ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಜಾತಿಗೆ ಅಂಟಿಕೊಳ್ಳದ ಮತದಾರ

By Kannadaprabha NewsFirst Published Mar 24, 2024, 12:15 PM IST
Highlights

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಪಕ್ಷವಾಗಲಿ, ಯಾರೇ ಅಭ್ಯರ್ಥಿಯಾಲಿ ಮತದಾರರು ಮಾತ್ರ ಜಾತಿಗೆ ಅಂಟಿಕೊಳ್ಳದೆ ಅಭ್ಯರ್ಥಿ ಆಯ್ಕೆ ಮಾಡುತ್ತಿರುವುದು ಕ್ಷೇತ್ರದ ವಿಶೇಷ. ಆದರೆ ಈ ಬಾರಿ ಜಾತಿಯನ್ನು ಮುಂದು ಮಾಡಿಕೊಂಡೇ ಟಿಕೆಟ್ ಕೇಳುವ ಆಟ ಶುರುವಾದಂತಿದೆ.

ಚಿಕ್ಕಬಳ್ಳಾಪುರ(ಮಾ.24):  ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ವಿಶೇಷತೆ ಮೆರೆದಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವು 1967 ರಿಂದ ಇದುವರೆಗೆ 14 ಲೋಕಸಭಾ ಚುನಾವಣೆಗಳನ್ನು ಕಂಡಿದ್ದರೂ ಎಂದೂ ಬಲಾಢ್ಯ ಜಾತಿಗಳ ಸಂಕೋಲೆಗೆ ಅಂಟಿಕೊಂಡಿಲ್ಲ. ಬಹುತೇಕ ಬಾರಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮಣೆ ಹಾಕಿರುವುದು ಈ ಕ್ಷೇತ್ರದ ವಿಶೇಷತೆ.

1967 ರ ಮೊದಲ ಚುನಾವಣೆಯಲ್ಲಿ ಆಯ್ಕೆಯಾಗಿ ಲೋಕಸಭೆ ಪ್ರವೇಶ ಮಾಡಿದ ಬಾಗೇಪಲ್ಲಿ ತಾಲೂಕಿನ ತೋಳಪಲ್ಲಿ ಗ್ರಾಮದ ಸುಧಾ.ವಿ. ರೆಡ್ಡಿ, ಸಿ. ಮಲ್ಲಣ್ಣ, ಮಾಲಿ ಮರಿಯಪ್ಪ, ಎಂ.ವಿ. ಕೃಷ್ಣಪ್ಪ, ವಿ. ಕೃಷ್ಣರಾವ್(ಮೂರು ಬಾರಿ),ಆರ್‌ಎಲ್. ಜಾಲಪ್ಪ (ಮೂರು ಬಾರಿ) ವೀರಪ್ಪ ಮೊಯ್ಲಿ(ಎರಡು ಬಾರಿ) ಬಿ.ಎನ್. ಬಚ್ಚೇಗೌಡ ವರೆಗೆ ಈ ಕ್ಷೇತ್ರವು ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎನಿಸಿದೆ. 1996ರಲ್ಲಿ ಒಮ್ಮೆ ಆರ್.ಎಲ್. ಜಾಲಪ್ಪ ಜೆಡಿಎಸ್‌ನಿಂದ,2019ರಲ್ಲಿ ಬಿ.ಎನ್. ಬಚ್ಚೇಗೌಡ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದು ಬಿಟ್ಟರೆ ಉಳಿದ 12 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳೇ ಜಯಶೀಲರಾಗಿದ್ದಾರೆ.

LOK SABHA ELECTION 2024: ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ?

ಅಹಿಂದ ವರ್ಗಗಳಿಗೆ ಮನ್ನಣೆ

1967ಕ್ಕೂ ಮೊದಲು ಮಧುಗಿರಿ ಲೋಕಸಭಾ ಕ್ಷೇತ್ರವಾಗಿದ್ದು ಇದರ ವ್ಯಾಪ್ತಿಗೆ ಮಧುಗಿರಿ, ನೆಲಮಂಗಲ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಚಿಂತಾಮಣಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿತ್ತು. ಮಧುಗಿರಿ ಹೊರತುಪಡಿಸಿ ನೂತನ ಕ್ಷೇತ್ರವಾಗಿ ಬದಲಾದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವು ಈಗ ಯಲಹಂಕ, ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಗೌರಿಬಿದನೂರು, ನೆಲಮಂಗಲ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

ಇಲ್ಲಿ ಮೊದಲ ಹಿಂದುಳಿದ ವರ್ಗದ ಸಂಸದರಾಗಿ ಈಡಿಗ ಜನಾಂಗಕ್ಕೆ ಸೇರಿದ ಆರ್.ಎಲ್. ಜಾಲಪ್ಪ 3 ಬಾರಿ, ದೇವಾಡಿಗ ಸಮಾಜಕ್ಕೆ ಸೇರಿದ ವೀರಪ್ಪ ಮೊಯ್ಲಿ 2 ಬಾರಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ವಿ. ಕೃಷ್ಣರಾವ್ 3 ಬಾರಿ ಸಂಸದರಾಗಿ ಆಯ್ಕೆಯಾದರು. 40 ವರ್ಷಗಳ ಕಾಲ ಹಿಂದುಳಿದ ವರ್ಗಕ್ಕೆ ಮನ್ನಣೆ ನೀಡಿದ ಕ್ಷೇತ್ರ ಇದಾಗಿದೆ.

