧತೆಗಳೇನು? ಮೇಕೆದಾಟು ಯೋಜನೆ ನಂತರದ ಹೋರಾಟದ ಯೋಚನೆಗಳೇನು ಎಂಬ ಬಗ್ಗೆ ‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿವರಿಸಿರುವುದು ಹೀಗೆ...
ಕೋವಿಡ್ ಕಾಲದಲ್ಲಿ ಈ ಸಂಘರ್ಷಮಯ ನಡಿಗೆ ಬೇಕಿತ್ತಾ?
ನೋಡಿ, ನಮ್ಮದು ರಾಜಕೀಯ ಪಕ್ಷ. ಹೋರಾಟದಿಂದಲೇ ರಾಜಕೀಯ ಪಕ್ಷಗಳು ನಡೆಯುವುದು. ಹೀಗಾಗಿ ಜನರ ಹಿತ ಕಾಯುವ ಹೋರಾಟಗಳನ್ನು ನಡೆಸಲೇಬೇಕಾಗುತ್ತದೆ. ದೆಹಲಿಯಲ್ಲಿ ರೈತರ ಹೋರಾಟ ಹೇಗಿತ್ತು? 700 ಮಂದಿ ರೈತರು ಪ್ರಾಣ ಬಿಟ್ಟರು. ಹಾಗಂತ ರೈತರು ಹೆದರಿಕೊಂಡರಾ? ಹೋರಾಟ ಮುಂದುವರೆಸಲಿಲ್ಲವಾ? ರೈತರ ಹೋರಾಟವನ್ನು ಇದೇ ಮುಖ್ಯಮಂತ್ರಿ ಕಾಂಗ್ರೆಸ್ ಕೃಪಾಪೋಷಿತ ಹೋರಾಟ ಎಂದು ಬಿಂಬಿಸಿದರು. ಆದರೂ ರೈತರ ಹೋರಾಟ ನಡೆದು ಗಮ್ಯ ಮುಟ್ಟಲಿಲ್ಲವೇ? ಹಾಗೆಯೇ ನಮ್ಮ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಹೋರಾಟ ತಡೆಯುವ ಸರ್ಕಾರದ ಬೆದರಿಕೆಗೆ ಜಗ್ಗುವ ಮಾತೇ ಇಲ್ಲ.
ಚುನಾವಣೆಗೆ ಇನ್ನೂ ಟೈಂ ಇತ್ತು. ಈಗಲೇ ಮೇಕೆದಾಟು ಹೋರಾಟ ಏಕೆ ಬೇಕಿತ್ತು?
ಇದು ಕಾಂಗ್ರೆಸ್ ಪಕ್ಷದ ಬದ್ಧತೆಯ ವಿಷಯ. ಬೆಂಗಳೂರು ಹಾಗೂ ಕಾವೇರಿ ಜಲಾನಯನ ಪ್ರದೇಶದ ಜನರ ಜೀವನದ ವಿಚಾರವಿದು. ಈ ಮಹತ್ವದ ಯೋಜನೆ ಜಾರಿಗೊಳಿಸುವ ಭರವಸೆಯನ್ನು ಕಾಂಗ್ರೆಸ್ ಪಕ್ಷ 2013 ಹಾಗೂ 2018ರ ತನ್ನ ಪ್ರಣಾಳಿಕೆಯಲ್ಲಿ ನೀಡಿತ್ತು. ಅದರಂತೆ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಯೋಜನೆಯ ಡಿಪಿಆರ್ ರೂಪಿಸಿದ್ದೆವು. ಇದಕ್ಕೆ ಕೇಂದ್ರ ಸರ್ಕಾರ ಕೂಡ ತಾತ್ವಿಕ ಒಪ್ಪಿಗೆ ನೀಡಿತ್ತು. ಈಗ ಯೋಜನೆಗೆ ಪರಿಸರ ಇಲಾಖೆಯ ಒಪ್ಪಿಗೆ ಮಾತ್ರ ಪಡೆಯಬೇಕಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅರ್ಥಾತ್ ಡಬಲ್ ಎಂಜಿನ್ ಸರ್ಕಾರವಿದೆ. ಇವರು ಜಾರಿ ಮಾಡಬೇಕಿತ್ತು. ಆದರೆ, ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯೋಜನೆ ಜಾರಿಗೆ ಯಾವುದೇ ಆಸಕ್ತಿ ತೋರಲಿಲ್ಲ. ಹೀಗಾಗಿ ಸರ್ಕಾರವನ್ನು ಎಚ್ಚರಿಸಲು ಈ ಹೋರಾಟ.
