
ಬೆಂಗಳೂರು(ಜೂ.09): ರಾಜ್ಯಸಭೆ ಚುನಾವಣೆ ತೀವ್ರ ಕುತೂಹಲ ಮೂಡಿಸಿದ್ದು ಕರ್ನಾಟದಿಂದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಇತ್ತ ಕೈ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಮವಾರ ನಾಮಪತ್ರವನ್ನೂ ಸಲ್ಲಿಸಿದ್ದಾರೆ. ಇದರೊಂದಿಗೆ ಆಸ್ತಿ ಘೋಷಣಾ ಪತ್ರವನ್ನೂ ಸಲ್ಲಿಸಿದ್ದು, ಸದ್ಯ ಅವರ ಬಳಿ ಇರುವ ಆಸ್ತಿ ಎಷ್ಟು ಎಂಬ ವಿಚಾರ ಎಲ್ಲರ ಗಮನ ಸೆಳೆದಿದೆ. ಇನ್ನು ಕಾಂಗ್ರೆಸ್ ಹಿರಿಯ ನಾಯಕನ ಹೆಸರಲ್ಲಿ ಜಮೀನು ಹಾಗೂ ಕಾರು ಇಲ್ಲ ಎಂಬುವುದು ಭಾರೀ ಅಚ್ಚರಿ ಮೂಡಿಸಿದೆ.
ಹೌದು ಸೋಮವಾರ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಾಮಪತ್ರದೊಂದಿಗೆ ತಮ್ಮ ಆಸ್ತಿ ವಿವರ ಘೋಷಣಾ ಪತ್ರ ಸಲ್ಲಿಸಿದ್ದಾರೆ. ಖರ್ಗೆ ಕುಟುಂಬದ ಒಟ್ಟು ಆಸ್ತಿ ಮೌಲ್ಯ 15 ಕೋಟಿ ರೂ.ಗಳಿಗಿಂತ ಅಧಿಕವಿದೆ. ಇನ್ನು ಖರ್ಗೆಗಿಂತ ಅವರ ಪತ್ನಿ ರಾಧಾ ಬಾಯಿ ಹೆಚ್ಚು ಶ್ರೀಮಂತೆ ಎಂದು ಬಹಿರಂಗಗೊಂಡಿದೆ.
ಖರ್ಗೆ ಅವರ ಬಳಿ ನಗದು ಸೇರಿ ನಾನಾ ಉಳಿತಾಯ ಖಾತೆ, ಠೇವಣಿ, ಬಾಂಡ್‌ನಲ್ಲಿಒಟ್ಟು 2,82,20,805 ರೂ. ಇದ್ದು, 10.71 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದೆ. ಜತೆಗೆ, ಇವರಿಗೆ 10 ಲಕ್ಷ ರೂ. ಸಾಲವಿದೆ. ಇನ್ನು ರಾಧಾ ಭಾಯಿ ಅವರ ಬಳಿ 81,29,618 ರೂ. ಹಣವಿದ್ದು, 33.81 ಲಕ್ಷ ರೂ. ಮೌಲ್ಯದ ಆಭರಣಗಳಿವೆ. ಇನ್ನು ಇವರು ವಾಣಿಜ್ಯ ಆಸ್ತಿ ಬಾಡಿಗೆ ಮುಂಗಡ ಸೇರಿ ಒಟ್ಟು 13.75 ಲಕ್ಷ ರೂ. ಸಾಲ ಹೊಂದಿದ್ದಾರೆ.
ಇನ್ನು ಖರ್ಗೆ ಅವರ ಸ್ವಂತ ಹೆಸರಿನಲ್ಲಿ 7,01,18,724 ರೂ. ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಇದ್ದು, ಪತ್ನಿ ರಾಧಾ ಭಾಯಿ ಹೆಸರಿನಲ್ಲಿ 8,47,56,545 ರೂ. ಮೌಲ್ಯದ ಹಾಗೂ ಅವಿಭಕ್ತ ಕುಟುಂಬದ ಸದಸ್ಯರಾಗಿ ಖರ್ಗೆ ಅವರು 83.95 ಲಕ್ಷ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಮತ್ತು ಪತ್ನಿ ಹೆಸರಲ್ಲಿ ಏನೇನಿದೆ?
ಬೆಂಗಳೂರಿನ ಮಠದಹಳ್ಳಿಯಲ್ಲಿ ಪತ್ನಿ ಹೆಸರಿನಲ್ಲಿ 1.17 ಕೋಟಿ ರೂ. ಮೌಲ್ಯದ ಆಸ್ತಿ. ಆರ್‌ಎಂವಿ 2ನೇ ಹಂತದಲ್ಲಿ 4.83 ಕೋಟಿ ರೂ. ಮೌಲ್ಯದ ಮನೆ. ಕಲಬುರಗಿ ಬಸವನಗರದಲ್ಲಿ 46.35 ಲಕ್ಷ ರೂ. ಮೌಲ್ಯದ ಮನೆ. ಬೆಂಗಳೂರಿನ ಕಮಿಷನರೇಟ್ ರಸ್ತೆಯಲ್ಲಿ 1.79 ಕೋಟಿ ರೂ. ಮೌಲ್ಯದ ವಾಣಿಜ್ಯ ಆಸ್ತಿ. ರಾಧಾ ಭಾಯಿ ಹೆಸರಿನಲ್ಲಿ ಬೆಂಗಳೂರಿನ ಆರ್.ಟಿ.ನಗರದಲ್ಲಿ 1.17 ಕೋಟಿ ರೂ. ಮೌಲ್ಯದ ವಾಣಿಜ್ಯ ಆಸ್ತಿ. ಸದಾಶಿವನಗರದಲ್ಲಿಖರ್ಗೆ ಮತ್ತು ಪತ್ನಿ ಜಂಟಿ ಪಾಲುದಾರಿಕೆಯಲ್ಲಿ ತಲಾ 1.23 ಕೋಟಿ ರೂ. ಮೌಲ್ಯದ ಆಸ್ತಿ. ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಗ್ರಾಮದಲ್ಲಿ ಕುಟುಂಬದ ಒಟ್ಟು 6.20 ಎಕರೆ ಕೃಷಿ ಜಮೀನು. ಪತ್ನಿ ಹೆಸರಿನಲ್ಲಿಇದೇ ಗ್ರಾಮದಲ್ಲಿ ಒಟ್ಟು 25 ಎಕರೆ ಕೃಷಿ ಜಮೀನು. ಗುಂಡಗುರ್ತಿಯಲ್ಲಿ ಖರ್ಗೆ ಹೆಸರಿನಲ್ಲಿ 1.08 ಎಕರೆ ಕೃಷಿಯೇತರ ಜಮೀನು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.