ನೂತನ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧನಿದ್ದೇನೆ. ಪ್ರತಿ ತಾಲೂಕಿನ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ತಿಳಿದುಕೊಳ್ಳಲು ತಾಲೂಕು ಮಟ್ಟದ ಕೆಡಿಪಿ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ಅಹ್ಮದ್ ಖಾನ್ ಘೋಷಿಸಿದರು.
ಹೊಸಪೇಟೆ (ಜು.02): ನೂತನ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧನಿದ್ದೇನೆ. ಪ್ರತಿ ತಾಲೂಕಿನ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ತಿಳಿದುಕೊಳ್ಳಲು ತಾಲೂಕು ಮಟ್ಟದ ಕೆಡಿಪಿ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ಅಹ್ಮದ್ ಖಾನ್ ಘೋಷಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ಬಜೆಟ್ ಅಧಿವೇಶನದ ಆನಂತರ ಜು. 24ರಿಂದ ಒಂದು ವಾರ ತಾಲೂಕು ಮಟ್ಟದಲ್ಲಿ ಕೆಡಿಪಿ ಸಭೆ ನಡೆಸಲಾಗುವುದು. ಒಂದೊಂದು ದಿನ ಒಂದೊಂದು ತಾಲೂಕು ಸಭೆಗೆ ಮೀಸಲಿಡಲಾಗುವುದು ಎಂದು ತಿಳಿಸಿದರು.
ತಾಲೂಕುವಾರು ದಿನಾಂಕ: ಜು. 24ರಂದು ಹರಪನಹಳ್ಳಿ, ಜು. 25ರಂದು ಹೂವಿನಹಡಗಲಿ, ಜು. 26ರಂದು ಕೂಡ್ಲಿಗಿ, ಜು. 27ರಂದು ಹಗರಿಬೊಮ್ಮನಹಳ್ಳಿ ಹಾಗೂ ಜು. 28ರಂದು ಹೊಸಪೇಟೆ ಯ ಕೆಡಿಪಿ ಸಭೆ ನಡೆಸಲಾಗುವುದು ಎಂದು ದಿನಾಂಕ ಸಹಿತ ಪ್ರಕಟಿಸಿದರು. ಪ್ರತಿ ತಾಲೂಕಿನಲ್ಲೂ ಸಾಕಷ್ಟುಸಮಸ್ಯೆ ಇದ್ದು, ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಪರಿಣಾಮಕಾರಿಯಾಗಿ ಆಡಳಿತ ಯಂತ್ರಕ್ಕೆ ವೇಗ ನೀಡಲು ಈ ತೀರ್ಮಾನ ಕೈಗೊಂಡಿದ್ದೇನೆ ಎಂದರು. ಎಲ್ಲ ತಾಲೂಕುಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಂಭವ ಇದ್ದು, ಈಗಿನಿಂದಲೇ ಕ್ರಿಯಾ ಯೋಜನೆ ರೂಪಿಸಿಕೊಂಡು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲೂಕು ಮಟ್ಟದಲ್ಲಿ ಏನೇ ಸಮಸ್ಯೆ ಇದ್ದರೂ ಪಟ್ಟಿಮಾಡಿ ಗಮನಕ್ಕೆ ತನ್ನಿ. ನಾವು ನೀವು ಸೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಹೇಳಿದರು.
