
ನವದೆಹಲಿ (ಜು.02): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 50 ದಿನಗಳು ಪೂರೈಸಿದ್ದು, ಮೊದಲ ಅಧಿವೇಶನವೂ ಕೂಡ ಜುಲೈ 3 ರಿಂದ (ಸೋಮವಾರ ಬೆಳಗ್ಗೆ 12 ಗಂಟೆಯಿಂದ) ಆರಂಭವಾಗುತ್ತಿದೆ. ಆದರೂ, ವಿರೋಧ ಪಕ್ಷವಾಗಿರುವ ಬಿಜೆಪಿಯಿಂದ ವಿಪಕ್ಷ ನಾಯಕ ಆಯ್ಕೆಯನ್ನು ಅಂತಿಮಗೊಳಿಸಿಲ್ಲ. ಹೀಗಾಗಿ, ವಿಪಕ್ಷ ನಾಯಕನಿಲ್ಲದೇ ಅಧಿವೇಶನ ನಡೆಯುವುದು ಗ್ಯಾರಂಟಿಯಾಗಿದೆ.
ಈ ಕುರಿತು ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಕರ್ನಾಟಕ ರಾಜ್ಯದ ವಿಪಕ್ಷ ನಾಯಕರನ್ನು ಆಯ್ಕೆ ಮಾಡುವ ಕುರಿತು ಚರ್ಚೆ ಮಾಡಿ ಬಂದ ಮಾಜಿ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಅವರು ನಾಳೆಯೂ ವಿಪಕ್ಷ ನಾಯಕರ ಆಯ್ಕೆ ಆಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ನಾಳೆ ಕೇಂದ್ರದಿಂದ ಇಬ್ಬರು ವೀಕ್ಷಕರು ರಾಜ್ಯಕ್ಕೆ ಆಗಮಿಸಲಿದ್ದಾರೆ. ವಿನೋದ್ ತಾವಡೆ ಮತ್ತು ಮನ್ಸೂಕ್ ಮಂಡವಿಯಾ ಇಬ್ಬರು ವೀಕ್ಷಕರು ಆಗಮಿಸಲಿದ್ದು, ಅವರೇ ಸ್ವತಃ ರಾಜ್ಯ ಬಿಜೆಪಿ ಶಾಸಕರಿಂದ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ ಎಂದರು.
17 ಜನರಲ್ಲೇ ಒಬ್ರನ್ನ ವಿಪಕ್ಷ ನಾಯಕ ಮಾಡಿ: ಪಾಟೀಲ ವ್ಯಂಗ್ಯ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಅಭಿಪ್ರಾಯ ಸಂಗ್ರಹ: ಇನ್ನು ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಬಗ್ಗೆಯೂ ವೀಕ್ಷಕರಿಂದ ಮಾಹಿತಿ ಸಂಗ್ರಹ ಆಗಲಿದೆ. ನಂತರ ವೀಕ್ಷಕರು ಕೇಂದ್ರ ನಾಯಕರಿಗೆ ವರದಿ ನೀಡಲಿದ್ದಾರೆ. ನಂತರ ವಿಪಕ್ಷ ನಾಯಕ ಸ್ಥಾನಕ್ಕೆ ನೇಮಕ ಮಾಡಲಾಗುತ್ತದೆ. ಈ ಮೂಲಕ ನಾಳೆ ಅಧಿವೇಶನಕ್ಕೆ ಮುನ್ನ ವಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಇಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರು ಸ್ಪಷ್ಟ ಮಾಹಿತಿ ನೀಡಿದರು.