ಇದನ್ನೂ ಓದಿ: Congress Padayatra: ಮೇಕೆದಾಟು ಬಳಿಕ ಕೃಷ್ಣೆ, ಮಹದಾಯಿಗಾಗಿಯೂ ಹೋರಾಟ: ಡಿಕೆಶಿ
ಯೋಜನೆ ತಡವಾಗಲು ಕಾನೂನು ಪ್ರಕ್ರಿಯೆ, ನೆರೆ ರಾಜ್ಯಗಳ ವಿರೋಧ ಇತ್ಯಾದಿ ವಿಚಾರಗಳು ಇರಬಹುದಲ್ಲ?
ರಾಜಕೀಯಕ್ಕಾಗಿ ನೆರೆಯ ರಾಜ್ಯಗಳು ವಿರೋಧ ಮಾಡುತ್ತವೆ. ಆದರೆ, ಇದು ಕುಡಿಯುವ ನೀರಿನ ಯೋಜನೆ. ಕುಡಿಯುವ ನೀರಿನ ಯೋಜನೆಗಳಿಗೆ ನೆರೆ ರಾಜ್ಯಗಳ ಎನ್‌ಒಸಿ ಬೇಕಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶವಿದೆ. ಯೋಜನೆ ಜಾರಿಗೊಳಿಸಿದರೆ ಎರಡು ರು.ಗೆ ವಿದ್ಯುತ್ ಉತ್ಪಾದಿಸಬಹುದು. ನಮ್ಮ ರಾಜ್ಯ, ನಮ್ಮ ದುಡ್ಡು, ಕೆಲ ಪರವಾನಗಿ ಪಡೆದು ಯೋಜನೆ ಜಾರಿಗೊಳಿಸುವ ಅಗತ್ಯ ಮಾತ್ರವಿದೆ. ಆದರೆ ರಾಜ್ಯ ಸರ್ಕಾರ ಯೋಜನೆ ಕೈಗೊಳ್ಳುತ್ತಿಲ್ಲ.
ಅಂದರೆ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ ಅಂತೀರಾ?
ಇಲ್ಲ. ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಎಲ್ಲಿ ಕ್ರಮ ಕೈಗೊಂಡಿದೆ ನೀವೇ ಹೇಳಿ? ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದಲೇ ಈ ಹೋರಾಟದ ಅನಿವಾರ್ಯತೆ ಉದ್ಭವಿಸಿದೆ.
ಆತುರದ ಕ್ರಮಗಳು ರಾಜ್ಯದ ಹಿತಕ್ಕೆ ಮಾರಕವಾಗಬಹುದಾ?
