ಕಾಂಗ್ರೆಸ್‌ ಉಚಿತ ವಿದ್ಯುತ್‌ ಭರವಸೆಯ ಹಿನ್ನೆಲೆ: ನಾವು ಕರೆಂಟ್‌ ಬಿಲ್‌ ಕಟ್ಟಲ್ಲ, ರಾಜ್ಯದ ಹಲವೆಡೆ ಜನ ಪಟ್ಟು!

Published : May 18, 2023, 04:25 AM IST
ಕಾಂಗ್ರೆಸ್‌ ಉಚಿತ ವಿದ್ಯುತ್‌ ಭರವಸೆಯ ಹಿನ್ನೆಲೆ: ನಾವು ಕರೆಂಟ್‌ ಬಿಲ್‌ ಕಟ್ಟಲ್ಲ, ರಾಜ್ಯದ ಹಲವೆಡೆ ಜನ ಪಟ್ಟು!

ಸಾರಾಂಶ

ಚಿತ್ರದುರ್ಗದ ಬೆನ್ನಲ್ಲೇ ಇದೀಗ ರಾಜ್ಯದ ಇತರೆ ಜಿಲ್ಲೆಗಳಿಗೂ ‘ನಾವು ವಿದ್ಯುತ್‌ ಬಿಲ್‌ ಕಟ್ಟಲ್ಲ’ ಎಂಬ ಕೂಗು ವಿಸ್ತರಿಸಿದೆ. ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ 200 ಯುನಿಟ್‌ ವಿದ್ಯುತ್‌ ಅನ್ನು ಉಚಿತವಾಗಿ ನೀಡುವ ಭರವಸೆ ನೀಡಿತ್ತು. 

ಬೆಂಗಳೂರು (ಮೇ.18): ಚಿತ್ರದುರ್ಗದ ಬೆನ್ನಲ್ಲೇ ಇದೀಗ ರಾಜ್ಯದ ಇತರೆ ಜಿಲ್ಲೆಗಳಿಗೂ ‘ನಾವು ವಿದ್ಯುತ್‌ ಬಿಲ್‌ ಕಟ್ಟಲ್ಲ’ ಎಂಬ ಕೂಗು ವಿಸ್ತರಿಸಿದೆ. ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ 200 ಯುನಿಟ್‌ ವಿದ್ಯುತ್‌ ಅನ್ನು ಉಚಿತವಾಗಿ ನೀಡುವ ಭರವಸೆ ನೀಡಿತ್ತು. ಇದೀಗ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದು, ನಾವ್ಯಾಕೆ ವಿದ್ಯುತ್‌ ಬಿಲ್‌ ಕಟ್ಟಬೇಕು? ಎಂದು ಸಾರ್ವಜನಿಕರು ಪ್ರಶ್ನಿಸಲು ಆರಂಭಿಸಿದ್ದಾರೆ.  ಚಿತ್ರದುರ್ಗ ಜಿಲ್ಲೆಯ ಜಾಲಿಕಟ್ಟೆಯಲ್ಲಿ ಮೀಟರ್‌ ರೀಡರ್‌ ಅನ್ನು ಜನ ತರಾಟೆಗೆ ತೆಗೆದುಕೊಂಡ ವಿಡಿಯೋ ಇತ್ತೀಚೆಗಷ್ಟೇ ವೈರಲ್‌ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಚಾಮರಾಜನಗರ, ಉಡುಪಿ, ರಾಯಚೂರು ಹಾಗೂ ಕಲಬುರಗಿಯಲ್ಲೂ ಜನ ವಿದ್ಯುತ್‌ ಬಿಲ್‌ ಕಟ್ಟಲ್ಲ ಎಂದು ಕೂಗೆಬ್ಬಿಸಿದ್ದಾರೆ. ಮೀಟರ್‌ ರೀಡರ್‌ಗಳು ಮನೆಗೆ ಬಂದು ಬಿಲ್‌ ಕೊಡುತ್ತಿದ್ದಂತೆ, ನಾವು ಬಿಲ್‌ ಪಾವತಿಸಲ್ಲ ಎಂದು ಆಕ್ಷೇಪವೆತ್ತಿ ವಾಪಸ್‌ ಕಳುಹಿಸುತ್ತಿದ್ದಾರೆ.

ನಮ್ಮೋಣಿಗೆ ಯಾಕ್‌ ಬಂದೀರಿ?: ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮಕ್ಕೆ ವಿದ್ಯುತ್‌ ಬಿಲ್‌ ನೀಡಲು ತೆರಳಿದ್ದ ಸೆಸ್ಕ್‌ ಸಿಬ್ಬಂದಿಯನ್ನು ರೈತ ಮುಖಂಡರು ಸೇರಿಕೊಂಡು ಆವಾಜ್‌ ಹಾಕಿ ವಾಪಸ್‌ ಕಳುಹಿಸಿದ್ದಾರೆ. ಉಚಿತ ವಿದ್ಯುತ್‌ ಗ್ಯಾರಂಟಿಯನ್ನು ಕಾಂಗ್ರೆಸ್‌ ಸರ್ಕಾರ ತಕ್ಷಣ ಜಾರಿಗೆ ತರಬೇಕು ಎಂದು ಇದೇ ವೇಳೆ ಆಗ್ರಹಿಸಿದ್ದಾರೆ. ಇನ್ನು ಕಲಬುರಗಿ ನಗರದ ತಾರಾಫೌಲ್‌ ಬಡಾವಣೆಯಲ್ಲಿ, ‘ನಮ್ಮೋಣಿಗೆ ಯಾಕ್‌ ಬಂದೀರಿ? ನಾವು ಬಿಲ್‌ ಕೊಡೋದಿಲ್ಲ, ಕಾಂಗ್ರೆಸ್‌ ಸರ್ಕಾರ ಬಂದದ, ಕರೆಂಟ್‌ ಫ್ರೀ ಅಂದಾರಲ್ರಿ, ನಿಮಗ ಗೊತ್ತಿಲ್ಲೇನು? ಗೊತ್ತಿದ್ದೂ ಯಾಕೆ ಮೀಟರ್‌ ಓದಿ ಬಿಲ್‌ ಕೊಡಾಕತ್ತೀರಿ?’ ಎಂದು ಜೆಸ್ಕಾಂ ಮೀಟರ್‌ ರೀಡರ್‌ಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಕೆಲವೆಡೆ ಮೀಟರ್‌ ರೀಡರ್‌ ಮತ್ತು ಬಡಾವಣೆ ನಿವಾಸಿಗಳ ನಡುವೆ ವಾಗ್ವಾದವೂ ನಡೆದಿದೆ ಎನ್ನಲಾಗಿದೆ.

