ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಸೀತನಾಯಕನಹಳ್ಳಿಯಲ್ಲಿ ದೇವಾಲಯದ ಸರ್ಕಾರಿ ಜಮೀನನ್ನು ಸ್ಥಳೀಯ ತಾಲ್ಲೂಕು ಕಂದಾಯ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡಿರುವ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದ್ದು ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ ಮಾಡಿದ್ದಾರೆ.
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ(ಏ.18): ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚಿನ್ನದ ನಾಡು ಕೋಲಾರದಲ್ಲಿ ಪ್ರತಿಭಟನೆಯ ಕಾವು, ಬಹಿಷ್ಕಾರದ ಎಚ್ಚರಿಕೆಯೂ ಸಹ ಜೋರಾಗಿದೆ. ಇದೀಗ ಮಾಲೂರು ತಾಲ್ಲೂಕಿನ ಸೀತನಾಯಕನಹಳ್ಳಿಯಲ್ಲಿ ದೇವಾಲಯದ ಸರ್ಕಾರಿ ಜಮೀನನ್ನು ಸ್ಥಳೀಯ ತಾಲ್ಲೂಕು ಕಂದಾಯ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡಿರುವ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದ್ದು ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ ಮಾಡಿದ್ದಾರೆ.
ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸೀತನಾಯಕನಹಳ್ಳಿ ಗ್ರಾಮಸ್ಥರೆಲ್ಲಾ ಭರಣಿಯಮ್ಮ ದೇವಾಲಯದ ಸರ್ವೆ ನಂ- 24 ರ 7 ಎಕರೆ 10 ಗುಂಟೆಯಿರುವ ಮೂವತ್ತು ಕೋಟಿ ಮೌಲ್ಯದ ಜಾಗವನ್ನು ರಕ್ಷಿಸಲು ಮುಂದಾಗಿದ್ದಾರೆ.
undefined
ಭರಣಿಯಮ್ಮ ದೇವಾಲಯಕ್ಕೆ ತನ್ನದೇ ಆದ ಇತಿಹಾಸವಿದ್ದು, ಇದರ ಜಾಗ ಸರ್ಕಾರಕ್ಕೆ ಸೇರಿದೆ ಅಂತ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.ಬಹಳಷ್ಟು ವರ್ಷಗಳಿಂದ ಈ ಭಾಗದ ಸರ್ಕಾರಿ ಅಧಿಕಾರಿಗಳು ಸರ್ಕಾರಕ್ಕೆ ತಿಳಿಯದಂತೆ ನಕಲಿ ದಾಖಲೆ ಸೃಷ್ಟಿಸಿ,ಭೂಗಳ್ಳರ ಜೊತೆಗೆ ಕೈ ಜೋಡಿಸಿ ಅಕ್ರಮ ಒತ್ತುವರಿಗೆ ಮುಂದಾಗಿದ್ದಾರೆ ಅಂತ ಆರೋಪ ಮಾಡಿದ್ದಾರೆ.
'ಅನುದಾನ ಕೇಳಿದ್ರೆ ಕಾಂಗ್ರೆಸ್ ಸೇರಿ ಅಂತಾರೆ'; ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಮೇಲೂರು ರವಿಕುಮಾರ್ ಅರೋಪ
ಇದೇ ವಿಚಾರವಾಗಿ 2011 ರಿಂದಲೂ ಗ್ರಾಮದ ಮುಖಂಡರು ಕಾನೂನು ಹೋರಾಟ ನಡೆಸುತ್ತಿದ್ದು, ಉಪವಿಭಾಗಾಧಿಕಾರಿಗಳಿಗೆ, ತಹಶಿಲ್ದಾರರಿಗೆ, ಜನಪ್ರತಿನಿಧಿಗಳಿಗೆ ಮನವಿಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಅಕ್ರಮ ಪರಭಾರೆ ತಡೆಗೆ ಯಾವುದೇ ಆದೇಶ ನೀಡಿಲ್ಲ,ಸರ್ಕಾರದ ಆಸ್ತಿ ಕಾಪಾಡುವಲ್ಲಿ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ವಿಫಲವಾಗಿವೆ ಅಂತ ಗ್ರಾಮಸ್ಥರು ಆಕ್ರೋಶಗೊಂಡು ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ ಮಾಡಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಗ್ರಾಮದ ಮುಖಂಡರಾದ ಅಂಬರೀಶ್ ರೆಡ್ಡಿ, ನಾವು ಈ ಜಾಗದ ವಿಚಾರವಾಗಿ 2011 ರಿಂದಲೂ ಹೋರಾಟ ಮಾಡುತ್ತಿದ್ದೇವೆ. ನಾವು ಹಲವು ಬಾರಿ ಮನವಿಪತ್ರ ಕೊಟ್ಟರೂ ಅದು ಎಲ್ಲಿ ಹೋಗುತ್ತದೋ ಗೊತ್ತಿಲ್ಲ. ಭರಣಿಯಮ್ಮ ದೇವಸ್ಥಾನದ ಜಮೀನು ಸರ್ಕಾರಕ್ಕೆ ಸೇರಿದ್ದು, ಅದರ ಬಗ್ಗೆ ಮೂರು ರೀತಿಯ ವಿಭಿನ್ನ ಆದೇಶಗಳನ್ನು ತಹಶಿಲ್ದಾರ್ ನೀಡಿದ್ದಾರೆ. ಆ ಮೂಲಕ ಭೂಗಳ್ಳರ ಜೊತೆಗೆ ಅವರೂ ಸಹ ಕೈ ಜೋಡಿಸಿ ಅಕ್ರಮ ಖಾತೆಗೆ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.