ಮತ್ತೆ ಎರಡು ದಿನದಲ್ಲಿ ದೆಹಲಿಗೆ ಆಗಮನ: ಈಗ ತಾನೇ ಗೃಹ ಸಚಿವ ಅಮಿತ್ ಶಾ, ನಮ್ಮ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನ ಭೇಟಿ ಆಗಿ ಬಂದಿದ್ದೇನೆ. ಕರ್ನಾಟಕದ ರಾಜಕೀಯ ಪರಿಸ್ಥಿತಿ ಕೇಳಿ ವರದಿ ಪಡೆದುಕೊಂಡಿದ್ದಾರೆ. ಅಗತ್ಯ ಬಿದ್ರೆ ಫೋನ್ ಮಾಡ್ತೀನಿ ಬರಬೇಕು, ಇನ್ನೆರಡು ದಿನದಲ್ಲಿ ಹೇಳ್ತಿನಿ ಅಂತ ಶಾ ಹೇಳಿದ್ದಾರೆ. ಎಲ್ಲಾ ವಾತಾವರಣ ತಿಳಿದುಕೊಂಡು ಮುಂದೆ ಏನ್ ಮಾಡ್ಬೇಕು ಅಂತ ತೀರ್ಮಾನ ಮಾಡ್ತಾರೆ. ವಿಪಕ್ಷ ನಾಯಕ ಆಯ್ಕೆ ವಿಚಾರವಾಗಿ ನಾಳೆ ಇಬ್ಬರು ವೀಕ್ಷಕರನ್ನ ಕಳುಹಿಸಿ ಕೊಡ್ತೀವಿ ಅಂತ ಹೇಳಿದ್ದಾರೆ. ವಿನೋದ್ ತಾವಡೆ ಮತ್ತು ಮನ್ಸೂಕ್ ಮಾಂಡವೀಯ ಅವ್ರನ್ನ ವೀಕ್ಷಕರಾಗಿ ಕಳುಹಿಸಿಕೊಡ್ತಿದ್ದಾರೆ. ಅವರೆಲ್ಲ ಶಾಸಕರ ಅಭಿಪ್ರಾಯ ಪಡೆದು ಇಲ್ಲಿ ಬಂದು ಹೈ ಕಮಾಂಡ್‌ಗೆ ತಿಳಿಸುತ್ತಾರೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ಟ್ರಾಫಿಕ್ ಜಾಮ್ ಮೀರಿಸಿದ ಮುಳ್ಯಯನಗಿರಿ ಪ್ರವಾಸಿಗರು
ಸಂಜೆ ಸಭೆಯನ್ನು ಎರಡು ಬಾರಿ ಮುಂದೂಡಿಕೆ: ಇನ್ನು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದ ಬಿಜೆಪಿ ಹೈಕಮಾಂಡ್ ನಾಯಕರಾದ ಗೃಹ ಸಚಿವ ಅಮಿತ್ ಶಾ, ನಮ್ಮ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು, ಸಂಜೆ 4 ಗಂಟೆ ನಂತರ ಭೇಟಿಯಾಗಿ ಚರ್ಚೆ ಮಾಡುವುದಾಗಿ ತಿಳಿಸಿದ್ದರು. ನಂತರ ರಾತ್ರಿ 8 ಗಂಟೆಗೆ ಭೇಟಿಗೆ ಸಮಯ ನೀಡಲಾಗುತ್ತು. ಆದರೆ, ಮಹಾರಾಷ್ಟ್ರ ಸರ್ಕಾರದ ಬೆಳಗವಣಿಗೆ ಕುರಿತು ತುರ್ತು ಚರ್ಚೆ ಆರಂಭಿಸಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ 9 ಗಂಟೆಯ ನಂತರ ಭೇಟಿಗೆ ಅವಕಾಶ ನೀಡಲಾಗಿತ್ತು. ಇನ್ನು ತಡವಾಗಿ ಹೈಕಮಾಂಡ್ ಭೇಟಿಯಾದ ಯಡಿಯೂರಪ್ಪ ಅವರು ವಿಪಕ್ಷ ನಾಯಕರ ಆಯ್ಕೆ ನಾಳೆಯೂ ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಇನ್ನು ನಾಳೆ ಯಡಿಯೂರಪ್ಪ ವಾಪಸ್ ಆಗಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.