ಮೈಸೂರು: ರಾಜಕೀಯ ವ್ಯವಸ್ಥೆಯ ಸರ್ಜರಿಗೆ ಬಂದಿದ್ದಾರೆ ವೈದ್ಯ ರೇವಣ್ಣ..!

By Kannadaprabha News  |  First Published Apr 26, 2023, 11:04 AM IST

ಟಿ.ನರಸೀಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ, 23 ವರ್ಷ ಸರ್ಕಾರಿ ವೈದ್ಯ, ಸರ್ಜನ್‌ ಆಗಿದ್ದ ರೇವಣ್ಣ, ದೊಡ್ಡ ರಾಜಕೀಯ ಹಿನ್ನೆಲೆ ಇಲ್ಲದ ಕುಟುಂಬದ ರೇವಣ್ಣ, ಜನರೊಂದಿಗೆ ಸದಾ ಸಂಪರ್ಕದಲ್ಲಿರುವ ನೀಲಸೋಗೆ ವೈದ್ಯ. 


ಮಹೇಂದ್ರ ದೇವನೂರು

ಮೈಸೂರು(ಏ.26): ರಾಜ್ಯದ ವಿವಿಧೆಡೆ 23 ವರ್ಷಗಳ ಕಾಲ ಸರ್ಕಾರಿ ವೈದ್ಯರಾಗಿ, ಶಸ್ತ್ರಚಿಕಿತ್ಸಕರಾಗಿ ಹೆಸರುವಾಸಿಯಾಗಿದ್ದ ಡಾ.ರೇವಣ್ಣ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿ ಈಗ ರಾಜಕೀಯ ರಂಗ ಪ್ರವೇಶಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾಗಿ, ತಾಲೂಕು ಆರೋಗ್ಯ ಕೇಂದ್ರದ ಸರ್ಜನ್‌ ಆಗಿ ಕೆಲಸ ಮಾಡಿರುವ ಡಾ.ರೇವಣ್ಣ ಅವರು ಈಗ ಟಿ.ನರಸೀಪುರ ಮೀಸಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ರೇವಣ್ಣ ಅವರು ಸದಾಕಾಲ ಸಾರ್ವಜನಿಕ ಸಂಪರ್ಕದಲ್ಲಿದ್ದವರು. ಗ್ರಾಮೀಣ ಪ್ರದೇಶದ ಜನರ ಸಂಕಷ್ಟವನ್ನು ಹತ್ತಿರದಿಂದ ನೋಡಿದವರು. ಇದಕ್ಕೂ ಮಿಗಿಲಾಗಿ ಸ್ಥಳೀಯರು.

Tap to resize

Latest Videos

ಈ ಎಲ್ಲಾ ಅಂಶಗಳನ್ನು ಗಮನಿಸಿ, ಸ್ಥಳೀಯರಿಗೆ ಆದ್ಯತೆ ನೀಡುವ ಉದ್ದೇಶದಿಂದ ರೇವಣ್ಣ ಅವರನ್ನು ಗುರುತಿಸಿ ಟಿಕೆಟ್‌ ನೀಡಲಾಗಿದೆ. ರೋಗಿಯಾಗಿ ಬಂದವರ ರೋಗ ನಿವಾರಣೆಗೆ ಮಾತ್ರ ಆದ್ಯತೆ ನೀಡದೆ, ಅವರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕೇಳಿ ತಿಳಿದುಕೊಂಡು, ಅವರ ಕಷ್ಟ, ಸುಖಗಳಿಗೆ ರೇವಣ್ಣ ಅವರು ಸ್ಪಂದಿಸುತ್ತಿದ್ದುದೇ ಅವರಿಗೆ ಟಿಕೆಟ್‌ ಸಿಗಲು ಪ್ರಮುಖ ಕಾರಣ.

ಬೈಂದೂರು ಬಿಜೆಪಿ ಅಭ್ಯರ್ಥಿ: ಈಶಾನ್ಯ ರಾಜ್ಯಗಳ ಮಕ್ಕಳಿಗೆ ವಿದ್ಯೆ ಕೊಟ್ಟ ಬರಿಗಾಲ ಫಕೀರ..!

