ಯಡಿಯೂರಪ್ಪ ಸಮ್ಮುಖದಲ್ಲೇ ವರಿಷ್ಠರ ಜತೆ ಚರ್ಚೆಗೆ ಸೋಮಣ್ಣ ಬಿಗಿಪಟ್ಟು

Published : Dec 13, 2023, 04:10 AM IST
ಯಡಿಯೂರಪ್ಪ ಸಮ್ಮುಖದಲ್ಲೇ ವರಿಷ್ಠರ ಜತೆ ಚರ್ಚೆಗೆ ಸೋಮಣ್ಣ ಬಿಗಿಪಟ್ಟು

ಸಾರಾಂಶ

ದೆಹಲಿಯಿಂದ ಸೋಮಣ್ಣ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಪಕ್ಷದ ಮುಖಂಡರೊಬ್ಬರು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಮಾತುಕತೆ ನಡೆಸಲು ಬರುವಂತೆ ಆಹ್ವಾನಿಸಿದ್ದಾರೆ. ಮಾತುಕತೆಗೆ ಬರಲು ಒಪ್ಪಿದ ಸೋಮಣ್ಣ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೂ ಕರೆಸಿ. ಜತೆಗೆ ಸಾಧ್ಯವಾದರೆ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನೂ ಕರೆಸುವಂತೆ ಹೇಳಿದ್ದಾರೆ ಎನ್ನಲಾಗಿದೆ.

ಬೆಳಗಾವಿ(ಡಿ.13):  ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ವಪಕ್ಷೀಯರೇ ತಮ್ಮ ಸೋಲಿಗೆ ಕಾರಣರಾದರು ಎಂದು ಬೇಸರಗೊಂಡಿರುವ ಮಾಜಿ ಸಚಿವ ವಿ.ಸೋಮಣ್ಣ ಅವರೊಂದಿಗೆ ಸಂಧಾನ ಪ್ರಯತ್ನ ಆರಂಭಿಸಿರುವ ದೆಹಲಿಯ ಬಿಜೆಪಿ ವರಿಷ್ಠರು ಅವರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಆದರೆ, ಮಾತುಕತೆ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಉಪಸ್ಥಿತರಿರಬೇಕು. ವರಿಷ್ಠರ ಸಮ್ಮುಖದಲ್ಲಿ ಮುಖಾಮುಖಿ ಮಾತುಕತೆ ಆಗಲಿ ಎಂಬ ಪಟ್ಟು ಮುಂದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ದೆಹಲಿಯಿಂದ ಸೋಮಣ್ಣ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಪಕ್ಷದ ಮುಖಂಡರೊಬ್ಬರು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಮಾತುಕತೆ ನಡೆಸಲು ಬರುವಂತೆ ಆಹ್ವಾನಿಸಿದ್ದಾರೆ. ಮಾತುಕತೆಗೆ ಬರಲು ಒಪ್ಪಿದ ಸೋಮಣ್ಣ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೂ ಕರೆಸಿ. ಜತೆಗೆ ಸಾಧ್ಯವಾದರೆ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನೂ ಕರೆಸುವಂತೆ ಹೇಳಿದ್ದಾರೆ ಎನ್ನಲಾಗಿದೆ.

ಪಕ್ಷ ಬಿಟ್ಟರೆ ಹಿನ್ನಡೆ ಸಾಧ್ಯತೆ; ಸೋಮಣ್ಣ ಮನ ಒಲಿಸುವಂತೆ ಬಿಜೆಪಿಗರ ಕೂಗು

ಕಳೆದ ಚುನಾವಣೆಯಲ್ಲಿ ತಾವು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಸೋಲು ಉಂಟಾಗಲು ಕಾರಣ ಏನು, ಸೋಲಿಗೆ ಯಾರು ಪ್ರಯತ್ನ ಮಾಡಿದರು ಎಂಬುದನ್ನು ಯಡಿಯೂರಪ್ಪ ಅವರ ಮುಂದೆಯೇ ವಿವರವಾಗಿ ಚರ್ಚೆ ಮಾಡಬೇಕಾಗಿದೆ. ಇಲ್ಲದಿದ್ದರೆ ಕೇವಲ ನಾನೊಬ್ಬನೇ ಬಂದು ಮಾತುಕತೆ ಮಾಡಿದರೆ ಕೇವಲ ತೇಪೆ ಹಚ್ಚುವ ಕೆಲಸ ನಡೆಯುತ್ತದೆ ಎಂಬುದಾಗಿ ತಿಳಿಸಿದರು ಎಂದು ಮೂಲಗಳು ತಿಳಿಸಿವೆ. ಸೋಮಣ್ಣ ಅವರ ಮಾತನ್ನು ಕೇಳಿಸಿಕೊಂಡ ಆ ಮುಖಂಡರು, ವರಿಷ್ಠರೊಂದಿಗೆ ಮಾತನಾಡಿ ತಿಳಿಸುವುದಾಗಿ ಹೇಳಿದ್ದಾರೆ ಎಂದು ಗೊತ್ತಾಗಿದೆ.

ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಕಳೆದ ಆರು ತಿಂಗಳಿಂದ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಪಾಡಿಕೊಂಡಿರುವ ಸೋಮಣ್ಣ ಅವರು ಆಗಾಗ ತಮ್ಮ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಈ ನಡುವೆ ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೋಮಣ್ಣ ಅವರನ್ನು ಸೆಳೆಯಲು ಆಡಳಿತಾರೂಢ ಕಾಂಗ್ರೆಸ್ ಪಕ್ಷ ಪ್ರಯತ್ನ ನಡೆಯುತ್ತಿದೆ ಎಂಬ ವದಂತಿಯಿದೆ. ಹೀಗಾಗಿ ಸೋಮಣ್ಣ ಅವರನ್ನು ಪಕ್ಷದಲ್ಲೇ ಉಳಿಸಿಕೊಂಡು ಸೂಕ್ತ ಸ್ಥಾನಮಾನ ನೀಡುವ ಮೂಲಕ ಅವರ ಸಾಮರ್ಥ್ಯವನ್ನು ಬಳಸಿಕೊಳ್ಳುವಂತಾಗಬೇಕು ಎಂಬ ಕೂಗು ಬಿಜೆಪಿಯಲ್ಲಿ ಕೇಳಿಬರುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