ಚುನಾವಣೆಗೆ ನಾವು ಸಿದ್ಧ: ಲೋಕಸಭೆಗೂ ಕರ್ನಾಟಕದ ಗೆಲುವಿನ ತಂತ್ರದ ಪ್ರಯೋಗ : ಖರ್ಗೆ

By Kannadaprabha News  |  First Published Sep 18, 2023, 8:06 AM IST

ಏಕತೆ ಮತ್ತು ಸಂಘಟನಾ ಶಿಸ್ತು ಪಕ್ಷಕ್ಕೆ ಅಗತ್ಯ. ಈ ಮೂಲಕವೇ ನಾವು ಕರ್ನಾಟಕ ಚುನಾವಣೆ ಗೆದ್ದೆವು ಎಂದು ಪ್ರತಿಪಾದಿಸಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಮುಂಬರುವ ರಾಜ್ಯ ಮತ್ತು ಲೋಕಸಭೆ ಚುನಾವಣೆಗಳಲ್ಲಿ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷದ ಯಶಸ್ಸಿಗೆ ಆದ್ಯತೆ ನೀಡಬೇಕು ಎಂದು ಪಕ್ಷದ ನಾಯಕರಿಗೆ ಕರೆ ನೀಡಿದ್ದಾರೆ.


ಹೈದರಾಬಾದ್‌:  ಏಕತೆ ಮತ್ತು ಸಂಘಟನಾ ಶಿಸ್ತು ಪಕ್ಷಕ್ಕೆ ಅಗತ್ಯ. ಈ ಮೂಲಕವೇ ನಾವು ಕರ್ನಾಟಕ ಚುನಾವಣೆ ಗೆದ್ದೆವು ಎಂದು ಪ್ರತಿಪಾದಿಸಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಮುಂಬರುವ ರಾಜ್ಯ ಮತ್ತು ಲೋಕಸಭೆ ಚುನಾವಣೆಗಳಲ್ಲಿ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷದ ಯಶಸ್ಸಿಗೆ ಆದ್ಯತೆ ನೀಡಬೇಕು. 2024ರಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವುದೇ ಮಹಾತ್ಮಾ ಗಾಂಧೀಜಿಗೆ ಅತ್ಯಂತ ಸೂಕ್ತವಾದ ಗೌರವ’ ಎಂದು ಪಕ್ಷದ ನಾಯಕರಿಗೆ ಕರೆ ನೀಡಿದ್ದಾರೆ.

ಪಕ್ಷದ ವಿಸ್ತರಿತ 2ನೇ ದಿನದ ಸಿಡಬ್ಲುಸಿ ಸಭೆ (CWC Meeting) ಉದ್ದೇಶಿಸಿ ಭಾನುವಾರ ಮಾತನಾಡಿದ ಖರ್ಗೆ (Mallikarjuna Kharge), ‘ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವುದು ಮತ್ತು ದೇಶದಲ್ಲಿ ಪರ್ಯಾಯ ಸರ್ಕಾರ ರಚಿಸಲು ಶ್ರದ್ಧೆಯಿಂದ ಕೆಲಸ ಮಾಡುವುದು ಪಕ್ಷದ ಗುರಿಯಾಗಬೇಕು. 2024ರಲ್ಲಿ ಮಹಾತ್ಮಾ ಗಾಂಧೀಜಿ ಕಾಂಗ್ರೆಸ್‌ ಅಧ್ಯಕ್ಷರಾಗಿ ಚುನಾಯಿತರಾಗಿ 100 ವರ್ಷ ಸಂದಲಿದೆ. ಈ ಸಂದರ್ಭದಲ್ಲಿ ಬಿಜೆಪಿಯನ್ನು ಸೋಲಿಸುವುದೇ ಮಹಾತ್ಮನಿಗೆ ನೀಡುವ ನಿಜವಾದ ಶ್ರದ್ಧಾಂಜಲಿ’ ಎಂದರು.

Tap to resize

Latest Videos

ಮೋದಿ ಸರ್ಕಾರದ ವಿರುದ್ಧ ಕಟು ವಾಗ್ದಾಳಿ ನಡೆಸಿದ ಖರ್ಗೆ, ‘ಮೋದಿ ಸರ್ಕಾರ (Modi Govt) ರಾಜಕೀಯ ಮಾಡುತ್ತಿದ್ದು, ಹೊಸ ಕ್ರಮಗಳು ಹಾಗೂ ಕಾನೂನುಗಳನ್ನು ಘೋಷಿಸುವ ದೇಶದ ಜನರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ಮರೆ ಮಾಚುತ್ತಿದೆ. ಆದರ ಪಕ್ಷದ ಮುಖಂಡರು ಮೂಲ ಸಮಸ್ಯೆಗಳನ್ನು ಪ್ರಸ್ತಾಪಿಸುವತ್ತ ಮಾತ್ರ ಗಮನ ಹರಿಸಬೇಕು. ಬಿಜೆಪಿಯ ದಿಕ್ಕು ತಪ್ಪಿಸುವ ಕ್ರಮಗಳಿಗೆ ಪ್ರತಿಕ್ರಿಯಿಸುವ ಗೋಜಿಗೆ ಹೋಗಬಾರದು’ ಎಂದು ಕಿವಿಮಾತು ಹೇಳಿದರು.

