ನವದೆಹಲಿ (ಜೂ.11): ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಉತ್ತರಪ್ರದೇಶ ಸರ್ಕಾರ ಮತ್ತು ಪಕ್ಷದಲ್ಲಿ ದೊಡ್ಡಮಟ್ಟದ ಬದಲಾವಣೆಗೆ ಬಿಜೆಪಿ ಮುಂದಾಗಿದೆ ಎಂಬ ವರದಿಗಳ ಬೆನ್ನಲ್ಲೇ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ದೆಹಲಿಗೆ ದೌಡಾಯಿಸಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ದೆಹಲಿಗೆ ಆಗಮಿಸಿದ ಸಿಎಂ ಯೋಗಿ, ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಬಳಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜೊತೆಗೂ ಸಮಾಲೋಚನೆ ನಡೆಸಿದರು. ಶುಕ್ರವಾರ ಯೋಗಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಯೋಗಿ ಆದಿತ್ಯನಾಥ್ ಹುಟ್ಟುಹಬ್ಬಕ್ಕೆ ಮೋದಿ ಶುಭಾಶಯದ ಟ್ವೀಟ್ ಮಿಸ್; ಇಲ್ಲಿದೆ ಕಾರಣ! ..
ಕೊರೋನಾ ನಿರ್ವಹಣೆ ಸೇರಿದಂತೆ ನಾನಾ ವಿಷಯಗಳಲ್ಲಿ ಸಿಎಂ ಯೋಗಿ ಸರ್ಕಾರ ವಿಫಲವಾಗಿದೆ ಎಂದು ವಿಪಕ್ಷಗಳು ಕಟುವಾಗಿ ಟೀಕಿಸುತ್ತಿವೆ. ಜೊತೆಗೆ ಎಲ್ಲಾ ಸಮುದಾಯದವನ್ನೂ ಒಂದಾಗಿ ಕರೆದುಕೊಂಡು ಹೋಗುವಲ್ಲಿ ಯೋಗಿ ವಿಫಲರಾಗಿದ್ದಾರೆ ಎಂದು ಕೆಲ ರಾಜ್ಯ ನಾಯಕರು ಕೂಡಾ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನೇತೃತ್ವದ ತಂಡವು, ಉತ್ತರಪ್ರದೇಶದ ಹಲವು ಬಿಜೆಪಿ ನಾಯಕರನ್ನು ಭೇಟಿ ಮಾಡಿ ಆ ಕುರಿತ ವರದಿಯೊಂದನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ರವಾನಿಸಿತ್ತು. ಜೊತೆಗೆ ಯುಪಿ ಮೂಲದ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ್ ಗುರುವಾರವಷ್ಟೇ ಬಿಜೆಪಿ ಪಾಳಯಕ್ಕೆ ಬಂದಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಯೋಗಿ ದೆಹಲಿಗೆ ಆಗಮಿಸಿದ್ದಾರೆ. ಮೂಲಗಳ ಪ್ರಕಾರ ಸಿಎಂ ಯೋಗಿ ಅವರನ್ನು ಬದಲಾಯಿಸಿ ಅವರನ್ನು ರಾಜ್ಯಾಧ್ಯಕ್ಷರಾಗಿ ಮಾಡುವ ಇಲ್ಲವೇ ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸುವ ಸಾಧ್ಯತೆಯೂ ಇದೆ. ಅದರ ಜೊತೆಗೆ ಹೊಸ ನಾಯಕರಿಗೆ ಡಿಸಿಎಂ ಪಟ್ಟನೀಡುವ, ಸಂಪುಟಕ್ಕೆ ಹೊಸ ಮುಖಗಳನ್ನು ಸೇರಿಸಿಕೊಳ್ಳುವ ಪಕ್ಷದ ಸಂಘಟನೆಯಲ್ಲಿ ಒಂದಿಷ್ಟುಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.