ಬಚ್ಚೇಗೌಡರ ಬಗ್ಗೆ ಅಪಸ್ವರ

2019 ರಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಎನ್. ಬಚ್ಚೇಗೌಡ ಮೋದಿ ಅಲೆಯಲ್ಲಿ ಜಯಶೀಲರರಾದರೂ 5 ವರ್ಷಗಳ ಅವಧಿಯಲ್ಲಿ ಹೇಳಿಕೊಳ್ಳುವಂತೆ ಸಾಧನೆ ಮಾಡಲಿಲ್ಲ ಎಂಬ ಆರೋಪವಿದೆ. ಕ್ಷೇತ್ರಕ್ಕೆ ಕೇವಲ ಕೆಡಿಪಿ ಸಭೆಗಳಿಗೆ ಬಂದು ಹೋಗುತ್ತಿದ್ದ ಇವರು ಜನರಿಗೆ ಅಲಭ್ಯರಾಗಿಯೇ ಉಳಿದವರು. ಈ ಬಾರಿ ಮಾಜಿ ಸಚಿವ ಡಾ.ಕೆ. ಸುಧಾಕರ್ ಬಿಜೆಪಿ ಅಭ್ಯರ್ಥಿಯಾದರೆ ಜಯ ಖಚಿತ ಎಂಬುದು ಒಕ್ಕಲಿಗ ಮುಖಂಡರ ಅಭಿಪ್ರಾಯ.

ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ

ಸರಿಸುಮಾರು 19 ಲಕ್ಷ ಮತದಾರರನ್ನು ಹೊಂದಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಪ್ರಸ್ತುತ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ, ಮತ್ತು ಕಾಂಗ್ರೆಸ್ ಅಭ್ಯರ್ಥಿ ನಡುವೆ ನೇರ ಹಣಾಹಣಿ ಏರ್ಪಡಲಿದೆ. ಮಾಜಿ ಸಚಿವ ಡಾ.ಕೆ. ಸುಧಾಕರ್ ಹಾಗೂ ಯಲಹಂಕ ಶಾಸಕ ವಿಶ್ವನಾಥ್‌ ಪುತ್ರ ಅಲೋಕ ವಿಶ್ವನಾಥ್ ನಡುವೆ ಬಿಜೆಪಿ ಟಿಕೆಟ್‌ಗೆ ಪೈಪೋಟಿ ನಡೆಸಿದ್ದಾರೆ. ಎಂಪಿ ಸ್ಥಾನದ ಕನಸುಕಂಡು ಕ್ಷೇತ್ರದಾದ್ಯಂತ ಓಡಾಡುತ್ತಿರುವ ಸಿ.ಬಿ.ಲೋಕೇಶ್‌ಗೌಡ, ಮಾಜಿ ಸಚಿವ ಎಂಟಿಬಿ ನಾಗರಾಜ್ ಇವರು ಕೂಡ ಮೈತ್ರಿ ಕೂಟದ ಟಿಕೆಟ್‌ಗಾಗಿ ಶತಪ್ರಯತ್ನ ನಡೆಸಿದ್ದಾರೆ.

ಚಿಕ್ಕಬಳ್ಳಾಪುರ ಬಿಜೆಪಿಯ ಭದ್ರಕೋಟೆ ಆಗಬೇಕು: ಮಾಜಿ ಸಚಿವ ಡಾ.ಕೆ.ಸುಧಾಕರ್‌

ಕಾಂಗ್ರೆಸ್ಸಿನದೂ ಅದೇ ದಾರಿ

ಇನ್ನು ಕಾಂಗ್ರೆಸ್‌ನಲ್ಲಿ 2009 ಮತ್ತು 2014ರಲ್ಲಿ ಎರಡು ಬಾರಿ ಗೆದ್ದಿರುವ ಹಾಗೂ 2019ರಲ್ಲಿ ಪರಾಭವಗೊಂಡಿರುವ ಡಾ.ಎಂ.ವೀರಪ್ಪಮೊಯ್ಲಿ ಟಿಕೆಟ್‌ಗಾಗಿ ಓಡಾಡುತ್ತಿದ್ದಾರೆ. ಇದೇ ಪಕ್ಷದ ಮತ್ತೊಬ್ಬ ಆಕಾಂಕ್ಷಿ ಎಂಎಲ್‌ಸಿ ಸೀತಾರಾಮ್ ಪುತ್ರ ಹಾಗೂ ಎಐವೈಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಸಹ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಈ ನಡುವೆ ಇನ್ನೊಬ್ಬ ಆಕಾಂಕ್ಷಿ ಸತತ ಐದು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು 6 ನೇ ಬಾರಿ ಸೋತಿರುವ ಗೌರಿಬಿದನೂರಿನ ಎನ್.ಎಚ್. ಶಿವಶಂಕರ ರೆಡ್ಡಿ ತಾವೂ ಸಹ ಟಿಕೆಟ್‌ ಆಕಾಂಕ್ಷಿ ಎಂದು ಗಾಗಿ ನಾನೂ ಆಕಾಂಕ್ಷಿ ಎಂದಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಪಕ್ಷವಾಗಲಿ, ಯಾರೇ ಅಭ್ಯರ್ಥಿಯಾಲಿ ಮತದಾರರು ಮಾತ್ರ ಜಾತಿಗೆ ಅಂಟಿಕೊಳ್ಳದೆ ಅಭ್ಯರ್ಥಿ ಆಯ್ಕೆ ಮಾಡುತ್ತಿರುವುದು ಕ್ಷೇತ್ರದ ವಿಶೇಷ. ಆದರೆ ಈ ಬಾರಿ ಜಾತಿಯನ್ನು ಮುಂದು ಮಾಡಿಕೊಂಡೇ ಟಿಕೆಟ್ ಕೇಳುವ ಆಟ ಶುರುವಾದಂತಿದೆ.

click me!