ಈ ಯೋಜನೆ ಜಾರಿಗೆ ಯಾವುದೇ ಅಡೆತಡೆ ಇಲ್ಲ ಎಂದು ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆದರೆ, ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ವಾಸ್ತವವಾಗಿ ರಾಜ್ಯದ ಜಲ ಯೋಜನೆಗಳಿಗೆ ಸಂಬಂಧಿಸಿದಂತೆ ಬದ್ಧತೆಯಿಂದ ಸರ್ಕಾರ ಕೆಲಸ ಮಾಡುತ್ತಿಲ್ಲ. ಮಹದಾಯಿ ವಿಚಾರವನ್ನೇ ನೋಡಿ. ಮಹದಾಯಿಗೆ ಸಂಬಂಧಿಸಿದಂತೆ ನಾಲ್ಕು ಟಿಎಂಸಿ ನೀರನ್ನು ರಾಜ್ಯ ಬಳಸಬಹುದು ಎಂದು ಟ್ರಿಬ್ಯುನಲ್ ಆದೇಶ ಬಂತು. ಆದರೆ, ಈ ಸರ್ಕಾರ ಆ ಬಗ್ಗೆ ಏಕೆ ಕಾರ್ಯತತ್ಪರವಾಗಿಲ್ಲ? ಗೋವಾ ಸರ್ಕಾರವನ್ನು ‘ಪ್ಲೀಸ್’ ಮಾಡಬೇಕು ಎಂಬ ಉದ್ದೇಶದಿಂದ ಸುಮ್ಮನಿದ್ದಾರೆ. ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಯಾರೂ ಬಾಯಿ ಬಿಡುತ್ತಿಲ್ಲ. ಇದಕ್ಕೆ ನೆರೆ ರಾಜ್ಯ ಗೋವಾವನ್ನು ಓಲೈಸುವ ದೃಷ್ಟಿಯೇ ಕಾರಣ.
ಮೇಕೆದಾಟು ಯೋಜನೆ ವಿಚಾರದಲ್ಲೂ ಇದೇ ನಡೆದಿದೆಯೇ?
ಈ ಸರ್ಕಾರಕ್ಕೆ ರಾಜಕೀಯ ಬದ್ಧತೆಯಿಲ್ಲ. ಸಾಮಾಜಿಕ ಕಾಳಜಿಯೂ ಇಲ್ಲ.
ಇದನ್ನೂ ಓದಿ: Free Hindu Temples: ಸರ್ಕಾರ ದೇವಾಲಯಗಳನ್ನು ಸಂಘ ಪರಿವಾರದ ಕಾರ‍್ಯಕರ್ತರಿಗೆ ಹಂಚಲು ಹೊರಟಿದೆ: ಡಿಕೆಶಿ!
ಹೋಗಲಿ, ಹೋರಾಟಕ್ಕೆ ನೀವು ಆಯ್ದುಕೊಂಡ ಸಮಯ ಸರಿ ಇದೆ ಅನಿಸುತ್ತಾ? ಒಮಿಕ್ರೋನ್ ಸುನಾಮಿ ಇರುವಾಗ?
ರಾಜ್ಯದಲ್ಲಿ ನಾವು ಕೋವಿಡ್ ನಿರ್ಮೂಲನೆ ಮಾಡಿದ್ದೇವೆ ಅಂತ ಆರೋಗ್ಯ ಸಚಿವರು ಹಾಗೂ ಗೃಹ ಸಚಿವರು ಹೇಳಿರಲಿಲ್ಲವೇ? ಕೋವಿಡ್ ನಿಯಂತ್ರಣದಲ್ಲಿ ದೇಶಕ್ಕೇ ನಂ.1 ಅಂದಿದ್ದರು. ನಾವು ಪಾದಯಾತ್ರೆ ಘೋಷಣೆ ಮಾಡಿದ ಕೂಡಲೇ ಕೋವಿಡ್ ಹೇಗೆ ಹೆಚ್ಚಾಗತೊಡಗಿತು? ನೋಡಿ, ವಿದೇಶಗಳಿಂದ ಬಂದವರನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗಳಿಗೆ ಸೇರಿಸುತ್ತಿದ್ದಾರೆ. ಇವರೇ ಕೋವಿಡ್ ಹೆಚ್ಚಾಗುತ್ತಿದೆ ಎಂದು ಅಂಕಿ-ಸಂಖ್ಯೆ ಕ್ರಿಯೆಟ್ ಮಾಡುತ್ತಿದ್ದಾರೆ. ಮೊದಲು ಕೋವಿಡ್ ಪರೀಕ್ಷೆ ಮಾಡುತ್ತಿರಲಿಲ್ಲ. ನಾವು ಪಾದಯಾತ್ರೆ ಆರಂಭಿಸೋಕೆ ಮುಂದಾದ ಕೂಡಲೇ ಪರೀಕ್ಷೆಗಳನ್ನು ವಿಪರೀತ ಹೆಚ್ಚಳ ಮಾಡಿ ಕೊರೋನಾ ಹೆಚ್ಚಾಯ್ತು ಅನ್ನುತ್ತಿದ್ದಾರೆ.