ಇತ್ತೀಚೆಗೆ, ಇಂಡಿಯಾ ಮೈತ್ರಿಕೂಟದ (India Alliance) ಮುಂಬೈ ಸಭೆ ನಡೆಸುತ್ತಿರುವ ವೇಳೆಯೇ ಮೋದಿ ಸರ್ಕಾರವು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಸಮಿತಿ ರಚಿಸಿತು. ಎಲ್ಲಾ ಸಂಪ್ರದಾಯಗಳಿಗೆ ವಿರುದ್ಧವಾಗಿ, ಇದು ತನ್ನ ಕಾರ್ಯಸೂಚಿ ಪೂರೈಸಲು ಮಾಜಿ ರಾಷ್ಟ್ರಪತಿಯನ್ನು ಆ ಕುರಿತ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದೆ ಎಂದು ಖರ್ಗೆ ಕಿಡಿಕಾರಿದರು. 5 ರಾಜ್ಯಗಳಲ್ಲಿ 2-3 ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಲೋಕಸಭೆ ಚುನಾವಣೆಗೆ ಇನ್ನು 6 ತಿಂಗಳು ಮಾತ್ರ ಬಾಕಿ ಇದೆ. ಜಮ್ಮು- ಕಾಶ್ಮೀರದಲ್ಲಿ (Jammu Kashmir) ಸಂಭವನೀಯ ವಿಧಾನಸಭಾ ಚುನಾವಣೆಗೆ ಪಕ್ಷವು ಸಿದ್ಧವಾಗಿರಬೇಕು ಎಂದು ಖರ್ಗೆ ಕರೆ ನೀಡಿದರು.

ಕರ್ನಾಟಕ ಮಾದರಿ:

ಜನರು ಪರ್ಯಾಯವನ್ನು ಹುಡುಕುತ್ತಿದ್ದಾರೆ. ಹಿಮಾಚಲ ಪ್ರದೇಶ (Himachal Pradesh) ಮತ್ತು ಕರ್ನಾಟಕ ಚುನಾವಣೆಗಳಲ್ಲಿ (Karnataka Election) ಪಕ್ಷದ ಗೆಲುವು ಇದಕ್ಕೆ ಸ್ಪಷ್ಟ ಸಾಕ್ಷಿ. ಹೀಗಾಗಿ ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ನಾವು ಕೆಲಸ ಮಾಡಬೇಕು ಎಂದು ಒತ್ತಿ ಹೇಳಿದರು.

‘ಸಂಘಟನೆಯ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ನಾಯಕರು ಸ್ವಯಂ ಸಂಯಮ ಹೊಂದಬೇಕು ಮತ್ತು ತಮ್ಮ ಪಕ್ಷದ ಸಹೋದ್ಯೋಗಿಗಳು ಅಥವಾ ಪಕ್ಷದ ವಿರುದ್ಧ ಮಾಧ್ಯಮಗಳ ಮುಂದೆ ಹೇಳಿಕೆ ನೀಡಬಾರದು. ಏಕತೆ ಮತ್ತು ಶಿಸ್ತಿನ ಮೂಲಕ ಮಾತ್ರ ನಾವು ನಮ್ಮ ವಿರೋಧಿಗಳನ್ನು ಸೋಲಿಸಬಹುದು. ಇದು ಕರ್ನಾಟಕದಲ್ಲಿ ಎದ್ದುಕಾಣುತ್ತಿದೆ, ಅಲ್ಲಿ ನಾವು ಒಗ್ಗಟ್ಟಾಗಿ ಮತ್ತು ಶಿಸ್ತಿನಿಂದ ಹೋರಾಡಿ ಯಶಸ್ಸು ಸಾಧಿಸಿದ್ದೇವೆ’ ಎಂದು ಅವರು ಹೇಳಿದರು.