undefined
ಸೈಬರ್ ಕ್ರೈಂ ಹಾಗೂ ಫೇಕ್ ನ್ಯೂಸ್ ತಡೆಗಟ್ಟಲು ರೂಪುರೇಷೆಗೆ ಸಿದ್ಧತೆ: ಸಚಿವ ಪರಮೇಶ್ವರ್
ಪ್ರಭಾರ ಅಧಿಕಾರಿಗಳ ಪಟ್ಟಿ ಮಾಡಿ: ಜಿಲ್ಲೆ ರಚನೆಯಾದ ಆನಂತರ ಇನ್ನೂ ಬಹುತೇಕ ಇಲಾಖೆಗಳಿಗೆ ಅಧಿಕಾರಿ ಸಿಬ್ಬಂದಿ ನೇಮಕವಾಗದೆ ಬಳ್ಳಾರಿ ಮತ್ತು ವಿಜಯನಗರ ಎರಡೂ ಜಿಲ್ಲೆಗಳಿಗೆ ಒಬ್ಬರೇ ಅಧಿಕಾರಿ ಹೆಚ್ಚುವರಿ ಹೊಣೆಗಾರಿಕೆ ನೋಡಿಕೊಳ್ಳುತ್ತಿರುವ ಬಗ್ಗೆ ತಿಳಿದು ಅಚ್ಚರಿ ವ್ಯಕ್ತಪಡಿಸಿದ ಸಚಿವರು, ಎಲ್ಲ ಕಡೆ ಇನ್‌ಚಾಜ್‌ರ್ ಅಧಿಕಾರಿಗಳೇ ಇದ್ದಾರೆ. ಕೆಲವೆಡೆ ಅಧಿಕಾರಿಗಳು ಇದ್ದರೆ ಕಟ್ಟಡ ಇಲ್ಲ, ಕಟ್ಟಡ ಇದ್ದರೂ ಸಿಬ್ಬಂದಿ ನೇಮಿಸಿಲ್ಲ, ಹುದ್ದೆಗಳ ಮಂಜೂರಾತಿ ಆಗಿಲ್ಲ, ಹೀಗಾದರೆ ಏನು ಕೆಲಸ ಆಗುತ್ತದೆ? ಕಟ್ಟಡ ಇಲ್ಲದ ಕಡೆ ಬಂದು ಹೋಗುವುದಕ್ಕೆ ಸುಮ್ಮನೆ ವೇತನ ನೀಡುತ್ತಿದ್ದಾರಾ ಎಂದು ಜಿಲ್ಲಾಧಿಕಾರಿಯನ್ನು ಪ್ರಶ್ನೆ ಮಾಡಿದರು.
ಶಾಸಕರ ಸ್ವಾಗತ: ತಾಲೂಕು ಮಟ್ಟದಲ್ಲಿ ಕೆಡಿಪಿ ಸಭೆ ನಡೆಸುವ ತೀರ್ಮಾನಕ್ಕೆ ಸಭೆಯಲ್ಲಿ ಶಾಸಕರಾದ ಲತಾ ಮಲ್ಲಿಕಾರ್ಜುನ, ಡಾ. ಶ್ರೀನಿವಾಸ, ಕೃಷ್ಣ ನಾಯ್ಕ, ಗವಿಯಪ್ಪ ಸೇರಿ ಎಲ್ಲ ಶಾಸಕರು ಸ್ವಾಗತಿಸಿ, ಇದೊಂದು ಉತ್ತಮ ನಿರ್ಧಾರ. ನಮಗೆಲ್ಲ ಬಯಸದೆ ಬಂದ ಭಾಗ್ಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಇದರಿಂದ ನಾವು ಮುಕ್ತವಾಗಿ ನಮ್ಮ ತಾಲೂಕು ಸಮಸ್ಯೆ ಬಗ್ಗೆ ಹೇಳಿಕೊಳ್ಳಲು, ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಗೈರು ಹಾಜರಾದ ಅಧಿಕಾರಿಗಳ ಅಮಾನತಿಗೆ ಸೂಚನೆ: ಪ್ರಗತಿ ಪರಿಶೀಲನೆ ಸಭೆಗೆ ಕಂದಾಯ, ಪೊಲೀಸ್, ಆಹಾರ ಮತ್ತು ನಾಗರಿಕ ಪೂರೈಕೆ, ನಗರಾಭಿವೃದ್ಧಿ, ಸ್ಥಳೀಯ ಸಂಸ್ಥೆಗಳು ವರದಿ ನೀಡದ ಬಗ್ಗೆ ಗರಂ ಆದ ಸಚಿವರು ಯಾಕೆ ವರದಿ ಕೊಟ್ಟಿಲ್ಲ ಎಂದು ಪ್ರಶ್ನೆ ಮಾಡಿದರು. ತಕ್ಷಣ ಪೊಲೀಸ್ ಮತ್ತು ಆಹಾರ ಇಲಾಖೆ ಅಧಿಕಾರಿಗಳು ವರದಿ ನೀಡಿದರು. ಉಳಿದ ಇಲಾಖೆ ಅಧಿಕಾರಿಗಳು ಯಾಕೆ ವರದಿ ನೀಡಿಲ್ಲ ಎಂಬ ಬಗ್ಗೆ ಮಾಹಿತಿ ಪಡೆಯುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಇನ್‌ಚಾಜ್‌ರ್ ಅಧಿಕಾರಿಗಳ ಕೈ ಎತ್ತಿಸಿದ ಸಚಿವರು ಸಭೆಗೆ ಗೈರು ಹಾಜರಾದವರ ಬಗ್ಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಬಹುತೇಕ ಅಧಿಕಾರಿಗಳು ಬಳ್ಳಾರಿ ಅಥವಾ ಕೊಪ್ಪಳದಿಂದ ಹೆಚ್ಚುವರಿಯಾಗಿ ನಿಯೋಜನೆ ಆಗಿರುವ ಬಗ್ಗೆಯೂ ಪಟ್ಟಿಮಾಡಿಸಿ ಹಾಜರಾತಿ ಪಡೆದುಕೊಂಡರು. ಆಹಾರ ಮತ್ತು ಪೂರೈಕೆ, ತೂಕ ಮತ್ತು ಅಳತೆ ಇಲಾಖೆ ಅಧಿಕಾರಿ ಗೈರು ಹಾಜರಾಗಿದ್ದು ಅವರನ್ನು ಅಮಾನತು ಮಾಡುವಂತೆ ಸೂಚನೆ ನೀಡಿದರು.