ಸರ್ಕಾರ ನೀಡುತ್ತಿರುವ ಅಂಕಿ-ಸಂಖ್ಯೆ ಸರಿಯಿಲ್ಲ ಅಂತೀರಾ?
ಹೌದು, ಇಟ್ಸ್ ಆಲ್ ಫ್ಯಾಬ್ರಿಕೇಟೆಡ್ (ಎಲ್ಲವೂ ಸೃಷ್ಟಿಮಾಡಿರೋದು)! ಬೆಳಗಾವಿ ವಿಧಾನಮಂಡಲ ಅಧಿವೇಶನ ನಡೆದಾಗ 10 ಸಾವಿರ ಜನರು ಪ್ರತಿಭಟನೆ, ಧರಣಿಗೆ ಬರುತ್ತಿದ್ದರಲ್ಲ, ಆಗ ಕೋವಿಡ್ ಏಕೆ ಹೆಚ್ಚಾಗಲಿಲ್ಲ? ಆಗ ಎಷ್ಟುಜನರನ್ನು ಪರೀಕ್ಷೆ ಮಾಡಿದ್ದರು? ಆಯ್ತಪ್ಪ. ನಿಜಕ್ಕೂ ಕೋವಿಡ್ ಹೆಚ್ಚಳವಾಗುತ್ತಿದೆ ಎಂದಾದರೆ ಕೋವಿಡ್ ಸೋಂಕಿತರ ಪಟ್ಟಿಯನ್ನು ಇವರು ಪ್ರಕಟಿಸಲಿ. ನಾವು ನಮ್ಮ ಕಾರ್ಯಕರ್ತರನ್ನು ಕಳುಹಿಸಿ ಸೋಂಕಿತರಿಗೆಲ್ಲ ಹಣ್ಣು-ಹಂಪಲು ಹಂಚುತ್ತೇವೆ. ಇದೆಲ್ಲ ಫ್ಯಾಬ್ರಿಕೇಟೆಡ್. ಆಸ್ಪತ್ರೆಗಳೊಂದಿಗೆ ಮಾಡಿಕೊಂಡಿರುವ ಅಡ್ಜಸ್ಟ್‌ಮೆಂಟ್‌ನಿಂದ ಕೋವಿಡ್ ಸಂಖ್ಯೆ ಹೆಚ್ಚಿಸಲಾಗುತ್ತಿದೆ.
ಕರ್ನಾಟಕದ್ದು ಫ್ಯಾಬ್ರಿಕೇಟೆಡ್ ಅಂತಿಟ್ಟುಕೊಂಡರೂ ಮಹಾರಾಷ್ಟ್ರ, ದೆಹಲಿಯಲ್ಲೂ ಹೆಚ್ಚಾಗುತ್ತಿದೆಯಲ್ಲ?
ನೋಡಿ, ಬಿಜೆಪಿ ಸರ್ಕಾರ ನೀಡುತ್ತಿರುವ ಅಂಕಿ-ಅಂಶದಲ್ಲಿ ವಾಸ್ತವತೆ ಇಲ್ಲ. ನೈಜತೆ ಇದ್ದರೆ ಅದು ಬೇರೆ ಮಾತು.
