ಮಂಡ್ಯ: ಸ್ವಂತ ಮನೆಯೂ ಇಲ್ಲದ ನಿತ್ಯ ಸಚಿವ ಶಂಕರಗೌಡರ ಮೊಮ್ಮಗ..!

By Kannadaprabha NewsFirst Published Apr 26, 2023, 11:32 AM IST
Highlights

ತಾತನಂತೆಯೇ ಸರಳ ಜೀವಿ. ಜಿಪಂ ಸದಸ್ಯರಾಗಿ ಒಮ್ಮೆ ಆಯ್ಕೆಯಾಗಿದ್ದ ಕೆ.ಎಸ್‌.ವಿಜಯಾನಂದ ಮೂರು ವರ್ಷಗಳಿಂದ ಪಿಇಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಯಾವುದೇ ಕಪ್ಪುಚುಕ್ಕೆಯಿಲ್ಲದೆ ಆಡಳಿತ ನಡೆಸುತ್ತಿದ್ದಾರೆ. 2023ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿದ್ದರು. ಕೊನೇ ಘಳಿಗೆಯಲ್ಲಿ ಟಿಕೆಟ್‌ ಮನ್‌ಮುಲ್‌ ಅಧ್ಯಕ್ಷ ಬಿ.ಆರ್‌.ರಾಮಚಂದ್ರ ಅವರಿಗೆ ಟಿಕೆಟ್‌ ದೊರಕಿದ್ದರಿಂದ ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. 

ಮಂಡ್ಯ(ಏ.26): ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಅಖಾಡ ಪ್ರವೇಶಿಸಿರುವ ಕೆ.ಎಸ್‌.ವಿಜಯಾನಂದ ನಿತ್ಯ ಸಚಿವ ಕೆ.ವಿ.ಶಂಕರಗೌಡರ ಮೊಮ್ಮಗ. ವಾಸಕ್ಕೊಂದು ಸ್ವಂತ ಮನೆಯೂ ಇಲ್ಲದೆ, 5 ಲಕ್ಷ ಮೌಲ್ಯದ ಆಸ್ತಿಯನ್ನಷ್ಟೇ ಹೊಂದಿರುವ ವಿಜಯಾನಂದ ಮಂಡ್ಯ ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷರು. ಕೆ.ವಿ.ಶಂಕರಗೌಡರ ಕುಟುಂಬದ ಹಿನ್ನೆಲೆಯನ್ನೇ ಶ್ರೀರಕ್ಷೆಯಾಗಿಸಿಕೊಂಡು ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ತಾತನಂತೆಯೇ ಸರಳ ಜೀವಿ. ಜಿಪಂ ಸದಸ್ಯರಾಗಿ ಒಮ್ಮೆ ಆಯ್ಕೆಯಾಗಿದ್ದ ಕೆ.ಎಸ್‌.ವಿಜಯಾನಂದ ಮೂರು ವರ್ಷಗಳಿಂದ ಪಿಇಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಯಾವುದೇ ಕಪ್ಪುಚುಕ್ಕೆಯಿಲ್ಲದೆ ಆಡಳಿತ ನಡೆಸುತ್ತಿದ್ದಾರೆ. 2023ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿದ್ದರು. ಕೊನೇ ಘಳಿಗೆಯಲ್ಲಿ ಟಿಕೆಟ್‌ ಮನ್‌ಮುಲ್‌ ಅಧ್ಯಕ್ಷ ಬಿ.ಆರ್‌.ರಾಮಚಂದ್ರ ಅವರಿಗೆ ಟಿಕೆಟ್‌ ದೊರಕಿದ್ದರಿಂದ ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಸ್ವಾಭಿಮಾನಿ ತಂಡ ಕಟ್ಟಿರುವ ಶಾಸಕ ಎಂ.ಶ್ರೀನಿವಾಸ್‌ ಮತ್ತವರ ಬೆಂಬಲಿಗರೆಲ್ಲರೂ ಪಕ್ಷೇತರ ಅಭ್ಯರ್ಥಿ ಕೆ.ಎಸ್‌.ವಿಜಯಾನಂದ ಅವರಿಗೆ ಬೆಂಬಲ ಘೋಷಿಸಿದ್ದಾರೆ.

