ವರ್ತೂರ್ ಪ್ರಕಾಶ್ ಕಾಂಗ್ರೆಸ್ ಸೇರ್ಪಡೆಗೆ ತುದಿಗಾಗಲ್ಲಿ ನಿಂತಿದ್ದು, ಇದಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಅಡ್ಡಗಾಲು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಕೋಲಾರ, (ಫೆ.23): ಕಾಂಗ್ರೆಸ್ ಸೇರ್ಪಡೆಗೆ ಹಿರಿಯ ನಾಯಕರೊಬ್ಬರು ಅಡ್ಡಗಾಲು ಹಾಕಿದ್ದರಿಂದ ಮಾಜಿ ಸಚಿವ ವರ್ತೂರು ಪ್ರಕಾಶ್ ಆಕ್ರೋಶಗೊಂಡಿದ್ದಾರೆ.
ಹೌದು...ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳದಿದ್ದಕ್ಕೆ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರು ಗರಂ ಆಗಿದ್ದು, ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಇಂದು (ಮಂಗಳವಾರ) ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವರ್ತೂರ್ ಪ್ರಕಾಶ್, ಸಾಬ್ರು ಕುರಿ ಕೊಯ್ಯುವಾಗ ಬಾಯಲ್ಲಿ ನೀರು ಹಾಕ್ತಾರೆ. ಆದರೆ ಕೆ.ಎಚ್ ಮುನಿಯಪ್ಪ ನೀರು ಹಾಕದೆ ಕತ್ತು ಕೊಯ್ಯುತ್ತಾನೆ ಎಂದು ಏಕವಚನದಲ್ಲೇ ಕಿಡಿಕಾರಿದರು.
ಕಿಡ್ನಾಪ್ ಘಟನೆಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟ ಮಾಜಿ ಸಚಿವ ವರ್ತೂರು ಪ್ರಕಾಶ್
ಮಾಜಿ ಸಚಿವ ಕೆ.ಎಚ್ ಮುನಿಯಪ್ಪನಿಗೆ ಬುದ್ಧಿ ಭ್ರಮಣೆ ಆಗಿದೆ. ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರನ್ನು ರತ್ನ ಕಂಬಳಿ ಹಾಕಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ನನಗೂ ಆ ಸಂದರ್ಭ ಬಂದೇ ಬರುತ್ತದೆ. ನಾನು ಬಿಜೆಪಿ ಅಥವಾ ಜೆಡಿಎಸ್ ಪಕ್ಷಕ್ಕೆ ಹೋಗಲ್ಲ. ನಾನೇನು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೇನೆ ಅಂತ ಮುನಿಯಪ್ಪನ ಮನೆಗೆ ಹೋಗಿಲ್ಲ. ಕಾಂಗ್ರೆಸ್ ಸೇರುವ ಅವಶ್ಯಕತೆಯೂ ನನಗಿಲ್ಲ ಎಂದರು.
ನಾನು ಪಕ್ಷೇತರನಾಗಿ ನಿಂತು ಶಾಸಕನಾದರೆ ಹೋಗೋದು ಕಾಂಗ್ರೆಸ್ ಪಕ್ಷಕ್ಕೆ. ಕಾಂಗ್ರೆಸ್ ಸೇರಲು ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಅಡ್ಡ ಹಾಕುತ್ತಿಲ್ಲ. ಆದರೆ ನನಗೆ ಅಡ್ಡಲಾಗಿ ನಿಂತಿರೋದು ಕೆ.ಎಚ್ ಮುನಿಯಪ್ಪ. ಹೊಸ ಗಿರಾಕಿ ಬರೋದ್ರಿಂದ, ವ್ಯಾಪಾರ ನಿಂತೋಗುತ್ತದೆ ಅಂತ ಕಾಂಗ್ರೆಸ್ ಗೆ ಸೇರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.