
ರಾಮನಗರ (ಫೆ.16): ಕ್ಷೇತ್ರದ ಮತದಾರರಿಗೆ ಆಮಿಷವೊಡ್ಡಿ ಮತ ಹಾಕಿಸಿಕೊಳ್ಳುವುದಿಲ್ಲ. ಅಂತಹ ರಾಜಕಾರಣ ನಾವೆಂದೂ ಮಾಡುವುದೂ ಇಲ್ಲ. ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತೇವೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು. ತಾಲೂಕಿನ ಕೈಲಾಂಚ ಹೋಬಳಿಯ ಹಲವು ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಚುನಾವಣೆ ಸಮಯದಲ್ಲಿ ಮತದಾರರನ್ನು ಸೆಳೆಯಲು ಕುಕ್ಕರ್, ಸೀರೆ ನೀಡುವುದು ಸಾಮಾನ್ಯ. ಇದೆಲ್ಲ ತಾತ್ಕಾಲಿಕ ಎಂಬುದನ್ನು ಮತದಾರರು ಅರಿತುಕೊಳ್ಳಬೇಕು.
ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ಬೇಕು. ಆದ್ದರಿಂದ ಮತದಾರರು ಆಮಿಷಗಳಿಗೆ ಮಾರು ಹೋಗದೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಬಲ್ಲ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಯಾರನ್ನು ಆಯ್ಕೆ ಮಾಡಿದರೆ ಕ್ಷೇತ್ರಕ್ಕೆ ಒಳ್ಳೆಯದಾಗುತ್ತದೆ ಎಂಬುದನ್ನು ಯೋಚಿಸಿ ನಿರ್ಧಾರ ಮಾಡಬೇಕು ಎಂದು ಹೇಳಿದರು. ಜನರಿಗೆ ಆಮಿಷಗಳನ್ನು ತೋರಿಸಿ ಮತ ಹಾಕಿಸಿಕೊಳ್ಳುವ ಕೆಲಸವನ್ನು ನಾನಾಗಲಿ ಅಥವಾ ನಮ್ಮ ಕುಟುಂಬದವರಾಗಲಿ ಯಾರೂ ಮಾಡಿಲ್ಲ. ಅಂತಹ ರಾಜಕಾರಣ ನಮಗೆ ಬೇಕಾಗಿಲ್ಲ. ಅಭಿವೃದ್ಧಿಯ ಮಾನದಂಡದ ಮೇಲೆ ಚುನಾವಣೆ ಎದುರಿಸುತ್ತೇವೆ.
ಪ್ರತಿಭಟನೆ ಮಾಡಲು ಶಾಸಕರಿಗೆ ಯಾವುದೇ ನೈತಿಕತೆ ಇಲ್ಲ: ಸಚಿವ ಎಂಟಿಬಿ ನಾಗರಾಜ್ ಆಕ್ರೋಶ
ಮೊಟ್ಟೆದೊಡ್ಡಿ ಹಾಗೂ ವಡ್ಡರಹಳ್ಳಿಯಲ್ಲಿ ಏತ ನೀರಾವರಿ ಯೋಜನೆ, ಗುನ್ನಾರಿನಲ್ಲಿ 15 ಕೋಟಿ ರು.ವೆಚ್ಚದಲ್ಲಿ ವಸತಿ ನಿಲಯ, ಹುಲಿಕೆರೆ ಹಾಗೂ ಗೌಡಯ್ಯನದೊಡ್ಡಿಯಲ್ಲಿಯೂ ಸೇತುವೆ ನಿರ್ಮಿಸಲಾಗಿದೆ. ಗುನ್ನೂರಿನಲ್ಲಿಯೂ ಸೇತುವೆಗೆ ಬೇಡಿಕೆ ಇದ್ದು, ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದರು. ಜಿಪಂ ಮಾಜಿ ಅಧ್ಯಕ್ಷ ರಾಜಣ್ಣ, ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಅಸ್ವತ್ತ, ದೊರೆಸ್ವಾಮಿ, ಗ್ರಾಪಂ ಉಪಾಧ್ಯಕ್ಷೆ ವಿಜಯಮ್ಮ ನಾಗರಾಜು, ಮುಖಂಡರಾದ ಭೈರಪ್ಪ, ರಾಜು, ಜಿ.ಟಿ.ಕೃಷ್ಣ, ಸಿದ್ದು, ಬಸವರಾಜು, ನವೀನ್, ಗಿರೀಶ್ ವಾಸು, ಜಯಕುಮಾರ್, ಗೋಪಾಲ್ ನಾಯಕ್, ನವೀನ್, ನಂದೀಶ್‌ಗೌಡ, ತಮ್ಮಣ್ಣ ಮತ್ತಿತರರು ಹಾಜರಿದ್ದರು.