ಜನರ ಓಡಾಟ, ನರಳಾಟ, ಗ್ರಾಮೀಣ ಪ್ರದೇಶದಲ್ಲಿನ ಮೂಲ ಸೌಲಭ್ಯದ ಕೊರತೆ, ರಸ್ತೆ, ಕುಡಿಯುವ ನೀರು ಮುಂತಾದ ಸಂಕಷ್ಟಗಳನ್ನು ನೋಡಿ, ಕೇಳಿ ಅರ್ಥಮಾಡಿಕೊಂಡವರು. ಅನೇಕ ಸಂದರ್ಭಗಳಲ್ಲಿ ಗ್ರಾಮೀಣ ಭಾಗದ ಜನರಿಗೆ ಸೌಲಭ್ಯ ದೊರೆಯುತ್ತಿಲ್ಲ ಎಂಬ ಕೊರಗು ಇವರನ್ನು ಕಾಡಿದ್ದೂ ಇದೆ. ಈಗ ಸಾರ್ವಜನಿಕರು, ಗ್ರಾಮಸ್ಥರು ಮತ್ತು ಅಭಿಮಾನಿಗಳ ಒತ್ತಾಯದ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಸ್ಥಳೀಯ ಪ್ರತಿಭೆಯಾದ ಡಾ.ರೇವಣ್ಣ ಟಿ.ನರಸೀಪುರ ತಾಲೂಕಿನ ನಿಲಸೋಗೆಯವರು. ಕೃಷಿ ಕುಟುಂಬದಿಂದ ಬಂದವರು. ಇವರ ಚಿಕ್ಕಪ್ಪ ಪುಟ್ಟಬಸವಯ್ಯ ಅವರು ಜಿಪಂ ಸದಸ್ಯರಾಗಿ ಎರಡು ಬಾರಿ ಪಕ್ಷೇತರರಾಗಿ ಆಯ್ಕೆಯಾಗಿದ್ದರು. 1984ರಲ್ಲಿ ಡಾ.ಎಚ್‌.ಸಿ. ಮಹದೇವಪ್ಪ ವಿರುದ್ಧ ವಿಧಾನಸಭೆಗೆ ಸ್ಪರ್ಧಿಸಿ, 2,800 ಮತಗಳಿಂದ ಪರಾಭವಗೊಂಡಿದ್ದರು. ಮತ್ತೊಂದು ಬಾರಿಯು ಸ್ಪರ್ಧಿಸಿ ಸೋತಿದ್ದರು. ನಂತರ ಕೆಜೆಪಿಯಲ್ಲಿ ಕೆಲಕಾಲ ಇದ್ದರು.

ಇದಿಷ್ಟುರಾಜಕೀಯ ಹಿನ್ನೆಲೆ ಹೊರತುಪಡಿಸಿದರೆ ಡಾ.ರೇವಣ್ಣ ಅವರಿಗೆ ದೊಡ್ಡ ರಾಜಕೀಯ ಹಿನ್ನೆಲೆ ಇಲ್ಲ. ಆದರೆ ಸಾರ್ವಜನಿಕರೇ ಅವರಿಗೆ ದೊಡ್ಡ ಶಕ್ತಿ ಎನ್ನುತ್ತಾರೆ. ಪಕ್ಷಾತೀತವಾಗಿ, ಜಾತ್ಯತೀತವಾಗಿ ಜನ ನಮ್ಮನ್ನು ಬೆಂಬಲಿಸುತ್ತಿದ್ದಾರೆ. ಎಲ್ಲರ ಒತ್ತಾಯಕ್ಕೆ ಮಣಿದು ಸ್ವಯಂ ನಿವೃತ್ತಿ ಘೋಷಿಸಿ ಚುನಾವಣೆಯಲ್ಲಿ ಸ್ಪರ್ಧಿಸಿರುವುದಾಗಿ ರೇವಣ್ಣ ತಿಳಿಸಿದ್ದಾರೆ.

ಕಂಪನಿ ಕೆಲಸ ಬಿಟ್ಟು, ರಾಜಕೀಯಕ್ಕೆ ಬಂದ ಎಂಬಿಎ ಪದವೀಧರೆ: ಎಎಪಿಯಿಂದ ಸುಮನಾ ಸ್ಪರ್ಧೆ

ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜನಪರ ಕಾರ್ಯಕ್ರಮ, ದೇಶದ ರಕ್ಷಣೆ, ದೃಷ್ಟಿಯೋಜನೆಗಳನ್ನು ಮೆಚ್ಚಿ ಬಿಜೆಪಿ ಸೇರಿದ್ದೇನೆ. ನನ್ನ ಆತ್ಮತೃಪ್ತಿಗೆ ತಕ್ಕಂತೆ ತಾಲೂಕಿನ ಋುಣ ತೀರಿಸುತ್ತೇನೆ ಎಂದು ಕನ್ನಡಪ್ರಭಕ್ಕೆ ತಿಳಿಸಿದರು.

ಒಂದನೇ ತರಗತಿಯಿಂದ 7ನೇ ತರಗತಿವರೆಗೆ ನಿಲಸೋಗೆಯಲ್ಲಿ ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಿದ ರೇವಣ್ಣ ಅವರು 8ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ವಿದ್ಯೋದಯ ಕಾಲೇಜು ಮತ್ತು ವೈದಕೀಯ ಶಿಕ್ಷಣವನ್ನು ಮೈಸೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪಡೆದರು. ಮೊದಲ ನಿಯೋಜನೆಯಾಗಿ ಧರ್ಮಸ್ಥಳ ವೈದ್ಯಾಧಿಕಾರಿಯಾಗಿ ನೇಮಿಸಲಾಯಿತು. ನಂತರ ಕೆ.ಆರ್‌.ನಗರ ತಾಲೂಕು ಅಡಗೂರು, ಅರಕಲಗೂಡಿನಲ್ಲಿ 8 ವರ್ಷ ವೈದ್ಯರಾಗಿ, ಬಳಿಕ ದಾವಣಗೆರೆಯಲ್ಲಿ ಎಂಎಸ್‌ ಶಿಕ್ಷಣ ಪಡೆದಿದ್ದಾರೆ. ಇದಾದ ಬಳಿಕ ಕೆ.ಆರ್‌.ಆಸ್ಪತ್ರೆಯಲ್ಲಿ ಒಂದೂವರೆ ವರ್ಷ ಮತ್ತು ಟಿ.ನರಸೀಪುರದಲ್ಲಿ ಮೂರೂವರೆ ವರ್ಷ ಕೆಲ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ.

click me!