ಅರುಣ್‌ ಕುಮಾರ್‌ ಪುತ್ತಿಲ ಎಫೆಕ್ಟ್: ಬಿಜೆಪಿ ವೋಟು ಶೇ.4.90 ಕುಸಿತ!

ಬಸನಗೌಡ ಹೇಳ್ಯಾರಾ, ಬಿಲ್‌ ಕಟ್ಟಲ್ಲ!: ರಾಯಚೂರಿನ ಮಸ್ಕಿ ಕ್ಷೇತ್ರದ ಅಂಕುಶದೊಡ್ಡಿ ಗ್ರಾಮದಲ್ಲಿ ಮಹಿಳೆಯೊಬ್ಬರು ಜೆಸ್ಕಾಂ ಸಿಬ್ಬಂದಿಗೆ ‘ಕರೆಂಟ್‌ ಫ್ರೀ ಅಂದಿದ್ದಾರೆ ಬಿಲ್‌ ಕಟ್ಟಲ್ಲ’ ಎಂದು ಜೋರು ಧ್ವನಿಯಲ್ಲೇ ಆಕ್ಷೇಪವೆತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಚುನಾವಣೆ ಪ್ರಚಾರದ ವೇಳೆ ಶಾಸಕ ಬಸನಗೌಡ ಅವರು ಉಚಿತ ವಿದ್ಯುತ್‌ ಕೊಡ್ತೀವಿ ಅಂತ ಹೇಳಿದ್ದಾರೆ. ಚುನಾವಣೆ ವೇಳೆ ಒಂದು ಗೆದ್ದ ಮೇಲೆ ಇನ್ನೊಂದು ಮಾಡ್ತಾರಾ? ನಾವಂತು ಬಿಲ್‌ ಕಟ್ಟಲ್ಲ ಎಂದು ಮಹಿಳೆ ಆಕ್ಷೇಪ ಹೊರಹಾಕಿದ್ದಾರೆ.

ಜೂನ್‌ ತಿಂಗಳಿಂದ ಬಿಲ್‌ ಕಟ್ಟಲ್ಲ ಪೋಸ್ಟರ್‌!: ಉಡುಪಿಯ ಸಮಾಜ ಸೇವಕ ವಾಸುದೇವ ಭಟ್‌ ಅವರು ‘ಜೂನ್‌ ತಿಂಗಳಿನಿಂದ ವಿದ್ಯುತ್‌ ಬಿಲ್‌ ಕೊಡಬೇಡಿ’ ಎಂದು ಬರೆದು ತಮ್ಮ ವಿದ್ಯುತ್‌ ಮೀಟರ್‌ ಬೋರ್ಡಿಗೆ ಪೋಸ್ಟರ್‌ ಅಂಟಿಸಿದ್ದಾರೆ. ಕಾಂಗ್ರೆಸ್‌ ಘೋಷಿಸಿರುವ 200 ಯುನಿಟ್‌ ಉಚಿತ ವಿದ್ಯುತ್‌ ಯೋಜನೆಗೆ ನಾನೂ ಅರ್ಹ ಫಲಾನುಭವಿ. ಹೀಗಾಗಿ ನಾನು ಜೂನ್‌ ತಿಂಗಳಿಂದ ವಿದ್ಯುತ್‌ ಬಿಲ್‌ ಕಟ್ಟುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ನಾವು ಸಿದ್ಧಾಂತದ ರಾಜಕಾರಣಕ್ಕಾಗಿ ಬಂದವರು: ಸಿ.ಟಿ.ರವಿ

ರಾಜ್ಯದ ಎಲ್ಲ ಕಡೆ ಸಮಸ್ಯೆ ಉಂಟಾಗಿಲ್ಲ: ವಿದ್ಯುತ್‌ ಬಿಲ್‌ ಪಾವತಿಸುವ ವಿಚಾರದಲ್ಲಿ ರಾಜ್ಯದ ಅಲ್ಲೊಂದು ಇಲ್ಲೊಂದು ವಿರೋಧದ ಕೂಗು ಕೇಳಿ ಬರುತ್ತಿದ್ದರೂ ಈವರೆಗೆ ಇದು ಎಸ್ಕಾಂಗೆ ದೊಡ್ಡಮಟ್ಟದ ಸಮಸ್ಯೆಯೇನೂ ಸೃಷ್ಟಿಸಿಲ್ಲ. ಬಹುತೇಕ ಕಡೆ ವಿದ್ಯುತ್‌ ಬಿಲ್‌ ವಸೂಲಿಯಲ್ಲಿ ಯಾವುದೇ ದೊಡ್ಡ ವ್ಯತ್ಯಾಸ ಕಂಡು ಬಂದಿಲ್ಲ ಎಂದು ಎಸ್ಕಾಂ ಅಧಿಕಾರಿಗಳು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!