ವಿಧಾನಸಭೆ ಚುನಾವಣೆಗೆ ರಣಕಹಳೆ : ತೆಲಂಗಾಣದಲ್ಲೂ ರಾಜ್ಯದಂತೆ ಕಾಂಗ್ರೆಸ್‌ನಿಂದ ಉಚಿತಗಳ ಮಳೆ

Published : Sep 18, 2023, 07:21 AM ISTUpdated : Sep 18, 2023, 07:27 AM IST
ವಿಧಾನಸಭೆ ಚುನಾವಣೆಗೆ ರಣಕಹಳೆ : ತೆಲಂಗಾಣದಲ್ಲೂ ರಾಜ್ಯದಂತೆ ಕಾಂಗ್ರೆಸ್‌ನಿಂದ ಉಚಿತಗಳ ಮಳೆ

ಸಾರಾಂಶ

ನಿರೀಕ್ಷೆಯಂತೆ ಕರ್ನಾಟಕದ ವಿಧಾನಸಭಾ ಚುನಾವಣೆಯ ಗೆಲುವಿನ ಮಾದರಿಯನ್ನು ನೆರೆಯ ತೆಲಂಗಾಣದಲ್ಲೂ ಜಾರಿಗೆ ತರಲು ಮುಂದಾಗಿರುವ ಕಾಂಗ್ರೆಸ್‌, ತೆಲಂಗಾಣ ವಿಧಾನಸಭಾ ಚುನಾವಣೆಗಾಗಿ 6 ಯೋಜನೆಗಳಡಿ ತರಹೇವಾರಿ ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ.

ಹೈದರಾಬಾದ್‌: ನಿರೀಕ್ಷೆಯಂತೆ ಕರ್ನಾಟಕದ ವಿಧಾನಸಭಾ ಚುನಾವಣೆಯ ಗೆಲುವಿನ ಮಾದರಿಯನ್ನು ನೆರೆಯ ತೆಲಂಗಾಣದಲ್ಲೂ ಜಾರಿಗೆ ತರಲು ಮುಂದಾಗಿರುವ ಕಾಂಗ್ರೆಸ್‌, ತೆಲಂಗಾಣ ವಿಧಾನಸಭಾ ಚುನಾವಣೆಗಾಗಿ 6 ಯೋಜನೆಗಳಡಿ ತರಹೇವಾರಿ ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಹಾಗೂ ಪಕ್ಷಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಗ್ಯಾರಂಟಿಗಳನ್ನು ಘೋಷಿಸಿದ್ದಾರೆ.

ಮನೆಯ ಯಜಮಾನಿಗೆ ಮಾಸಿಕ 2,500 ರು. ಆರ್ಥಿಕ ನೆರವು, 500 ರು. ದರದಲ್ಲಿ ಮನೆಗೆ ಅಡುಗೆ ಗ್ಯಾಸ್ ಸಿಲಿಂಡರ್, ರಾಜ್ಯಾದ್ಯಂತ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ರೈತರಿಗೆ ವರ್ಷಕ್ಕೆ 15 ಸಾವಿರ ರು. ನೆರವು, ಎಲ್ಲ ಮನೆಗಳಿಗೂ 200 ಯೂನಿಟ್‌ ಉಚಿತ ವಿದ್ಯುತ್‌, ಮನೆ ಇಲ್ಲದವರಿಗೆ ಸೈಟ್‌ ಹಾಗೂ 5 ಲಕ್ಷ ರು., ವಿದ್ಯಾರ್ಥಿಗಳಿಗೆ 5 ಲಕ್ಷ ರು. ವಿದ್ಯಾ ಭರೋಸಾ ಕಾರ್ಡ್‌, ಹಿರಿಯರಿಗೆ ಮಾಸಿಕ 4 ಸಾವಿರ ರು. ಪಿಂಚಣಿ- ಇವು ವಿವಿಧ 6 ಯೋಜನೆಗಳಲ್ಲಿ ಕಾಂಗ್ರೆಸ್‌ ಘೋಷಿಸಿರುವ ಗ್ಯಾರಂಟಿಗಳು.