‘ಇದು ನಮಗೆ ವಿಶ್ರಾಂತಿ ಸಮಯವಲ್ಲ. ಕಳೆದ 10 ವರ್ಷಗಳಲ್ಲಿ ಬಿಜೆಪಿ ಆಡಳಿತದಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ಸವಾಲುಗಳು ಹಲವು ಪಟ್ಟು ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ ಬಡವರು, ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಯುವಕರ ಸಮಸ್ಯೆ ನಿವಾರಣೆಗೆ ಮುಂದಾಗುತ್ತಿಲ್ಲ. ಅಂತಹ ಸಂದರ್ಭಗಳಲ್ಲಿ, ನಾವು ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ಉಳಿಸಲು ಈ ‘ಸರ್ವಾಧಿಕಾರಿ ಸರ್ಕಾರ’ ವನ್ನು ಒಗ್ಗೂಡಿ ಉರುಳಿಸಬೇಕು. ಅದುವೇ ಗಾಂಧೀಜಿಗೆ ನಾವು ನೀವು ನೈಜ ಗೌವವ’ ಎಂದು ಕರೆ ನೀಡಿದರು.

5 ರಾಜ್ಯ, ಲೋಕ ಚುನಾವಣೆಯಲ್ಲಿ ಜನಾದೇಶದ ವಿಶ್ವಾಸ

ಹೈದರಾಬಾದ್‌:  ಚುನಾವಣೆಗೆ ತಾನು ಸಿದ್ಧ ಎಂದು ಪ್ರತಿಪಾದಿಸಿರುವ ಕಾಂಗ್ರೆಸ್, ಮುಂಬರುವ 5 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ಜನಾದೇಶ ಪಡೆಯುವ ವಿಶ್ವಾಸವನ್ನು ಭಾನುವಾರ ವ್ಯಕ್ತಪಡಿಸಿದೆ. ಇದೇ ವೇಳೆ, 2024ರ ಲೋಕಸಭೆ ಚುನಾವಣೆಗೆ ಪಕ್ಷದ ಸಂಘಟನಾತ್ಮಕವಾಗಿ ಸಿದ್ಧವಾಗಿದೆ ಪುನರುಚ್ಚರಿಸಿದ ಅವರು, ದೇಶದ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದು ಹೇಳಿದೆ. ಶನಿವಾರವೇ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆ ಮುಗಿಯಬೇಕಿತ್ತು. ಆದರೆ 2ನೇ ದಿನವೂ ಕಾರ್ಯಕಾರಿಣಿ ವಿಸ್ತರಿತಗೊಂಡು ಅಲ್ಲಿ ಮೊದಲ ದಿನದ 14 ನಿರ್ಣಯಗಳಲ್ಲದೆ ಹಲವು ಹೆಚ್ಚುವರಿ ನಿರ್ಣಯಗಳನ್ನು ಕೈಲೊಳ್ಳಲಾಯಿತು.

‘ಶೀಘ್ರದಲ್ಲೇ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಛತ್ತೀಸ್‌ಗಢ, ಮಧ್ಯಪ್ರದೇಶ (Madhya Pradesh), ಮಿಜೋರ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ಜನರಿಂದ ಕಾಂಗ್ರೆಸ್ ಪಕ್ಷ ನಿರ್ಣಾಯಕ ಜನಾದೇಶವನ್ನು ಪಡೆಯಲಿದೆ‘ ಎಂಬ ವಿಶ್ವಾಸವನ್ನು ಅದು ವ್ಯಕ್ತಪಡಿಸಿದೆ. ‘ಕಾಂಗ್ರೆಸ್ ಪಕ್ಷ ಮುಂದಿನ ಹೋರಾಟಕ್ಕೆ ಸಂಪೂರ್ಣ ಸಿದ್ಧವಾಗಿದೆ. ದೇಶದ ಜನತೆ ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂಬ ವಿಶ್ವಾಸವಿದೆ’ ಎಂದು ಹೇಳಲಾಗಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಲಾಗಿದೆ.

‘ನಾವು ಕಾನೂನು ಮತ್ತು ಸುವ್ಯವಸ್ಥೆ, ಸ್ವಾತಂತ್ರ್ಯ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯ, ಸಮಾನತೆ ಮತ್ತು ಸಮಾನತೆಯ ಅವರ ನಿರೀಕ್ಷೆಗಳನ್ನು ಪೂರೈಸುತ್ತೇವೆ’ ಎಂದು ಅದು ವಾಗ್ದಾನ ನೀಡಿದೆ. ಶನಿವಾರದ ಸಭೆಯಲ್ಲಿ ಪಕ್ಷವು ‘ವಿಭಜಕ ರಾಜಕೀಯ’ ದಿಂದ ದೇಶವನ್ನು ಮುಕ್ತಗೊಳಿಸಲು ಮತ್ತು ಜನರು ಸಂವೇದನಾಶೀಲ ಮತ್ತು ಜವಾಬ್ದಾರಿಯುತ ಸರ್ಕಾರವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ವಿಪಕ್ಷಗಳ ಇಂಡಿಯಾ ಕೂಟದ ಗೆಲುವಿಗೆ ಶ್ರಮಿಸುವುದಾಗಿ 14 ಅಂಶಗಳ ನಿರ್ಣಯ ಕೈಗೊಂಡಿತ್ತು.

click me!