ಪಾದಯಾತ್ರೆ ವೇಳೆ ಅಚಾತುರ್ಯ ಸಂಭವಿಸಿದರೆ ನಿಮ್ಮ ಪ್ರಕಾರ ರಾಜಕೀಯ ಮಾಡುತ್ತಾ ಇರುವ ಬಿಜೆಪಿ ಕೈಗೆ ನೀವೇ ಅಸ್ತ್ರ ಕೊಟ್ಟಂತೆ ಆಗೋದಿಲ್ಲವೆ?
ನಾವು ಕಾನೂನು ವಿರುದ್ಧ ಹೋಗೋದೇ ಇಲ್ಲ. ಸರ್ಕಾರದ ನಿಯಮ ಪಾಲಿಸಿ ಹೋರಾಟ ಮಾಡುತ್ತೇವೆ. ಸರ್ಕಾರ ಜಾಗಟೆ ಹೊಡಿ ಅಂದಾಗ ಜಾಗಟೆ ಹೊಡೆದಿದ್ದೇವೆ. ದೀಪ ಹಚ್ಚು ಅಂದಾಗ ದೀಪ ಹಚ್ಚಿದ್ದೇವೆ. ಕೈ ಕಟ್ಟಿಕೊಂಡು ಮನೆಯಲ್ಲಿ ಕುಳಿತ್ಕೋ ಅಂದಾಗ ಮನೆಯಲ್ಲಿ ಕುಳಿತಿದ್ದೇವೆ. ರಾಜಕೀಯಕ್ಕಾಗಿ ಬಿಜೆಪಿಯವರು ಈ ಡ್ರಾಮಾ ಮಾಡುತ್ತಿದ್ದಾರೆ. ಚುನಾವಣೆಗಳಲ್ಲಿ ಅನುಭವಿಸಿದ ಸರಣಿ ಸೋಲಿನಿಂದ ಭೀತರಾಗಿ ನಮ್ಮ ಪಾದಯಾತ್ರೆ ತಡೆಯಲು ಯತ್ನಿಸುತ್ತಿದ್ದಾರೆ. ನಾವು ಜನರ ಪರ ಹೋರಾಟ ಆರಂಭಿಸಿದ ಕೂಡಲೇ ಈ ಆಟ ಆರಂಭಿಸಿದ್ದಾರೆ.
ಇದನ್ನೂ ಓದಿ: Mekedatu Padayatra ಮೇಕೆದಾಟು ಪಾದಯಾತ್ರೆ, ಸಿದ್ದು-ಡಿಕೆಶಿ ಜಂಟಿ ಸುದ್ದಿಗೋಷ್ಠಿಯ ಮುಖ್ಯಾಂಶಗಳು
ಕೋವಿಡ್ ನಿಯಮ ಪಾಲಿಸುತ್ತೇನೆ ಅಂತೀರಲ್ಲ, ಹೇಗೆಂದು ವಿವರಿಸುವಿರಾ?
ಎಲ್ಲರಿಗೂ ಮಾಸ್ಕ್, ಸ್ಯಾನಿಟೈಸರ್ ಕೊಡ್ತೇವೆ. ಸಾಮಾಜಿಕ ಅಂತರ ಕಾಪಾಡಿಕೊಂಡೇ ಪಾದಯಾತ್ರೆ ಮಾಡುತ್ತೇವೆ. ಅಕಸ್ಮಾತ್ ಸರ್ಕಾರ ಜನ ಸೇರಲು ಬಿಡದಿದ್ದರೆ ನಾವಿಬ್ಬರೇ (ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್) ಪಾದಯಾತ್ರೆ ಮಾಡ್ತೇವೆ.
ನೀವೇನೋ ಇಬ್ಬರೇ ರಸ್ತೆಗೆ ಇಳಿಯುತ್ತೀರಾ, ಆದರೆ ನಿಮ್ಮ ಬೆಂಬಲಿಗರು ಸುಮ್ಮನಿರಬೇಕಲ್ಲ?