Latest Videos

ಮೈಸೂರು: ರಾಜಕೀಯ ವ್ಯವಸ್ಥೆಯ ಸರ್ಜರಿಗೆ ಬಂದಿದ್ದಾರೆ ವೈದ್ಯ ರೇವಣ್ಣ..!

ಲಾಭಿ, ಪೈಪೋಟಿ ನಡೆಸಲಿಲ್ಲ: 

ಕೆ.ಎಸ್‌.ವಿಜಯಾನಂದ ಅವರು ಜೆಡಿಎಸ್‌ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದರೂ ಎಂದೂ ಲಾಬಿ ನಡೆಸಲಿಲ್ಲ. ಪೈಪೋಟಿಗೆ ಬೀಳಲಿಲ್ಲ. ಜೆಡಿಎಸ್‌ ವರಿಷ್ಠರೇ ತಮ್ಮ ಅರ್ಹತೆ ಗುರುತಿಸಿ ಟಿಕೆಟ್‌ ನೀಡುವರೆಂದು ನಂಬಿಕೆ ಇಟ್ಟಿದ್ದರು. ತಾತ ಕೆ.ವಿ.ಶಂಕರಗೌಡರು ಸಚಿವರಾಗಿದ್ದರು, ತಂದೆ ಕೆ.ಎಸ್‌.ಸಚ್ಚಿದಾನಂದ ವಿಧಾನಪರಿಷತ್‌ ಸದಸ್ಯರಾಗಿದ್ದರು. ಆದರೂ ವಾಸಕ್ಕೊಂದು ಸ್ವಂತ ಮನೆ ಇವರಿಗಿಲ್ಲ. ಬಂದೀಗೌಡ ಬಡಾವಣೆಯ ಬಾಡಿಗೆ ಮನೆಯಲ್ಲಿ ವಿಜಯಾನಂದ ವಾಸವಾಗಿದ್ದಾರೆ. ತಾತ ಮತ್ತು ತಂದೆಯ ಮಾರ್ಗದರ್ಶನದಲ್ಲೇ ಪ್ರಾಮಾಣಿಕತೆ, ದಕ್ಷತೆಯನ್ನು ಮೈಗೂಡಿಸಿಕೊಂಡು ಪಿಇಟಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಇವರಲ್ಲಿರುವ ಈ ಗುಣವನ್ನು ಕಂಡೇ ಎಚ್‌.ಡಿ.ಚೌಡಯ್ಯನವರು ಕೆ.ಎಸ್‌.ವಿಜಯಾನಂದಗೆ ಪಿಇಟಿ ಅಧ್ಯಕ್ಷ ಸ್ಥಾನ ನೀಡಿದ್ದರು. ತಾತ ಕಟ್ಟಿದ ಸಂಸ್ಥೆಗೆ ಅಧ್ಯಕ್ಷನಾಗುತ್ತೇನೆಂದು ವಿಜಯಾನಂದ ಕೂಡ ನಿರೀಕ್ಷಿಸಿರಲಿಲ್ಲ. ಅಧ್ಯಕ್ಷ ಪಟ್ಟಅವರಿಗೆ ಬಯಸದೇ ಬಂದ ಭಾಗ್ಯವಾಗಿತ್ತು.

ಯಾವುದೇ ಸ್ಥಾನ-ಮಾನ ನಿರೀಕ್ಷಿಸಿಲಿಲ್ಲ: 