ಮಹಾಲಕ್ಷ್ಮಿ ಯೋಜನೆ:

ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಗೆ ಆಗಮಿಸಿದ್ದ ಪಕ್ಷದ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರು ರಾಜ್ಯದ ರಂಗಾರೆಡ್ಡಿ (Rangareddy District) ಜಿಲ್ಲೆಯ ತುಕ್ಕುಗುಡಾದಲ್ಲಿ ನಡೆದ ರ್‍ಯಾಲಿಯಲ್ಲಿ ಭಾನುವಾರ ಸಂಜೆ ಮಾತನಾಡಿ, ‘ತೆಲಂಗಾಣದ ಮಹಿಳೆಯರಿಗೆ ಮಹಾಲಕ್ಷ್ಮಿ ಯೋಜನೆಯಡಿ ಮಾಸಿಕ 2,500 ರು. ಆರ್ಥಿಕ ನೆರವು, 500 ರು. ದರದಲ್ಲಿ ಗ್ಯಾಸ್ ಸಿಲಿಂಡರ್, ರಾಜ್ಯಾದ್ಯಂತ ಟಿಎಸ್‌ಆರ್‌ಸಿ (TSRTC) ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ- ಇವು ನಾವು ತೆಲಂಗಾಣ ಜನತೆಯ ಆಶೋತ್ತರಗಳನ್ನು ಈಡೇರಿಸಲು ನೀಡುತ್ತಿರುವ ಭರವಸೆಗಳು. ಅವುಗಳಲ್ಲಿ ಪ್ರತಿಯೊಂದನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ. ತೆಲಂಗಾಣದಲ್ಲಿ ಕಾಂಗ್ರೆಸ್‌ ಸರ್ಕಾರ ನೋಡಬೇಕು ಎಂಬುದು ನನ್ನ ಕನಸು’ ಎಂದರು.

ರೈತ ಭರೋಸಾ ಯೋಜನೆ:

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ರೈತ ಭರೋಸಾ (ರೈತ ಭರವಸೆ) ಯೋಜನೆಯಡಿ ಪ್ರತಿ ವರ್ಷಕ್ಕೆ ರೈತರು ಹಾಗೂ ಗುತ್ತಿಗೆ ಆಧಾರದಲ್ಲಿ ಇನ್ನೊಬ್ಬರ ಜಮೀನನ್ನು ಪಡೆದಿರುವ ರೈತರಿಗೆ 15 ಸಾವಿರ ರು. ಲಭಿಸಲಿದೆ. ಕೃಷಿ ಕಾರ್ಮಿಕರಿಗೆ ವರ್ಷಕ್ಕೆ 12 ಸಾವಿರ ರು. ದೊರಕಲಿದ್ದು, ಭತ್ತದ ಬೆಳೆಗೆ 500 ರು. ಬೋನಸ್‌ ಸಿಗಲಿದೆ’ ಎಂದು ಪ್ರಕಟಿಸಿದರು.

ಇನ್ನುಳಿದ ಘೋಷಣೆಗಳನ್ನು ಪಕ್ಷವು ಆನಂತರ ಪ್ರಕಟಿಸಿತು.


ಮಹಾಲಕ್ಷ್ಮೀ
2500 ರು. ಪ್ರತಿ ತಿಂಗಳು ಮಹಿಳೆಯರಿಗೆ
500 ರು.ಗೆ ಅಡುಗೆ ಅನಿಲ ಸಿಲಿಂಡರ್‌
ಮಹಿಳೆಯರಿಗೆ ಬಸ್‌ ಪ್ರಯಾಣ ಉಚಿತ

ಗೃಹಜ್ಯೋತಿ
ಎಲ್ಲಾ ಮನೆಗಳಿಗೆ ಮಾಸಿಕ 200 ಯುನಿಟ್‌ ಉಚಿತ ವಿದ್ಯುತ್

ರೈತು ಭರೋಸಾ
ರೈತರು, ಗುತ್ತಿಗೆ ರೈತರಿಗೆ ವಾರ್ಷಿಕ 15,000 ರು. ನೆರವು
ರೈತ ಕಾರ್ಮಿಕರಿಗೆ ವಾರ್ಷಿಕ 12,000 ರು. ನೆರವು
ಭತ್ತ ಬೆಳೆಯುವವರಿಗೆ 500 ರು. ಬೋನಸ್‌

ಇಂದಿರಮ್ಮ ಇಲ್ಲು
ಸ್ವಂತ ಮನೆ ಇಲ್ಲದವರಿಗೆ 1 ಸೈಟ್‌ ಹಾಗೂ 5 ಲಕ್ಷ ರು. ನೆರವು
ಇನ್ನು ತೆಲಂಗಾಣ ವಿಮೋಚನೆ ಹೋರಾಟಗಾರರಿಗೆ 250 ಚದರ ಯಾರ್ಡ್‌ ಸೈಟ್‌

