
ಬೆಂಗಳೂರು (ಜೂ.10): ಸಂವಿಧಾನ ಬದಲಿಸುತ್ತೇವೆ ಎಂದಿದ್ದ ಬಿಜೆಪಿಯವರನ್ನೇ ಈ ರಾಜ್ಯದಲ್ಲಿ ನಾವು-ನೀವು ಬದಲಾಯಿಸಿದ್ದೇವೆ. ಇದು 2024ರ ಲೋಕಸಭೆ ಚುನಾವಣೆಯಲ್ಲೂ ಪ್ರತಿಧ್ವನಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಶುಕ್ರವಾರ ರಾಜ್ಯದ ದಲಿತ ಸಂಘಟನೆಗಳು ನಗರದ ಪುರಭವನದಲ್ಲಿ ಹಮ್ಮಿಕೊಂಡಿದ್ದ ‘ಭೀಮ ಸಂಕಲ್ಪ’ ಸಮಾವೇಶವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
‘ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು’ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ ಹೆಗಡೆ ವಿರುದ್ಧ ಬಿಜೆಪಿ ರಾಷ್ಟಾ್ರಧ್ಯಕ್ಷರಾಗಿದ್ದ ಅಮಿತ್ ಶಾ ಅವರಾಗಲಿ, ಪ್ರಧಾನಿ ಮೋದಿ ಅವರಾಗಲಿ ಕ್ರಮ ಕೈಗೊಳ್ಳದೆ ಸುಮ್ಮನೆ ಕುಳಿತರು. ಆದರೆ, ನಾವು-ನೀವು ಸುಮ್ಮನೆ ಕೂರಲಿಲ್ಲ. ಸಂವಿಧಾನ ಬದಲಾಯಿಸಲು ಬಂದವರನ್ನೇ ಬದಲಾಯಿಸಿದ್ದೀವಿ. ಈ ಬಾರಿ ವಿಧಾನಸಭಾ ಚುನಾವಣೆಯ ಫಲಿತಾಂಶವೇ 2024ರಲ್ಲೂ ಮರುಕಳಿಸಬೇಕು ಎಂದರು.
ಮೆಟ್ರೋಗಾಗಿ 203 ಮರಗಳನ್ನು ಕಡಿಯಲು ಹೈಕೋರ್ಟ್ ಒಪ್ಪಿಗೆ
ಮನುಸ್ಮೃತಿಯ ಆರಾಧಕರಾದ ಬಿಜೆಪಿ, ಆರ್‌ಎಸ್‌ಎಸ್‌ನವರು ಸಂವಿಧಾನ ವಿರೋಧಿಗಳು. ಅಧಿಕಾರಕ್ಕಾಗಿ ಅವರೊಂದಿಗೆ ಸೇರಿರುವ ಶೋಷಿತ ಸಮುದಾಯಗಳ ಪ್ರತಿನಿಧಿಗಳು ಮನುಸ್ಮೃತಿ ಆರಾಧಕರಾಗಿ ಸಂವಿಧಾನ ವಿರೋಧಿಗಳಾಗಿದ್ದಾರೆ. ವಿಗ್ರಹ ಇಟ್ಟುಕೊಂಡು ವಿಚಾರಗಳನ್ನು ಕೊಲ್ಲುವುದು ಬಿಜೆಪಿ ಪರಿವಾರದ ಚಾಳಿ. ಸಂವಿಧಾನ ವಿರೋಧಿಸುವ ಬಿಜೆಪಿ ಚುನಾವಣೆಗಾಗಿ ಅಂಬೇಡ್ಕರ್ ಪ್ರತಿಮೆ ಇಟ್ಟುಕೊಂಡು ನಾಟಕವಾಡುತ್ತಿದೆ ಎಂದು ಟೀಕಿಸಿದರು.
