ರಾಜ್ಯ ಬಿಜೆಪಿಯಲ್ಲಿ ರಾಜ್ಯಸಭಾ ಚುನಾವಣೆ ಟಿಕೆಟ್ ಫೈಟ್ ಮುಗಿಯುತ್ತಿದ್ದಂತೆಯೇ ಇದೀಗ ವಿಧಾನಪರಿಷತ್ ಟಿಕೆಟ್ ಫೈಟ್ ಶುರುವಾಗಿದ್ದು, ಮತ್ತೆ ಹೈಕಮಾಂಡ್ ಶಾಕ್ ಕೊಡುತ್ತಾ..?
ಬೆಂಗಳೂರು(ಜೂನ್ 09): ಕರ್ನಾಟಕ ರಾಜ್ಯಸಭಾ ಚುನಾವಣೆಗೆ ರಾಜ್ಯ ಬಿಜೆಪಿಯಲ್ಲಿ ಶುರುವಾಗಿದ್ದ ಟಿಕೆಟ್ ಫೈಟ್‌ಗೆ ಹೈಕಮಾಂಡ್ ತನ್ನದೇ ಅಚ್ಚರಿ ಅಭ್ಯರ್ಥಿಗಳನ್ನ ಘೋಷಣೆ ತಣ್ಣಗಾಗಿಸಿದೆ.
ಇದರ ಬೆನ್ನಲ್ಲೇ ಇದೀಗ ವಿಧಾನಪರಿಷತ್ ಚುನಾವಣೆ ಎದುರಾಗಿದೆ. ಒಟ್ಟು ಏಳು ಸ್ಥಾನಗಳಿಗೆ ಇದೇ ಜೂನ್ 29ಕ್ಕೆ ಎಂಎಲ್‌ಸಿ ಎಲೆಕ್ಷನ್ಸ್ ನಡೆಯಲಿದೆ.
ಈ ಏಳು ಸ್ಥಾನಗಳಲ್ಲಿ ಬಿಜೆಪಿ 4 ಸೀಟುಗಳಲ್ಲಿ ಮಾತ್ರ ಗೆಲ್ಲಲು ಅವಕಾಶ ಇದೆ. ಈ ನಾಲ್ಕು ಟಿಕೆಟ್‌ಗೆ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತಿದೆ. ಈ ಹಿನ್ನೆಲೆಯಲ್ಲಿ ಯಾರಿಗೆ ಎಂಎಲ್‌ಸಿ ಮಾಡಬೇಕು, ಯಾರನ್ನ ಬಿಡಬೇಕು ಎನ್ನುವ ತಲೆನೋವು ಸಿಎಂ ಬಿಎಸ್ ಯಡಿಯೂರಪ್ಪಗೆ ಶುರುವಾಗಿದೆ.
ವಿಧಾನಪರಿಷ್ ಚುನಾವಣೆ ದಿನಾಂಕ ಪ್ರಕಟ: ಗರಿಗೆದರಿದ ರಾಜ್ಯ ರಾಜಕಾರಣ
ಮೊದಲೇ ರಾಜ್ಯಸಭಾ ಚುನಾವಣೆಗೆ ಸೂಚಿಸಿದ್ದ ಅಭ್ಯರ್ಥಿ ಪಟ್ಟಿಯನ್ನು ತಿರಸ್ಕರಿಸಿ ಹೈಕಮಾಂಡ್ ತನ್ನದೇ ಹೊಸ ಪಟ್ಟಿಯನ್ನು ಪ್ರಕಟಿಸಿರುವುದು ಯಡಿಯೂರಪ್ಪಗೆ ಕಣ್ಣು ಕೆಂಪಾಗಿಸಿದೆ. ಇದೀಗ ವಿಧಾನಪರಿಷತ್ ಟಿಕೆಟ್‌ಗೆ ಫೈಟ್ ಶುರುವಾಗಿದ್ದು, ಆಕಾಂಕ್ಷಿಗಳು ಬಿಎಸ್‌ವೈ ದುಂಬಾಲು ಬಿದ್ದಿದ್ದಾರೆ.