ಶಾಸಕ ಎಂ.ಶ್ರೀನಿವಾಸ್‌ರನ್ನು ರಾಜಕೀಯಕ್ಕೆ ಕರೆತಂದಿದ್ದೇ ವಿಜಯಾನಂದರ ತಂದೆ ಕೆ.ಎಸ್‌.ಸಚ್ಚಿದಾನಂದ. ಆ ಋುಣವನ್ನು ತೀರಿಸುವುದಕ್ಕಾಗಿ 2013ರಲ್ಲಿ ನಡೆದ ಜಿಪಂ ಚುನಾವಣೆಯಲ್ಲಿ ಕೆರಗೋಡು ಜಿಪಂ ಕ್ಷೇತ್ರದಿಂದ ಕೆ.ಎಸ್‌.ವಿಜಯಾನಂದ ಅವರನ್ನು ಕಣಕ್ಕಿಳಿಸಿ ಬೆಂಬಲ ಕೊಟ್ಟು ಗೆಲ್ಲಿಸಿದ್ದರು. ಜೆಡಿಎಸ್‌ ನಿಷ್ಠಾವಂತ ಕಾರ್ಯಕರ್ತರಾಗಿ ಯಾವುದೇ ಸ್ಥಾನ-ಮಾನ ನಿರೀಕ್ಷಿಸದೆ, ಪೈಪೋಟಿಗೂ ಬೀಳದೆ ಮುಂದುವರೆದುಕೊಂಡು ಬಂದಿದ್ದರು. ಆದರೆ, ಈ ಚುನಾವಣೆಯಲ್ಲಿ ಟಿಕೆಟ್‌ ಕೈ ತಪ್ಪಿದ್ದರಿಂದ ಜೆಡಿಎಸ್‌ ವರಿಷ್ಠರ ವಿರುದ್ಧ ಹಠಾತ್‌ ಸಿಡಿದೆದ್ದರು. ಶಾಸಕ ಎಂ.ಶ್ರೀನಿವಾಸ್‌ ಜೊತೆಗೂಡಿಕೊಂಡು ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ.

ಕಂಪನಿ ಕೆಲಸ ಬಿಟ್ಟು, ರಾಜಕೀಯಕ್ಕೆ ಬಂದ ಎಂಬಿಎ ಪದವೀಧರೆ: ಎಎಪಿಯಿಂದ ಸುಮನಾ ಸ್ಪರ್ಧೆ

ಪ್ರೀತಿ, ಅಭಿಮಾನ ಮತಗಳಾಗುತ್ತವೆಯೇ?: 

ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳಿಗೆ ಕೆ.ಎಸ್‌.ವಿಜಯಾನಂದ ಸ್ಪರ್ಧೆ ತಲೆನೋವು ತಂದಿದೆ. ಕೆ.ವಿ.ಶಂಕರಗೌಡ, ಕೆ.ಎಸ್‌.ಸಚ್ಚಿದಾನಂದ ವರ್ಚಸ್ಸು, ಅವರಿಗಿದ್ದ ಬೆಂಬಲಿಗರು, ಅಭಿಮಾನಿಗಳು, ವಿಜಯಾನಂದರ ಸರಳ ಬದುಕು, ಜನಸ್ನೇಹಿ ನಡವಳಿಕೆ ಇವೆಲ್ಲವೂ ಚುನಾವಣೆಯಲ್ಲಿ ಗೆಲುವಿಗೆ ಶ್ರೀರಕ್ಷೆಯಾಗಬಹುದೆಂದು ನಂಬಿದ್ದಾರೆ. ಯಾರೊಂದಿಗೂ ವಿರೋಧ ಕಟ್ಟಿಕೊಳ್ಳದೆ ನೇರ ನಡೆ-ನುಡಿಯನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಕೆ.ಎಸ್‌.ವಿಜಯಾನಂದ ಅವಿವಾಹಿತರು.

ಕೆ.ವಿ.ಶಂಕರಗೌಡರು ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕೆ.ಎಸ್‌.ಸಚ್ಚಿದಾನಂದ ಅಜಾತ ಶತ್ರುವಿನ ರೀತಿ ಅಧಿಕಾರ ನಡೆಸಿದವರು. ಕೆ.ಎಸ್‌.ವಿಜಯಾನಂದ ಪಿಇಟಿ ಅಧ್ಯಕ್ಷರಾಗಿ ಪಾರದರ್ಶಕ ಆಡಳಿತ ನೀಡುತ್ತಾ ಜನಮೆಚ್ಚುಗೆ ಗಳಿಸಿದ್ದಾರೆ. ಯಾವ ರಾಜಕೀಯ ಪಕ್ಷದ ಬೆಂಬಲವಿಲ್ಲದೆ ಕಣಕ್ಕಿಳಿದಿರುವ ಕೆ.ಎಸ್‌.ವಿಜಯಾನಂದ ಅವರಿಗೆ ಅವರ ಕುಟುಂಬದ ಮೇಲಿನ ಜನರ ಅಭಿಮಾನ, ಪ್ರೀತಿ ಮತಗಳಾಗಿ ಪರಿವರ್ತನೆಯಾಗುವುದೇ ಎಂಬುದನ್ನು ಕಾದುನೋಡಬೇಕಿದೆ.

click me!