
ರಾಮನಗರ/ಕನಕಪುರ (ಅ.08): ನನಗೀಗ 61 ವರ್ಷ ವಯಸ್ಸು. ಇನ್ನು 10 ವರ್ಷ ರಾಜಕಾರಣ ಮಾಡಬಹುದು. 8ರಿಂದ 10 ವರ್ಷದ ನಂತರ ರಾಜಕಾರಣ ಮಾಡಲು ಆಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ರಾಜಕೀಯ ಜೀವನಕ್ಕೆ ಗುಡ್‌ಬೈ ಹೇಳುವ ಸುಳಿವು ನೀಡಿದ್ದಾರೆ. ಕನಕಪುರದ ರೂರಲ್ ಎಜುಕೇಷನ್ ಸೊಸೈಟಿ (ಗ್ರಾಮಾಂತರ ವಿದ್ಯಾ ಪ್ರಚಾರಕ ಸಂಘ) ಸದಸ್ಯರ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಇ.ಡಿ. ವಿಚಾರಣೆ ಎದುರಿಸುತ್ತಿರುವ ಸಂದರ್ಭದಲ್ಲಿಯೇ ರಾಜಕೀಯಕ್ಕೆ ವಿದಾಯ ಹೇಳುವ ಮಾತುಗಳನ್ನಾಡಿದ್ದಾರೆ.
ನಾನು ಸಂಪಾದನೆ ಮಾಡಿರುವುದು ಸಾಕು. ದೇವರು ಎಲ್ಲವನ್ನೂ ಕೊಟ್ಟಿದ್ದಾನೆ. ನನ್ನ ಮೇಲೆ ಸಾಕಷ್ಟುಕೇಸುಗಳು ನಡೆಯುತ್ತಿರಬಹುದು. ಅದೆಲ್ಲವನ್ನು ನಾನು ಅನುಭವಿಸಿದ್ದೇನೆ. ಪ್ರೀತಿ, ವಿಶ್ವಾಸದ ಮೇಲೆ ನನ್ನನ್ನು ಬೆಳೆಸಿ, ಒಂದು ಸ್ಥಾನಕ್ಕೆ ತಂದು ಕೂರಿಸಿದ್ದೀರಿ. ಇನ್ನು ದೊಡ್ಡ ಸ್ಥಾನಕ್ಕೆ ಹೋಗಬಹುದು. ಯಾವುದೇ ದೊಡ್ಡ ಸ್ಥಾನಕ್ಕೆ ಹೋದರೂ ಶಾಸಕ ಸ್ಥಾನವೇ ದೊಡ್ಡದು ಎಂದು ಹೇಳಿದರು.
ಸೋಲಾರ್ ಪಾರ್ಕ್‌ನಲ್ಲಿ ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ: ಡಿ.ಕೆ.ಶಿವಕುಮಾರ್
ಡಿಕೆಶಿ ಹೇಳಿದ್ದೇನು?: ರೂರಲ್ ಎಜುಕೇಷನ್ ಸೊಸೈಟಿ ಶಿಕ್ಷಣ ಸಂಸ್ಥೆಯಲ್ಲಿ ಏನಾದರು ಬದಲಾವಣೆ ತರುವ ಆಸೆಯಿದೆ. ಸಾಕಷ್ಟು ಸಂಪದಾನೆ ಮಾಡಿದ್ದೇನೆ. ದೇವರು ಎಲ್ಲವನ್ನೂ ಕೊಟ್ಟಿದ್ದಾನೆ. ಯಾವ ವಿಚಾರಕ್ಕೂ ಯಾರ ಮುಂದೆಯೂ ಕೈ ಚಾಚಿಲ್ಲ. ನಾನು ಪ್ರತಿಫಲ ನಿರೀಕ್ಷೆ ಮಾಡುವುದಿಲ್ಲ. ನನಗೆ ಸೊಸೈಟಿಯಲ್ಲಿ ಯಾವುದೇ ಹುದ್ದೆ ಬೇಕಾಗಿಲ್ಲ. ಕ್ಷೇತ್ರದ ಜನರು ನೀಡಿರುವ ಹುದ್ದೆಯೇ ಸಾಕು. ನಾನು ಶಾಸಕನಾಗಿ ಏನು ಮಾಡಬೇಕು ಹೇಳಿ ಮಾಡುತ್ತೇನೆ. ಇಲ್ಲದಿದ್ದರೆ ನನ್ನನ್ನು ನಾನು ಮೋಸ ಮಾಡಿಕೊಂಡಂತಾಗುತ್ತಿದೆ. ಶಾಸಕನಾಗಿ 20-25 ವರ್ಷ ನೋಡಿದ್ದೇನೆ.
ಈಗಿರುವ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ, ಬದಲಾವಣೆ ಆಗಬೇಕಿದೆ. ಈಗಲೂ ಬದಲಾವಣೆ ಮಾಡಲು ಆಗದಿದ್ದರೆ ಏನು ಮಾಡಲು ಆಗುವುದಿಲ್ಲ. ನನಗೂ 61 ವರ್ಷ ವಯಸ್ಸಾಯಿತು. ಇನ್ನೆಷ್ಟುವರ್ಷ ರಾಜಕಾರಣ ಮಾಡಲು ಆಗುತ್ತದೆ. ಇನ್ನು 8 - 10 ವರ್ಷ ಅಂದರೆ 70 ವರ್ಷದವರೆಗೆ ರಾಜಕಾರಣ ಮಾಡಬಹುದು ಅಷ್ಟೆ. ಸಂಸ್ಥೆಯಲ್ಲಿ ಏನಾದರೂ ಬದಲಾವಣೆ ತರದೆ ಹೋದರೆ ಮತ್ತೆ ಯಾವುದೇ ಬದಲಾವಣೆ ತರಲು ಅವಕಾಶ ಸಿಗುವುದಿಲ್ಲ. ಅಷ್ಟರೊಳಗೆ ನಾವು ಬದಲಾವಣೆ ತರದಿದ್ದರೆ ನಮ್ಮ ಕರ್ತವ್ಯಕ್ಕೆ ಲೋಪ ಮಾಡಿದಂತಾಗುತ್ತದೆ ಎಂದು ಹೇಳಿದರು.