ಅಭಿವೃದ್ಧಿಯೇ ಜೆಡಿಎಸ್ ಧ್ಯೇಯ: ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿ 10.40 ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ಸೋಮವಾರ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು. ನಗರದ 23ನೇ ವಾರ್ಡಿನ ಟಿಪ್ಪು ಶಾಲೆ ಬಳಿಯ ಸೀರಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಾಣ, 22ನೇ ವಾರ್ಡಿನ ಕೊತ್ತೀಪುರ ಮುಖ್ಯರಸ್ತೆ ಡಾಂಬರೀಕರಣ , 11ನೇ ವಾರ್ಡಿನಲ್ಲಿ ಜೋಡಿ ರಸ್ತೆ ಡಾಂಬರೀಕರಣ, 12ನೇ ವಾರ್ಡಿನಲ್ಲಿ ಡಾಂಬರೀಕರಣ. 6ನೇ ವಾರ್ಡಿನ ಚಾಮುಂಡೇಶ್ವರಿ ದೇವಾಸ್ಥಾನದ ಮುಂದೆ ಚರಂಡಿ ಕಾಮಗಾರಿಗೆ ಶಾಸಕರು ಗುದ್ದಲಿಪೂಜೆ ನೆರವೇರಿಸಿದರು.
ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬದವರ ವಿರುದ್ಧ ಡಿ.ಕೆ.ಸುರೇಶ್ ವಾಗ್ದಾಳಿ
ಆನಂತರ ಆಗ್ರಹಾರದ ಶ್ರೀ ಆಂಜನೇಯಸ್ವಾಮಿ ದೇವಾಲಯದ ರಸ್ತೆ ಡಾಂಬರೀಕರಣ, ಆದಿಶಕ್ತಿಪುರದಲ್ಲಿ ಚರಂಡಿ ಕಾಮಗಾರಿ, ರೋಟರಿ ಕ್ಲಬ್‌ನಿಂದ ಆಂಜನೇಯಸ್ವಾಮಿ ದೇವಾಲಯದವರೆಗೆ ರಸ್ತೆ ನಿರ್ಮಾಣ, ಮಲ್ಲೇಶ್ವರ ಬಡಾವಣೆಯ ಉದ್ಯಾವನ ಬಳಿ ಹಿರಿಯ ನಾಗರಿಕರ ತಂಗುದಾಣ, ರಂಗರಾಯರದೊಡ್ಡಿಯ ಕೆರೆ ರಸ್ತೆಯಲ್ಲಿ ಸೇತುವೆ ನಿರ್ಮಾಣ ಹಾಗೂ ರಂಗರಾಯರದೊಡ್ಡಿಯ ಗ್ರಾಮದವರೆಗೆ ಡಾಂಬರೀಕರಣ ಕಾಮಗಾರಿಗೆ ಅನಿತಾಕುಮಾರಸ್ವಾಮಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗಾಗಿ ಮಹಿಳೆಯಾಗಿ ಸಾಕಷ್ಟುದುಡಿಯುತ್ತಿದ್ದೇನೆ. ನನ್ನ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದ ಜನ ಗುರುತಿಸುತ್ತಾರೆ ಎಂಬ ನಂಬಿಕೆ ಇದೆ. ಜೆಡಿಎಸ್ ಪಕ್ಷದ್ದು ಅಭಿವೃದ್ಧಿಯೇ ಧ್ಯೇಯ ಮಂತ್ರವಾಗಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.