
ಸಾವಳಗಿ(ಏ.16): 2029ರ ಲೋಕಸಭೆ ಚುಣಾವಣೆಯಲ್ಲಿ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ. ನೀನು ನನ್ನ ವಿರುದ್ಧ ಸ್ಪರ್ಧಿಸಲು ತಯಾರಾಗು. ಒಮ್ಮೆ ತಾಕತ್ತು ನೋಡೋಣ ಎಂದು ಸಚಿವ ಶಿವಾನಂದ ಪಾಟೀಲ್ ವಿರುದ್ಧ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲೆಸೆದರು.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪರ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಎಲ್ಲರಿಗೂ ಮಾತನಾಡಿದಂತೆ ನನಗೆ ಮಾತನಾಡಿದರೆ ನಡೆಯುವುದಿಲ್ಲ. ನಾವು ವಿಜಯಪುರ ಪಕ್ಕಕ್ಕೆ ಸರಿಸಿದ್ದೇವೆ. ಇಲ್ಲಿ ಬಂದು ಮರಳು ಮಾಡುತ್ತಿದ್ದಾನೆ. ಬಾಗಲಕೋಟೆಯಲ್ಲಿ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳು ಇಲ್ಲವಾ? ಇಲ್ಲಿ ಅವರ ಮಗಳ ಪರ ಪ್ರಚಾರ ಮಾಡಿ ವಿಜಯಪುರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾನೆ ಎಂದು ಏಕವಚನದಲ್ಲಿ ಹರಿಹಾಯ್ದರು.
ಯತ್ನಾಳ್ ಗಂಡಸ್ತನಕ್ಕೆ ಸವಾಲ್ ಹಾಕಿದ ಸಚಿವ ಶಿವಾನಂದ ಪಾಟೀಲ..!
ಡಿಸಿಸಿ ಬ್ಯಾಂಕ್, ಸಕ್ಕರೆ ಕಾರ್ಖಾನೆ, ಎಪಿಎಂಸಿ ಸೇರಿದಂತೆ ಪ್ರತಿಯೊಂದರಲ್ಲಿಯೂ ಕೈ ಹಾಕುತ್ತಾನೆ. ಬಾಗಲಕೋಟೆ ಕಾಂಗ್ರೆಸ್ ಮುಖಂಡರು ಎಚ್ಚರದಿಂದ ಇರಬೇಕು. 2.5 ಸಾವಿರ ಟನ್ ಕಾರ್ಖಾನೆಗೆ ₹50 ಲಕ್ಷ, 5 ಸಾವಿರ ಟನ್ ಕಾರ್ಖಾನೆಗೆ ಒಂದು ಕೋಟಿ ಹಣವನ್ನು ಚುನಾವಣೆಗೆ ಬೇಡುತ್ತಿದ್ದಾರೆ. ಡಿಸಿಸಿ ಬ್ಯಾಂಕ್‌ನಲ್ಲಿ ನೌಕರಿ ತುಂಬಿಕೊಳ್ಳಲು ₹15-20ಲಕ್ಷ ಲಂಚ ತೆಗೆದುಕೊಳ್ಳುತ್ತಾರೆ. ರೈತರ ಹೆಸರಿನಲ್ಲಿ ಜಿರೋ ಬಡ್ಡಿಯಲ್ಲಿ ಕೋಟ್ಯಂತರ ಸಾಲ ತೆಗೆದು ಮನ್ನಾ ಮಾಡಿಸಿ ಮೋಸ ಮಾಡುವುದು, ನಂತರ ಇದನ್ನು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಎನ್ನುತ್ತಾರೆ. ಕಳ್ಳತನ ಮಾಡಿದವರು ಯಾರಾದರು ಕಳ್ಳತನ ಮಾಡಿರುವುದನ್ನು ಹೇಳುತ್ತಾರಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಇನ್ನೂ ಸಂಸದೆಯಾಗಿಲ್ಲ. ಈಗಲೇ ಪ್ರಧಾನಿಯಾಗುತ್ತೇನೆ ಎನ್ನುತ್ತಾರೆ. ಇವರು ಪ್ರಧಾನಿಯಾದರೆ ರಾಹುಲ್ ಗಾಂಧಿ ಇವರ ಮನೆಯ ಗಾರ್ಡನ್‌ಗೆ ನೀರು ಹೊಡಿಬೇಕಾ? ಪ್ರಿಯಾಂಕಾ ಗಾಂಧಿ ಇವರ ಮನೆಯಲ್ಲಿ ಅಡುಗೆ ಮಾಡಬೇಕಾ? ಎಂದು ಯತ್ನಾಳ ವ್ಯಂಗ್ಯವಾಡಿದರು.
ಅಂಬೇಡ್ಕರ್ ದೇಶದ ದೊಡ್ಡ ಆಸ್ತಿ. ಅವರ ಅಂತ್ಯ ಸಂಸ್ಕಾರಕ್ಕೆ ಕಾಂಗ್ರೆಸ್ ಜಾಗ ನೀಡಲಿಲ್ಲ. ಈ ದೇಶದ ಗಾಳಿ ನೀರು ಬಳಸಿ ವಿಧಾನಸೌಧದಲ್ಲಿ ಪಾಕಿಸ್ತಾನದ ಬಗ್ಗೆ ಜೈಕಾರ ಹಾಕುತ್ತಾರೆ. ಕಾಂಗ್ರೆಸ್ ಪ್ರಣಾಳಿಕೆ ಮುಸ್ಲಿಂ ದೇಶದ ಪ್ರಣಾಳಿಕೆಯಂತಿದೆ. ರಾಮಮಂದಿರ ಉದ್ಘಾಟನೆಗೆ ಬಾರದ ಕಾಂಗ್ರೆಸ್ ನಾಯಕರು ರಂಜಾನ್‌ಗೆ ಕರೆಯದೆ ಹೋಗಿ ಟೋಪಿ ಹಾಕುತ್ತಾರೆ. ಅಷ್ಟು ನಾಚಿಕೆ ಬಿಟ್ಟಿದ್ದಾರೆ. ಇಲ್ಲಿನ ಮಾಜಿ ಶಾಸಕ ಆನಂದ ನ್ಯಾಮಗೌಡ ಮುಸ್ಲಿಮರ ಬೆನ್ನು ಹತ್ತಿ ಸೋತರು. ಅವರ ಬೆನ್ನು ಹತ್ತಿದರೆ ಹಿಂದೂಗಳು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.