ನಾನು ನಿಮ್ಮ ಪ್ರತಿನಿಧಿ, ನಿಮಗೆ ವಾಪಸ್ ಕೊಡಬೇಕು. ನಾನು ಸಾಕಷ್ಟುಸಂಪಾದನೆ ಮಾಡಿದ್ದೇನೆ. ದೇವರು ಎಲ್ಲವನ್ನೂ ಕೊಟ್ಟಿದ್ದಾನೆ. ನನ್ನ ಮೇಲೆ ಸಾಕಷ್ಟುಕೇಸುಗಳು ನಡೆಯುತ್ತಿರಬಹುದು. ಅದೆಲ್ಲವನ್ನು ನಾನು ಅನುಭವಿಸಿದ್ದೇನೆ. ಕನಕಪುರ ತಾಲೂಕಿನಲ್ಲಿ 3 ರಿಂದ 4 ಸಾವಿರ ಜನರಿಗೆ ಉದ್ಯೋಗ ಕೊಡಿಸಿದ್ದೇನೆ. ಒಬ್ಬರಿಂದಲೂ ಹಣ ಕೇಳಿಲ್ಲ. ಯಾವುದೇ ವಿಚಾರಕ್ಕೂ ಯಾರ ಮುಂದೆಯೂ ಕೈ ಚಾಚಿಲ್ಲ. ಒಂದು ಸಣ್ಣ ವಿಚಾರಕ್ಕೆ ಒಬ್ಬರಿಂದ ಕಮಿಷನ್ ಕೇಳಿಲ್ಲ. ನನಗೆ ಜಾತಿ ಮೇಲೆ ನಂಬಿಕೆ ಇಲ್ಲ. ಪ್ರೀತಿ, ವಿಶ್ವಾಸದ ಮೇಲೆ ನನ್ನನ್ನು ಬೆಳೆಸಿ, ಒಂದು ಸ್ಥಾನಕ್ಕೆ ತಂದು ಕೂರಿಸಿದ್ದೀರಿ. ಇನ್ನು ದೊಡ್ಡ ಸ್ಥಾನಕ್ಕೆ ಹೋಗಬಹುದು. ಯಾವುದೇ ದೊಡ್ಡ ಸ್ಥಾನಕ್ಕೆ ಹೋದರೂ ಶಾಸಕ ಸ್ಥಾನವೇ ದೊಡ್ಡದು ಎಂದು ತಿಳಿಸಿದರು.
ಸೋನಿಯಾ ಬರ್ತಾರೆ, ಒಟ್ಟಿಗೆ ನಡೆಯೋಣ ಬನ್ನಿ: ಡಿಕೆಶಿ
ಕರಿಯಪ್ಪನವರು ಕಟ್ಟಿದ ಸಂಸ್ಥೆ ನಡೆಯುತ್ತಿರುವ ಬಗ್ಗೆ ನನಗೆ ಸಮಾಧಾನ ತಂದಿಲ್ಲ. ಪೋಷಕರು ಪತ್ರ ಮತ್ತು ದೂರವಾಣಿ ಮೂಲಕ ನನ್ನ ಬಳಿ ದೂರು ಹೇಳಿಕೊಂಡಿದ್ದಾರೆ. ಇಡೀ ವ್ಯವಸ್ಥೆ ಬದಲಾಗಬೇಕು. ಸೊಸೈಟಿ ಚುನಾವಣೆ ಘೋಷಣೆಯಾಗಿದ್ದು, 200-250 ಸದಸ್ಯರಿದ್ದೀರಿ. ಮುಂದಿನ ವರ್ಷ ಯಾರು ಇರುತ್ತಾರೊ ಇರಲ್ಲವೋ ಗೊತ್ತಿಲ್ಲ. ನಿಮ್ಮ ಅವಧಿಯಲ್ಲಿ ಪರಿಣಾಮಕಾರಿಯಾದ ಬದಲಾವಣೆ ತರಬೇಕಿದೆ. ಆ ದೃಷ್ಟಿಯಿಂದ ತಮ್ಮ ಸಲಹೆ ಸೂಚನೆ ಪಡೆಯಲು ಸಭೆ ಕರೆಯಲಾಗಿದೆ ಎಂದು ಶಿವಕುಮಾರ್ ಹೇಳಿದರು. ಸಭೆಯಲ್ಲಿ ಸೊಸೈಟಿ ಅಧ್ಯಕ್ಷ ಕೆ.ಬಿ.ನಾಗರಾಜು, ಕಾರ್ಯದರ್ಶಿ ರಮೇಶ್, ಪದಾಧಿಕಾರಿಗಳಾದ ಎಂ.ಎಲ್.ಶಿವಕುಮಾರ್, ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.