
ಬೆಂಗಳೂರು (ಜೂ.10): ಗೃಹ ಲಕ್ಷ್ಮೀ ಯೋಜನೆ ಫಲಾನುಭವಿಗಳ ಅರ್ಜಿ ಸಲ್ಲಿಕೆಯನ್ನು ಸರಳವಾಗಿಸಲು ಕಂದಾಯ ಇಲಾಖೆ ನೇಮಿಸುವ ಸಿಬ್ಬಂದಿ ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆ ಅನುಷ್ಠಾನಕ್ಕಾಗಿ ಕಂದಾಯ ಇಲಾಖೆ ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದೆ. ಯೋಜನೆ ಅಡಿಯಲ್ಲಿ 1.30 ಕೋಟಿ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ. ಎರಡು ತಿಂಗಳೊಳಗೆ ಅರ್ಜಿಗಳನ್ನು ಸ್ವೀಕರಿಸಿ, ವಿಲೇವಾರಿ ಮಾಡಬೇಕಿದ್ದು, ಅದು ಸವಾಲಿನ ಕೆಲಸವಾಗಿದೆ.
ಇಡೀ ವರ್ಷದಲ್ಲಿ ಕಂದಾಯ ಇಲಾಖೆ 1.50 ಕೋಟಿಯಷ್ಟು ಅರ್ಜಿಗಳನ್ನು ವಿಲೇವಾರಿ ಮಾಡುತ್ತದೆ. ಆದರೆ, ಎರಡು ತಿಂಗಳಲ್ಲಿ ಅಷ್ಟೇ ಪ್ರಮಾಣದ ಅರ್ಜಿಗಳನ್ನು ವಿಲೇವಾರಿ ಮಾಡಬೇಕಿದ್ದು, ಅದಕ್ಕಾಗಿ ಈಗಾಗಲೆ ತಯಾರಿ ನಡೆಸಲಾಗಿದೆ ಎಂದರು. ರಾಜ್ಯದಲ್ಲಿನ 898 ನಾಡ ಕಚೇರಿ ಸೇರಿದಂತೆ 7 ಸಾವಿರಕ್ಕೂ ಹೆಚ್ಚಿನ ಸೇವಾಸಿಂಧು ಕಚೇರಿ, ಬಾಪೂಜಿ ಸೇವಾ ಕೇಂದ್ರ (ಗ್ರಾಮ ಒನ್ ಕೇಂದ್ರ), ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಜೂನ್ 15ರಿಂದ ಅರ್ಜಿ ಸ್ವೀಕಾರ ಆರಂಭವಾಗಲಿದೆ. ನಾಡಕಚೇರಿಗಳಲ್ಲಿ ಸೂಕ್ತ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
108 ಆಂಬ್ಯುಲೆನ್ಸ್, ಡಯಾಲಿಸಿಸ್ ಕೇಂದ್ರ ಗುತ್ತಿಗೆ ರದ್ದು: ಸಚಿವ ದಿನೇಶ್ ಗುಂಡೂರಾವ್
ಫಲಾನುಭವಿಗಳು ಒಮ್ಮೆಲೇ ಅರ್ಜಿ ಸಲ್ಲಿಸಲು ಬಂದು ಗೊಂದಲ ಸೃಷ್ಟಿಯಾಗುವುದನ್ನು ತಡೆಯಲು, ಆನ್‌ಲೈನ್ ಮತ್ತು ಮೊಬೈಲ್ ಆ್ಯಪ್ ಮೂಲಕವೂ ಅರ್ಜಿ ಸ್ವೀಕರಿಸಲಾಗುವುದು ಎಂದು ತಿಳಿಸಿದರು. ಕಂದಾಯ ಇಲಾಖೆ ಜತೆಗೆ ಕೃಷಿ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಫೀಲ್ಡ್ ಸಿಬ್ಬಂದಿಗಳನ್ನು ಅರ್ಜಿ ಸ್ವೀಕಾರ ಕಾರ್ಯದಲ್ಲಿ ಬಳಸಿಕೊಳ್ಳಲಾಗುವುದು. ಅವರುಗಳು ಫಲಾನುಭವಿಗಳ ಮನೆಗೆ ತೆರಳಿ ಆ್ಯಪ್ ಅಥವಾ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿಕೊಂಡು ಸಲ್ಲಿಕೆ ಮಾಡಲಿದ್ದಾರೆ. ಅದಕ್ಕಾಗಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ತಾಲೂಕು ಮಟ್ಟದಲ್ಲಿ ತರಬೇತಿ ನೀಡಲಾಗುವುದು ಎಂದು ವಿವರಿಸಿದರು.
ಹಜ್ ಭವನಕ್ಕೆ ಸಿದ್ದರಾಮಯ್ಯ 5000 ಕೋಟಿ ನೀಡಿಲ್ಲ: ಜಮೀರ್ ಅಹಮದ್ ಖಾನ್
ಪಿಂಚಣಿದಾರರಿಗೂ ಗೃಹಲಕ್ಷ್ಮೀ ಫಲ: ಕಂದಾಯ ಇಲಾಖೆ ಅಡಿಯಲ್ಲಿ 78 ಲಕ್ಷ ಜನರು ವಿವಿಧ ರೀತಿಯ ಪಿಂಚಣಿ ಪಡೆಯುತ್ತಿದ್ದಾರೆ. ವಾರ್ಷಿಕ 10,411 ಕೋಟಿ ರು. ಪಿಂಚಣಿ ವಿತರಿಸಲಾಗುತ್ತಿದೆ. ಆದರೆ, ಕೆಲವರು ಗೊಂದಲ ಸೃಷ್ಟಿಸುವ ಉದ್ದೇಶದಿಂದ ಪಿಂಚಣಿ ಪಡೆಯುತ್ತಿರುವ ಮಹಿಳೆಯರಿಗೆ ಗೃಹಲಕ್ಷ್ಮೀ ಅನ್ವಯವಾಗುವುದಿಲ್ಲ ಎಂದು ಸುಳ್ಳು ಹರಡುತ್ತಿದ್ದಾರೆ. ವಿಧವೆಯರು, ಹಿರಿಯ ನಾಗಕರಿರು, ಅಂಗವಿಕಲ ಮಹಿಳೆಯರು ಹಾಗೂ ತೃತೀಯ ಲಿಂಗಿಗಳಿಗೆ ಗೃಹಲಕ್ಷ್ಮೀ ಅನ್ವಯವಾಗುತ್ತದೆ. ಈವರೆಗೆ 600 ರು.ನಿಂದ 1,200 ರು.ವರೆಗೆ ಪಿಂಚಣಿ ಪಡೆಯುತ್ತಿರುವವರು ಇನ್ನು ಮುಂದೆ 2,600 ರು.ನಿಂದ 3,200 ರು. ಸಹಾಯಧನ ಪಡೆಯಬಹುದು ಎಂದು ಕೃಷ್ಣ ಬೈರೇಗೌಡ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.