ಬಿಜೆಪಿಯಿಂದ ವಿಜಯ ಸಂಕಲ್ಪ ರಾಜ್ಯ ಯಾತ್ರೆ: ಸಚಿವ ಸುನೀಲ್‌ ಕುಮಾರ್‌

By Govindaraj SFirst Published Oct 8, 2022, 8:10 AM IST
Highlights

ವಿಧಾನಸಭೆ ಚುನಾವಣೆ ಸಿದ್ಧತೆ ನಿಟ್ಟಿನಲ್ಲಿ ಈ ತಿಂಗಳ 11ರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ‘ವಿಜಯ ಸಂಕಲ್ಪ ಯಾತ್ರೆ’ ಹೆಸರಿನಲ್ಲಿ ರಾಜ್ಯ ಪ್ರವಾಸ ಆರಂಭವಾಗಲಿದೆ. 

ಬೆಂಗಳೂರು (ಅ.08): ವಿಧಾನಸಭೆ ಚುನಾವಣೆ ಸಿದ್ಧತೆ ನಿಟ್ಟಿನಲ್ಲಿ ಈ ತಿಂಗಳ 11ರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ‘ವಿಜಯ ಸಂಕಲ್ಪ ಯಾತ್ರೆ’ ಹೆಸರಿನಲ್ಲಿ ರಾಜ್ಯ ಪ್ರವಾಸ ಆರಂಭವಾಗಲಿದೆ. ಶುಕ್ರವಾರ ಬಿಜೆಪಿ ಕಾರ್ಯಕಾರಿಣಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್‌ ಕುಮಾರ್‌ ಈ ವಿಷಯ ತಿಳಿಸಿದ್ದಾರೆ.

‘ಮುಂಬರುವ ವಿಧಾನಸಭಾ ಚುನಾವಣೆ ಕುರಿತಂತೆ ಚರ್ಚೆ ಮಾಡಿದ್ದೇವೆ. ಈ ತಿಂಗಳ 11ರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಪ್ರವಾಸ ಆರಂಭವಾಗಲಿದೆ. ಮೊದಲ ಸುತ್ತಿನಲ್ಲಿ 50 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ನಡೆಯಲಿದೆ. ರಾಯಚೂರಿನಿಂದ ಆರಂಭವಾಗುವ ಪ್ರವಾಸ ಡಿಸೆಂಬರ್‌ 25ರ ತನಕ ನಡೆಯಲಿದೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನೇತೃತ್ವದಲ್ಲಿ 50 ಕ್ಷೇತ್ರಗಳಲ್ಲಿ ಪ್ರವಾಸ ನಡೆಯಲಿದೆ. ಎರಡು ತಿಂಗಳ ಅವಧಿಯಲ್ಲಿ ಒಟ್ಟಾರೆ 100 ವಿಧಾನಸಭಾ ಕ್ಷೇತ್ರ ಪ್ರವಾಸ, ಸಾರ್ವಜನಿಕ ಸಮಾವೇಶ, ಫಲಾನುಭವಿಗಳ ಸಮಾವೇಶ, ಕಾರ್ಯಕರ್ತರ ಸಮಾವೇಶ ಮಾಡಲು ತೀರ್ಮಾನಿಸಲಾಗಿದೆ’ ಎಂದರು.

ಬಿಜೆಪಿಯೆಂದರೆ ಅಭಿವೃದ್ಧಿ, ಕಾಂಗ್ರೆಸ್‌ ಎಂದರೆ ಭ್ರಷ್ಟಾಚಾರ: ಸಚಿವ ಶ್ರೀರಾಮುಲು

ಬೇರೆ ಬೇರೆ ಆಯಾಮ, ವಿಭಾಗದಲ್ಲಿ ಸಾರ್ವಜನಿಕ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಕಲಬುರಗಿಯಲ್ಲಿ ಹಿಂದುಳಿದ ವರ್ಗ, ಬಳ್ಳಾರಿಯಲ್ಲಿ ಪರಿಶಿಷ್ಟಜಾತಿ, ಮೈಸೂರಿನಲ್ಲಿ ಪರಿಶಿಷ್ಟಪಂಗಡ, ಬೆಂಗಳೂರಿನಲ್ಲಿ ಮಹಿಳಾ, ಹುಬ್ಬಳ್ಳಿಯಲ್ಲಿ ರೈತ ಮೋರ್ಚಾ, ಶಿವಮೊಗ್ಗದಲ್ಲಿ ಯುವ ಮೋರ್ಚಾ ಸಮಾವೇಶ ನಡೆಸಲು ತೀರ್ಮಾನಿಸಿರುವುದಾಗಿ ಹೇಳಿದರು.