ಯುವ ವಿಕಾಸಂ
ವಿದ್ಯಾರ್ಥಿಗಳಿಗೆ 5 ಲಕ್ಷ ರು. ಮೌಲ್ಯದ ವಿದ್ಯಾ ಭರೋಸಾ ಕಾರ್ಡ್‌

ಚೇಯುತಾ
ಹಿರಿಯ ನಾಗರಿಕರು, ವಿಧವೆಯರು, ಏಕಾಂಗಿ ಮಹಿಳೆಯರು, ಅಂಗವಿಕಲರು, ಬೀಡಿ ಕಾರ್ಮಿಕರು, ಸೇಂದಿ ಇಳಿಸುವವರು,
ಏಡ್ಸ್‌ ಸೋಂಕಿಗೆ ತುತ್ತಾದವರು, ಕಿಡ್ನಿ ಸಮಸ್ಯೆಗೆ ತುತ್ತಾದವರಿಗೆ ಮಾಸಿಕ 4000 ರು. ಪಿಂಚಣಿ. 10 ಲಕ್ಷ ರು. ಮೌಲ್ಯದ ಆರೋಗ್ಯ ವಿಮೆ

ಮಾಧ್ಯಮಗಳ ಎದುರು ಹೇಳಿಕೆ ನಿಲ್ಲಿಸಿ: ಸೋನಿಯಾ ಕಿವಿಮಾತು

ನವದೆಹಲಿ: ಮಾಧ್ಯಮಗಳಿಂದ ಆದಷ್ಟು ದೂರ ಇರುವಂತೆ ಮತ್ತು ಬಹಿರಂಗ ಹೇಳಿಕೆ ನೀಡದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ. ಈ ಹಿಂದೆ ಕರ್ನಾಟಕದ ವಿಧಾನಸಭಾ ಚುನಾವಣೆಯ ವೇಳೆ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದ ನಾಯಕರನ್ನು ಸುಮ್ಮನಿರಿಸಲು ಇದೇ ತಂತ್ರ ರೂಪಿಸಿದ್ದ ಕಾಂಗ್ರೆಸ್‌ ಇದೀಗ, ಪಂಚರಾಜ್ಯ ಚುನಾವಣೆಗೂ ಮುನ್ನ ಪಕ್ಷದ ನಾಯಕರಿಗೆ ಮತ್ತೆ ಅಂಥದ್ದೇ ಸಂದೇಶ ರವಾನಿಸುವ ಮೂಲಕ ಪಕ್ಷಕ್ಕೆ ಸಾರ್ವಜನಿಕವಾಗಿ ಮುಜುಗರ ತಪ್ಪಿಸುವ ಯತ್ನಕ್ಕೆ ಕೈಹಾಕಿದೆ. ಭಾನುವಾರ ಹೈದರಾಬಾದ್‌ನಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಎರಡನೇ ದಿನದ ಸಭೆಯಲ್ಲಿ ಮಾತನಾಡಿದ ಸೋನಿಯಾ, ‘ಪಕ್ಷದ ಹಿತಾಸಕ್ತಿಗೆ ಧಕ್ಕೆ ತರುವಂತಹ ಯಾವುದೇ ಹೇಳಿಕೆಗಳನ್ನು ಮಾಧ್ಯಮದ ಮುಂದೆ ನೀಡುವುದನ್ನು ತಪ್ಪಿಸಿ ಹಾಗೂ ಸ್ವಯಂ ಸಂಯಮವನ್ನು ಕಾಪಾಡಿಕೊಳ್ಳಿ’ ಎಂದು ನಾಯಕರಿಗೆ ಸೂಚಿಸಿದ್ದಾರೆ.

ಇತ್ತೀಚೆಗಷ್ಟೇ ಕಾಂಗ್ರೆಸ್‌ ಮತ್ತು ಇಂಡಿಯಾ ಮೈತ್ರಿಕೂಟದ ಪಕ್ಷಗಳು ರಾಷ್ಟ್ರೀಯ ಸುದ್ದಿವಾಹಿನಿಯ 10 ನಿರೂಪಕರಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದ್ದವು.

3 ಡಿಸಿಎಂ ನೇಮಕ ಹೈಕಮಾಂಡಿಗೆ ಬಿಟ್ಟ ವಿಚಾರ: ಸಿಎಂ ಸಿದ್ದು

ರಾಜ್ಯದಲ್ಲಿ ಮೂವರು ಡಿಸಿಎಂಗಳನ್ನು ಮಾಡಬೇಕು ಎಂದು ರಾಜಣ್ಣ ಹೇಳಿದ್ದಾರೆ. ಈ ಬಗ್ಗೆ ಹೈಕಮಾಂಡ್‌ ನಿರ್ಧಾರ ಕೈಗೊಳ್ಳಬೇಕಲ್ವೇ? ಈ ವಿಚಾರದಲ್ಲಿ ನನಗೇನಿಲ್ಲ. ಹೈಕಮಾಂಡ್‌ ಏನು ಹೇಳುತ್ತೋ ಅದನ್ನು ಮಾಡುವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!