ಬಿಜೆಪಿಯಲ್ಲೂ ಶುರುವಾಯ್ತು ಮೂಲ-ವಲಸಿಗ
ಹೌದು...ಕೆಪಿಸಿಸಿ ಅಧ್ಯಕ್ಷ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಮೂಲ ಕಾಂಗ್ರೆಸ್ v/s ವಲಸಿಗ ಕಾಂಗ್ರೆಸ್ಸಿಗರು ಎನ್ನುವ ಗುಂಪುಗಾರಿಕೆ ಶುರುವಾಗಿತ್ತು. ಅದರಂತೆ ಇದೀಗ ವಿಧಾನಪರಿಷತ್ ಟಿಕೆಟ್ ವಿಚಾರದಲ್ಲಿ ಮೂಲ ಮತ್ತು ವಲಸಿಗ ಬಿಜೆಪಿಗರು ಎಂಬ ಎರಡು ಗುಂಪುಗಳಾಗಿವೆ. ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಸೋಲುಕಂಡಿರುವ ಅನರ್ಹ ಶಾಸಕರು ತಮ್ಮನ್ನು ಎಂಎಲ್‌ಸಿ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಆಕಾಂಕ್ಷಿಗಳು
ನಾಲ್ಕು ವಿಧಾನಪರಿಷತ್‌ಗಾಗಿ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಆರ್.ಶಂಕರ್, ಎಂ.ಟಿ.ಬಿ.ನಾಗರಾಜ್, ಹೆಚ್.ವಿಶ್ವನಾಥ್ , ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಎಸ್ ಶಂಕರಪ್ಪ, ಮಾಲೀಕಯ್ಯ ಗುತ್ತೇದಾರ್, ನಿರ್ಮಲ ಕುಮಾರ್ ಸುರಾನಾ, ನಟ ಜಗ್ಗೇಶ್ ನಡುವೆ ಫೈಟ್ ನಡೆದಿದೆ.
ರಾಜ್ಯಸಭೆ ಎಲೆಕ್ಷನ್: ಹೈಕಮಾಂಡ್ ಕೊಟ್ಟ ಶಾಕ್‌ಗೆ ಮನೆ ಬಿಟ್ಟು ಬಾರದ ಯಡಿಯೂರಪ್ಪ
ವಿಧಾನಪರಿಷತ್‌ನಲ್ಲೂ ಶಾಕ್ ಕೊಡುತ್ತಾ ಹೈಕಮಾಂಡ್
ಇಂತಹದೊಂದು ಪ್ರಶ್ನೆ ಉದ್ಭವಿಸಲು ರಾಜ್ಯಸಭಾ ಟಿಕೆಟ್ ಘೋಷಣೆ ಕಾರಣವಾಗಿದೆ. ರಾಜ್ಯ ಕೋರ್ ಕಮಿಟಿ ಕಳುಹಿಸಿದ್ದ ಅಭ್ಯರ್ಥಿಗಳ ಫೈನಲ್ ಪಟ್ಟಿಯನ್ನು ತಯಾರಿಸಿ ಹೈಕಮಾಂಡ್‌ಗೆ ರವಾನಿಸಿತ್ತು.
ಆದ್ರೆ, ಹೈಮಾಂಡ್ ರಾಜ್ಯ ಬಿಜೆಪಿ ಕಳುಹಿಸಿದ್ದ ಪಟ್ಟಿಯನ್ನು ಸೈಡಿಗಿಟ್ಟು, ಸಂಘಪರಿವಾರ ಮತ್ತು ಮೂಲಕ ಬಿಜೆಪಿ ಕಾರ್ಯಕರ್ತರಿಗೆ ಮಣೆ ಹಾಕಿದ್ದು, ಕರ್ನಾಟಕ ಬಿಜೆಪಿ ತಬ್ಬಿಬ್ಬಾಗಿದೆ. ಅಲ್ಲದೇ ಅಚ್ಚರಿ ಹೆಸರುಗಳನ್ನು ಕೇಳಿ ರಾಜ್ಯ ನಾಯಕರಿಗೆ ಶಾಕ್ ಹೊಡೆದಂತಾಗಿದೆ.
ಇದರ ಹಿಂದೆ ರಾಷ್ಟ್ರೀಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಕೈವಾಡವಿದೆ ಎನ್ನಲಾಗಿದೆ. ಇದೀಗ ವಿಧಾನಪರಿಷತ್‌ನಲ್ಲೂ ಸಂತೋಷ್, ಹೈಕಮಾಂಡ್ ಮೂಲಕ ರಾಜ್ಯ ನಾಯಕರಿಗೆ ಮತ್ತೊಮ್ಮೆ ಶಾಕ್ ಕೊಡಿಸುತ್ತಾರಾ ಎನ್ನುವ ಕುತೂಹಲ ಮೂಡಿಸಿದೆ.