ಯಾರೂ ಬರಬೇಡಿ ಅಂತ ಜನರಿಗೆ ಮನವಿ ಮಾಡ್ತೇವೆ.ಇಷ್ಟಕ್ಕೂ ಸರ್ಕಾರ ವಿಧಿಸಿರೋದು ಕರ್ಫ್ಯೂ, ಯಾರೂ ರಸ್ತೆಗೆ ಇಳಿಯುವಂತಿಲ್ಲ.
ಇಡೀ ರಾಜ್ಯದಲ್ಲಿ ಯಾರೂ ರಸ್ತೆಗೆ ಇಳಿಯದಂತೆ ಮಾಡ್ತಾರಾ?
ತಡೆಯಲಿ ನೋಡೋಣ. ನಮ್ಮನ್ನು ಮಾತ್ರ ಏಕೆ ಈ ಸರ್ಕಾರ ಟಾರ್ಗೆಟ್ ಮಾಡಬೇಕು? ಕರ್ಫ್ಯೂ ಅಂದರೆ ಇಡೀ ರಾಜ್ಯ ನಿಶ್ಶಬ್ದವಾಗಿರಬೇಕು. ಆ ರೀತಿ ಇರುತ್ತಾ?
ನೀರಿಗಾಗಿ ನಡಿಗೆಯನ್ನು ಮುಖ್ಯಮಂತ್ರಿ ಹುದ್ದೆಗಾಗಿ ನಡಿಗೆ ಅಂತ ಟೀಕಿಸುತ್ತಾರಲ್ಲ?
ನಾವು ಮುಖ್ಯಮಂತ್ರಿ ವಿಚಾರ ಕುರಿತು ಆಲೋಚನೆ ಮಾಡುತ್ತಿಲ್ಲ. ನಮ್ಮ ರಾಜ್ಯಕ್ಕೆ ಒಳ್ಳೆಯದಾಗಬೇಕು ಎಂಬ ದೃಷ್ಟಿಯಿಂದ ಹೋರಾಟ ಮಾಡುತ್ತಿದ್ದೇವೆ. ನೋಡಿ, ನಾನು ಮನೆಯಲ್ಲಿ ಕುಳಿತು ಟ್ವೀಟ್ ಮಾಡಿಕೊಂಡು, ಪ್ರೆಸ್ ಕಾನ್ಫರೆನ್ಸ್ ನಡೆಸಿಕೊಂಡು ಇರುವ ನಾಯಕ ಅಲ್ಲ. ಜನರ ಜತೆ ಇರಬೇಕು. ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಬಯಸುವ ನಾಯಕ.
ಚುನಾವಣೆ ವೇಳೆಗೆ ಮುಖ್ಯಮಂತ್ರಿ ಹುದ್ದೆ ವಿಚಾರ ನಿಮ್ಮ ಪಕ್ಷವನ್ನು ಬಹುವಾಗಿ ಕಾಡುವ ಲಕ್ಷಣವಿದೆ?
ಆ ವಿಚಾರ ಮುಖ್ಯವೇ ಅಲ್ಲ. ನಮ್ಮದೇನಿದ್ದರೂ ಜನಪರ ಹೋರಾಟ ಮಾಡೋದು. ಪಕ್ಷ ಸಂಘಟಿಸೋದು. ಪಕ್ಷವನ್ನು ಅಧಿಕಾರಕ್ಕೆ ತರೋದು. ಜನರನ್ನು ಕರೆದುಕೊಂಡು ಹೋಗಿ ವಿಧಾನಸೌಧಕ್ಕೆ ಬಿಡೋದು. ಅನಂತರ ಏನು ಮಾಡಬೇಕು ಅಂತ ಹೈಕಮಾಂಡ್ ನಿರ್ಧಾರ ಮಾಡುತ್ತೆ. ನಾವು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪಕ್ಷದವರು.