ಬೂತ್‌ ಮಟ್ಟದಲ್ಲಿ ಪಕ್ಷಕ್ಕೆ ಬಲ: ‘ಪ್ರತಿ ಬೂತ್‌ಗೆ ಐವರು ಕಾರ್ಯಕರ್ತರನ್ನು ಸಕ್ರಿಯಗೊಳಿಸಲು ನಿರ್ಧರಿಸಲಾಗಿದೆ. ಯೋಜನೆಯ ಫಲಾನುಭವಿಗಳನ್ನು ಸೇರಿಸಿ ಜನರಿಗೆ ಮಾಹಿತಿ ನೀಡಲಾಗುತ್ತದೆ. ಈ ಮೂಲಕ ಕಾಂಗ್ರೆಸ್‌ ಅಪಪ್ರಚಾರ ತಡೆಯಲಿದ್ದೇವೆ. ಈ ಸಮಾವೇಶಗಳಿಗೆ ಕೇಂದ್ರ ನಾಯಕರು ಬರಲಿದ್ದಾರೆ’ ಎಂದರು. ‘ಬೇರೆ ಪಕ್ಷಗಳು ಮಾಡುವ ಯಾತ್ರೆ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಾವು ಸಾರ್ವಜನಿಕರನ್ನು ತಲುಪಲಿದ್ದೇವೆ. ಕಾಂಗ್ರೆಸ್‌ ಪಾದಯಾತ್ರೆ ಸ್ಪಷ್ಟತೆ ಇಲ್ಲದೆ ನಡೆಯುತ್ತಿದೆ., ಮೂರು ವಿಭಾಗದಲ್ಲಿ ಕಾಂಗ್ರೆಸ್‌ ಯಾತ್ರೆ ನಡೆಯುತ್ತಿದೆ. ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಮೂರು ಭಾಗಗಳಾಗಿ ಯಾತ್ರೆ ಮಾಡುತ್ತಿದ್ದಾರೆ. ಈ ಯಾತ್ರೆ ಗಡಿ ದಾಟುವ ವೇಳೆಗೆ ಕಾಂಗ್ರೆಸ್‌ ತೋಡೋ ಆಗಲಿದೆ’ ಎಂದು ವ್ಯಂಗ್ಯವಾಡಿದರು.

ಅ.11ರಿಂದ ಯಡಿಯೂರಪ್ಪ ಜತೆ ರಾಜ್ಯ ಪ್ರವಾಸ: ಸಿಎಂ ಬೊಮ್ಮಾಯಿ

‘ಕಾಂಗ್ರೆಸ್‌ನವರು ಮಾಡುವ ಯಾವ ಆರೋಪಕ್ಕೂ ದಾಖಲೆ ಇಲ್ಲ. ನಮ ಎಲ್ಲಾ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ಸೇರುತ್ತಿದೆ. ನಾವು ಪೇಜ್‌ ಕಮಿಟಿಗೆ ತಲುಪಿದ್ದೇವೆ. ಕಾಂಗ್ರೆಸ್‌ ಗ್ರಾಮದ ತನಕ ಹೋಗಲಿ ನೋಡೋಣ. ಕಾಂಗ್ರೆಸ್‌ ಕೇವಲ ನಾಯಕರ ಹಿಂದೆ ಸುತ್ತುವ ಪಾರ್ಟಿ. ಅವರದ್ದು ಕೇಡರ್‌ ಬೇಸ್‌ ಇಲ್ಲ’ ಎಂದರು.

click me!