ಸಾಮಾಜಿಕ, ಆರ್ಥಿಕ ಅಸಮಾನತೆ ತೊಡೆದು ಹಾಕದಿದ್ದರೆ ಈ ಸ್ವಾತಂತ್ರ್ಯ ಸೌಧವನ್ನು ದೇಶದ ಜನರೇ ಧ್ವಂಸ ಮಾಡುತ್ತಾರೆ ಎಂದು ಅಂಬೇಡ್ಕರ್ ಎಚ್ಚರಿಸಿದ್ದರು. ಜಾತಿ ಸಮಾಜಕ್ಕೆ ಚಲನೆ ಇರುವುದಿಲ್ಲ. ಚಾಲನೆ ಸಿಗಬೇಕಾದರೆ ಸಂವಿಧಾನಬದ್ಧವಾದ ಜಾತ್ಯತೀತ ಮೌಲ್ಯಗಳು ಜಾರಿಯಾಗಿ ಶೋಷಿತ ಸಮುದಾಯಗಳಿಗೆ ಸಾಮಾಜಿಕ, ಆರ್ಥಿಕವಾಗಿ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಈ ಅವಕಾಶಗಳನ್ನು ಕಲ್ಪಿಸುವುದೇ ನನ್ನ ರಾಜಕೀಯ ಬದ್ಧತೆ ಎಂದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗ 11 ಸಾವಿರ ಪಂಚಾಯಿತಿಗಳಲ್ಲಿ ಸಂವಿಧಾನದ ಪೀಠಿಕೆ ಓದಿ ಪ್ರತಿಜ್ಞೆ ಮಾಡಲಾಗಿತ್ತು.
ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನದ ಬಗ್ಗೆ ಬದ್ಧತೆ ಇದೆ. ಪಕ್ಷ ಸಂವಿಧಾನದ ಮೌಲ್ಯಗಳನ್ನು ಅಳವಡಿಸಿಕೊಂಡಿದೆ. ಸಂವಿಧಾನ ನಮ್ಮ ಪಾಲಿನ ಭಗವದ್ಗೀತೆ, ಕುರಾನ್, ಬೈಬಲ್ ಆಗಿದೆ. ದೇಶದ ಉದ್ದಗಲದಲ್ಲಿ ಅತಿ ಹೆಚ್ಚು ಪ್ರತಿಮೆ ಇರುವ ನಾಯಕ ಎಂದರೆ ಅದು ಬಾಬಾ ಸಾಹೇಬ ಅಂಬೇಡ್ಕರ್ ಅವರದು ಮಾತ್ರ. ನಾವು ದೇವರಲ್ಲಿ ಕೇಳಿಕೊಳ್ಳುವುದನ್ನು ಅಂಬೇಡ್ಕರ್ ಸಂವಿಧಾನ ಮೂಲಕ ನಮಗೆ ಕೊಟ್ಟಿದ್ದಾರೆ. ಆ ಕಾರಣಕ್ಕೆ ಅವರ ಪ್ರತಿಮೆ ಇಟ್ಟು, ಗೌರವ ನೀಡುತ್ತಾ ಬಂದಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ದಲಿತ ಮುಖಂಡರುಗಳಾದ ಎಸ್.ಮರಿಸ್ವಾಮಿ, ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು, ಇಂದೂಧರ ಹೊನ್ನಾಪುರ, ಜಿಗಣಿ ಶಂಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಏರಿಕೆ ಸದ್ಯಕ್ಕಿಲ್ಲ: ಹೊಸ ವ್ಯವಸ್ಥೆ ಜಾರಿಗೆ ಬೇಕಿದೆ 6 ತಿಂಗಳ ಕಾಲಾವಕಾಶ
ಗ್ಯಾರಂಟಿ ವಿಫಲಕ್ಕೆ ಬಿಜೆಪಿ ಹುನ್ನಾರ!: ದೇಶದ ಜನರಿಗೆ ಕೊಟ್ಟಭರವಸೆಗಳನ್ನು ಈಡೇರಿಸದೆ ವಂಚಿಸಿದ ಬಿಜೆಪಿ ನಾಯಕರು, ನುಡಿದಂತೆ ನಡೆದ ನಮ್ಮನ್ನು ಟೀಕಿಸುತ್ತಿದ್ದಾರೆ. ಬಡವರ- ಮಧ್ಯಮ ವರ್ಗದವರ ಕಲ್ಯಾಣಕ್ಕೆ ನಾವು ನೀಡಿರುವ ಗ್ಯಾರಂಟಿಗಳನ್ನು ವಿಫಲಗೊಳಿಸಲು ಬಿಜೆಪಿ ಯತ್ನಿಸುತ್ತಿದೆ. ಇದಕ್ಕಾಗಿ ಸುಳ್ಳುಗಳನ್ನು ಹೊಸೆದು, ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ನಮ್ಮ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ನಾಡಿನ ಶೇ.85ಕ್ಕೂ ಹೆಚ್ಚು ಮಹಿಳೆಯರಿಗೆ ತಲುಪುತ್ತದೆ. ಉಳಿದವು ಇನ್ನೂ ಹೆಚ್ಚಿನ ಸಂಖ್ಯೆಯ ಜನರಿಗೆ ಸಿಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.