ಒಕ್ಕಲಿಗ ಬೆಲ್ಟ್‌ನಲ್ಲಿ ಪಾದಯಾತ್ರೆ ಉದ್ದೇಶ ಆ ಸಮುದಾಯದ ನಾಯಕನಾಗುವ ಗುರಿಯಿಂದಲೇ?
ಕಾವೇರಿ ಜಲಾನಯನ ಪ್ರದೇಶದಲ್ಲಿ ಒಕ್ಕಲಿಗರೇ ಇದ್ದಾರೆ ಅಂತ ನೀವು ಅಂದುಕೊಂಡಿದ್ದೀರಿ. ಆದರೆ, ಅಲ್ಲಿ ಇರುವವರೇ ಬೇರೆ ಜನ. ಚಾಮರಾಜನಗರ, ಬೆಂಗಳೂರಿನಲ್ಲಿ ಒಕ್ಕಲಿಗರು ಎಲ್ಲಿದ್ದಾರೆ? ಅದು ನಿಮ್ಮ ಅನಿಸಿಕೆ ಅಷ್ಟೆ.
ಅಭಿವೃದ್ಧಿ ರಾಜಕಾರಣ ಎಂಬ ನಿಮ್ಮ ತಂತ್ರಕ್ಕೆ ಗೋಹತ್ಯೆ, ಮತಾಂತರ, ಹಿಂದು ದೇವಾಲಯಗಳ ಸ್ವಾಯತ್ತೆಯಂತಹ ಹಿಂದುತ್ವವಾದ ಪ್ರತಿತಂತ್ರವಾಗಿದೆ. ಅದನ್ನು ಹೇಗೆ ಎದುರಿಸುವಿರಿ?
ನಾವು ಅಭಿವೃದ್ಧಿ ಪರ ಮಾತನಾಡಿದರೆ ಬಿಜೆಪಿ ಭಾವಾನಾತ್ಮಕ ವಿಚಾರ ಮುಂದಿಟ್ಟುಕೊಂಡು ಜನರನ್ನು ತಪ್ಪು ದಾರಿಗೆ ಎಳೆಯಲು ನೋಡುತ್ತಿದೆ. ಈಗ ಗೋಹತ್ಯೆ ವಿಚಾರವನ್ನೇ ತೆಗೆದುಕೊಳ್ಳಿ. ಗೋಹತ್ಯೆ ನಿಷೇಧದಿಂದ ಸಮಸ್ಯೆಗೆ ಸಿಲುಕುವವರು ಈ ರಾಜ್ಯದ ರೈತರು. ವಯಸ್ಸಾದ ಮೇಲೆ ಜಾನುವಾರುಗಳನ್ನು ಮಾರಿ ಇಪ್ಪತ್ತೋ ಮೂವತ್ತೋ ಸಾವಿರ ರು.ಗಳನ್ನು ರೈತರು ಪಡೆದುಕೊಳ್ಳುತ್ತಿದ್ದರು. ಇದನ್ನು ತಪ್ಪಿಸಿರುವ ರಾಜ್ಯ ಸರ್ಕಾರ ಆ ರೈತರಿಗೆ ಪರ್ಯಾಯವಾಗಿ ಏನಾದರೂ ಮಾಡಿದೆಯೇ? ಗೋಶಾಲೆಗಳನ್ನಾದರೂ ಮಾಡಿದೆಯೇ? ಮೊದಲು ರೈತರಿಗೆ ಪರಿಹಾರ ನೀಡಲಿ, ಆಮೇಲೆ ಜಾನುವಾರುಗಳನ್ನು ಸರ್ಕಾರವೇ ತೆಗೆದುಕೊಂಡು ಹೋಗಿ ಸಾಕಲಿ. ಹಿಂದುತ್ವದ ಹೆಸರಿನಲ್ಲಿ ರೈತರಿಗೆ ಸಮಸ್ಯೆ ಕೊಡುವುದು ಬೇಡ.