ಉಸ್ತುವಾರಿ ಸಚಿವರ ಕಟ್ಟಡ ಬಳಸಿ: ನೂತನ ಜಿಲ್ಲೆಯಲ್ಲಿ 19 ಇಲಾಖೆಗಳಿಗೆ ಕಚೇರಿ ಕಟ್ಟಡ ಇಲ್ಲದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವರು ಪ್ರವಾಸಿ ಮಂದಿರದ ತಮ್ಮ ಕಚೇರಿಯಲ್ಲಿ ತಾತ್ಕಾಲಿಕ ಕಚೇರಿ ಆರಂಭಿಸಲು ಸೂಚಿಸಿದರು. ನನಗೆ ಅಷ್ಟುದೊಡ್ಡ ಕಚೇರಿ ಅಗತ್ಯವಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಒಂದು ಕುರ್ಚಿ ಹಾಕಿಕೊಂಡು ನಾನು ಕೆಲಸ ಮಾಡಲು ಸಿದ್ಧ. ನಾನು ವಿಜಯನಗರ ಜಿಲ್ಲೆ ಮಾದರಿ ಜಿಲ್ಲೆಯಾಗಿ ಅಭಿವೃದ್ಧಿ ಪಡಿಸಲು ಕನಸು ಕಂಡಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮೇಲೆ ನಂಬಿಕೆ ಇಟ್ಟು ಹೊಣೆಗಾರಿಕೆ ವಹಿಸಿದ್ದಾರೆ. ನಿಮ್ಮೆಲ್ಲರ ಸಹಕಾರ ಬಯಸುತ್ತೇನೆ ಎಂದು ಹೇಳಿದರು.
ಕೇಂದ್ರ ಅಕ್ಕಿ ಕೊಡದಿದ್ದಕ್ಕೆ ವಿಧಿ ಇಲ್ಲದೇ ಹಣ ಕೊಡ್ತಿದೀವಿ: ಬಿಜೆಪಿಗರಿಗೆ ಸಚಿವ ವೆಂಕಟೇಶ್ ಟಾಂಗ್
ಡ್ರಗ್ಸ್, ಮರಳು ದಂಧೆ ಕಡಿವಾಣ ಹಾಕಿ: ಜಿಲ್ಲೆಯಲ್ಲಿ ಡ್ರಗ್ಸ್, ಗಾಂಜಾ ಹಾವಳಿ, ಜೂಜು ಹೆಚ್ಚಾಗಿದೆ ಎಂಬ ದೂರಗಳು ಇವೆ. ಅಕ್ರಮ ಮರಳು ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. ಪೊಲೀಸ್ ಇಲಾಖೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಶುಕ್ರವಾರ ನಡೆದ ಅಪಘಾತದಲ್ಲಿ ಒಂಬತ್ತು ಮಂದಿ ಪ್ರಾಣ ಹೋಗಿದೆ. ಆರ್‌ಟಿಒ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಒಂದು ಆಟೋದಲ್ಲಿ 20ರಿಂದ 25 ಜನ ಹೇಗೆ ತುಂಬುತ್ತಾರೆ? ಇದನ್ನು ಯಾರು ಗಮನಿಸುವವರು ಇಲ್ಲವೇ ಎಂದರು.